ದೂರಾದವರು ದೂರುವುದೇಕೆ? : ಬೇರ್ಪಟ್ಟ ಮೇಲೆ ಘನತೆ ಉಳಿಸಿಕೊಳ್ಳಿ

ಪ್ರೀತಿ ಯಾವತ್ತೂ ಪ್ರಮಾದಗಳ ಲೆಕ್ಕವಿಡೋದಿಲ್ಲ. ನೀವು ಪರಸ್ಪರ ಪ್ರೇಮಿಸಿದ್ದು ನಿಜವೇ ಆದರೆ, ಯಾವ ಕಾರಣದಿಂದ ಬೇರ್ಪಟ್ಟರೋ ಆ ಕಾರಣವನ್ನು ಕುರಿತು ಯೋಚಿಸಿ.

ಹಳ ಸಲ ನಾವಿದನ್ನು ನೋಡಿರುತ್ತೇವೆ. ಅಥವಾ ಮಾಡಿರುತ್ತೇವೆ. ಗೆಳೆತನದಲ್ಲೇ ಆಗಲಿ, ಸಾಂಗತ್ಯ ಮತ್ತು ದಾಂಪತ್ಯದಲ್ಲೇ ಆಗಲಿ. ಇಬ್ಬರು ಬೇರ್ಪಟ್ಟ ನಂತರ ಒಬ್ಬರನ್ನೊಬ್ಬರು ಹಳಿಯತೊಡಗುತ್ತಾರೆ. ಅವರಿಂದ ತಮಗಾದ ಕಷ್ಟನಷ್ಟಗಳನ್ನು ದೂರತೊಡಗಿರುತ್ತಾರೆ. ಗೆಳೆತನಕ್ಕಿಂತ ಹೆಚ್ಚಾಗಿ ಸಾಂಗತ್ಯದಲ್ಲಿ ಇದು ಹೆಚ್ಚು. ಕಚ್ಚಾ ಪ್ರೇಮಿಗಳಲ್ಲಂತೂ ಇದು ಸರ್ವೇ ಸಾಮಾನ್ಯ.

ಬೇರ್ಪಟ್ಟ ಇಬ್ಬರೂ ತಮ್ಮ ತಮ್ಮ ನಿಟ್ಟಿನಲ್ಲೇ ಕಥೆ ಹೇಳುತ್ತ ಇರುತ್ತಾರೆ. ಕೇಳುವವರು ಚಂದ್ರನಿಗೆ ನಮಗೆ ಕಾಣದ ಮಗ್ಗುಲ ಮುಖವೂ ಇದೆ ಅನ್ನುವ ಎಚ್ಚರವಿಟ್ಟುಕೊಂಡರೋ… ಸರಿ. ಇಲ್ಲವಾದರೆ ಅವರು ಮತ್ತೊಬ್ಬರ ಬಗ್ಗೆ ಕಹಿಯನ್ನೂ, ಕೆಡುಕನ್ನೂ ಕಲ್ಪಿಸಿಕೊಳ್ಳುವ ಸಂಭವವಿರುತ್ತದೆ. ಇದರಿಂದ ಅನಗತ್ಯವಾಗಿ ಮತ್ತೊಬ್ಬ ವ್ಯಕ್ತಿಯ ಕುರಿತು ದ್ವೇಷ ಅಥವಾ ಅಸಡ್ಡೆ ಬೆಳೆಸಿಕೊಳ್ಳಲು ದಾರಿಯಾಗುತ್ತದೆ.

ಇದನ್ನು ನಾವೇಕೆ ಮಾಡಬೇಕು? ನಾವೇಕೆ ಬೇರ್ಪಟ್ಟ ಪ್ರಿಯತಮರನ್ನು ದೂರಬೇಕು? ಪ್ರೀತಿ ಯಾವತ್ತೂ ಪ್ರಮಾದಗಳ ಲೆಕ್ಕವಿಡೋದಿಲ್ಲ. ನೀವು ಪರಸ್ಪರ ಪ್ರೇಮಿಸಿದ್ದು ನಿಜವೇ ಆದರೆ, ಯಾವ ಕಾರಣದಿಂದ ಬೇರ್ಪಟ್ಟರೋ ಆ ಕಾರಣವನ್ನು ಕುರಿತು ಯೋಚಿಸಿ. ನಿಮ್ಮ ನಡುವೆ ಯಾವುದೋ ವಿಷಯಕ್ಕೆ ಮನಸ್ತಾಪವಾಗಿರುತ್ತದೆ. ಇಬ್ಬರೂ ರಾಜಿಯಾಗಲು ಸಿದ್ಧವಿರುವುದಿಲ್ಲ. ನಿಮಗೆ ನಿಮ್ಮನಿಮ್ಮ ಅಸ್ತಿತ್ವ ಅಥವಾ ಅಹಮಿಕೆ ಮುಖ್ಯವಾಗುತ್ತದೆ. ತಪ್ಪೇನಲ್ಲ. ನಮಗೆಲ್ಲರಿಗೂ ನಮ್ಮತನ ಮುಖ್ಯವೇ. ಹಾಗಿರುವಾಗ ಮತ್ತೊಬ್ಬರಿಗೂ ತಮ್ಮತನ ಮುಖ್ಯವಾಗಿರುತ್ತದೆ. ನಮ್ಮತನವನ್ನು ನಾವು ಗೌರವಿಸಿಕೊಂಡು ಅವರ ಆಲೋಚನೆ ಅಥವಾ ವೈಖರಿಯನ್ನು ಒಪ್ಪದೆ ಬಿರುಕಿಗೆ ಕಾರಣವಾಗುತ್ತೇವೆ. ಅದರ ಬದಲು ನಾವೂ ಅವರತನವನ್ನು, ಅವರ ಆಲೋಚನೆ ಅಥವಾ ವೈಖರಿಯನ್ನು ಗೌರವಿಸಿದ್ದರೆ ಈ ಪ್ರಮೇಯವೇ ಬರುತ್ತಿರಲಿಲ್ಲವಲ್ಲ!

ಈ ಮಾತು ಇಬ್ಬರಿಗೂ ಅನ್ವಯಿಸುತ್ತದೆ. ಹಾಗಿಲ್ಲವಾದರೆ, ನಿಮಗೆ ನೀವೇ ಮುಖ್ಯವಾಗಿದ್ದೀರಿ ಎಂದಾದರೆ, ಅದೂ ಸರಿಯೇ. ಆಗ ನೀವು ನಿಜವಾದ ಪ್ರೇಮದಲ್ಲಿ ಇದ್ದಿರಲೇ ಇಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ನೀವಿಬ್ಬರೂ ದೇಹಾಕರ್ಷಣೆ ಅಥವಾ ಮಾನಸಿಕ ಅವಲಂಬನೆಗಾಗಿ ಪರಸ್ಪರ ಒಡಂಬಡಿಕೆಯಲ್ಲಿದ್ದಿರಿ. ಈಗ ಅದರಿಂದ ಹೊರಗೆ ಬಂದಿದ್ದೀರಷ್ಟೆ. ಇದನ್ನು ನೀವು ಒಪ್ಪಿಕೊಳ್ಳಬೇಕು. ಆಗ ನೀವು ಯಾರನ್ನೂ ದೂರಬೇಕಾಗಿ ಬರುವುದಿಲ್ಲ.

ಇನ್ನು ಕೆಲವರಿಗೆ ಮತ್ತೊಂದು ಖಯಾಲಿ. ತಮ್ಮನ್ನು ಒಳ್ಳೆಯವರೆಂದೂ ಬೇರ್ಪಟ್ಟ ಪ್ರಿಯತಮರನ್ನು ಕೆಟ್ಟವರೆಂದೂ ಬಿಂಬಿಸುವುದು. ಈ ಪ್ರಯತ್ನ ನಿಮ್ಮನ್ನು ಕೆಳಗಿಳಿಸುತ್ತಾ ಹೋಗುತ್ತದೆಯಲ್ಲದೆ ಒಳಿತನ್ನಂತೂ ಮಾಡುವುದಿಲ್ಲ. ನಿಮ್ಮ ಘನತೆಗೆ ಇದರಿಂದ ಧಕ್ಕೆಯಾಗುತ್ತದೆಯೇ ಹೊರತು ಬೇರೇನಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆಯ್ಕೆಗಳಿರುತ್ತವೆ ಅನ್ನುವುದನ್ನು ನೆನಪಿಟ್ಟುಕೊಂಡರೆ, ಪ್ರತಿಯೊಬ್ಬ ವ್ಯಕ್ತಿಯ ಆಲೋಚನಾ ವಿಧಾನ ಮತ್ತು ಆದ್ಯತೆಗಳು ಬೇರೆಯಾಗಿರುತ್ತವೆ ಅನ್ನುವುದನ್ನು ಅರ್ಥ ಮಾಡಿಕೊಂಡರೆ ಈ ಎಲ್ಲ ಸಮಸ್ಯೆ ಉದ್ಭವಿಸುವುದೇ ಇಲ್ಲ. ನಮಗೆ ಸಾಧ್ಯವಾದರೆ ಅದಕ್ಕೆ ಹೊಂದಿಕೊಂಡು ಸಂಬಂಧ ಮುಂದುವರೆಸಬೇಕು. ಸಾಧ್ಯವಾಗದೆ ಹೋದರೆ ಅದನ್ನು ಅಲ್ಲಿಗೇ ತುಂಡರಿಸಿ, ಸೌಹಾರ್ದದಿಂದ ಬೇರೆಯಾಗಬೇಕು. ನಂತರದಲ್ಲೂ ಪರಸ್ಪರ ಪರಿಚಿತರಾಗಿ, ಸ್ನೇಹಿತರಾಗಿ ಉಳಿಯುವ ಅವಕಾಶವಿದ್ದೇ ಇರುತ್ತದೆ. ಒಂದು ಕಾಲದಲ್ಲಿ ಪರಸ್ಪರ ಪ್ರೀತಿಯಲ್ಲಿದ್ದ ಜೀವಗಳು ಬದಲಾದ ಸಂದರ್ಭದಲ್ಲಿ ಕತ್ತಿ ಮಸೆಯತೊಡಗಿದರೆ, ಅದು ಅವರದ್ದೇ ಪ್ರೇಮಕ್ಕೆ ಮಾಡಿಕೊಂಡ ಅವಮಾನವಷ್ಟೆ.

 

Leave a Reply