ರೈಕೋನನ ಕಳ್ಳ ಬಿಟ್ಟು ಹೋದ ಚಂದಿರ

“ಕಳ್ಳ ಬಿಟ್ಟುಹೋದನಲ್ಲ ಕಿಟಕಿಯಲ್ಲಿ ಚಂದಿರ!” ಅಷ್ಟೇ. ಬಹಳ ಸರಳ ವಿಷಯ. ಎಷ್ಟು ಚೆಂದ ಸಾಹಿತ್ಯ!
“ಕಳ್ಳನಿಗೆ ಚಂದಿರವನ್ನಾದರೂ ಕೊಟ್ಟುಬಿಡೋಣವೆಂದರೆ, ಅದು ಕೂಡ ನನ್ನದಲ್ಲ” – ಇಲ್ಲಿದೆ ಅಸಲಿ ವಿಷಯ. 

~ ಅಲಾವಿಕಾ

zen

ಝೆನ್ ಬಿಕ್ಖು ರೈಕೋನ್ (Rykon)ನ ಪುಟ್ಟ ಎಲೆಮನೆಗೆ ಕಳ್ಳನೊಬ್ಬ ಹೊಕ್ಕುತ್ತಾನೆ. ಅಲ್ಲಿ ಕದಿಯಲೇನಿದೆ? ಭಿಕ್ಷೆಯ ಬೋಗುಣಿ, ಚಿಂದಿ ಹೊದಿಕೆ ಮತ್ತು ಸ್ವತಃ ರೈಕೋನ್’ನ ಹೊರತಾಗಿ? ಬರಿಗೈಲಿ ವಾಪಸು ಹೊರಟ ಕಳ್ಳನ್ನ ಕರೆಯುತ್ತಾ ಅಂವ ಹೇಳ್ತಾನೆ, “ಕದಿಯಲೆಂದು ಬಂದವನು ಹಾಗೇ ಹೋಗೋದೇನು ಚೆಂದ? ಈ ಹೊದಿಕೆಯನ್ನಾದರೂ ತೆಗೆದ್ಕೊಂಡು ಹೋಗು!”
ಕಳ್ಳ ಮಾತು ಮರೆತಂತಾಗಿ ಮತ್ತೊಂದು ಯೋಚಿಸದೆ ಅದನ್ನು ಬೊಗಸೆಯೊಡ್ಡಿ ಪಡೆದು ಹೊರಟುಹೋಗ್ತಾನೆ.
ಕಳ್ಳ ಹೋದಮೇಲೆ ಕಿಟಕಿ ದಿಟ್ಟಿಸುತ್ತ ಮಲಗಿದ ರೈಕೋನನಿಗೆ ತುಂಬು ಚಂದಿರ ಕಂಡಾಗ ಅನ್ನಿಸುತ್ತೆ;
ಕಳ್ಳ ಬಿಟ್ಟುಹೋದನಲ್ಲ
ಕಿಟಕಿಯಲ್ಲಿ ಚಂದಿರ!

ರೈಕೋನ್ ಮತ್ತೂ ಯೋಚಿಸ್ತಾನೆ. ಕಳ್ಳನಿಗೆ ಕೊಡೋಕೆ ತನ್ನಲ್ಲಿ ಏನೂ ಇರಲಿಲ್ಲವಲ್ಲ ಅಂತ. ತನ್ನ ಬಡತನವೆಂಥದ್ದು ಅಂತ ಯೋಚಿಸುತ್ತ ಸುತ್ತ ಮುತ್ತ ಕಣ್ಣಾಡಿಸುವಾಗ ಮತ್ತೆ ಚಂದಿರ ಕಾಣಿಸುತ್ತೆ ಕಿಟಕಿಯಲ್ಲಿ. ಆಗ ಅಂವ ಅಂದುಕೊಳ್ತಾನೆ;
ನಾನೆಂಥ ಬಡವ!
ಕಳ್ಳನಿಗೆ ಚಂದಿರವನ್ನಾದರೂ
ಕೊಟ್ಟುಬಿಡೋಣವೆಂದರೆ
ಅದು ಕೂಡ ನನ್ನದಲ್ಲ…

 
ಈ ಝೆನ್ ಹಾಯ್ಕುಗಳು, ಕೊಯಾನ್ ಗಳು ಅತ್ಯಂತ ಸರಳ. ಅಲ್ಲೆಲ್ಲೂ ನೇರ ನಿರೂಪಣೆ ಇಲ್ಲದೆ ಹೋದರೂ ಅವು ಸರಳ. ಅಲ್ಲಿ ನಾವು ಯಾವ ಬೋಧನೆಯನ್ನೂ ಕಾಣೆವು. ಕಾಣ್ಕೆ ಮಾತ್ರ ಮಿಣುಕು ಹುಳದ ಬೆನ್ನಿನಂತೆ ಹೊಳೆಯುವುದು. 

ರೈಕೋನ್ ಯೋಚಿಸ್ತಾನೆ, “ಕಳ್ಳ ಬಿಟ್ಟುಹೋದನಲ್ಲ ಕಿಟಕಿಯಲ್ಲಿ ಚಂದಿರ!” ಅಷ್ಟೇ. ಬಹಳ ಸರಳ ವಿಷಯ. ಎಷ್ಟು ಚೆಂದ ಸಾಹಿತ್ಯ!
“ಕಳ್ಳನಿಗೆ ಚಂದಿರವನ್ನಾದರೂ ಕೊಟ್ಟುಬಿಡೋಣವೆಂದರೆ, ಅದು ಕೂಡ ನನ್ನದಲ್ಲ” – ಇಲ್ಲಿದೆ ಅಸಲಿ ವಿಷಯ. 

ಹಾಗಾದರೆ ಕಿಟಕಿಯಲ್ಲಿ ಬಿಟ್ಟುಹೋದ ಅನ್ನಲಿಕ್ಕೆ ಆ ಚಂದಿರ ಕಳ್ಳನ ಸೊತ್ತಾ? ಉಹು… ರೈಕೋನ್ ಯೋಚಿಸ್ತಾನೆ, ಕಳ್ಳನಿಂದ ಚಂದಿರನ್ನ ಕೊಂಡುಹೋಗಲಾಗೋದಿಲ್ಲ. ಎಲ್ಲರಿಗೂ ಸಲ್ಲುವ ಚಂದಿರ ನನ್ನ ಪಾಲಿಗೂ ಇದ್ದಾನೆ ಅಂತ. ರೈಕೋನ್ ಯೋಚಿಸ್ತಾನೆ, ಯಾರು ಯಾವ ವಸ್ತು ಕದ್ದುಕೊಂಡು ಹೋದರೇನು, ಕಿಟಕಿಯಿಂದ ಕಾಣ್ತಿರುವ ಚಂದಿರನ್ನ ನನ್ನಿಂದ ಕದಿಯಲಾದೀತೇ ಅಂತ. 
ಹೀಗೆ ತನ್ನ ಕಿಟಕಿಯಾಚೆಯ, ತನಗೆ ತಂಪನ್ನೂ ಖುಷಿಯನ್ನೂ ಕೊಡ್ತಿರುವ ಚಂದಿರವನ್ನ ಕಳ್ಳನಿಗೆ ತಾನೇ ಕೊಟ್ಟುಬಿಡೋಣ ಅಂದರೆ ಅದು ತನ್ನ ಸೊತ್ತೂ ಅಲ್ಲ! ಇದು ರೈಕೋನನ ಸದ್ಯದ ದುಃಖ. 

~

ಅವರು ಆ ವಸ್ತುವನ್ನು ಕಿತ್ತುಕೊಂಡರು. ಇವರು ಈ ಅವಕಾಶ ಕಸಿದುಕೊಂಡರು. ಅಗೋ ಯಾರೋ ನನ್ನವರನ್ನು ಕದಿಯುವರು. ಅಥವಾ ಮತ್ತೇನೋ…
ಹೀಗೆ ನಮ್ಮದು  ಹತ್ತಾರು ಸಂಕಟ. ದುಃಖಿಸುತ್ತ ಕುಳಿತ ಹೊತ್ತು ಕಿಟಕಿ ಪರದೆ ತೂರಿ ಬಂದ ಗಾಳಿಗೆ ಉಬ್ಬುತ್ತ ಚೂರು ಸರಿಯುತ್ತದೆ. ಕಿಟಕಿಯಾಚೆ ಸೂರ್ಯವೋ ಚಂದ್ರವೋ ಹಕ್ಕಿ ದನಿಯೋ.. 
ಈ ಹೊತ್ತು ಎಲ್ಲರಂತೆ ನಮಗೂ ಸಲ್ಲುತ್ತಿರುವ ಇವನ್ನ ಯಾರು ತಾನೆ ಕಸಿಯಬಲ್ಲರು? ಕದಿಯಬಲ್ಲರು? 
ಇಷ್ಟು ಹೊಳಹು ಸಾಕು ಕಣ್ಣೀರು ಇಂಗಿಸಲು. 

~

 

ಝೆನ್ ಬಿಕ್ಖು ರೈಕೋನನ 
ಕಳ್ಳ ಬಿಟ್ಟೋದ ಚಂದಿರ

ಹಣಕುತ್ತಿದೆ ಕೋಟ್ಯಂತರ ಕಿಟಕಿಗಳಲ್ಲಿ

ಯಾರೋ ಬಿಟ್ಟುಕೊಟ್ಟಿದ್ದು,
ಮತ್ಯಾರಿಗೂ ಕೊಡಲಾಗದ್ದು,
ತನ್ನಿಂತಾನೆ ಸಲ್ಲುತ್ತ ಹೋಗುವುದು;

ಚಂದ್ರ, ಸೂರ್ಯ, ಹಕ್ಕಿ ಕೊರಳು
ಮತ್ತು
ನಮ್ಮ ಪಾಲಿನ ಎಲ್ಲವೂ

 

Leave a Reply