ಸಂಬಂಧಗಳಲ್ಲಿ ನಿರೀಕ್ಷೆಯನ್ನು ಹೇರುವುದು ಮೂರ್ಖತನವಷ್ಟೆ

ಗೆಳೆತನವೊಂದು ಅಕಾಲ ಮರಣವನ್ನಪ್ಪೋದಕ್ಕೆ ಕಾರಣವೇನು? ಓಶೋ ಹೇಳುತ್ತಾರೆ, `ಹತಾಶೆ ನಿರೀಕ್ಷೆಯ ನೆರಳೇ ಆಗಿದೆ’ ಎಂದು. ಇಲ್ಲಿಯೂ ಸಂಭವಿಸಿದ್ದು ನಿರೀಕ್ಷೆಯ ಪ್ರತಿಫಲವೇ ಹೊರತು ಇನ್ನೇನಲ್ಲ. ಒಂದು ವಿಷಯದ ಮೇಲೆ ಸಮಾನ ಅಭಿಪ್ರಾಯಗಳನ್ನು ಹೊಂದಿದ್ದ ತಕ್ಷಣ ಎಲ್ಲ ಸಂಗತಿಗಳನ್ನೂ ಒಪ್ಪಿಬಿಡಬೇಕು ಎಂಬ ನಿರೀಕ್ಷೆ ಅವರಿಬ್ಬರ ನಡುವಿನ ಗೆಳೆತನವನ್ನು ಕೊನೆಗೊಳಿಸಿಬಿಡುತ್ತದೆ ~ ಸುನೈಫ್

ಯಾವುದೋ ಒಂದು ಮದುವೆ ಕಾರ್ಯಕ್ರಮದಲ್ಲಿ ಅಥವಾ ಇನ್ಯಾವುದೋ ವೈಚಾರಿಕ ಚರ್ಚೆ ನಡೆಯುವ ಕಾರ್ಯಕ್ರಮದಲ್ಲಿ ಅಪರಿಚಿತರೊಬ್ಬರಿಬ್ಬರ ಪರಿಚಯವಾಗುತ್ತದೆ. ಕುಶಲೋಪರಿ ಮುಗಿಯುವಾಗ ಗೆಳೆತನದ ಹೊಸ್ತಿಲಲ್ಲಿ ನಿಂತಿರುತ್ತಾರೆ. ಆ ಸಲುಗೆಯಲ್ಲಿ ಮುಂದಿನ ದಿನಗಳಲ್ಲಿ ಮಾತುಕತೆಗಳು ಮುಂದುವರಿದು, ಒಂದು ದಿನ ಒಬ್ಬರು ಒಂದು ಗಂಭೀರ ವಿಷಯದ ಕುರಿತು ಮಾತಿಗಿಳಿಯುತ್ತಾರೆ. ಆಶ್ಚರ್ಯವೆಂದರೆ, ಇಬ್ಬರಿಗೂ ಆ ವಿಷಯದ ಮೇಲೆ ಸಮಾನ ಆಸಕ್ತಿ ಮತ್ತು ಸಮಾನ ಅಭಿಪ್ರಾಯಗಳಿರುತ್ತವೆ. ಚರ್ಚೆ ಗಂಭೀರವಾದಂತೆಲ್ಲ ಇಬ್ಬರೂ ಇನ್ನಷ್ಟು ಆಪ್ತರಾಗುತ್ತಾರೆ. ತನ್ನ ಹಾಗೆಯೇ ಯೋಚಿಸುವ ಇನ್ನೊಬ್ಬರು ಸಿಕ್ಕ ಖುಷಿ ಇಬ್ಬರಿಗೂ. ಇದೇ ಸಮಾನ ಮನಸ್ಕತೆ ಮುಂದೊಂದು ದಿನ ಪರಸ್ಪರ ಬಿಟ್ಟಿರಲಾರದಷ್ಟು ಗಟ್ಟಿ ಗೆಳೆತನವಾಗಿ ಮಾರ್ಪಾಡಾಗುತ್ತದೆ.

ಹೀಗಿರುವಾಗ ಒಂದು ದಿನ ಮಾತುಕತೆಯ ವಿಷಯ ಅದು ಹೇಗೋ ಬದಲಾಗುತ್ತದೆ. ಹೊಸತೊಂದು ವಿಚಾರ ಚರ್ಚೆಗೆ ಬರುತ್ತದೆ. ಆಗ ನೋಡಿ, ಇಬ್ಬರಿಗೂ ವಿರುದ್ಧ ಅಭಿಪ್ರಾಯಗಳು. ಇಷ್ಟು ಕಾಲವೂ ಗೆಳೆಯರಾಗಿದ್ದವರ ನಡುವೆ ಸಣ್ಣದೊಂದು ಅಪನಂಬಿಕೆ ಕಾಣಿಸಿಕೊಳ್ಳುತ್ತದೆ. ಆದರೂ ಪರಸ್ಪರರ ಅಭಿಪ್ರಾಯಗಳನ್ನು ಹೇರುವ ಪ್ರಯತ್ನಗಳು ನಡೆಯುತ್ತವೆ. ಇಂತಹ ಪ್ರಯತ್ನಗಳು ನಡೆದಂತೆಲ್ಲ ಸಂಬಂಧ ಹಳಸುತ್ತದೆ. ತನ್ನ ವಾದವೇ ಸರಿಯೆಂಬ ಅಹಂಕಾರಿ ಭಾವ ಇಬ್ಬರಲ್ಲೂ ಮೂಡುತ್ತದೆ. ಹತಾಶೆ ಮೂಡಿ ಗೆಳೆತನ ಶತೃತ್ವಕ್ಕೆ ತಿರುಗುತ್ತದೆ. ಪರಸ್ಪರ ದೂಷಣೆ, ಜಗಳಗಳೇ ಮೇಲೈಸುತ್ತವೆ. ನಿನ್ನನ್ನು ಅತಿಯಾಗಿ ನಂಬಿ ಬಿಟ್ಟೆ ಎಂಬ ಹತಾಶೆಯ ಮಾತು ಸಾಮಾನ್ಯವಾಗುತ್ತದೆ.

ಹೀಗೆ ಗೆಳೆತನವೊಂದು ಅಕಾಲ ಮರಣವನ್ನಪ್ಪೋದಕ್ಕೆ ಕಾರಣವೇನು? ಓಶೋ ಹೇಳುತ್ತಾರೆ, `ಹತಾಶೆ ನಿರೀಕ್ಷೆಯ ನೆರಳೇ ಆಗಿದೆ’ ಎಂದು. ಇಲ್ಲಿಯೂ ಸಂಭವಿಸಿದ್ದು ನಿರೀಕ್ಷೆಯ ಪ್ರತಿಫಲವೇ ಹೊರತು ಇನ್ನೇನಲ್ಲ. ಒಂದು ವಿಷಯದ ಮೇಲೆ ಸಮಾನ ಅಭಿಪ್ರಾಯಗಳನ್ನು ಹೊಂದಿದ್ದ ತಕ್ಷಣ ಎಲ್ಲ ಸಂಗತಿಗಳನ್ನೂ ಒಪ್ಪಿಬಿಡಬೇಕು ಎಂಬ ನಿರೀಕ್ಷೆ ಅವರಿಬ್ಬರ ನಡುವಿನ ಗೆಳೆತನವನ್ನು ಕೊನೆಗೊಳಿಸಿಬಿಡುತ್ತದೆ. ತನ್ನ ನಿರೀಕ್ಷೆಗಳನ್ನು ಇನ್ನೊಬ್ಬರ ಮೇಲೆ ಪ್ರತಿಫಲನಗೊಳಿಸುವುದು ಅತ್ಯಂತ ಮೂರ್ಖತನದ ಕೆಲಸವಲ್ಲದೆ ಇನ್ನೇನಲ್ಲ. ಆದರೂ ನಾವು ನಿರೀಕ್ಷೆಗಳನ್ನ ಇಟ್ಟುಕೊಂಡೇ ಬದುಕುತ್ತೇವೆ ಮತ್ತು ಆಯಾ ಸಂದರ್ಭಗಳಲ್ಲಿ ವೈಮನಸ್ಯ ಬೆಳೆಸಿಕೊಂಡೂ ಇರುತ್ತೇವೆ.

ಆದರೆ, ಗೆಳೆತನದಲ್ಲಾಗಲೀ, ವ್ಯಾಪಾರದಲ್ಲಾಗಲೀ ಅಥವಾ ದೈನಂದಿನ ಜೀವನದ ಯಾವುದೇ ಘಟ್ಟದಲ್ಲಾಗಲೀ ನಾವು ಇನ್ನೊಬ್ಬರ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡು ಬದುಕಿದರೆ ಅದು ಕೊನೆಗೊಮ್ಮೆ ಹತಾಶೆಯ ಕೂಪಕ್ಕೆ ತಳ್ಳಿಯೇ ತೀರುತ್ತದೆ ಎಂಬ ಅರಿವು ನಮಗಿರಬೇಕು. ಭಿನ್ನತೆಯೂ ರಮ್ಯವಾಗಿಸುವಷ್ಟು ವ್ಯವಧಾನವೂ ನಮಗೆ ಬೇಕು. ನನ್ನಂತೆ ಇರುವುದು ನಾನು ಮಾತ್ರ, ಉಳಿದವರೆಲ್ಲರೂ ಅವರವರಂತೆಯೇ ಇರುತ್ತಾರೆ ಎಂಬುದನ್ನು ನೆನಪಿಟ್ಟು ಬಾಳಿದರೆ, ಬಾಳೆಷ್ಟು ಚೆಂದ..

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.