ಪರೀಕ್ಷೆ ಪೆಡಂಭೂತವಲ್ಲ : ಪೋಷಕರು ಮತ್ತು ವಿದ್ಯಾರ್ಥಿಗಳ ಗಮನಕ್ಕೆ…

ಮಕ್ಕಳ ಪಾಲನೆ ಪೋಷಣೆಗೆ ನಾವು ನೀಡುವುದೆಲ್ಲವೂ ನಮ್ಮ ಜವಾಬ್ದಾರಿಯ ಎಚ್ಚರದಿಂದ ಹೊರತು, ಮಕ್ಕಳ ಮೇಲೆ ನಾವು ಹೂಡಿಕೆ ಮಾಡುತ್ತಿಲ್ಲ. ನಮ್ಮ ಹೂಡಿಕೆಯನ್ನು ಲಾಭ ಸಹಿತ ಮರಳಿಸಲು ಮಕ್ಕಳು ಜೀವಂತ ಬ್ಯಾಂಕ್ ಅಲ್ಲ ಎನ್ನುವ ಸತ್ಯವನ್ನು ಮನವರಿಕೆ ಮಾಡಿಕೊಂಡರೆ ಬಹುಶಃ ನಿರೀಕ್ಷೆಗಳಿಂದ ಮುಕ್ತರಾಗಬಹುದು.

exam

ದಿನ ಮಕ್ಕಳಿರುವ ಮನೆಯಲ್ಲಿ ಮಾರ್ಚ್, ಏಪ್ರಿಲ್ ತಿಂಗಳುಗಳೆಂದರೆ ಕಾವಿನ ಕಾಲ. ಶಿವ ರಾತ್ರಿ ಕಳೆಯುತ್ತಿದ್ದ ಹಾಗೇ ಬೇಸಿಗೆಯ ಧಗೆ ಮಾತ್ರವಲ್ಲ, ವಿದ್ಯಾರ್ಥಿಗಳ ಶಾಲಾ ಪರೀಕ್ಷೆಗಳ ಬಿಸಿಯೂ ಹೊತ್ತಿಕೊಳ್ಳುತ್ತದೆ.

ಹಿಂದೆಲ್ಲ ಮುಂದಿನ ತರಗತಿಗೆ ಹೋಗುವ ರಹದಾರಿ ಪಡೆಯಲು ಅರ್ಹತೆಯಷ್ಟೆ ಆಗಿದ್ದ ಶಾಲಾ ಪರೀಕ್ಷೆಗಳು ಇಂದಿನ ಪೋಷಕರ ಪಾಲಿಗೆ ಬದುಕಿನ ಪ್ರಶ್ನೆಯಂತಾಗಿಬಿಟ್ಟಿದೆ. ಎಲ್‍ಕೇಜಿ ಮಗುವಿನಿಂದ ಹಿಡಿದು ಉನ್ನತ ಮಟ್ಟದ ವಿದ್ಯಾಭ್ಯಾಸದವರೆಗೆ ಮಕ್ಕಳಿಗಿಂತ ಪೋಷಕರೇ ಪರೀಕ್ಷೆಯ ಬಗ್ಗೆ ಹೆಚ್ಚು ಉದ್ವಿಗ್ನರೂ ಆತಂಕಿತರೂ ಆಗಿರುತ್ತಾರೆ, ಮತ್ತು ತಮ್ಮ ಆತಂಕವನ್ನು ಮಕ್ಕಳಿಗೂ ದಾಟಿಸಿ ಅವರನ್ನು ಖಿನ್ನತೆಗೆ ದೂಡಿಬಿಡುತ್ತಾರೆ.

ಇಂತಹ ಸಂದರ್ಭದಲ್ಲಿ ಸ್ವಯಂ ನಿಯಂತ್ರಣ ಸಾಧಿಸುವುದು ಹೇಗೆ? ತಾವೂ ಒತ್ತಡ ತಂದುಕೊಳ್ಳದೆ, ಮಕ್ಕಳ ಮೇಲೂ ಒತ್ತಡ ಹೇರದೆ ಪರೀಕ್ಷೆಯ ತಯಾರಿ ನಡೆಸುವುದು ಹೇಗೆ? ಅದನ್ನು ನಿಶ್ಚಿಂತೆಯಿಂದ ಎದುರಿಸುವುದು ಹೇಗೆ? ಈ ನಿಟ್ಟಿನಲ್ಲಿ ಯೋಚಿಸುವ ಸಮಾಧಾನ ತಂದುಕೊಂಡರೆ, ಅವನ್ನು ಕಂಡುಕೊಂಡು ಪ್ರಯತ್ನ ನಡೆಸುವುದು ಸುಲಭ.

ಮಕ್ಕಳು ಜೀವಂತ ಬ್ಯಾಂಕ್ ಅಲ್ಲ

ನಮ್ಮ ಮಗು ಉತ್ತಮ ಅಂಕ ಪಡೆಯಬೇಕು ಎಂದು ಬಯಸುವುದು ನಮ್ಮ ಮಗವಿನ ಹಿತ ಚಿಂತನೆಯಿಂದ ಎಂದು ನಾವು ಭಾವಿಸುತ್ತೇವೆ. ವಾಸ್ತವವಾಗಿ ನಮಗೆ ಅದರಿಂದ ಸಂತೋಷವಾಗುತ್ತದೆ, ಸಮಾಜದಲ್ಲಿ ಗೌರವ ಹೆಚ್ಚುತ್ತದೆ ಎನ್ನುವ ನಮ್ಮ ಆಕಾಂಕ್ಷೆಯೇ ಅದಕ್ಕೆ ಕಾರಣವಾಗಿರುತ್ತದೆ. ನಮ್ಮ ಸಂತೋಷಕ್ಕಾಗಿ ನಾವು ಪ್ರಯತ್ನ ಹಾಕಬೇಕೇ ಹೊರತು, ಹುಟ್ಟಿದ ಕ್ಷಣದಿಂದ ಮತ್ತೊಂದು ಪ್ರತ್ಯೇಕ ವ್ಯಕ್ತಿಯೇ ಆಗಿರುವ ಮಗುವಿನ ಮೇಲೆ ಯಾಕಾದರೂ ಒತ್ತಡ ಹಾಕಬೇಕು?

ಮಕ್ಕಳ ಪಾಲನೆ ಪೋಷಣೆಗೆ ನಾವು ನೀಡುವುದೆಲ್ಲವೂ ನಮ್ಮ ಜವಾಬ್ದಾರಿಯ ಎಚ್ಚರದಿಂದ ಹೊರತು, ಮಕ್ಕಳ ಮೇಲೆ ನಾವು ಹೂಡಿಕೆ ಮಾಡುತ್ತಿಲ್ಲ. ನಮ್ಮ ಹೂಡಿಕೆಯನ್ನು ಲಾಭ ಸಹಿತ ಮರಳಿಸಲು ಮಕ್ಕಳು ಜೀವಂತ ಬ್ಯಾಂಕ್ ಅಲ್ಲ ಎನ್ನುವ ಸತ್ಯವನ್ನು ಮನವರಿಕೆ ಮಾಡಿಕೊಂಡರೆ ಬಹುಶಃ ನಿರೀಕ್ಷೆಗಳಿಂದ ಮುಕ್ತರಾಗಬಹುದು.

`ಮಕ್ಕಳ ಜನ್ಮಕ್ಕೆ ನೀವು ನಿಮಿತ್ತ ಮಾತ್ರರು. ಅವರು ನಿಮ್ಮ ಹಕ್ಕಿನ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದಿದ್ದಾರೆ ಓಶೋ. ಈ ಮಾತನ್ನು ನಾವು ಅರ್ಥೈಸಿಕೊಳ್ಳಬೇಕು. ಮಕ್ಕಳ ಅಗತ್ಯಗಳನ್ನು ಪೂರೈಸುವುದು ಪೋಷಕರ ಜವಾಬ್ದಾರಿಯೇ ಹೊರತು, ಅವರ ಜೀವನ ಕಲಿಕೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದಲ್ಲ. ಇಂದಿನ ಪೋಷಕರು ಮಕ್ಕಳಿಗೆ ಅದೆಷ್ಟು ಸವಲತ್ತುಗಳನ್ನು ಕಲ್ಪಿಸಿಕೊಡುತ್ತಾರೆಂದರೆ, ಮಕ್ಕಳಿಗೆ ಸಮಸ್ಯೆಗಳನ್ನೆದುರಿಸಲು, ಅಗತ್ಯಗಳನ್ನು ಪೂರೈಸಿಕೊಳ್ಳಲು ಸ್ವಂತದ ಬುದ್ಧಿ ವಿನಿಯೋಗಿಸುವ ಅವಕಾಶವೇ ಬರುವುದಿಲ್ಲ.ಮಕ್ಕಳಿಗೆ ವಿದ್ಯೆಯ ಜೊತೆಗೆ ಜೀವನ ಕಲಿಕೆಗೂ ಅವಕಾಶ ಮಾಡಿಕೊಡಬೇಕು. ಆಗ ಮಾತ್ರ ನಿಜವಾಗಿಯೂ ಜವಾಬ್ದಾರಿ ಹೊತ್ತಂತಾಗುತ್ತದೆಯೇ ಹೊರತು, ಕೇವಲ ವಸ್ತುಗಳಿಂದ ಮಕ್ಕಳ ಕೋಣೆ ತುಂಬಿಸುವುದರಿಂದಲ್ಲ.

ಎದುರಿಸುವುದು ಹೇಗೆ?

ಈ ಎಲ್ಲ ವಿಷಯಗಳು ಒತ್ತಟ್ಟಿಗಿರಲಿ. ಮಕ್ಕಳ ಪರೀಕ್ಷೆಗಳು ಅದಾಗಲೇ ಹೊಸ್ತಿಲಲ್ಲಿ ನಿಂತಿವೆ. ಈಗ ಇದ್ದಕ್ಕಿದ್ದ ಹಾಗೆ ನಿರೀಕ್ಷೆ ಇಲ್ಲದಂತಹ, ನಿರ್ಲಿಪ್ತ ಮನಸ್ಥಿತಿಯನ್ನು ತಂದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ತುರ್ತನ್ನು ಎದುರಿಸುವುದು ಹೇಗೆ?

  • ಎಲ್ಲಕ್ಕಿಂತ ಮೊದಲು ನೀವೇನು ಬಯಸುತ್ತೀರಿ ಎಂಬುದನ್ನು ನಿಶ್ಚಯ ಮಾಡಿಕೊಳ್ಳಿ. ನಿಮ್ಮ ಈ ಬಯಕೆಯ ಹಿನ್ನೆಲೆ, ಅದನ್ನು ಪ್ರಚೋದಿಸುವ ಅಂಶಗಳೆಲ್ಲವನ್ನೂ ಕಣ್ಮುಂದೆ ತಂದುಕೊಳ್ಳಿ. ಈ ಪ್ರಚೋದನೆಗಳಲ್ಲಿ ಹೊರಗಿನದೆಷ್ಟು, ಸ್ವಂತದ್ದೆಷ್ಟು ಎನ್ನುವುದನ್ನು ಪ್ರಾಮಾಣಿಕವಾಗಿ ಗಮನಿಸಿ. ಹೊರಗಿನವೇ ಹೆಚ್ಚಿದ್ದರೆ ಮೊದಲು ಅವನ್ನು ನಿವಾರಿಸಿಕೊಳ್ಳಿ.
  • ಆತ್ಯಂತಿಕವಾಗಿ ನಿಮ್ಮ ಬದುಕನ್ನು ನೀವೇ ಬಾಳಬೇಕು ಎನ್ನುವ ಸತ್ಯ ತಿಳಿದಿರಲಿ. ಇದು ನಿಮ್ಮ ಮಗುವಿಗೂ ಅನ್ವಯವಾಗುತ್ತದೆ. ನಿಮ್ಮ ಮಕ್ಕಳೂ ಅವರ ಬದುಕನ್ನು ಅವರೇ ಬಾಳಬೇಕಿದೆ. ಅವರನ್ನು ಎದುರಿಗೆ ಕೂರಿಸಿಕೊಂಡು ಇಂದಿನ ಸ್ಪರ್ಧಾ ಯುಗದಲ್ಲಿ ಶೈಕ್ಷಣಿಕ ಪ್ರಮಾಣ ಪತ್ರಗಳಿಗೆ, ಅಂಕಪಟ್ಟಿಗಳಿಗೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದನ್ನು ಮನದಟ್ಟು ಮಾಡಿಸಿ.
  • ಮಗುವನ್ನು ಪರೀಕ್ಷೆಗೆ ಸಜ್ಜುಗೊಳಿಸಲು ನೀವು ಬಳಸಬೇಕಾಗಿರುವುದು ಹಂಗಿಸುವ ಧಾಟಿಯನ್ನಲ್ಲ. ಹೆದರಿಸುವ ಧಾಟಿಯನ್ನೂ ಅಲ್ಲ. ವಾಸ್ತವವನ್ನು ಹೇಳುವ ದನಿಯಷ್ಟೆ ನಿಮ್ಮದಾಗಿರಲಿ.
  • ಪರೀಕ್ಷೆಯ ಹೊಸ್ತಿಲಲ್ಲಿ ನಿಂತು ಸಾಧಕರ ದೊಡ್ಡ ದೊಡ್ಡ ಉದಾಹರಣೆಗಳನ್ನು ಕೊಡಲು ಹೋಗಬೇಡಿ, ಮಕ್ಕಳು ಪ್ರೇರಣೆ ಪಡೆಯುವುದಕ್ಕಿಂತ ಕೀಳರಿಮೆ ತುಂಬಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಹಾಗೆಯೇ ಹೋಲಿಕೆ ಮಾಡಲೂ ಹೋಗಬೇಡಿ. ಇವು ಮಕ್ಕಳನ್ನು ಹಟಕ್ಕೆ ಬೀಳಿಸುತ್ತವೆ. 
  • ಪರೀಕ್ಷೆಯ ಅವಧಿಯಲ್ಲಿ ಪೋಷಕರೆಷ್ಟು ಸಮಾಧಾನದಿಂದ ಇರುತ್ತಾರೋ ಮಕ್ಕಳೂ ಹಾಗೆಯೇ ಇರುತ್ತಾರೆ. ನೀವು ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಪ್ರತಿ ಸಂಜೆ ಕನಿಷ್ಠ ಹತ್ತು ನಿಮಿಷಗಳಾದರೂ ಕಣ್‍ಮುಚ್ಚಿ ಏಕಾಗ್ರತೆ ಸಾಧಿಸಲು ಪ್ರಯತ್ನಿಸಿ. ಏಕಾಗ್ರತೆಯು ಕ್ರಮೇಣ ನಿಮ್ಮನ್ನು ನಿರ್ಯೋಚನೆಯ ಹಂತಕ್ಕೆ ಕರೆದೊಯ್ಯುತ್ತದೆ. ಒಮ್ಮೆ ಈ ಹಂತದ ರುಚಿ ನೋಡಿದರೆ ಸಾಕು, ಆಮೇಲೆ ನೀವಾಗಿಯೇ ಬಯಸಿ ಅದರ ಬೆನ್ನು ಹತ್ತುತ್ತೀರಿ.
  • ಸಾಧ್ಯವಾದಷ್ಟೂ ಸಹಜವಾಗಿರಿ. ಮಕ್ಕಳೆದುರು ಪರೀಕ್ಷೆಯನ್ನೊಂದು ರಾಕ್ಷಸನಂತೆ ಬಿಂಬಿಸಬೇಡಿ. ಅಂಜಿಕೆ ಬೆಳೆಸಬೇಡಿ. ನಿಮ್ಮ ದೈನಂದಿನ ವೇಳಾಪಟ್ಟಿಯಲ್ಲಿ ಯಾವ ಬದಲಾವಣೆಯೂ ಆಗದಿರಲಿ.

ಹರಕೆಯ ಕುರಿಯಾಗಬೇಡಿ!

ಪರೀಕ್ಷೆ ಹಾಗೂ ಫಲಿತಾಂಶಗಳ ಅವಧಿಯಲ್ಲಿ ದೇವಾಲಯಗಳಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಮೊದಲು ಪರೀಕ್ಷೆಯಲ್ಲಿ ಪಾಸು ಮಾಡು/ ಹೆಚ್ಚಿನ ಅಂಕ ಕೊಡಿಸು ಎಂದು ಹರಕೆ ಹೊರಲು; ಅನಂತರ ಬೇಡಿಕೆ ಈಡೇರಿಸಿದ್ದಕ್ಕೆ ಹರಕೆ ಸಲ್ಲಿಸಲು!

ಶ್ರದ್ಧಾಭಕ್ತಿಗಳಿಂದ ದೇವಾಲಯಕ್ಕೆ ಹೋಗುವುದು ಸರಿಯೇ. ಆದರೆ ಭಾರವನ್ನೆಲ್ಲ ದೇವರ ಮೇಲೆ ಹಾಕಿ, ಹರಕೆ ಹೊತ್ತು, ದೇವರಿದ್ದಾನೆಂಬ ವಿಶ್ವಾಸ ಅತಿಯಾಗಿ ಸ್ವಯಂಪ್ರಯತ್ನವನ್ನೇ ಹಾಕದೆ ಇರದಂತೆ ಎಚ್ಚರ ವಹಿಸುವುದು ಅಗತ್ಯ. ನಂಬಿಕೆಗಳು ವೈಯಕ್ತಿಕ. ಮಕ್ಕಳದೂ ಕೂಡ. ಆದರೆ ಅದನ್ನೇ ನೆವವಾಗಿಟ್ಟುಕೊಂಡು ಪರೀಕ್ಷೆಯ ಜವಾಬ್ದಾರಿಯನ್ನೆಲ್ಲ ದೇವರ ಮೇಲೆ ಹಾಕದಂತೆ ಮಕ್ಕಳಿಗೆ ಪೋಷಕರು ತಿಳಿ ಹೇಳಿ. ಆದರೆ, ಹಾಗೆ ತಿಳಿ ಹೇಳುವುದಕ್ಕೆ ಮೊದಲು, ಸ್ವತಃ ತಾವೂ ಅಂತಹ ಅಂಧಾಚರಣೆಗಳನ್ನು ಮಾಡುವುದರಿಂದ ದೂರವಿರಬೇಕು.

ಈ ಅವಧಿಯನ್ನೊಂದು ಸಂಭಾಳಿಸಿ ಗೆದ್ದು, ಮಕ್ಕಳ ಅಂತರಂಗವನ್ನು ಗಟ್ಟಿಗೊಳಿಸುವತ್ತ ಹೆಚ್ಚಿನ ಗಮನಕೊಟ್ಟರೆ ಉತ್ತಮ ವಿದ್ಯಾರ್ಥಿಗಳನ್ನು ಮಾತ್ರವಲ್ಲ, ಉತ್ತಮ ಮನುಷ್ಯರನ್ನು ನೀಡಿದ ಹೆಮ್ಮೆ ನಿಮ್ಮದಾಗುವುದು.

 

 

 

 

 

 

 

1 Comment

  1. ಇರುವ ಆರು ವಿಷಯಗಳು, ಆರು ಪೇಪರ್ ಬರೆಯಲು ವ್ಯಯಿಸುವ ಹದಿನೆಂಟರಿಂದ ಇಪ್ಪತ್ತು ತಾಸು ಸಮಯ ಮಕ್ಕಳ ಜೀವನವನ್ನು ನಿರ್ಧರಿಸುವುದಿಲ್ಲ.ಬದುಕು ಎಂಬ ದೊಡ್ಡ ಪರೀಕ್ಷೆಯಲ್ಲಿ ಈ SSLC,PUC ಪರೀಕ್ಷೆಗಳೆಲ್ಲ ಸಣ್ಣ ಸಣ್ಣ ಹೋಮ್ ವರ್ಕ್ ಇದ್ದ ಹಾಗೆ.ಯಾವುದೇ ಭಯ,ದುಗುಡ,ದುಮ್ಮಾನಗಳಿಲ್ಲದೆ ಸಂತೋಷದಿಂದ ಪರೀಕ್ಷೆ ಬರೆಯಿರಿ ಗೆಳೆಯರೆ.ಗೆದ್ದರೆ ನೀವು ಅದೃಷ್ಟಶಾಲಿಗಳು.ಸೋತರೆ ಆಗುವ ದುಃಖ ಕ್ಷಣಿಕವಷ್ಟೇ. ಅಂಕಗಳು ಚೆನ್ನಾಗಿ ಬರಲಿಲ್ಲ, Rank ಬರಲಿಲ್ಲ ಅಂದರೆ ಅದೇ ಅಂತಿಮವಲ್ಲ.ಪ್ರಪಂಚ ವಿಶಾಲವಾಗಿದೆ.ನಿಮ್ಮ ಬದುಕಿಗೂ ಅನಂತ ಅವಕಾಶಗಳಿವೆ.ಇಲ್ಲಿ ಸೋತರೆ ಮತ್ತೆಲ್ಲೋ ಒಂದು ಕಡೆ ಗೆಲುವು ನಿಮಗಾಗಿ ಕಾದಿರುತ್ತದೆ. ಶುಭವಾಗಲಿ.
    Rock the exam…

Leave a Reply