ಚೈತನ್ಯರ ಜೀವನಬೋಧನೆಗಳಿಂದ ಪ್ರಭಾವಿತರಾದವರಲ್ಲಿ ಸಾಮ್ರಾಟ ಅಕ್ಬರ್ ಕೂಡ ಒಬ್ಬನೆಂದು ಇತಿಹಾಸ ಹೇಳುತ್ತದೆ. ಅನಕ್ಷರಸ್ಥನಾಗಿದ್ದರೂ ಸೃಜನಶೀಲನಾಗಿದ್ದ ಅಕ್ಬರ್, ಚೈತನ್ಯರ ಕುರಿತು ರಚಿಸಿದ್ದೆಂದು ಹೇಳಲಾದ ಗೀತೆಯೊಂದರ ಅನುವಾದ ಇಲ್ಲಿದೆ…
ಭಾರತದ ಕೇಂದ್ರ ಅಧ್ಯಾತ್ಮ ಎನ್ನಲಾಗಿದೆ. ಈ ದೇಶದಲ್ಲಿ ನಡೆದ ಬಹುತೇಕ ಸಾಮಾಜಿಕ ಸುಧಾರಣೆಗಳು ಆಧ್ಯಾತ್ಮಿಕ ತಳಹದಿಯ ಮೇಲೆಯೇ ನಡೆದಂಥವು. ಧಾರ್ಮಿಕ ಸಾಮರಸ್ಯ, ವರ್ಗ ಸಮನ್ವಯ, ಮೂಢನಂಬಿಕೆಯ ನಿವಾರಣೆ ಮೊದಲಾದ ಪ್ರಯತ್ನಗಳೆಲ್ಲವೂ ಬಹುತೇಕ ಯಶಸ್ಸು ಕಂಡಿದ್ದು ಆಧ್ಯಾತ್ಮಿಕ ವ್ಯಕ್ತಿಯ ಮುಂದಾಳತ್ವದಲ್ಲಿಯೇ. ಭಕ್ತಿ ಚಳವಳಿ, ವಚನ ಚಳವಳಿ ಮೊದಲಾದವು ಇದಕ್ಕೆ ಸಮರ್ಥ ಉದಾಹರಣೆ.
ಇಂದು ಚೈತನ್ಯ ಮಹಾಪ್ರಭು ಜಯಂತಿ. ಇವರು 15ನೇ ಶತಮಾನದಲ್ಲಿ ಬಂಗಾಳದಲ್ಲಿ ಆಗಿಹೋದ ಶ್ರೇಷ್ಠ ಸಂತ. ಭಾರತ, ಅದರಲ್ಲೂ ಬಂಗಾಳ ಅನ್ಯ ಆಕ್ರಮಣಗಳ ಜೊತೆ ಜಾತಿಮತೀಯ ಮೇಲುಕೀಳುಗಳ ಒಳಜಗಳದಲ್ಲಿ, ಮೌಢ್ಯತೆಯಲ್ಲಿ ಮುಕ್ಕಾಗುತ್ತಿದ್ದ ಸಂದರ್ಭವದು. ಈ ಕಾಲಘಟ್ಟದಲ್ಲಿ, 1486ರ ಫಾಲ್ಗುಣ ಹುಣ್ಣಿಮೆಯಂದು, ಚಂದ್ರಗ್ರಹಣ ಕಾಲದಲ್ಲಿ ಚೈತನ್ಯರು ಜನಿಸಿದರು. ಪ್ರೇಮಕಾರುಣ್ಯದ ಮೂಲಕವೇ ಸಾಮರಸ್ಯವನ್ನೂ ಸಹಬಾಳ್ವೆಯನ್ನೂ ಬೋಧಿಸಿದ ಚೈತನ್ಯ ಮಹಾಪ್ರಭುಗಳು ಉಂಟುಮಾಡಿದ ಸಾಮಾಜಿಕ ಕ್ರಾಂತಿ ಬಂಗಾಳವನ್ನು ಬೆಳಗಿಸಿತು. ಇವರ ಖ್ಯಾತಿ ವಂಗದೇಶವನ್ನೂ ಮೀರಿ ದೇಶದುದ್ದಗಲ ಹರಡಿತು. ಮೊಘಲ್ ದೊರೆಗಳನ್ನೂ ಪ್ರಭಾವಿಸಿತು.
ಹೀಗೆ ಚೈತನ್ಯರ ಜೀವನಬೋಧನೆಗಳಿಂದ ಪ್ರಭಾವಿತರಾದವರಲ್ಲಿ ಸಾಮ್ರಾಟ ಅಕ್ಬರ್ ಕೂಡ ಒಬ್ಬನೆಂದು ಇತಿಹಾಸ ಹೇಳುತ್ತದೆ. ಅನಕ್ಷರಸ್ಥನಾಗಿದ್ದರೂ ಸೃಜನಶೀಲನಾಗಿದ್ದ ಅಕ್ಬರ್, ಚೈತನ್ಯರ ಕುರಿತು ರಚಿಸಿದ್ದೆಂದು ಹೇಳಲಾದ ಗೀತೆಯೊಂದರ ಅನುವಾದ ಇಲ್ಲಿದೆ:
ಓ ಚೈತನ್ಯ,
ನನ್ನ ಹೃದಯ ವಿಜೇತ!
ಕರತಾಳ ತಂಬೂರಿ ಝಲ್ಲರಿಗಳ ನಾದದಲಿ
ನಿಧಾನ… ಸಾವಧಾನ
ನಿಗೂಢ ನರ್ತನದ ಹೆಜ್ಜೆಯಿಡುತ
ಆನಂದೋನ್ಮತ್ತ ಏಕಾಂತ –
ದೊಳು ನೀನು ನಡೆವಾಗ
ನೆರೆ ಹರಿದು ನಾನು ಉನ್ಮತ್ತ….
ಓ ನನ್ನ ಹೃದಯಧೀಶ,
ನಿನ್ನೆಡೆಗೆನ್ನ ಪ್ರೇಮವನು
ತೋರಲಾದರೂ ಹೇಗೆ?
ಕಾತರಿಸಿಹನು ಈ ಸಾಮ್ರಾಟ ಅಕ್ಬರನು
ನಿನ್ನ ಪ್ರೇಮ ಕಾರುಣ್ಯ ಸಾಗರದಂಚಿನಲಿ,
ಪ್ರೇಮದ ಒಂದೇ ಒಂದು ಹನಿಗಾಗಿ.