ಕೆಲಸ ಮಾಡುವುದು ಕಷ್ಟವಲ್ಲ, ಸುಮ್ಮನಿರುವುದೇ ಸವಾಲು!

ಅಧ್ಯಾತ್ಮದಲ್ಲಿ ಕ್ರಿಯೆಗಿಂತ ಹೆಚ್ಚು, ಏನನ್ನಾದರೂ ಮಾಡಬೇಕು ಅನ್ನುವ ನಿರ್ದೇಶನಕ್ಕಿಂತ ಹೆಚ್ಚು ‘ಸುಮ್ಮನಿರುವಿಕೆ’ಗೆ ಮಹತ್ವ ಕೊಡಲಾಗಿದೆ. ಆದ್ದರಿಂದ, ಎಷ್ಟು ಬಾರಿ, ಎಷ್ಟು ಬಗೆಯಲ್ಲಿ ಇದರ ಚರ್ಚೆ ನಡೆಸಿದರೂ ಕಡಿಮೆಯೇ. ಅಧ್ಯಾತ್ಮ ಪಥಗಳಲ್ಲಿ ಸುಮ್ಮನಿರುವಿಕೆಯ ಬಗ್ಗೆ ಹೆಚ್ಚು ಸರಳ ಮತ್ತು ನೇರವಾಗಿ ಹೇಳುವುದು ‘ದಾವ್’. ಅದರದೊಂದು ಹೊಳಹನ್ನಿಲ್ಲಿ ನೋಡೋಣ. 

ನದಿ ಹರೀತಿದೀನಿ ಅಂದುಕೊಳ್ತೀವಿ. 
ಉಹು…. ಅದು, ಉಗಮ – ಅಂತಗಳ ನಡುವೆ ನಿಂತಿದೆ.
ನಾವು ಬಾಳುವೆ ನಡೆಸ್ತಿದೀವಿ ಅಂದು ಕೊಳ್ತೀವಿ.
ದಾವ್ ಹೇಳುತ್ತೆ, `ಬಾಳು ಅದರ ಪಾಡಿಗೆ ನಡೆಯುತ್ತೆ. ಅಸ್ತಿತ್ವ ಅದರ ಕಾಳಜಿ ವಹಿಸತ್ತೆ.’
ಬಾಳು, ಹುಟ್ಟು – ಸಾವುಗಳ ನಡುವೆ ನಿಂತಿದೆ. ನಾವು ನಡೆದರೂನು ನಿಂತರೂನು ಅದು ಶತಸ್ಸಿದ್ಧವೇ.
ಅಹಂಕಾರ ಇರುವವನಿಗೆ ಸಮುದ್ರದಲ್ಲಿ ಅಲೆಗಳ ವಿರುದ್ಧ ಈಜೋ ಆಸೆ. ಹರಿವಿನೊಳಗೆ ಒಂದಾಗಿ ಹರಿದರೆ ಹಮ್ಮಿಗೆ ತೃಪ್ತಿ ಎಲ್ಲಿ?
ಮರದ ಕುಂಟೆ ಹರಿವಿಗೆ ತನ್ನ ಕೊಟ್ಟುಕೊಂಡು, ಅದು ಕರೆದೊಯ್ಯುವಲ್ಲಿಗೆ ತೇಲಿ ಬರುತ್ತೆ. ಎಲ್ಲಿಂದಲೋ ಕೊಚ್ಚಿಬಂದು, ಮತ್ತೆಲ್ಲೋ ಸೇರಿ, ಯಾರಿಗೋ ಉಪಯೋಗವಾಗುತ್ತೆ, ಉರುವಲಾಗುತ್ತೆ.

ಕಣ್ಣೆದುರೊಂದು ಚಿತ್ರವಿಟ್ಟುಕೊಂಡು, ಟೇಪು ಕಟ್ಟಿದ ಗುರಿಯಿಟ್ಟುಕೊಂಡು ಓಡಿ ಗೆಲ್ಲೋದು ನಿಜಕ್ಕೂ ಸಾಧನೆಯಾ? ಹರಿವಿನ ಜೊತೆ ಸೆಣೆಸಿ ಗೆದ್ದು ವಾಪಸು ದಡಕ್ಕೇ ಮರಳೋದು?
ಅಥವಾ ಹರಿವಿನೊಟ್ಟಿಗೆ ಬಂದು ಅನೂಹ್ಯ ತಿರುವು ಕಂಡು, ಮೂಲದ ಗುರುತೇ ಮರೆತು ಮತ್ತೆಲ್ಲೋ ಸಾರ್ಥಕಗೊಳ್ಳೋ ಸಾಹಸ ಇದೆಯಲ್ಲ, ಅದು ಸಾಧನೆಯಾ?
ನಿಜವಾದ ಸವಾಲು ಯಾವುದು ಹಾಗಾದರೆ?

ನಿಜವಾದ ಸವಾಲು ಸುಮ್ಮನಿರುವುದು. ಯಾರಾದರೂ ಏನಾದರೂ ಕೆಲಸ ಮಾಡುವುದು ಕಷ್ಟವಲ್ಲ. ಮನಸ್ಸು ಮಾಡಿದರೆ ಎಲ್ಲವೂ ಸುಲಭ. ಆದರೆ ಮನಸ್ಸು ಮಾಡಿಯೂ ಕಷ್ಟವೆನ್ನಿಸುವ ಸಂಗತಿ ಎಂದರೆ, ಅದು ಸುಮ್ಮನಿರುವುದು ಮಾತ್ರ. ಸೋಮಾರಿತನ ಕೂಡ ಆಲಸ್ಯದ ಭಾವವನ್ನು ಹೊಂದಿರುತ್ತದೆ. ಅದೂ ಕೂಡ ಇಲ್ಲದ ಖಾಲಿಯಲ್ಲಿ ಉಳಿಯುವುದು ಇದೆಯಲ್ಲ, ಅದೇ ನಿಜಕ್ಕೂ ದೊಡ್ಡ ಸವಾಲು!

 

Leave a Reply