ಸ್ವಯಂಸ್ಮರಣೆಯಿಂದ ಅರಿವಿನ ಬಾಗಿಲು ತೆರೆದುಕೊಳ್ಳುತ್ತದೆ

photoಸ್ಮರಣೆ ಮಾಡಬೇಕು, ಬೇರೆ ಯಾರದ್ದೋ ಅಲ್ಲ, ಸ್ವತಃ ನಮ್ಮದೇ. ಎಲ್ಲಕ್ಕಿಂತ ಮೊದಲು ನಾನು ಇದ್ದೇನೆ ಅನ್ನುವುದರ ಸ್ಮರಣೆ ಮಾಡಿಕೊಳ್ಳಬೇಕು. ಅನಂತರ ನಾನು ಎನ್ನುವುದನ್ನು ಮರೆತು ಇದ್ದೇನೆ ಅನ್ನುವುದಕ್ಕೆ ಅಂಟಿಕೊಳ್ಳಬೇಕು. ಆಗ ನೋಡನೋಡುತ್ತಿದ್ದಂತೆಯೇ ಸತ್ಯವೆನ್ನಿ, ವಾಸ್ತವಿಕತೆಯೆನ್ನಿ, ಪರಮಾತ್ಮನೆನ್ನಿ, ಅದು ಪ್ರಕಟಗೊಳ್ಳುತ್ತದೆ.

~ Whosoever Ji

ಸ್ತುತಃ ಬದುಕೆಂದರೇನು? ಪ್ರತಿ ಕ್ಷಣ, ಪ್ರತಿ ಘಳಿಗೆ ನಾವು ಒಂದಲ್ಲ ಒಂದು ಅನುಭವ ಪಡೆಯುತ್ತಲೇ ಇರುತ್ತೇವೆ. ಹಸಿವು ನೀರಡಿಕೆಗಳಿರಬಹುದು, ರಾಗ ದ್ವೇಷಗಳಿರಬಹುದು, ನಿದ್ರೆ ಅಥವಾ ಜಾಗೃತಿ ಇರಬಹುದು, ಸೇಡು ಮತ್ಸರಗಳಿರಬಹುದು; ಸುಖದಾಯಿ ಅನುಭವಗಳಿರಬಹುದು ಅಥವಾ ದುಃಖದಾಯಿ ಇರಬಹುದು. ಒಂದಲ್ಲ ಒಂದು ಅನುಭವಕ್ಕೆ ನಾವು ಒಳಗಾಗುತ್ತಲೇ ಇರುತ್ತೇವೆ. ಈ ಅನುಭವಗಳ ಸರಣಿ ಸದಾ ನಮ್ಮೊಂದಿಗೆ ಇರುತ್ತದೆಯೇಕೆ? ಇಷ್ಟೊಂದು ಅನುಭವಗಳು ಉಂಟಾಗುವುದಾದರೂ ಏಕೆ?
ಕ್ಷಣಕ್ಷಣದ ಈ ಅನುಭವಗಳು ನಿಮಗೆ ನೀವು ಯಾರೆಂದು ನೆನಪಿಸಿಕೊಡುತ್ತದಲ್ಲವೇನು? ಅನುಭವಗಳು ‘ನಾನು ಇದ್ದೇನೆ’ ಅನ್ನುವ ಅರಿವಿಗೆ ಪ್ರಮಾಣ. ಅವು ನಮ್ಮ ಅಸ್ತಿತ್ವವನ್ನು ಕೂಗಿಕೂಗಿ ಹೇಳುತ್ತವೆ. ಆದರೆ ನಾವು ನಮ್ಮ ಇರುವಿನ ಬಗ್ಗೆ ಗಮನವನ್ನೆ ಹರಿಸುವುದಿಲ್ಲ. ನಮ್ಮ ಗಮನವೆಲ್ಲ ಅನುಭವ ದೊರಕಿಸಿಕೊಡುವ ವಸ್ತುಗಳ ಮೇಲಿರುತ್ತದೆ. ಯಾವುದನ್ನು ಅರಿಯಬಹುದೋ ಅದರ ಮೇಲಿರುತ್ತದೆ.

ಅನುಭವ ಅದ್ಯಾವುದೇ ಇರಲಿ, ಅದು ನನ್ನ ಅನುಪಸ್ಥಿತಿಯಲ್ಲಿ ಉಂಟಾಗಲು ಸಾಧ್ಯವೇ ಇಲ್ಲ. ಎಲ್ಲಕ್ಕಿಂತ ಮೊದಲು ನನ್ನ ಇರುವಿಕೆ ಅನಿವಾರ್ಯ. ಅದರ ಹೊರತಾಗಿ ಯಾವುದೇ ಅನುಭವ ಘಟಿಸಲಾರದು. ಆದರೆ ಯಾವುದು ಮೊಟ್ಟಮೊದಲನೆಯದೋ ಅದು ಅದೃಶ್ಯವಾಗಿಯೇ ಇರುತ್ತದೆ. ಅದು ಅನುಭವದಿಂದಾಗಿ ಸಚೇತಗೊಳ್ಳುತ್ತದೆಯೇ ಹೊರತು ತನ್ನಿಂದ ತಾನೆ ಅಲ್ಲ. ಅಕಸ್ಮಾತ್ ಯಾರಾದರೂ ಅನುಭವಿಯಿಂದಾಗಿ ಸಚೇತಗೊಂಡರೆ, ತನಗೆ ಉಂಟಾಗುತ್ತಿರುವ ಅನುಭವವನ್ನು ಮರೆತು ಅನುಭವಕರ್ತನನ್ನೇ ಅನುಭವಿಸತೊಡಗಿದರೆ; ಜ್ಞೇಯವನ್ನು ಮರೆತು ಜ್ಞಾತಾನನ್ನು ನೆನಪಿನಲ್ಲಿಟ್ಟುಕೊಂಡರೆ, ವಿಷಯವನ್ನು ಸಂಪೂರ್ಣವಾಗಿ ಮರೆತು ವಿಷಯಿಯ ಕಡೆಗೆ ಮರಳಿದರೆ, ಅಂಥವರಿಗೆ ಜೀವನ ರಹಸ್ಯವು ತನ್ನಿಂತಾನೆ ಗೋಚರಿಸುತ್ತದೆ.

ನಾನು ಇದ್ದೇನೆ, ಆದರೆ ನನ್ನನ್ನು ಮರೆತುಕೊಂಡಿದ್ದೇನೆ. ನನ್ನಿರುವಿಕೆಯು ವಿಸ್ಮೃತಿಗೆ ಒಳಗಾಗಿದೆ. ಹಾಗಾದರೆ ಉಪಾಯವೇನು? ಉಪಾಯ ಒಂದೇ. ಅದೇ ಸ್ವಸ್ಮರಣೆ. “ಸ್ಮರನ್ ಕರಲೇ ಮೇರೆ ಮನಾ, ತೇರೀ ಬೀತೀ ಉಮರ್ ಹರಿ ನಾಮ್ ಬಿನಾ” ಅನ್ನುವ ಸುಪ್ರಸಿದ್ಧ ಭಜನೆಯೊಂದಿದೆ. ಸ್ಮರಣೆ ಮಾಡಬೇಕು, ಬೇರೆ ಯಾರದ್ದೋ ಅಲ್ಲ, ಸ್ವತಃ ನಮ್ಮದೇ. ಎಲ್ಲಕ್ಕಿಂತ ಮೊದಲು ನಾನು ಇದ್ದೇನೆ ಅನ್ನುವುದರ ಸ್ಮರಣೆ ಮಾಡಿಕೊಳ್ಳಬೇಕು. ಅನಂತರ ನಾನು ಎನ್ನುವುದನ್ನು ಮರೆತು ಇದ್ದೇನೆ ಅನ್ನುವುದಕ್ಕೆ ಅಂಟಿಕೊಳ್ಳಬೇಕು. ಆಗ ನೋಡನೋಡುತ್ತಿದ್ದಂತೆಯೇ ಸತ್ಯವೆನ್ನಿ, ವಾಸ್ತವಿಕತೆಯೆನ್ನಿ, ಪರಮಾತ್ಮನೆನ್ನಿ, ಅದು ಪ್ರಕಟಗೊಳ್ಳುತ್ತದೆ.

ಸ್ವ ವಿಸ್ಮರಣೆಯೇ ಮಾಯೆ, ಸ್ವ ಸ್ಮರಣೆಯೇ ಸತ್ಯ. ಸ್ವವಿಸ್ಮರಣೆಯು ಮಾಯೆಯ ಆವರಣವನ್ನು ಸೃಷ್ಟಿಸಿರುತ್ತದೆ. ಸತ್ಯವು ಈ ಆವರಣವನ್ನು ನಾಶಗೊಳಿಸುತ್ತದೆ. ಈ ಮಾಯೆಯ ಕಾರಣದಿಂದಲೇ ನಾವು ಬದುಕಿನ ಎಲ್ಲ ಸುಖದುಃಖಗಳನ್ನೂ ಎಲ್ಲ ಕಷ್ಟಗಳನ್ನೂ ಅನುಭವಿಸುತ್ತೇವೆ. ಮಾಯೆಯು ಗೊಂದಲಕ್ಕೆ, ದ್ವಂದ್ವಕ್ಕೆ ಕಾರಣವಾಗುತ್ತದೆ. ಅದನ್ನು ನಿವಾರಿಸಿದಾಗ ಸ್ಪಷ್ಟತೆ ದೊರಕುತ್ತದೆ. ಮಾಯೆಯು ಸಮಯ, ಸ್ಥಾನಮಾನ, ಸೀಮೆಯೇ ಮೊದಲಾದ ಭ್ರಮೆಗಳನ್ನು ಉಂಟು ಮಾಡುತ್ತದೆ. ಇದು ನಮ್ಮನ್ನು ಸಕಲದಿಂದ ಬೇರ್ಪಡಿಸುತ್ತದೆ. ಸ್ವಸ್ಮರಣೆಯು ನಮ್ಮನ್ನು ಬೆಳಕಿನತ್ತ ಕೊಂಡೊಯ್ಯುತ್ತದೆ. ಆನಂದವನ್ನು ಉಂಟು ಮಾಡುತ್ತದೆ. ಸ್ವಸ್ಮರಣೆಯು ನಮಗೆ ಬೋಧೆ ನೀಡು ಚೈತನ್ಯದ ಲೋಕಕ್ಕೆ ಕೊಂಡೊಯ್ಯುತ್ತದೆ. ಎಲ್ಲಿ ಎಲ್ಲ ಸಮಯ, ಸೀಮೆ, ಸ್ಥಾನಮಾನಗಳ ಭ್ರಮೆಯು ಕಳೆದುಹೋಗುವುದೋ ಅಲ್ಲಿಗೆ ಕೊಂಡೊಯ್ಯುತ್ತದೆ.

ನೀವು ಈ ಸೃಷ್ಟಿಯ ಆಧಾರವಾಗಿದ್ದೀರಿ. ಯಾವೆಲ್ಲ ಇಂದ್ರಿಯಗೋಚರವೋ ಇಂದ್ರಿಯ ಗ್ರಾಹ್ಯವೂ ಅವೆಲ್ಲಕ್ಕೂ ನೀವು ಆಧಾರವಾಗಿದ್ದೀರಿ. ಅವು ನಿಮ್ಮ ಅನುಭವಕ್ಕೆ ಬರುವುದರಿಂದಲೇ ಅಸ್ತಿತ್ವ ಪಡೆಯುತ್ತವೆ. ಆದ್ದರಿಂದ ಅವೆಲ್ಲದರ ಸೃಷ್ಟಿಕರ್ತರು ನೀವೇ ಆಗಿದ್ದೀರಿ.
ನಿಮಗನ್ನಿಸುತ್ತದೆ, ನೀವು ಶರೀರವಾಗಿದ್ದೀರೆಂದು. ಅಥವಾ ನೀವೇ ಶರೀರವೆಂದು. ಇದಕ್ಕಿಂತ ದೊಡ್ಡ ಸುಳ್ಳು ಮತ್ತೊಂದಿರಲಾರದು. ನೀವು ಒಪ್ಪಿ ಅಥವಾ ಬಿಡಿ. ನೀವು ಶರೀರವೂ ಅಲ್ಲ, ಶರೀರದೊಳಗೂ ಇಲ್ಲ.
ನೀವು ಇಲ್ಲವಾದರೆ ಯಾವುದೂ ಇಲ್ಲ. ಈ ಇಡಿಯ ವಿಶ್ವವು ನಿಮ್ಮ ಚೇತನದಿಂದ ಹೊಮ್ಮಿದೆ. ಅದು ನಿಮ್ಮಿಂದಲೇ ಉದಯಿಸುತ್ತದೆ, ನಿಮ್ಮೊಡನೆಯೇ ಅಸ್ತವಾಗುತ್ತದೆ. ನೀವು ಅದರೊಳಗಿಲ್ಲ, ನಿಮ್ಮೊಳಗೆ ಅದು ಇದೆ.

ನಾನು ಇದ್ದೇನೆ ಅನ್ನುವುದು ನಿರ್ವಿವಾದಿತ ಅಂಶವೇ ಸರಿ. ನನಗೆ ನನ್ನ ಇರುವಿಕೆಯ ಪ್ರಮಾಣ ಬೇಕಿಲ್ಲ. ಆದರೆ ನಾನು ಯಾರು ಮತ್ತು ಏನಾಗಿದ್ದೇನೆ ಅನ್ನುವುದು ಗೊತ್ತಿಲ್ಲ. ಏನಾಗಿದ್ದೇನೆ ಅನ್ನುವುದನ್ನಾದರೂ ತಿಳಿಯುವ ಸಂಭವನೀಯತೆಗಳಿವೆ. ಆದರೆ ನಾನು ಯಾರು ಅನ್ನುವುದನ್ನು ತಿಳಿಯುವುದು ಸಾಧ್ಯವಿಲ್ಲ. ಆದರೆ ನಾನುವಿನ ಸತತ ಸ್ಮರಣೆಯಿಂದ, ಸ್ವಯಂಸ್ಮರಣೆಯಿಂದ ಅರಿವಿನ ಬಾಗಿಲು ತೆರೆದುಕೊಳ್ಳುತ್ತದೆ ಹಾಗೂ ನಮ್ಮನ್ನು ನಾವು ವಾಸ್ತವದಲ್ಲಿ ಪಡೆದುಕೊಳ್ಳುತ್ತೇವೆ. ಇದ್ದೇನೆ ಅನ್ನುವ ಭಾವದಲ್ಲಿ ಸ್ಥಿರಗೊಂಡಾಗ, ಈ ಜಗತ್ತು ನನ್ನ ನೆರಳಿನಂತೆ ಮಿಥ್ಯೆಯೇ ಹೊರತು ಮತ್ತೇನಲ್ಲ ಅನ್ನುವುದನ್ನು ನೀವು ಕಂಡುಕೊಳ್ಳುತ್ತೀರಿ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.