ಭಾವೈಕ್ಯತೆ ಬೆಸೆದ ಸಹಜ ಸಂತ : ಶಿಶುನಾಳ ಶರೀಫ

ಇಂದು ತತ್ತ್ವಪದಕಾರ, ಭಾವೈಕ್ಯದ ಹರಿಕಾರ ಸಂತ ಶಿಶುನಾಳ ಶರೀಫರು ಹುಟ್ಟಿದ ದಿನ. 

Sharifರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನಲ್ಲೊಂದು ಹಳ್ಳಿ. ಹೆಸರು ಶಿಶುವಿನಹಾಳ (ಶಿಶುನಾಳ). ಇಮಾಮ್ ಸಾಹೇಬ ಮತ್ತು ಹಜ್ಜೂಮಾ ದಂಪತಿಗೊಂದು ಮುದ್ದಾದ ಮಗು, ಹೆಸರು ಶರೀಫ. ಈ ಶರೀಫ ನಿಂತಲ್ಲಿ ನಿಲ್ಲುವವನಲ್ಲ. ಕೂತರ, ಏಳುವವನಲ್ಲ. ಎಷ್ಟು ಚಟುವಟಿಕೆಯೋ ಅಷ್ಟೇ ಏಕಾಗ್ರತೆ.

ಬಾಲ್ಯದಲ್ಲಿ ಎಲ್ಲರಂತೆ ಪ್ರಾಥಮಿಕ ಶಿಕ್ಷಣ ಪಡೆದ ಶರೀಫ ಜಾಣನಿದ್ದರೂ ನಾಲ್ಕು ಗೋಡೆಗಳ ನಡುವೆ ಕೂರಲಾಗದು. ಶಿಕ್ಷಕರು ಕಲಿಸುವ ಲೌಕಿಕದ ಲೆಕ್ಕದಲ್ಲಿ ಅವನಿಗೆ ಸ್ವಲ್ಪವೂ ರುಚಿಯಿಲ್ಲ. ಹಾಗಿದ್ದೂ ಪರೀಕ್ಷೆಗಳಲ್ಲಿ ಉತ್ತೀರ್ಣನಾಗುತ್ತಾ ಶಿಕ್ಷಣ ಪೂರೈಸಿ ತಾನೇ ಶಿಕ್ಷಕನಾಗುವನು. ಮಕ್ಕಳಿಗೆ ಪಾಠ ಹೇಳುತ್ತಾ ಹೇಳುತ್ತಾ ಶರೀಫನಿಗೆ “ನಾನೇನು ಮಾಡುತ್ತಿದ್ದೇನೆ! ಮತ್ತೊಬ್ಬರಿಗೆ ಏನನ್ನಾದರೂ ಬೋಧಿಸುವ ಅರ್ಹತೆ ನನಗಿದೆಯೆ!?” ಅನ್ನುವ ಚಿಂತೆ ಕಾಡತೊಡಗುವುದು. ಹಾಗೆಂದೇ ವೃತ್ತಿಗೆ ತಿಲಾಂಜಲಿ ನೀಡಿ ಅಲೆಮಾರಿಯಾಗುವನು. ಯಾವ ಕಲಿಕೆಯಿಂದ ನಿಜವಾದ ಜ್ಞಾನ ದೊರಕುವುದೋ ಆ ಕಲಿಕೆ ಬೇಕೆಂದು, ಅದನ್ನು ನೀಡುವ ಗುರುವೊಬ್ಬ ಬೇಕೆಂದು ಹುಡುಕಾಡುವನು. ಶರೀಫ ಗೋವಿಂದ ಭಟ್ಟರ ಸಂಪರ್ಕಕ್ಕೆ ಬರುವುದು ಆಗಲೇ.

ಗುರು ಗೋವಿಂದ ಭಟ್ಟರು ದೇವೀ ಆರಾಧಕರು. ಅಪ್ರತಿಮ ಪಾಂಡಿತ್ಯ ಉಳ್ಳವರು. ಜೊತೆಗೇ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು, ಮೂಢನಂಬಿಕೆಗಳನ್ನು ಮೀರಿ ನಿಂತವರು. ಶರೀಫನಿಗೆ ಗೋವಿಂದ ಭಟ್ಟರ ಸಹವಾಸ ಅರಿವಿನ ಹೊಸ ಬಾಗಿಲನ್ನು ತೆರೆಯಿತು. ಅವರೊಡನೆ ಮಾತು, ಚರ್ಚೆ, ಕಲಿಕೆಯಲ್ಲಿ ಶರೀಫ ಮನೆಗೆ ಹೋಗುವುದನ್ನೇ ಕಡಿಮೆ ಮಾಡಿಬಿಟ್ಟ. ಕುಟುಂಬ ಆತಂಕಕ್ಕೆ ಒಳಗಾಯಿತು. ನೆರೆಹೊರೆಯವರು ಪ್ರಶ್ನಿಸತೊಡಗಿದರು. “ಆ ಜನಿವಾರದವನೊಡನೆ ಶರೀಫನಿಗೇನು ಕೆಲಸ?” ಅನ್ನುವ ಪ್ರಶ್ನೆ ಕಂಡಕಂಡವರ ಕಡೆಯಿಂದ ತೂರಿಬಂತು. ಹೀಗೇ ಬಿಟ್ಟರೆ ಹುಡುಗ ಕೈತಪ್ಪುತ್ತಾನೆಂದು ಮನೆಯವರು ಶರೀಫನ ಮನವೊಲಿಸಿ ಫಾತಿಮಾ ಅನ್ನುವ ಹುಡುಗಿಯೊಂದಿಗೆ ಮದುವೆ ಮಾಡಿದರು.

ಶರೀಫರೀಗ ಸದ್ಗೃಹಸ್ಥ. ಹೆಂಡತಿ ಎಂದರೆ ವಿಪರೀತ ಪ್ರೇಮ. ಪ್ರೇಮವೂ ಒಂದು ಕಲಿಕೆಯೇ. ಹೆಂಡತಿಯ ಒಡನಾಟದಲ್ಲಿ ಶರೀಫರು ಪಡೆದದ್ದು ಬೆಟ್ಟದಷ್ಟು ತಿಳಿವು. ಹಾಗೆಂದೇ ಹೆಂಡತಿಯು ಮೊದಲ ಮಗು ಹೆತ್ತು ಲೋಕ ತೊರೆದ ಬಳಿಕ ಶರೀಫರು ಆಕೆಗಾಗಿ ದುಃಖಿಸುತ್ತಾ ಕೂರಲಿಲ್ಲ. ಏಕತಾರಿ ಹಿಡಿದು ಮನೆಬಿಟ್ಟರು. ಗುರು ಗೋವಿಂದರ ಸನ್ನಿಧಾನಕ್ಕೆ ಬಂದರು. ಇನ್ನೀಗ ಗುರು ಶಿಷ್ಯರ ಈ ಜೋಡಿಯನ್ನು ಅಗಲಿಸುವವರು ಯಾರೂ ಇಲ್ಲ. ಇಬ್ಬರೂ ಆಡುತ್ತಾ ಹಾಡುತ್ತಾ ಊರೂರು, ಗುಡಿ – ಮಸೀದಿ ಅಲೆದರು. ಗೋವಿಂದ ಭಟ್ಟರನ್ನು ಗುರುವಾಗಿ ಪಡೆದಿದ್ದು ಶರೀಫರ ಸುಕೃತಫಲವಾದರೆ, ಶರೀಫರಂಥಾ ಶಿಷ್ಯರನ್ನು ಪಡೆದ್ದೂ ಗೋವಿಂದ ಭಟ್ಟರ ಸುಕೃತ ಫಲವೇ! ಹಾಗಿತ್ತು ಗುರುಶಿಷ್ಯರ ಜೋಡಿ.

ಹಾಗೆಂದು ಶರೀಫರ ಈ ಸಾಧನೆಯ ಹಾದಿ ಸುಲಭದ್ದಾಗಿರಲಿಲ್ಲ. ಅತ್ತ ಗೋವಿಂದ ಭಟ್ಟರು ಇತ್ತ ಶರೀಫರಿಬ್ಬರೂ ತಂತಮ್ಮ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಆದರೆ ಈ ಗುರುಶಿಷ್ಯರ ಪ್ರೇಮ, ಜ್ಞಾನ, ಬದ್ಧತೆಗಳು ಕ್ರಮೇಣ ಜನರ ಬಾಯಿ ಮುಚ್ಚಿಸಿದವು. ಶರೀಫರು ಜನರ ನಡುವೆ ನಿಂತು ತಮ್ಮ ತಿಳಿವಿನ ಹೊಳಹುಗಳನ್ನು ಹಾಡುಗಳ ರೂಪದಲ್ಲಿ ಹಂಚಿದರು. ಮುಂದಿನ ದಿನಗಳಲ್ಲಿ ಎರಡೂ ಸಮುದಾಯಗಳ ಜನರು ತಮ್ಮ ಆಕ್ಷೇಪಗಳಿಗೆ ತಾವೇ ನಾಚಿ, ಶರೀಫರನ್ನು ತುಂಬುಹೃದಯದಿಂದ ಒಪ್ಪಿಕೊಂಡರು, ಅಪ್ಪಿಕೊಂಡರು. ಶರೀಫರ ಕಾರಣದಿಂದ ತಾವೂ ಪರಸ್ಪರ ಬೆಸೆದುಕೊಮಡರು. ಹೀಗೆ ಹಿಂದೂ – ಮುಸ್ಲಿಮ್ ಸಮುದಾಯಗಳ ನಡುವೆ ಭಾವೈಕ್ಯದ ಕೊಂಡಿಯಾದರು ಶರೀಫ. 

(ಕೆಲವು ಪಾಠಾಂತರಗಳಲ್ಲಿ ಗೋವಿಂದ ಭಟ್ಟರ ಭೇಟಿಯಾಗಿದ್ದೇ ಫಾತಿಮಾ ತೀರಿಕೊಂಡ ಬಳಿಕ ಎಂದಿದೆ….)

ಶರೀಫರ ತತ್ತ್ವಪದಗಳು

ಶರೀಫರ ತತ್ತ್ವಪದಗಳು ಆಡುಭಾಷೆಯಲ್ಲಿದ್ದು, ಗಹನ ಅಧ್ಯಾತ್ಮ ವಿಚಾರಗಳನ್ನು ಸರಳವಾಗಿ ವಿವರಿಸುವಂತಿವೆ. ಆದ್ದರಿಂದಲೇ ಅವು ಬಹಳ ಬೇಗ ಜನರನ್ನು ತಲುಪಿದವು. ಉರ್ದು ಮಿಶ್ರಿತ ಕನ್ನಡದ ಸೊಗಡು ಈ ರಚನೆಗಳ ಸಾಹಿತ್ಯಕ ಸೌಂದರ್ಯವನ್ನು ಹೆಚ್ಚಿಸವೆ. ಬಹುತೇಕವಾಗಿ ಒಗಟಿನ ರೂಪದಲ್ಲಿ ಇರುವ ಈ ರಚನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯೇ ಒಂದು ಕಲಿಕೆ. ಹೀಗೆ ಶರೀಫರು ರಚಿಸಿರುವ ತತ್ತ್ವಪದಗಳ ಸಂಖ್ಯೆ 400ಕ್ಕೂ ಹೆಚ್ಚು ಎಂದು ಹೇಳಲಾಗಿದೆ. ತಾಳ – ಲಯಬದ್ಧವಾಗಿರುವ ಈ ರಚನೆಗಳು ಹಾಡುಗಳ ರೂಪದಲ್ಲಿ ಸಾಕಷ್ಟು ಪ್ರಸಿದ್ಧಿ ಹೊಂದಿವೆ.

ಶರೀಫರ ಒಂದು ರಚನೆ

ಅಗ್ಗದ ಅರಿವಿ ತಂದು

ಹಿಗ್ಗಿ ಹೊಲಿಸಿದೆ ಅಂಗಿ

ಹೆಗ್ಗಣ ಒಯ್ತವ್ವ ತಂಗಿ ಈ ಅಂಗಿ. 

ಅಗಣಿತ ವಿಷಯದ

ಆರುಗೇಣೀನ ಕವಚ

ಬಗಲಿನ ಬೆವರನು ಕುಡಿದು

ಸಿಗದೆ ಹೋಯಿತವ್ವ ತಂಗಿ ಈ ಅಂಗಿ.

ಬುದ್ದಿಗೇಡಿಗಳಾಗಿ

ನಿದ್ದಿ ಕೆಡಿಸಿಕೊಂಡು

ಎದ್ದು ನೋಡಲು ಕರ್ಮದ

ಗುದ್ದಿನೊಳಡಗಿತ್ತವ್ವ ತಂಗಿ ಈ ಅಂಗಿ.

ಕಳೆದೆನೀಪರಿ ರಾತ್ರಿ

ಬೆಳಗಾಗೋ ಸಮಯದಿ

ಚೆಲುವ ಶಿಶುನಾಳಾಧೀಶನು

ಉಳುವಿ ಕೊಟ್ಯಾನವ್ವ ತಂಗಿ ಈ ಅಂಗಿ.

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.