
ಬಿಕ್ಖುಣಿಯರು ಅತ್ಯಂತ ಪ್ರಾಮಾಣಿಕತೆಯಿಂದ, ಅಷ್ಟೇ ಸರಳವಾಗಿ ಹಾಡಿಕೊಂಡ ಆತ್ಮಕಥನಗಳಿವು. ಆದ್ದರಿಂದಲೇ ಇವನ್ನು `ಗಾಥಾ’ (ಕಥೆ) ಎಂದು ಕರೆದಿರುವುದು. ಥೇರೀಗಾಥಾದ ಈ ಗೀತೆಗಳು ಸರಳವಾಗಿ ತೋರಿದರೂ ಅದ್ಭುತ ಹೊಳಹುಗಳಿಂದ ಕೂಡಿರುವಂಥವು. ಬುದ್ಧನ ಬೋಧಮನಾ ಸಾರವನ್ನೆ ತಮ್ಮ ಮುಗ್ಧ ತಿಳಿವಿನಲ್ಲಿ ಹಿಡಿದಿಟ್ಟುಕೊಂಡಂಥವು. ತಮ್ಮ ಕಾಣ್ಕೆಯಲ್ಲೇ ಅಧ್ಯಾತ್ಮ ಲೋಕವನ್ನು ನೋಡಲೊಂದು ಕಿಟಕಿ ತೆರೆದಿಟ್ಟಿದ್ದಾರೆ ಈ ಬಿಕ್ಖುಣಿಯರು.
ಹಿರಿಯ ಬೌದ್ಧ ಬಿಕ್ಖುಣಿಯರೇ ಥೇರಿಯರು. ಅವರು ರಚಿಸಿದ ಅನುಭಾವ ಗೀತೆಗಳ ಸಂಕಲನವನ್ನು ಥೇರೀಗಾಥಾ ಎಂದು ಕರೆಯಲಾಗಿದೆ. ಇದು `ಖುದ್ಧ ನಿಕಾಯ’ದ ಒಂಬತ್ತನೇ ಸಂಪುಟದಲ್ಲಿ ಒಳಗೊಂಡಿದೆ. ಹಿರಿಯ ಥೇರಿಯರ ಒಟ್ಟು ಎಪ್ಪತ್ತ ಮೂರು ರಚನೆಗಳು ಇಲ್ಲಿ ಅಡಕವಾಗಿವೆ. ಅರ್ಹಂತ ಪದವನ್ನು ಪಡೆಯುವ ಹಂತದಲ್ಲಿ ಬಿಕ್ಖುಣಿಯರು ಕಂಡುಕೊಂಡದ್ದನ್ನು, ತಮ್ಮ ಅನುಭವಗಳನ್ನು ಮಾರ್ಗದರ್ಶಕ ರೀತಿಯಲ್ಲಿ ಗೀತೆಗಳಾಗಿ ದಾಖಲಿಸಿಟ್ಟಿದ್ದಾರೆ.
ಬಿಕ್ಖುಣಿಯರು ಅತ್ಯಂತ ಪ್ರಾಮಾಣಿಕತೆಯಿಂದ, ಅಷ್ಟೇ ಸರಳವಾಗಿ ಹಾಡಿಕೊಂಡ ಆತ್ಮಕಥನಗಳಿವು. ಆದ್ದರಿಂದಲೇ ಇವನ್ನು `ಗಾಥಾ’ (ಕಥೆ) ಎಂದು ಕರೆದಿರುವುದು. ಥೇರೀಗಾಥಾದ ಈ ಗೀತೆಗಳು ಸರಳವಾಗಿ ತೋರಿದರೂ ಅದ್ಭುತ ಹೊಳಹುಗಳಿಂದ ಕೂಡಿರುವಂಥವು. ಬುದ್ಧನ ಬೋಧಮನಾ ಸಾರವನ್ನೆ ತಮ್ಮ ಮುಗ್ಧ ತಿಳಿವಿನಲ್ಲಿ ಹಿಡಿದಿಟ್ಟುಕೊಂಡಂಥವು. ತಮ್ಮ ಕಾಣ್ಕೆಯಲ್ಲೇ ಅಧ್ಯಾತ್ಮ ಲೋಕವನ್ನು ನೋಡಲೊಂದು ಕಿಟಕಿ ತೆರೆದಿಟ್ಟಿದ್ದಾರೆ ಈ ಬಿಕ್ಖುಣಿಯರು. ಥೇರೀಗಾಥಾದ ಈ ಗೀತೆಗಳು ಸಾಹಿತ್ಯಕ ದೃಷ್ಟಿಯಿಂದಲೂ ಉತ್ಕೃಷ್ಟವಾಗಿವೆ.
ಆಧ್ಯಾತ್ಮಿಕ ಸ್ವಾತಂತ್ರ್ಯ
ಬೌದ್ಧ ಧರ್ಮ ಹೆಣ್ಣು ಮಕ್ಕಳ ಆಧ್ಯಾತ್ಮಿಕ ಬದುಕಿಗೊಂದು ಬುನಾದಿ ಹಾಕಿಕೊಟ್ಟಿತು. ವೈದಿಕ ಪದ್ಧತಿಗಳು, ರೀತಿ ರಿವಾಜುಗಳು ತಪ್ಪು ವ್ಯಾಖ್ಯಾನಗಳಿಗೆ ಒಳಗಾಗಿ ಹೆಣ್ಣುಮಕ್ಕಳನ್ನು ಆಧ್ಯಾತ್ಮಿಕ ಸಾಧನೆಯ ಹಕ್ಕಿನಿಂದ ದೂರ ಇರಿಸಿದ್ದವು. ಈ ಧಾರ್ಮಿಕ – ಆಧ್ಯಾತ್ಮಿಕ ಸ್ವಾತಂತ್ರ್ಯ ಹರಣವು ಹೆಣ್ಣುಮಕ್ಕಳ ಅಂತರಂಗವನ್ನು ಕತ್ತಲಿನಲ್ಲಿ ಇರಿಸಿತ್ತು. ಧರ್ಮವೇ ಆತ್ಮವಾಗಿರುವ ಭಾರತದ ನೆಲದಲ್ಲಿ ಸಾಮಾಜಿಕ ತಾರತಮ್ಯಕ್ಕೂ ಇದು ನಾಂದಿಯಾಯ್ತು. ಈ ಹಕ್ಕುಗಳ ನಿರಾಕರಣೆಯೇ ಸ್ತ್ರೀ ಶೋಷಣೆ, ಭ್ರೂಣ ಹತ್ಯೆಯಂತಹ ಪಾಪಗಳಿಗೂ ಪ್ರೇರಣೆಯಾಯ್ತು.
ಆ ಒಂದು ಕಾಲಘಟ್ಟದಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಆಚರಣೆಯ ಹಕ್ಕುಗಳು ನಿರಾಕರಿಸಲ್ಪಟ್ಟ ಸಮುದಾಯಗಳಿಗೆ ಬೌದ್ಧ ಧರ್ಮ ಆಶಾಕಿರಣವಾಗಿ ಹೊಮ್ಮಿ ಬಂದಿತ್ತು. ಅದು ಇಂದಿಗೂ ಮುಂದುವರೆದಿದೆ. ಬುದ್ಧ ಎಲ್ಲರಿಗೂ ಸಮಾನ ಅವಕಾಶ ಒದಗಿಸಿಕೊಟ್ಟ. ತನ್ನ ಸಂಘಕ್ಕೆ ಶರಣು ಬಂದವರಿಗೆಲ್ಲ ದೀಕ್ಷೆ ನೀಡಿ ಬಿಕ್ಖುಗಳನ್ನಾಗಿ ಮಾಡಿದ. ಸಾಧನೆಯ ಹಾದಿ ತೋರಿದ. ಹೆಣ್ಣು ಮಕ್ಕಳಿಗೂ ಬುದ್ಧ ಕಾರುಣ್ಯದಿಂದ ಈ ಅವಕಾಶ ಒದಗಿಬಂತು. ಬಿಕ್ಖುಣಿಯರ ಸಂಖ್ಯೆ ಹೆಚ್ಚಿತು. ಬಿಕ್ಖುಣೀ ಸಂಘ ಸ್ಥಾಪನೆಯಾಯ್ತು. ಗೃಹಿಣಿಯರು, ಅವಿವಾಹಿತೆಯರು, ವೃದ್ಧೆಯರು, ವಿಧವೆಯರು ಮಾತ್ರವಲ್ಲದೆ ಸಮಾಜದ ಕೊಂಕಿಗೆ ಗುರಿಯಾಗಿದ್ದ ವೇಶ್ಯೆಯರು, ಆಸ್ಥಾನ ನರ್ತಕಿಯರಿಗೂ ಈ ಸಂಘದಲ್ಲಿ ಸಾಧನೆಯ ಅವಕಾಶ ದೊರೆಯಿತು. ಇದನ್ನು ಬೌದ್ಧ ಧರ್ಮದ ಮಹಾಕ್ರಾಂತಿ ಎಂದೇ ಹೇಳಬಹುದು.
ಬುದ್ಧನಿಂದ ದೀಕ್ಷೆ ಪಡೆದ ಮೊತ್ತಮೊದಲ ಬಿಕ್ಖುನಿಯೆಂದರೆ ಪಜಾಪತಿ ಗೋತಮಿ. ಸಂಘಕ್ಕೆ ಮಹಿಳೆಯರನ್ನು ಸೇರಿಸಿಕೊಳ್ಳಬೇಕೆ ಬೇಡವೇ ಎಂಬ ಬಗ್ಗೆ ದೊಡ್ಡ ಚರ್ಚೆಯೇ ಎದ್ದಿತ್ತು. ಕೊನೆಗೂ ಎಂಟು ಗರುಧಮ್ಮ (ಕಠಿಣ ನಿಯಮಗಳು)ಗಳನ್ನು ಸೂಚಿಸಿ, ಬುದ್ಧ ಬಿಕ್ಖುಣಿಯ ಪದ ನೀಡಿ ಗೋತಮಿಯನ್ನು ಸಂಘಕ್ಕೆ ಸೇರಿಸಿಕೊಂಡ. ಉಳಿದೆಲ್ಲ ನಿಯಮಗಳು ಬಿಕ್ಖುಗಳಿಗೆ ಇರುವಂತೆಯೇ ಇದ್ದರೂ ಬುದ್ಧ ಸೂಚಿಸಿದ ಈ ಎಂಟು ಕಠಿಣ ನಿಯಮಗಳು ಬಿಕ್ಖುಣಿಯರಿಗೆ ಹೆಚ್ಚುವರಿಯಾಗಿ ಇಂದಿಗೂ ಉಳಿದುಕೊಂಡು ಬಂದಿದೆ.
ಹಲವು ಧಾರೆಯ ನಾರಿಯರು
ಥೇರಾವಾದದ ಬಿಕ್ಖುಣಿಯರಲ್ಲಿ ವಿವಿಧ ಹಿನ್ನೆಲೆಯಿಂದ ಬಂದ ಬಿಕ್ಖುಣಿಯರಿದ್ದರು. ಲೋಭಿ ವ್ಯಾಪಾರಿಯ ಪತ್ನಿ, ಜಿಪುಣ ತಂದೆಯ ಮಗಳು, ಪಂಡಿತೆಯರು, ವೇಶ್ಯೆಯರು, ವಿಧವೆಯರು – ಹೀಗೆ ಎಲ್ಲ ವರ್ಗಗಳವರಿಗೂ ಅಲ್ಲಿ ಅವಕಾಶವಿತ್ತು. ಇವರಲ್ಲಿ ವಿಮಲಾ ಮತ್ತು ಅಂಬಪಾಲಿ (ಆಮ್ರಪಾಲೀ) ಜನಪ್ರಿಯ ಆಸ್ಥಾನ ನರ್ತಕಿಯರಾಗಿದ್ದರು. ಮುತ್ತಾ ಗೃಹಿಣಿಯಾಗಿದ್ದಳು. ಪುನ್ನಾ ಬ್ರಾಹ್ಮಣನೊಬ್ಬನ ಮಗಳಾಗಿದ್ದಳು. ಸುರಸುಂದರಿಯಾಗಿದ್ದ ಸೇಲಾ ತನ್ನ ತಾರುಣ್ಯದಲ್ಲೇ ಬಿಕ್ಖುಣಿಯಾಗಿ ಸಂಘಕ್ಕೆ ಸೇರಿಕೊಂಡಳು. ಕಟ್ಟುನಿಟ್ಟಿನ ಸಾಧನೆಯ ಜೊತೆಜೊತೆಗೆ ಸೇವಾಧರ್ಮವನ್ನೂ ನಡೆಸಿ ಅರ್ಹಂತ ಪದವಿಗೆ ಏರಿದಳು.
ಬಿಕ್ಖುಣಿ ದೀಕ್ಷೆ ಸ್ವೀಕರಿಸಿದವರಲ್ಲಿ ಸಂತಾನ ಕಳೆದುಕೊಂಡ ದುಃಖತಪ್ತ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಉಬ್ಬಿರಿ, ಕಿಸಾ ಗೊತಮಿ, ಪಟಾಚಾರಾ ಅಂತಹ ಕೆಲವು ಥೇರಿಯರು. ಪಟಾಚಾರಳಂತೂ ತನ್ನ ಪತಿಯನ್ನೂ ಇಬ್ಬರು ಮಕ್ಕಳನ್ನೂ ಒಟ್ಟಿಗೆ ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿಹೋಗಿದ್ದವಳು, ಸನ್ಯಾಸ ಸ್ವೀಕರಿಸಿ ಬಿಕ್ಖುಣಿಯಾದಳು; ಸಾಧನೆ ನಡೆಸಿ ಅರ್ಹಂತ ಪದವನ್ನು ಪಡೆದಳು.
ಚಿತ್ತಾ ಎಂಬುವಳೂ ಹಾಗೆಯೇ. ತಾರುಣ್ಯದಲ್ಲಿಯೇ ಬಿಕ್ಖುಣಿಯಾಗಿ ಬದುಕಿಡೀ ನೇಮದಲ್ಲಿ ಕಳೆದಳು. ಆದರೆ ಅವಳು ಅರ್ಹಂತ ಪದ ಪಡೆದಿದ್ದು ಮಾತ್ರ ಇಳಿ ವಯಸ್ಸಿನಲ್ಲಿ. ಹಾಗೆಂದೇ ಚಿತ್ತಾ, `ನನ್ನ ಕಾವಿಯುಡುಗೆಯನ್ನು ಬಿಸುಟು, ಭಿಕ್ಷಾಪಾತ್ರೆಯನ್ನು ಬೋರಲು ಹಾಕಿ, ಹೆಬ್ಬಂಡೆಗೆ ಮುಖ ಮಾಡಿ ಸುಮ್ಮನೆ ಕುಳಿತೆ. ಕತ್ತಲ ಗರ್ಭ ಹರಿದು ಬೆಳಕು ಮೂಡಿತು’ ಎಂದು ಹೇಳುತ್ತಾಳೆ.
ಈ ಎಲ್ಲ ಥೇರಿಯರ ಜೀವನಾನುಭವದ ಗಾಥೆಗಳನ್ನು ಗ್ರಹಿಸಲು ಸಾಧ್ಯವಾದರೆ, ಬದುಕಿನಲ್ಲಿ ನೆಮ್ಮದಿ ಕಾಣಲೊಂದು ಬೆಳಕಿಂಡಿ ತೆರೆಯುವುದು.
ಬಿಕ್ಖುಣಿ ವಿಮಲಾ ರಚಿಸಿದ ಒಂದು ಗೀತೆ
ನನ್ನಿರುವ ಕಾಂತಿ, ಕಣ್ ಹೊಳಪು
ರೂಪ, ಮೈಬಣ್ಣಗಳಿಂದ
ನೆರಕೆಯ ಹೆಣ್ಣುಗಳ ಹೊಟ್ಟೆಯುರಿಸುತಿದ್ದೆ.
ಮೂರ್ಖ ಗಂಡಸರನ್ನ ಸೆಳೆಯಲಿಕ್ಕಾಗಿ
ಈ ದೇಹವನ್ನಲಂಕರಿಸಿಕೊಂಡು
ಕೋಠಿ ಬಾಗಿಲ ಮುಂದೆ ಕಾತರಳಾಗಿ
ನಿಂತು ಕಾಯುತ್ತಿದ್ದೆ.
ಬೇಟೆಗಾತಿಯ ಹಾಗಿ ಹೊಂಚುತ್ತ
ನನ್ನಾಭರಣಗಳ ಕುಲುಕಿ ಸೆಳೆದು
ಮೋಹದ ಬಲೆಗೆ ಕೆಡವಿಕೊಳ್ಳುತ್ತಿದ್ದೆ,
ಬಿದ್ದವನ ಕಂಡು ಗುಂಪು ಸೀಳುವಂತೆ
ಅಬ್ಬರಿಸಿ ನಗುತ್ತಲಿದ್ದೆ.
ಈಗ…
ಅದೇ ದೇಹ ದುಪ್ಪಟಿ ಕಾವಿ ಸುತ್ತಿಕೊಂಡಿದೆ;
ತಲೆಗೂದಲು ತೆಗೆದು ಸಪಾಟು.
ಭಿಕ್ಷೆಗಾಗಿ ಅಲೆದ ದಣಿವಲ್ಲಿ
ಮರದ ಬೊಡ್ಡೆಗೆ ಮೈಯಾನಿಸಿ ಕೂತಿದೇನೆ.
ಯಾವ ಯೋಚನೆಯೂ ಇಲ್ಲದ
ನಿತ್ಯಾನಂದ ಸ್ಥಿತಿಯ ನಾನು ಪಡೆದಿದೇನೆ.
ಎಲ್ಲ ಬಂಧಗಳ – ಮನುಷ್ಯ , ದೈವಿಕ ಬಂಧಗಳೆಲ್ಲದರ
ಹೊರೆ ಇಳಿಸಿ ಹಗುರಾಗಿದೇನೆ,
ತಣ್ಣಗೆ ಒಬ್ಬಂಟಿ, ಎಲ್ಲ ಬಂಧಗಳ ಕಳಚಿ.
: ವಿಮಲಾ (ದೊರೆಸಾನಿ) | ಅನುವಾದ : ಚೇತನಾ ತೀರ್ಥಹಳ್ಳಿ