ರಾಬಿಯಾಳ ಸಾವಿನ ನಂತರ ಅವಳಣ್ಣ ಹಾರಿಸ್ ಆಕೆಯ ಹೆಸರಲ್ಲೊಂದು ಸಮಾಧಿ ಕಟ್ಟಿಸಿದ. ಅವಳ ಪ್ರೇಮದ ಗುಟ್ಟು ಬಿಟ್ಟುಕೊಟ್ಟಿದ್ದ ಆಸ್ಥಾನ ಕವಿ ರುದಾಕಿಯೇ ಅವಳೆಲ್ಲ ಗಝಲ್‌ಗಳನ್ನು ಪ್ರಚುರ ಪಡಿಸಿದ. ಸೂಫೀಗಳು ಅವಳಿಗೆ ಸಂತ ಪದವಿ ನೀಡಿದರು. ಪ್ರೇಮಿಗಳು ಅವಳನ್ನು ದೇವದೂತಳೆಂದು ನಂಬಿದರು. ಆಫ್ಘನ್ನಿನ ಮೊದಲ ಸಿನೆಮಾ ಅವಳ ಕತೆಯ ಮೇಲೆಯೇ ಮೂಡಿಬಂದಿತು. ಇಂದಿಗೂ ಪ್ರೇಮ ಫಲಿಸಲೆಂದು ಅವಳನ್ನ ಬೇಡಿಕೊಳ್ಳುವ, ಗೋರಿಗೆ ಗುಟ್ಟಾಗಿ ಹರಕೆ ಕಟ್ಟುವ ಜನರಿದ್ದಾರೆ ಅಲ್ಲಿ. ತಾಲಿಬಾನಿಗಳು ಅವಳ ಗೋರಿಯನ್ನ ಗಡಿಯಾಚೆ ಹಾಕಿದ್ದರೂನು… । ಚೇತನಾ ತೀರ್ಥಹಳ್ಳಿ
ರಾಜನರಮನೆಯ ಚೆಂದದ ಹೆಣ್ಣುಮಗಳೊಬ್ಬಳು ಗುಲಾಮನ ರೂಪಕ್ಕೆ ಮನಸೋಲುತ್ತಾಳೆ. ಪ್ರೇಮದಲ್ಲಿ ಮುಳುಗುತ್ತಾಳೆ. ಈ ಪ್ರೇಮ ಅವಳನ್ನು ಕವಿಯಾಗಿಸುತ್ತೆ. ಕವಿತೆಗಳಿಂದಲೇ ರಟ್ಟಾಗುವ ಗುಟ್ಟು ಅವಳ ಜೀವಕ್ಕೆ ಮುಳುವಾಗುತ್ತೆ. ಗುಲಾಮನನ್ನು ಹಾಳು ಬಾವಿಗೆ ತಳ್ಳಿಸುವ ಅವಳಣ್ಣ, ತಂಗಿಯ ಎರಡೂ ಕೈಗಳ ನರ ಕತ್ತರಿಸಿ ಹಬೆಕೋಣೆಯಲ್ಲಿ ಕೂಡಿ ಹಾಕುತ್ತಾನೆ. ಸೋರಿದ ರಕ್ತದೊಳಗೆ ಬೆರಳದ್ದಿ ಹಬೆಕೋಣೆಯ ಗೋಡೆಯ ಮೇಲೆ ತನ್ನ ಕೊನೆಯ ಕವಿತೆ ಬರೆಯುತ್ತಾಳೆ ರಾಜಕುಮಾರಿ. ರಕ್ತದ ಮಡುವಿನಲ್ಲೇ ಕೊನೆಯಾಗುತ್ತಾಳೆ.
ಅವಳನ್ನು ಪರ್ಷಿಯನ್ ಕಾವ್ಯ ಜಗತ್ತು ತನ್ನ ಭಾಷೆಯ ಮೊದಲ ಕವಯತ್ರಿ ಎಂದು ಹಾಡಿ ಹೊಗಳುತ್ತದೆ. ಅವಳನ್ನು ಆಫ್ಘಾನಿಸ್ತಾನದ ಮಹಿಳಾ ಕಾವ್ಯಪರಂಪರೆಯ ತಾಯಿ ಎಂದು ಕೊಂಡಾಡಲಾಗುತ್ತದೆ.
ರಾಬಿಯಾ ಬಾಲ್ಖಿಯ ಬದುಕಿನ ಒನ್‌ಲೈನ್ ಸ್ಟೋರಿ ಇದು. ಏಳು ಗಝಲ್‌ಗಳು ಹಾಗೂ ಕೆಲವು ಕವಿತೆಯ ತುಣುಕುಗಳು ಈಕೆಯ ಹೆಸರಲ್ಲಿ ದಾಖಲಾಗಿವೆ.
ರಾಬಿಯಾಳ ಬದುಕಿನ ಇತರ ವಿವರಗಳೇನಿದ್ದರೂ ಮೇಲಿನ ಒನ್‌ಲೈನ್ ಸ್ಟೋರಿಗೆ ಪೂರಕವಾದ ರೂಪಕಾಲಂಕಾರಗಳಷ್ಟೆ. ಅವಳ ನಂತರದ ಜನರು ತಮ್ಮತಮ್ಮ ಭಾವಕ್ಕೆ ಅದನ್ನು ಉಳಿಸಿಕೊಂಡಿದ್ದಾರೆ, ಬೆಳೆಸಿಕೊಂಡಿದ್ದಾರೆ. ಕೆಲವರ ಪಾಲಿಗೆ ಅವಳೊಬ್ಬ ಅಪ್ರತಿಮ ಸುಂದರಿಯಾದರೆ, ಕೆಲವರ ಪಾಲಿಗೆ ಸೂಫೀ ಸಂತಳಂತೆ. ಅವಳು ಆ ನೆಲದ ಮೊದಲ ಕವಯತ್ರಿ ಅನ್ನುವುದಂತೂ ಸರಿಯೇ. ಅವಳು ಬಹಿರಂಗದ ಮೊದಲ ಪ್ರೇಮಿಕೆಯೂ ಹೌದು. ಹಾಗೇನೇ ರಾಬಿಯಾ ಬಾಲ್ಖಿ ಗೌರವ ಮರಣದ ಶಿಕ್ಷೆಯುಂಡ ಆಫ್ಘನ್ನಿನ ಮೊದಲ ಹೆಣ್ಣೂ ಆಗಿದ್ದಾಳೆ. ಇಂದಿನ ತನಕ ಆ ಅವಮಾನವನ್ನು ಉಣ್ಣುತ್ತಲೇ ಇರುವ ಹೆಣ್ಣುಗಳ ಮೊದಲ ನರಳಿಕೆಯಾಗಿದ್ದಾಳೆ. ಸಾವಿನ ಅಂಚಲ್ಲೂ ತನ್ನ ಪ್ರೇಮವನ್ನ ಬಿಟ್ಟುಕೊಡದೆ, ತನ್ನ ರಕ್ತದಿಂದಲೇ ಗೋಡೆಯ ಮೇಲೆ ಕವನ ಕಟ್ಟಿದ ಈ ಹೆಣ್ಣು ಆಫ್ಘನ್ನಿನ ಮೊದಲ ಬಂಡಾಯಗಾರ್ತಿಯೂ ಹೌದಲ್ಲವೆ? ರಾಬಿಯಾ ಶಿಕ್ಷೆಯ ಹೆಸರಲ್ಲಿ ಸತ್ತು ಹೋಗಿದ್ದೇನೋ ಸರಿ. ಅವಳನ್ನು ಕೊಲ್ಲಿಸಿದ ಅವಳಣ್ಣನನ್ನು ಅದೊಂದು ಗೋಡೆ ಮೇಲಿನ ಕವಿತೆ ಸೋಲಿಸಿ ಹಾಕಿತು. ರಾಬಿಯಾಳ ಪ್ರೇಮ ಅಮರವಾಗಿದ್ದು ಆ ಮರಣೋನ್ಮುಖ ಕವಿತೆಯಿಂದಲೇ…
~
ರಾಬಿಯಾಳ ಸಾವಿನ ನಂತರ ಅವಳಣ್ಣ ಹಾರಿಸ್ ಆಕೆಯ ಹೆಸರಲ್ಲೊಂದು ಸಮಾಧಿ ಕಟ್ಟಿಸಿದ. ಅವಳ ಪ್ರೇಮದ ಗುಟ್ಟು ಬಿಟ್ಟುಕೊಟ್ಟಿದ್ದ ಆಸ್ಥಾನ ಕವಿ ರುದಾಕಿಯೇ ಅವಳೆಲ್ಲ ಗಝಲ್‌ಗಳನ್ನು ಪ್ರಚುರ ಪಡಿಸಿದ. ಸೂಫೀಗಳು ಅವಳಿಗೆ ಸಂತ ಪದವಿ ನೀಡಿದರು. ಪ್ರೇಮಿಗಳು ಅವಳನ್ನು ದೇವದೂತಳೆಂದು ನಂಬಿದರು. ಆಫ್ಘನ್ನಿನ ಮೊದಲ ಸಿನೆಮಾ ಅವಳ ಕತೆಯ ಮೇಲೆಯೇ ಮೂಡಿಬಂದಿತು. ಇಂದಿಗೂ ಪ್ರೇಮ ಫಲಿಸಲೆಂದು ಅವಳನ್ನ ಬೇಡಿಕೊಳ್ಳುವ, ಗೋರಿಗೆ ಗುಟ್ಟಾಗಿ ಹರಕೆ ಕಟ್ಟುವ ಜನರಿದ್ದಾರೆ ಅಲ್ಲಿ. ತಾಲಿಬಾನಿಗಳು ಅವಳ ಗೋರಿಯನ್ನ ಗಡಿಯಾಚೆ ಹಾಕಿದ್ದರೂನು.
~
ಇಂತಹದೆಲ್ಲ ಕಥನ ಶ್ರೀಮಂತಿಕೆಯ ರಾಬಿಯಾ ಬಾಲ್ಖಿಯನ್ನ ಆಫ್ಘನ್ನಿನ ಇಂದಿನ ಸಂವೇದನಾಶೀಲ ಕಣ್ಣುಗಳು ಹೇಗೆ ನೋಡುತ್ತವೆ ಅನ್ನುವುದಕ್ಕೆ ಪತ್ರಕರ್ತೆ ನುಶೀನ್ ಅರ್ಬಾಬ್‌ಝಾದೆಯ ಸಾಕಷ್ಟು ಚರ್ಚೆಗೊಳಗಾದ ಒಂದು ಬರಹ ಸಾಕಾಗುತ್ತದೆ. ಪತ್ರರೂಪದಲ್ಲಿ ರಾಬಿಯಾಳ ಜತೆ ಸಂಭಾಷಣೆ ನಡೆಸುವ ನುಶೀನ್, ತನ್ನ ಕಾಲದ ಪರಿಸ್ಥಿತಿ ರಾಬಿಯಾಳ ಕಾಲದ್ದಕ್ಕಿಂತ ಹೇಗೆ ಭಿನ್ನವಾಗಿಲ್ಲ ಎಂದು ನಿರೂಪಿಸುತ್ತ ಹೋಗುತ್ತಾಳೆ. ಆ ಪತ್ರವನ್ನ ಓದಿಕೊಂಡ ಮೇಲೆ ರಾಬಿಯಾ ನಮ್ಮಲ್ಲಿ ಮತ್ತಷ್ಟು ಆಳವಾಗಿ ನಿಲ್ಲುತ್ತಾಳೆ. ನಮ್ಮ ಪ್ರತಿಬಿಂಬವೇ ಆಗಿ ಉಳಿಯುತ್ತಾ….
“ನೀನು ಕೊಲೆಯಾಗಿ ಹೋದ ಸಾವಿರದ ಅರವತ್ತೊಂಭತ್ತು ವರ್ಷಗಳ ಅನಂತರ (ಇದು ೨೦೧೨ರ ಬರಹ) ನಿನಗೆ ಬರೆಯುತ್ತಿದ್ದೇನೆ ರಾಬಿಯಾ, ನಮ್ಮ ಚರಿತ್ರೆಯಲ್ಲಿ ಮರ್ಯಾದಾ ಹತ್ಯೆಗೆ ಒಳಗಾದ ಮೊದಲಿಗಳೆಂದು ನೀನು ಗೌರವದಿಂದ ದಾಖಲಾಗಿದ್ದೀಯ. ನಿನ್ನ ಪರಂಪರೆಗೆ ಲೆಕ್ಕವಿಲ್ಲದಷ್ಟು ಜೀವಗಳು ಬಂದು ಸೇರಿಕೊಂಡಿವೆ” ಎಂದು ಬರೆಯುವ ನುಶೀನ್, ತನಗೆ ಆಕೆಯ ಕವಿತೆಗಳ ಬಗೆಗಾಗಲೀ ಅವಳ ಸಂತತನ, ಜನಪ್ರಿಯತೆಗಳ ಬಗೆಗಾಗಲೀ ಒಲವಿಲ್ಲ ಎನ್ನುತ್ತಾಳೆ. ಅವಳ ಪ್ರೇಮಗಾಥೆಯನ್ನ ಬಚ್ಚಿಟ್ಟು ಆಕೆ ‘ಪಾವಿತ್ರ್ಯ’ವನ್ನು ಸಾಬೀತುಪಡಿಸಲೆಂದೇ ಅವಳ ಪ್ರೇಮವನ್ನ ಆಧ್ಯಾತ್ಮಿಕವೆಂದು ಕರೆದುಬಿಟ್ಟಿದ್ದಾರೆಂದು ವಿಷಾದಪಡುತ್ತಾಳೆ. ರಾಬಿಯಾಳ ಅಣ್ಣ ಹಾರಿಸ್‌ನಿಗೆ ತಂಗಿಯ ಮೇಲೆ ವಿಪರೀತ ಪ್ರೇಮ. ಹಾಗಿದ್ದೂ ಗುಲಾಮನನ್ನು ಪ್ರೀತಿಸದಳೆಂದು ಆಕೆಯನ್ನ ಕೊಲ್ಲಿಸುತ್ತಾನೆ. “ಇವತ್ತೂ ಅಂಥಾ ಅಣ್ಣಂದಿರೇ ಇದ್ದಾರೆ ರಾಬಿಯಾ. ನಾವು ಬಹಳವಾಗಿ ಪ್ರೀತಿಸಲ್ಪಡ್ತೀವಿ. ಅಷ್ಟೇ ಕ್ರೂರವಾಗಿ ಸಾವಿಗೂ ತಳ್ಳಲ್ಪಡ್ತೀವಿ. ಎರಡು ವಿಪರೀತಗಳ ನಡುವೆ ತೂಗುಯ್ಯಾಲೆಯ ಬದುಕು, ಅವತ್ತಿನಂತೆ ಇವತ್ತೂ. ಸಾವಿರ ವರ್ಷ ಕಳೆದರೂ ನಮ್ಮ ವಿಧಿಯಲ್ಲಿ ಬದಲಾವಣೆಯೇನಾಗಿಲ್ಲ” ಎಂದು ಬರೆಯುತ್ತಾಳೆ ನುಶೀನ್.
ರಾಬಿಯಾಳ ಪ್ರೇಮವನ್ನ ಜಾಹೀರು ಮಾಡಿರುತ್ತಾನಲ್ಲ ರುದಾಕಿ, ರಾಬಿಯಾಳ ಪ್ರೇಮಿ ಭಕ್ತಾಶನ ಹೊರತಾಗಿ ಆತನೊಬ್ಬನೇ ಅವಳ ಕವಿತೆಗಳನ್ನ ಕೇಳಿದ್ದವನು. ಅವಳ ಪ್ರೇಮ ರಹಸ್ಯವನ್ನ ಸತ್ತರೂ ಬಿಟ್ಟುಕೊಡುವುದಿಲ್ಲವೆಂದು ಮಾತು ಕೊಟ್ಟಿದ್ದವನು, ಸಂತೋಷ ಕೂಟದಲ್ಲಿ ಕುಡಿದ ಅಮಲಿನಲ್ಲಿ ಬಾಯಿ ಬಿಡುತ್ತಾನೆ. ಕೂಟದಲ್ಲಿ ಆಕೆಯ ಕವಿತೆಗಳನ್ನು ವಾಚಿಸಿದಾಗ ಹಾರಿಸ್ ಅವು ಯಾರವೆಂದು ಕೇಳುತ್ತಾನೆ. ಆಗ ರುದಾಕಿ “ಪ್ರೇಮದಲ್ಲಿ ಮತ್ತಳಾದ ಹುಡುಗಿಯೊಬ್ಬಳು ಬರೆದಿರುವುದರಿಂದಲೇ ಅವು ಅಷ್ಟು ಸೊಗಸಾಗಿವೆ. ಇವು ರಾಬಿಯಾ ಬರೆದದ್ದಲ್ಲ, ಭಕ್ತಾಶನ ಪ್ರೇಮ ಅವಳಿಂದ ಬರೆಸಿದ್ದು” ಅನ್ನುತ್ತಾನೆ. ಈ ಹೇಳಿಕೆಯ ಹಿಂದೆ ಕೆಲಸ ಮಾಡಿದ್ದು ನಶೆಯಾ? ಅವಳ ಕವಿತ್ವದ ಬಗೆಗಿದ್ದ ಅಸೂಯೆಯಾ? ಎಂದು ಕೇಳುತ್ತಾಳೆ ನುಶೀನ್. ಹೆಣ್ಣಿನ ಕೌಶಲ್ಯದ ಬಗ್ಗೆ ಪುರುಷ ಮತ್ಸರ ಅಂದಿಗೂ ಇತ್ತು, ಇಂದಿಗೂ ಅದು ಮುಂದುವರೆದಿದೆ ಅನ್ನುತ್ತಾಳೆ.
ನುಶೀನ್ ಬರೆಯುತ್ತಾಳೆ,
“ರಾಬಿಯಾ, ಇಂದಿಗೂ ನಮ್ಮ ಗಂಡಸರು ಮತ್ತು ಹೆಂಗಸರು ನಿನ್ನನ್ನು ಗೋರಿಯಲ್ಲಿ ಆರಾಧಿಸುತ್ತಾರೆ. ನಮ್ಮ ಪರ್ಷಿಯನ್ ಭಾಷೆಯ ಹುಟ್ಟು – ಬೆಳವಣಿಗೆಯ ದಿನಗಳಲ್ಲಿ ನೀನಿದ್ದೆ. ಕವಿತೆ ಬರೆದು ಅದಕ್ಕೆ ಹಸಿರುಣಿಸಿದೆ. ಆದರೆ ನನಗೆ ನಿನ್ನ ಕವಿತೆಗಳ ಬಗ್ಗೆ ತಿಳಿಯುವ ಆಸಕ್ತಿ ಇಲ್ಲ. ಪ್ರೀತಿ, ಸುಳ್ಳು ಹಾಗೂ ರಕ್ತಗಳಿರುವ ನೆಲದಲ್ಲಿ ಪ್ರತಿಯೊಬ್ಬರೂ ಕವಿಯೇ ಆಗಿರುತ್ತಾರೆ. ಪ್ರತಿಯೊಬ್ಬರೂ ಕವಿತೆ ಬರೆಯುತ್ತಾರೆ, ಯುದ್ಧ ದೇವತೆಗಳು ಕೂಡಾ. ನಮ್ಮ ಹೆಣ್ಣುಮಕ್ಕಳೂ ಬರೆಯುತ್ತಾರೆ ಗೊತ್ತಾ? ಕೆಲವರು ತಮ್ಮ ಸೆರೆಕೋಣೆಗಳಲ್ಲಿ, ಕೆಲವರು ಮಣ್ಣಿಟ್ಟಿಗೆಯ ಮೋಟು ಗೋಡೆಗಳ ಹಿಂದೆ ಕೂತು…. ನಮ್ಮಲ್ಲಿ ಅದಕ್ಕಾಗಿಯೇ ಒಂದು ರೆಡಿಯೋ ಸ್ಟೇಷನ್ ಕೂಡ ಇದೆ. ಹುಡುಗಿಯರು ಅದಕ್ಕೆ ಕರೆ ಮಾಡಿ ತಮ್ಮಕವಿತೆ ಓದಿ ಹೇಳ್ತಾರೆ. ಅವರು ತಮ್ಮ ನಿಜವನ್ನ ಹೇಳಿಕೊಳ್ಳಲು, ಹಾಗೇ ಮರೆಮಾಚಲು ಕವಿತೆಯನ್ನ ಬಳಸ್ತಾರೆ. ಸಂದರ್ಭಕ್ಕೆ ತಕ್ಕ ಹಾಗೆ ಬಳಸಿಕೊಳ್ಳೋದಕ್ಕೇ ನಮ್ಮ ಭಾಷೆ ರೂಪುಗೊಂಡಿದೆ ಅನ್ನಿಸುತ್ತೆ ನಂಗೆ. ನೇರಾನೇರ ನಿಜ ಹೇಳುವ ಧೈರ್ಯ ಇಲ್ಲದಿರುವವರು ಕವಿತೆ ಬರೆಯುತ್ತಾರೆ ನನ್ನ ನೆಲದಲ್ಲಿ. ಪ್ರತಿಯೊಬ್ಬರೂ ಕವಿತೆಯ ಮೂಲಕ ಪಲಾಯನ ಹೂಡುತ್ತಾರೆ. ಎಲ್ಲವನ್ನೂ ಹೇಳುತ್ತಲೇ ಏನನ್ನೂ ಹೇಳಿಲ್ಲ ಅನ್ನುವಂತೆ. ನಿನಗೆ ಹೇಳ್ತೀನಿ ಕೇಳು ರಾಬಿಯಾ, ಆಫ್ಘನ್ನಿನ ನೆಲದಲ್ಲಿ ಕವಿತೆ ಹೇಡಿಗಳ ಭಾಷೆಯಷ್ಟೆ ಆಗಿದೆ….”