ನಮಗೆ ಯಾವುದು ಪ್ರಿಯವೋ ಅದು ನಮ್ಮೊಡನೆ ಇದ್ದಷ್ಟು ಹೊತ್ತು ಅದರ ಪಾಡಿಗೆ ಅದನ್ನು ಇರಲುಬಿಟ್ಟು ನೋಡುತ್ತಾ ಆನಂದವನ್ನು ಅನುಭವಿಸಬೇಕೆ ಹೊರತು, ಒಡೆತನ ಸಾಧಿಸಲು ಮುಷ್ಠಿಗಟ್ಟಿದರೆ, ಶಾಶ್ವತವಾಗಿ ಅದನ್ನು ಕಳೆದುಕೊಂಡು ಬಿಡುವ ಅಪಾಯವೇ ಬಹಳ.
ಒಂದು ಸುಂದರವಾದ ಹೂವು ಅರಳಿ ನಿಂತಿದೆ. ಅದರ ಸಹಜ ಆಯಸ್ಸು ಒಂದೆರಡು ದಿನಗಳಿರಬಹುದು ಅಥವಾ ಒಂದು ವಾರ. ತನ್ನ ಪಾಡಿಗೆ ಅರಳಿಕೊಂಡು ಘಮ ಹರಡಿ ಮುದುಡಿ ಬಾಗುವ ನಿಯತಿ ಅದರದ್ದು. ಆಗತಾನೆ ಅರಳಿದ ಆ ಹೂವು ನಮಗಿಷ್ಟವಾಗುತ್ತದೆ ಎಂದಿಟ್ಟುಕೊಳ್ಳೋಣ. ನಮಗೆ ಸಾಧ್ಯವಿರುವಷ್ಟು ಹೊತ್ತು ಅದರ ಎದುರು ನಿಂತು ಅದರ ಸೌಂದರ್ಯವನ್ನು ಅನುಭವಿಸಿ, ಮನದಲ್ಲಿ ತುಂಬಿಕೊಂಡು ನಡೆದೆವೋ, ಸರಿ. ಅದರ ಬದಲು ಆ ಹೂವಿನ ಸೌಂದರ್ಯಾಸ್ವಾದನೆಯ ಮೇಲೆ ಹಕ್ಕು ಸ್ಥಾಪಿಸಲು ಅದನ್ನು ಕಿತ್ತುಕೊಳ್ಳುತ್ತೇವೆ ಎಂದಿಟ್ಟುಕೊಳ್ಳಿ, ಆ ಕ್ಷಣದಿಂದ ಹೂವು ತನ್ನ ಜೀವಸ್ರೋತದ ಬಂಧ ಕಡಿದುಕೊಳ್ಳುತ್ತದೆ. ಜೀವನ್ಮುಖಿಯಾಗಿದ್ದ ಅದರ ಚೆಲುವು ನಮ್ಮ ಹಿಡಿತಕ್ಕೆ ಸಿಕ್ಕು ಮಾಸತೊಡಗುತ್ತದೆ. ಪರಿಣಾಮ, ಅದರ ಆಯಸ್ಸಿನಲ್ಲಿ ಇಳಿಕೆಯಾಗಿ ಬಹಳ ಬೇಗ ಬಾಡಿಯೂ ಹೋಗುತ್ತದೆ.
ಹೌದು. ಯಾವ ಕ್ಷಣ ನೀವು ವಸ್ತುವೊಂದರ ಮೇಲೆ ಅಧಿಕಾರ ಸ್ಥಾಪಿಸಲು ಆರಂಭಿಸುತ್ತೀರೋ ಆ ಕ್ಷಣದಿಂದ ಅದು ನಿಮ್ಮ ಕೈಜಾರಿಹೋಗಲು ಹವಣಿಸತೊಡಗುತ್ತದೆ. ಇದು ಎಲ್ಲಕ್ಕೂ ಅನ್ವಯ. ಹಾರುಹಕ್ಕಿಯೊಂದನ್ನು ಹಿಡಿದು ಪಂಜರದಲ್ಲಿಟ್ಟರೆ ಅದು ತನ್ನ ನೈಜ ಲವಲವಿಕೆ ಕಳೆದುಕೊಳ್ಳುತ್ತದೆ. ಸದಾ ಹರಿಯುತ್ತಲೇ ಇರುವ ನದಿಯ ನೀರನ್ನು ಕೊಳಾಯಿಗಳ ಮೂಲಕ ಹರಿಸಿ ತಂದು ಮನೆಯ ಬಿಂದಿಗೆಯಲ್ಲಿ ತುಂಬಿಟ್ಟುಕೊಳ್ಳುತ್ತೇವೆ…. ನದಿಯಲ್ಲಿ ಶತಶತಮಾನಗಳಿಂದಲೂ ಶುದ್ಧವಾಗಿ ಹರಿಯುತ್ತಿರುವ ನೀರು ಮನೆಯಲ್ಲಿ ಹಾಗೇ ಇಟ್ಟರೆ ಕೆಟ್ಟುಹೋಗುತ್ತದೆ. ಗಾಳಿಯೂ ಅಷ್ಟೇ. ಬಲೂನಿನಲ್ಲಿ ಎಷ್ಟು ಕಾಲ ಗಾಳಿಯನ್ನು ಹಿಡಿದಿಡಬಲ್ಲಿರಿ? ಒಂದು ಚಿಕ್ಕ ಸೂಜಿ ಮೊನೆ ತಾಕಿದರೆ ಸಾಕೆಂದು ಅದು ಕಾಯುತ್ತಿರುತ್ತದೆ. ಅಥವಾ ಬಲೂನಿಗೆ ಕಟ್ಟಿದ ದಾರ ಚೂರು ಅಳ್ಳಕವಾದರೂ ಸಿಕ್ಕಷ್ಟು ಜಾಗದಿಂದ ಹೊರಹೋಗಲು ಹೊಂಚುತ್ತ ಇರುತ್ತದೆ. ಹೂವು, ಹಕ್ಕಿ, ಗಾಳಿ, ನೀರುಗಳ ಕಥೆಯೇ ಹೀಗಿರುವಾಗ ಮನುಷ್ಯರ ಸಂಗತಿ ಹೇಗಿರಬಹುದು ಯೋಚಿಸಿ!
ಸಹಜ ಸ್ವಾತಂತ್ರ್ಯ
ಸ್ವಾತಂತ್ರ್ಯ ಅನ್ನುವುದು ಆತ್ಮದ ಸಹಜ ಸ್ವಭಾವ. ಅದು ಯಾವ ಬಗೆಯ ಬಂಧನವನ್ನೂ ಸಹಿಸಲಾರದು. ಹಾಗೆಂದೇ ದೇಹದೊಳಗೆ ಬಂಧಿಸಲ್ಪಟ್ಟ ಆತ್ಮವು ಮರಣದ ಮೂಲಕ ಮುಕ್ತವಾಗುವುದು. ಇನ್ನು ಕೆಲವು ಕಾಲಾಂತರ ಸಂಸ್ಕಾರದಿಂದ ಮೋಕ್ಷವನ್ನೇ ಸಾಧಿಸಿ, ಮತ್ತೆಂದೂ ಜನನ ಮರಣ ಚಕ್ರದ ಬಂಧನದಲ್ಲಿ ಸಿಲುಕದಂತೆ ಶಾಶ್ವತ ಮುಕ್ತಿ ಪಡೆಯುತ್ತವೆ.
ಮಾನವ ದೇಹದಲ್ಲಿ ಆಶ್ರಯ ಪಡೆದ ಆತ್ಮವು ದೇಹದೊಂದಿಗೆ ಗುರುತಿಸಿಕೊಂಡು, ಮಿಥ್ಯಾಹಂಕಾರಕ್ಕೆ ಪಕ್ಕಾಗಿ ಲೌಕಿಕದ ಸುಳಿಗೆ ಸಿಲುಕುತ್ತದೆ. ಅನಂತರದಲ್ಲಿ ಅದು ವಿಸ್ಮೃತಿಗೊಳಗಾಗಿ ತಾನು ಯಾವ ಸಂಬಂಧದ ಸೋಂಕೂ ಇಲ್ಲದ ಶುದ್ಧಾತ್ಮ ಅನ್ನುವುದನ್ನು ಮರೆಯುತ್ತದೆ. ಸಂಬಂಧಗಳು ತನ್ನ ಅಸ್ತಿತ್ವದ ಆಧಾರ ಎಂದು ಭಾವಿಸತೊಡಗುತ್ತವೆ. ಅಷ್ಟಾದರೂ ನಮ್ಮ ಆಂತರ್ಯದಲ್ಲಿ `ಇದು ನಾನಲ್ಲ, ಈ ಬಂಧನ ತರವಲ್ಲ…’ ಎನ್ನುವ ಕೂಗು ಕ್ಷೀಣವಾಗಿಯಾದರೂ ಇದ್ದೇ ಇರುತ್ತದೆ.
ಆದ್ದರಿಂದಲೇ ನಮಗೆ ಸಂಬಂಧಗಳು ಏಕ ಕಾಲಕ್ಕೆ ಅಪ್ಯಾಯಮಾನವೂ ಅಡ್ಡಿಯೂ ಆಗಿ ಪರಿಣಮಿಸುವುದು. ಸಂಬಂಧಗಳು ಮನುಷ್ಯನ ವಿಕಾಸಕ್ಕೆ ಎಷ್ಟು ಪೂರಕವಾಗಿ ವರ್ತಿಸುತ್ತವೆಯೋ ಅಷ್ಟೇ ಮಾರಕವಾಗಿಯೂ ವರ್ತಿಸುತ್ತವೆ. ಸಂಬಂಧಗಳೆಂದರೆ ಇಲ್ಲಿ ಸಂಬಂಧಗಳ ಸೆಳೆತ ಎಂದು. ನಾವು ಅದರೊಂದಿಗೆ ನಮ್ಮನ್ನು ಕಟ್ಟಿಹಾಕಿಕೊಂಡರೆ, ಅಥವಾ ನಮ್ಮ ಸುತ್ತಲಿನ ವ್ಯಕ್ತಿಗಳನ್ನು ಕಟ್ಟಿ ಹಾಕಿದರೆ ಸಂಘರ್ಷ ಉಂಟಾಗುತ್ತದೆ. ನಮ್ಮವರು ಎನ್ನುವ ವಾಂಛೆ ಮಿತಿಮೀರಿದರೆ ಅದು ನಮ್ಮ ಆಪ್ತರಲ್ಲಿ ಚಡಪಡಿಕೆ ಹುಟ್ಟಿಸಿ ಅವರು ಕ್ರಮೇಣ ನಮ್ಮಿಂದ ದೂರಾಗಲು ಹಂಬಲಿಸುವಂತೆ ಮಾಡುತ್ತದೆ.
ಸೂಫಿ ಕವಿ ಹಾಫಿಜ್‍ನ ಒಂದು ಪದ್ಯ ಹೇಳುತ್ತದೆ:
ಸಣ್ಣ ಮನಸ್ಸಿನ ಹುಲು ಮಾನವ
ತನ್ನವರೆನಿಸಿದ ಪ್ರತಿಯೊಬ್ಬರಿಗಾಗಿ
ಪಂಜರಗಳನು ಕಟ್ಟುತ್ತ ನಡೆವ…
ಜಾಣ ತಿಳಿವಿನ ಸಂತ
ಇರುಳಿಡೀ ಚಂದಿರನ ಮಂದ ಬೆಳಕಲ್ಲಿ
ಕೇಡಿಗ ಕೈದಿಗಳ ಬಿಡುಗಡೆಗೆ
ಚಾವಿಗಳ ಚೆಲ್ಲುತ್ತ ನಡೆವ…
– ಈ ಪದ್ಯದಲ್ಲಿ ಆಪ್ತೇಷ್ಟರನ್ನು ತಮ್ಮ ಪರಿಧಿಯಲ್ಲಿರಿಸಿಕೊಳ್ಳಲು ಯತ್ನಿಸುವ ಜನ ಸಾಮಾನ್ಯರ ಮನಸ್ಥಿತಿ ಸರಳ ಸುಂದರವಾಗಿ ನಿರೂಪಿತವಾಗಿದೆ.
ಇದು ಎಲ್ಲ ಬಗೆಯ ಸಂಬಂಧಗಳಲ್ಲೂ ನಡೆಯುತ್ತದೆ. ತಾಯಿಯು ತನ್ನ ಮಗುವನ್ನು, ಅದು ದೊಡ್ಡದಾದ ಮೇಲೂ ತನ್ನ ಮುಚ್ಚಟೆಯಲ್ಲಿರಲಿ ಎಂದು ಬಯಸುತ್ತಾಳೆ. ಮಗು ಬೆಳೆದು ಸ್ವತಂತ್ರ ವ್ಯಕ್ತಿಯಾಗಿ ತನ್ನ ಚಿಂತನೆಗೆ ತಕ್ಕಂತೆ, ತನ್ನ ಆಯ್ಕೆಗಳೊಂದಿಗೆ ಜೀವನ ನಡೆಸುವಾಗ ಬಹುತೇಕ ತಾಯಂದಿರು ಸಂಭ್ರಮದೊಂದಿಗೆ ಚಿಕ್ಕ ಆತಂಕವನ್ನೂ ಅನುಭವಿಸುತ್ತಾರೆ. ತನ್ನ ಹೊಟ್ಟೆಯಲ್ಲಿ ಬೆಳೆದ ಮಗು ತನ್ನ ಆಸರೆಯೇ ಇಲ್ಲದೆ ಬೇರೆಯದೇ ಸ್ವತಂತ್ರ ವ್ಯಕ್ತಿತ್ವವಾಗಿ ರೂಪುಗೊಂಡ ಆನಂದ ಒಂದೆಡೆಯಾದರೆ, ಈ ಸ್ವಾತಂತ್ರ್ಯವೇ ಮಕ್ಕಳನ್ನು ತನ್ನಿಂದ ದೂರ ಮಾಡುತ್ತಿದೆ ಎನ್ನುವ ಅಸಮಾಧಾನವೂ ಅಂತರಂಗದಲ್ಲಿ ಮೆಲ್ಲಗೆ ಕದಡುತ್ತಿರುತ್ತದೆ. ಯಾರಲ್ಲಿ ಈ ಕದಡುವಿಕೆ ಹೆಚ್ಚಾಗಿರುತ್ತದೆಯೋ ಅವರು ಅದನ್ನು ಬಹಿರಂಗವಾಗಿ ಹೊರಹಾಕುತ್ತಾ, ಮಕ್ಕಳ ಮೇಲೆ ಅಧಿಕಾರ ಚಲಾಯಿಸತೊಡಗಿ ಕುಟುಂಬದಲ್ಲಿ ಬಿರುಗಾಳಿಯನ್ನೆ ಎಬ್ಬಿಸುತ್ತಾರೆ.
ಸಂಗಾತಿಗಳಲ್ಲೂ ಹೀಗೆಯೇ. ತನ್ನ ಪ್ರೀತಿಯ ಪರಿಧಿಯಲ್ಲಷ್ಟೆ ಸಂಗಾತಿಗೆ ಸುಖವಿರಬೇಕೆಂಬ ಹುಚ್ಚು ಬಯಕೆಯೇ ಎಷ್ಟೋ ಸಾಂಗತ್ಯಗಳನ್ನು ಒಡೆದುಗಾಕಿದೆ. ಇಲ್ಲಿ ನಿಜವಾದ ಪ್ರೇಮ ಕಾಳಜಿಗಳಿದ್ದರೂ ಸಹಜೀವದ ಮೇಲೆ ಸಾಧಿಸಹೊರಡುವ ಒಡೆತನ, ಅವರ ಉಸಿರುಕಟ್ಟಿಸಿ ಅಲ್ಲಿಂದ ಕಾಲ್ತೆಗೆಯುವಂತೆ ಒತ್ತಾಯಪಡಿಸುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಸಾಂಗತ್ಯ ಬಿಟ್ಟುಹೋದ ನಂತರವೂ ಪ್ರೀತಿ ಉಳಿದಿರುತ್ತದೆ. ಆದರೆ ಈ ಪರಸ್ಪರ ಹಕ್ಕು ಸ್ಥಾಪನೆಯ ಭಯದಿಂದ ಅವರು ಒಂದಾಗಿ ಬಾಳಲು ನಿರಾಕರಿಸಿ ದೂರವೇ ಉಳಿಯುತ್ತಾರೆ.
ಆದ್ದರಿಂದ ಸುಖವಿರುವುದು ಸಂಬಂಧಗಳಿಗೆ ಕೋಟೆ ಕಟ್ಟುವುದರಲ್ಲಿ ಅಲ್ಲ. ಅದು ಸಿಗುವುದು, ಭಾವ ಬಂಧನದ ಕೈದಿಗಳ ಬಿಡುಗಡೆಗೆ ಚಾವಿ ಒದಗಿಸುವಲ್ಲಿ. ನಾವು ಆದಷ್ಟೂ ನಮ್ಮ ಸಂಗಾತಿಯ, ಸಹಜೀವದ ಸ್ವಾತಂತ್ರ್ಯಕ್ಕೆ, ಅವರ ಅಂತರಂಗದ ಅರಳುವಿಕೆಗೆ ಅವಕಾಶ ನೀಡಲು ಯತ್ನಿಸಬೇಕು. ಮೂರ್ಖನೊಬ್ಬ, ಅಂಗೈ ಮೇಲೆ ಬಂದು ಕುಳಿತ ಹಕ್ಕಿ ಹಾರಿಹೋಗದಿರಲಿ ಎಂದು ಮುಷ್ಠಿಕಟ್ಟಿ ಬಿಗಿ ಹಿಡಿದನಂತೆ. ಅದು ಸತ್ತೇ ಹೋಯಿತು. ನಮಗೆ ಯಾವುದು ಪ್ರಿಯವೋ ಅದು ನಮ್ಮೊಡನೆ ಇದ್ದಷ್ಟು ಹೊತ್ತು ಅದರ ಪಾಡಿಗೆ ಅದನ್ನು ಇರಲುಬಿಟ್ಟು ನೋಡುತ್ತಾ ಆನಂದವನ್ನು ಅನುಭವಿಸಬೇಕೆ ಹೊರತು, ಒಡೆತನ ಸಾಧಿಸಲು ಮುಷ್ಠಿಗಟ್ಟಿದರೆ, ಶಾಶ್ವತವಾಗಿ ಅದನ್ನು ಕಳೆದುಕೊಂಡು ಬಿಡುವ ಅಪಾಯವೇ ಬಹಳ.