ಒಮ್ಮೆ ಒಂದು ಹಡಗಿನಲ್ಲಿ ಸುಲ್ತಾನ ಪ್ರಯಾಣ ಹೊರಟಿದ್ದ. ಅವನ ಜೊತೆ ರಾಜ ಪರಿವಾರವೂ ಇತ್ತು. ಅದೇ ಹಡಗಿನಲ್ಲಿ ಒಬ್ಬ ತರುಣ ವ್ಯಾಪಾರಿ ಮತ್ತು ಒಬ್ಬ ಸೂಫಿ ಕೂಡಾ ಪ್ರಯಾಣ ಹೊರಟಿದ್ದರು. ತರುಣ ವ್ಯಾಪಾರಿಗೆ ಅದು ಮೊದಲ ಹಡಗು ಪ್ರಯಾಣ. ಆತ ವಿಪರೀತ ಆತಂಕದಲ್ಲಿದ್ದ. ಹೊಸತಾಗಿ ಮದುವೆಯಾಗಿದ್ದ ಹೆಂಡತಿಯ ಮುಖ ಕಣ್ಮುಂದೆ ಬರುತ್ತಿತ್ತು. “ನಾನು ಹಡಗಿನಲ್ಲಿ ಮುಳುಗಿ ಸತ್ತು ಹೋದರೆ…” ಅನ್ನುವ ಯೋಚನೆ ಕಣ್ಣೀರಾಗಿ ಹರಿದು ಅವಳ ಬಿಂಬವನ್ನೂ ಕೆಳಗೆ ಚೆಲ್ಲುತ್ತಿತ್ತು. ಸೂಫಿ ಅವನ ದುಃಖವನ್ನು ಗಮನಿಸುತ್ತಲೇ ಇದ್ದ.
ಹಡಗು ಹೊರಟಿತು. ಅದು ಒಂದು ಸಲ ತೊನೆದಾಡಿದ ಕೂಡಲೇ ತರುಣ ವ್ಯಾಪಾರಿ “ಕಾಪಾಡಿ… ಕಾಪಾಡಿ…” ಎಂದು ಬೊಬ್ಬೆ ಹೊಡೆಯಲು ಶುರು ಮಾಡಿದ. ರಾಜ ಪರಿವಾರದವರು ಅವನ ಸುತ್ತ ನೆರೆದು ಸಮಾಧಾನ ಹೇಳಿದರು. ಕೆಲ ನಿಮಿಷ ಸುಮ್ಮನಿದ್ದವನು, ಮತ್ತೆ ಬೊಬ್ಬೆ ಶುರುವಿಟ್ಟ. ಹಡಗಿನ ಪರಿಚಾರಕರೆಲ್ಲ ಬಂದು ಅವನಲ್ಲೊ ಧೈರ್ಯ ತುಂಬಲು ಯತ್ನಿಸಿದರು. ಆದರೂ ತರುಣನ ಕೂಗು ನಿಲ್ಲಲಿಲ್ಲ.
ಹಡಗಿನ ಒಳ ಕೋಣೆಯಲ್ಲಿ ಸಂಗೀತ ಕೇಳುತ್ತಾ ಸುಲ್ತಾನ ಕಿವಿಗೂ ಆತನ ಕೂಗಾಟ ತಲುಪಿತು. ಆವನು ಅದೇನೆಂದು ವಿಚಾರಿಸಲು ಆದೇಶಿಸಿದ. ತರುಣ ವ್ಯಾಪಾರಿಯ ಬಗ್ಗೆ ಭಟರು ತಿಳಿಸಿದರು. ಸುಲ್ತಾನ, “ಹೇಗಾದರೂ ಸರಿ, ಅವನ ಬಾಯಿ ಮುಚ್ಚಿಸಿ” ಎಂದು ಆಜ್ಞಾಪಿಸಿದ.
ಎಲ್ಲ ಬಗೆಯ ಯತ್ನಗಳೂ ನಡೆದವು. ತರುಣ ಕೆಲ ನಿಮಿಷಗಳ ಕಾಲ ಸುಮ್ಮನಾದರೂ ಮತ್ತೆ ಬೊಬ್ಬೆ ಹಾಕುತ್ತಿದ್ದ, ಇದರಿಂದ ಅಸಹನೆಗೆ ಈಡಾದ ಸುಲ್ತಾನ, ತಾನೇ ಖುದ್ದಾಗಿ ಹೊರಗೆ ಬಂದ. ಎಲ್ಲರನ್ನೂ ದಿಟ್ಟಿಸಿ ನೋಡುತ್ತಾ, “ಈತನ ಬಾಯಿ ಮುಚ್ಚಿಸಬಲ್ಲವರು ಯಾರೂ ಇಲ್ಲವೆ?” ಎಂದು ಕೇಳಿದ.
ಅಷ್ಟರವರೆಗೆ ಸುಮ್ಮನಿದ್ದ ಸೂಫಿ ಎದ್ದು ನಿಂತ. “ನಾನು ಸುಮ್ಮನಾಗಿಸ್ತೇನೆ” ಅನ್ನುತ್ತಾ ಸೀದಾ ತರುಣ ವ್ಯಾಪಾರಿಯ ಬಳಿ ಹೋದವನೇ ಅವನನ್ನು ಎತ್ತಿ ಹಡಗಿನಿಂದ ಕೆಳಗೆ ಹಾಕಿದ. ಏನಾಗುತ್ತಿದೆ ಎಂದು ಗೊತ್ತಾಗುವ ಮೊದಲೇ ತರುಣ ನೀರಿನಲ್ಲಿ ಮುಳುಗೇಳುತ್ತಾ ಜೀವವುಳಿಸಿಕೊಳ್ಳಲು ಪರದಾಡತೊಡಗಿದ. ಹಡಗಿನ ಗೋಡೆ ಹಿಡಿದು, ಅದಕ್ಕೆ ಕಟ್ಟಿದ್ದ ಹಗ್ಗವನ್ನು ಗಟ್ಟಿಯಾಗಿ ಹಿಡಿದುಕೊಂಡ. “ದಯವಿಟ್ಟು ನನ್ನನ್ನು ಮೇಲಕ್ಕೆತ್ತಿ. ನಾನಿನ್ನು ಕೂಗಾಡುವುದಿಲ್ಲ. ದಯಮಾಡಿ…” ಎಂದು ಅಂಗಲಾಚಿದ. ಸೂಫಿ ಹಗ್ಗದ ಬಲೆಯನ್ನು ಇಳಿಬಿಟ್ಟು, ತರುಣ ವ್ಯಾಪಾರಿಯನ್ನು ಮೇಲಕ್ಕೆ ಕರೆಸಿಕೊಂಡ.
ಸುಲ್ತಾನ ಕೈಕಟ್ಟಿಕೊಂಡು ಅದನ್ನೆಲ್ಲ ನೋಡುತ್ತಿದ್ದ. ತಾನು ಒಳಗೆ ಹೋದಮೇಲೆ ಈತ ಮತ್ತೆ ಕೂಗಾಡಲು ಶುರು ಮಾಡಬಹುದು ಅನ್ನಿಸಿ ಅಲ್ಲಿಯೇ ನಿಂತ. ಹದಿನೈದಿಪ್ಪತ್ತು ನಿಮಿಷಗಳಾದರೂ ತರುಣ ವ್ಯಾಪಾರಿ ದನಿ ತೆಗೆಯಲಿಲ್ಲ. ತನ್ನ ಜಾಗದಲ್ಲಿ ಸುಮ್ಮನೆ ವ್ಯಾಪಾರದ ಪಟ್ಟಿ ನೋಡುತ್ತಾ ಕುಳಿತ.
ಸುಲ್ತಾನ, ಸೂಫಿಯನ್ನು ಕೇಳಿದ: “ನೀನು ಅವನನ್ನು ಎತ್ತಿ ಸಮುದ್ರಕ್ಕೆ ಎಸೆದ ಕೂಡಲೇ ಅವನು ಸುಮ್ಮನಾಗಿದ್ದು ಹೇಗೆ?”
“ಜಹಾಂಪನಾ, ಆತನಿಗೆ ಈ ಸಮುದ್ರಕ್ಕಿಂತ ಹಡಗೇ ಎಷ್ಟೋ ಮೇಲು ಅನ್ನಿಸಿರಬೇಕು. ಇಲ್ಲಿ ಹಡಗು ಹೊಯ್ದಾಡಿದರೂ ನೀರಲ್ಲಿ ಮುಳುಗಿ ಉಸಿರುಗಟ್ಟುವ ಅಪಾಯವಿಲ್ಲ. ಸಮುದ್ರದಲ್ಲಿ ಉಪ್ಪು ನೀರು ಕುಡಿದು ಒದ್ದಾಡುವಾಗ ಅವನಿಗೆ ಅದರ ಅರಿವಾಗಿದೆ” ಎಂದ ಸೂಫಿ.