ತಿಳಿಯುವಿಕೆ ಎಂಬುದು ಒಂದು ಪ್ರಕ್ರಿಯೆ. ಎಲ್ಲಾ ಗ್ರಂಥಗಳು, ತರ್ಕಗಳು ಮತ್ತು ವಿಚಾರಗಳು ಹುಟ್ಟುವುದು ಈ ತಿಳಿಯುವಿಕೆಯ ಪ್ರಕ್ರಿಯೆಯಲ್ಲಿ. ~ ಅಚಿಂತ್ಯ ಚೈತನ್ಯ
ಮನುಷ್ಯ ಎದುರಿಸುವ ಬಹುಮುಖ್ಯ ಪ್ರಶ್ನೆ ಯಾವುದು? ಇದಕ್ಕೆ ಇರುವುದು ಒಂದೇ ಉತ್ತರ. ಇದನ್ನು ಸಕರಾತ್ಮಕವಾಗಿ ಮಂಡಿಸ ಹೊರಟರೆ ಆ ಪ್ರಶ್ನೆ ‘ಏನು ಮಾಡಬೇಕು?’ ಎಂದಿರುತ್ತದೆ. ಇದನ್ನೇ ನಕರಾತ್ಮಕವಾಗಿ ಮಂಡಿಸಿದರೆ ‘ಏನು ಮಾಡಬಾರದು?’ ಎಂದಾಗುತ್ತದೆ.
ಎರಡಲ್ಲದ ಈ ಒಂದು ಪ್ರಶ್ನೆಯ ಉತ್ತರ ಅಥವಾ ಎರಡಾಗಿ ಕಾಣಿಸುವ ಈ ಒಂದು ಪ್ರಶ್ನೆಯ ಉತ್ತರ ನಮ್ಮ ಅನುಕ್ಷಣದ ನಿರ್ಧಾರಗಳನ್ನು ಪ್ರೇರೇಪಿಸುತ್ತದೆ. ನಾವು ಅಧ್ಯಾತ್ಮ ಎಂದು ಕರೆಯುವ ಪರಿಕಲ್ಪನೆಯನ್ನು ವಿವರಿಸುವ ಎಲ್ಲಾ ಉದ್ಗ್ರಂಥಗಳು ಮತ್ತು ಚಿಂತನೆಗಳೆಲ್ಲವೂ ಈ ಪ್ರಶ್ನೆಗೊಂದು ಉತ್ತರವನ್ನು ಕಂಡುಕೊಳ್ಳುವುದಕ್ಕಾಗಿಯೇ ಇವೆ.
ಇದಿಷ್ಟು ಸರಳವಾಗಿದ್ದರೆ ಉದ್ಗ್ರಂಥಗಳ ಅಗತ್ಯವಾದರೂ ಏನು? ಇಲ್ಲಿಯ ತನಕ ನಡೆದ ಮೀಮಾಂಸೆಗಳು ಮತ್ತು ಅವುಗಳ ಫಲವಾಗಿ ಹುಟ್ಟಿದ ವಿವಿಧ ಮತ – ಧರ್ಮಗಳು, ಆರಾಧನಾ ವಿಧಾನಗಳು, ಯೋಚನಾ ವಿಧಾನಗಳು, ಪ್ರಶ್ನೋತ್ತರಗಳಿಗೆಲ್ಲಾ ಅರ್ಥವಿದೆಯೇ ಎಂಬ ಪ್ರಶ್ನೆಗಳು ಯಾರ ಮನಸ್ಸಿನಲ್ಲಾದರೂ ಹುಟ್ಟುವುದು ಸಹಜ.
ಸೃಷ್ಟಿಯ ಅತ್ಯಂತ ಸಂಕೀರ್ಣ ವಿಚಾರಗಳೆಲ್ಲವೂ ಮೇಲ್ನೋಟಕ್ಕೆ ಬಹಳ ಸರಳವಾಗಿ ಕಾಣಿಸುತ್ತವೆ ಎಂಬುದನ್ನು ನಾವು ಮೊದಲು ಅರಿಯಬೇಕು. ಯಮನ ಎದುರು ಪ್ರಶ್ನೆಗಳನ್ನು ಇಡುವ ನಚಿಕೇತ, ಯಮನ ಬಳಿ ತನ್ನ ಪ್ರಶ್ನೆಗಳಿಗೆ ಉತ್ತರವಿದೆ ಎಂದು ಭಾವಿಸುವುದಿಲ್ಲ. ಯಮನಿಗೂ ಉತ್ತರವನ್ನು ಕಂಡುಕೊಳ್ಳುವುದಕ್ಕೊಂದು ಅವಕಾಶ ಕೊಡುತ್ತಾನೆ. ಅವನ ಕೇಳುವಿಕೆ ಕೊನೆಗೊಳ್ಳುವುದು ಹೀಗೆ, ‘ಅದೇನೆಂದು ತಿಳಿ ಮತ್ತೆ ನನಗೆ ಹೇಳು’.
ಈ ತಿಳಿಯುವಿಕೆ ಎಂಬುದು ಒಂದು ಪ್ರಕ್ರಿಯೆ. ಎಲ್ಲಾ ಗ್ರಂಥಗಳು, ತರ್ಕಗಳು ಮತ್ತು ವಿಚಾರಗಳು ಹುಟ್ಟುವುದು ಈ ತಿಳಿಯುವಿಕೆಯ ಪ್ರಕ್ರಿಯೆಯಲ್ಲಿ. ಹಾಲು ಮೊಸರಾಗಿ, ಆಮೇಲೆ ಮಂಥನಕ್ಕೊಳಗಾಗಿ, ನವನೀತ ಮೇಲೆ ಬಂದು, ಅದು ಬಿಸಿಯಾದಾಗ ತುಪ್ಪ ಸೃಷ್ಟಿಯಾಗುತ್ತದೆ. ಇದೊಂದು ವಿಕಸನ ಪ್ರಕ್ರಿಯೆ. ಹೊರನೋಟಕ್ಕೆ ಇದೊಂದು ರೂಪಾಂತರದಂತೆ ಕಾಣಿಸುತ್ತದೆ. ಹಾಲು ಮೊಸರಾಗುವಾಗ ಅದು ಸಂಪೂರ್ಣವಾಗಿ ಬದಲಾಗುತ್ತದೆ. ಹಾಲಿನ ಲಕ್ಷಣಗಳೆಲ್ಲವೂ ಇಲ್ಲವಾಗಿಬಿಡುತ್ತದೆ. ಮಂಥನದಲ್ಲಿ ಬೆಣ್ಣೆ ಅಥವಾ ನವನೀತವು ತೇಲಿ ಮೇಲೆ ಬಂದಾಗ ಮೊಸರಿನ ಸ್ವರೂಪವೇ ಬದಲಾಗುತ್ತದೆ. ಮಜ್ಜಿಗೆಯಲ್ಲಿ ಮೊಸರಿನ ರುಚಿಯ ನೆನಪುಗಳಷ್ಟೇ ಉಳಿದಿರುತ್ತವೆ. ನವನೀತದ ಸ್ವರೂಪ ಮತ್ತೊಂದು. ಅದನ್ನು ಬಿಸಿ ಮಾಡಿದಾಗ ಹುಟ್ಟುವ ತುಪ್ಪಕ್ಕೆ ಇರುವ ಸ್ವರೂಪ ಮತ್ತೊಂದು.
ಈ ಪ್ರಕ್ರಿಯೆಯಲ್ಲಿ ಹುಟ್ಟಿದ ಉಪೋತ್ಪನ್ನಗಳೆಲ್ಲವೂ ನಿರುಪಯೋಗಿಯೇ? ಅಲ್ಲ. ಹಾಲು ಮೊಸರಿನ ಸ್ವರೂಪವನ್ನು ಪಡೆದಾಗ ಅದಕ್ಕೊಂದು ಬಳಕೆಯ ಸಾಧ್ಯತೆಯಿದೆ. ಮಜ್ಜಿಗೆ, ಬೆಣ್ಣೆ ಮತ್ತು ತುಪ್ಪಕ್ಕೂ ಭಿನ್ನ ಸಾಧ್ಯತೆಗಳು ವಿಸ್ತರಿಸಿಕೊಳ್ಳುತ್ತವೆ. ನಮ್ಮೊಳಗಿನ ಎರಡಲ್ಲದ ಒಂದೇ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಕ್ರಿಯೆಯೂ ಹಾಗೆಯೇ. ಅದು ಅನೇಕ ಉಪೋತ್ಪನ್ನಗಳನ್ನು ಸೃಜಿಸುತ್ತಲೇ ಸಾಗುತ್ತದೆ.
ಮಹಾತ್ಮ ಗಾಂಧಿ ಆಫ್ರಿಕಾಕ್ಕೆ ಹೋದದ್ದು ವಕೀಲನಾಗಿ ವೃತ್ತಿ ಬದುಕು ಕಂಡುಕೊಳ್ಳುವುದಕ್ಕೆ. ಆ ಪ್ರಕ್ರಿಯೆ ಸೃಜಿಸಿದ ಉಪೋತ್ಪನ್ನಗಳು ಎಂತೆಂಥವಾಗಿದ್ದವು… ಡರ್ಬಾನ್‌ನ ರೈಲು ನಿಲ್ದಾಣದಲ್ಲಿ ಮೊದಲ ದರ್ಜೆಯ ಬೋಗಿಯಿಂದ ಕೆಳಕ್ಕೆ ಎಸೆಯಲ್ಪಟ್ಟ ಮೋಹನದಾಸನ ಬದುಕಿನಲ್ಲಿ ಪ್ರಾರಂಭವಾದ ಮಂಥನ ಕ್ರಿಯೆ ಮುಂದೆ ಸೃಷ್ಟಿಸಿದ್ದು ಏನೇನನ್ನು?
ಹಾಗಿದ್ದರೆ ಇದರಲ್ಲಿ ಗಾಂಧೀಜಿಯ ಪ್ರಯತ್ನವೇನೂ ಇರಲಿಲ್ಲವೇ? ಎಂಬ ಪ್ರಶ್ನೆ ನಿಮ್ಮದಾಗಿರಬಹುದು. ಗಾಂಧೀಜಿ ಆ ಕ್ಷಣದಲ್ಲಿ ಆರಿಸಿಕೊಂಡ ಹಾದಿ ಉಳಿದದ್ದನ್ನು ನಿರ್ಧರಿಸಿತು. ಹೊರಗೆಸೆಯಲ್ಪಟ್ಟ ಗಾಂಧಿ ಎದ್ದು ತೃತೀಯ ದರ್ಜೆಯ ಟಿಕೆಟ್ ಪಡೆದು ಪ್ರಯಾಣ ಬೆಳೆಸಿದ್ದರೆ ನಡೆಯುತ್ತಿದ್ದ ಬೆಳವಣಿಗೆಗಳೇ ಬೇರೆ. ಅರ್ಥಾತ್, ಆಗ ಸೃಷ್ಟಿಯಾಗುತ್ತಿದ್ದ ಉಪೋತ್ಪನ್ನಗಳೇ ಭಿನ್ನ. ಗಾಂಧೀಜಿ ಮಹಾತ್ಮನೇ ಆಗುತ್ತಿರಲಿಲ್ಲವೇನೋ?
ಗೀತೋಪದೇಶದ ನಂತರ ಶ್ರೀಕೃಷ್ಣ ಪರಮಾತ್ಮ ಹೇಳುವ ಮಾತಿದೆಯಲ್ಲಾ ‘ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾಕುರು’ (ವಿಮರ್ಶೆ ಮಾಡಿದ ಬಳಿಕ ನೀನು ಇಚ್ಛಿಸಿದಂತೆ ಮಾಡು). ನಾವು ಮಾಡುವುದೆಲ್ಲವೂ ನಮ್ಮ ಇಚ್ಛೆಯಂತೆಯೇ ಆದರೂ ಅದಕ್ಕೂ ಮೊದಲಿನ ವಿಮರ್ಶೆ ಬಹಳ ಮುಖ್ಯವಾದುದು. ನಮ್ಮನ್ನು ಕೇವಲ ಮನಷ್ಯನಾಗಿಸುವುದು ಅಥವಾ ಮಹಾತ್ಮನನ್ನಾಗಿಸುವುದು ಇದುವೇ.
ಮೊದಲೇ ಹೇಳಿದ ಎರಡಲ್ಲದ ಒಂದು ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕಾಗಿರುವುದೇ ಈ ವಿಮರ್ಶೆಯ ಮೂಲಕ. ಆ ವಿಮರ್ಶೆಗೆ ಸಹಕರಿಸುವುದಕ್ಕಾಗಿಯೇ ನಮ್ಮೆದುರು ಗೀತಾಚಾರ್ಯನ ಬೋಧನೆಗಳಿಂದ ತೊಡಗಿದ ಸರ್ವವಾಙ್ಮಯವೂ ಇದೆ ಎಂಬುದರ ಅರಿವು ನಮಗಿರಬೇಕು.