ಮೂರ್ಖನಾದ ವಾ-ಐನ್-ಸಾಇಲ್ ವಿದ್ಯಾರ್ಥಿಯಾಗಿ ರಾ-ಉಮ್ ಆಶ್ರಮ ಸೇರಿ ಒಂದೆರಡು ವಾರವಾಗಿತ್ತಷ್ಟೇ. ಶಿಷ್ಯನನ್ನು ಕರೆದ ರಾ-ಉಮ್ ನೀನೀಗ ಸಾಧನೆಯನ್ನು ಆರಂಭಿಸಬೇಕು ಎಂದಳು. ವಾ-ಐನ್ ಏನು ಮಾಡಲಿ ಎಂಬ ಪ್ರಶ್ನೆಯೊಂದಿಗೆ ನಿಂತ.
“ಸ್ಮಶಾನಕ್ಕೆ ಹೋಗಿ ಸಮಾಧಿಯೊಳಗಿರುವವರನ್ನು ತೀವ್ರವಾಗಿ ಖಂಡಿಸು” ಎಂದು ರಾ-ಉಮ್ ಆದೇಶಿಸಿದಳು. ವಾ-ಐನ್ ಅದನ್ನು ಅಕ್ಷರಶಃ ಪಾಲಿಸಿದ. ಬೆಳಗಿನಿಂದ ಬೈಗಿನವರೆಗೂ ಸ್ಮಶಾನದಲ್ಲಿ ನಿಂತು ಸತ್ತ ಪ್ರತಿಯೊಬ್ಬರನ್ನೂ ಬೈಗುಳಗಳಿಂದ ಅಲಂಕರಿಸಿದ.
ಸಂಜೆ ಸುಸ್ತಾಗಿ ಹಿಂದಿರುಗಿದ ಶಿಷ್ಯನನ್ನು ರಾ-ಉಮ್ ಮತ್ತೆ ಪ್ರಶ್ನಿಸಿದಳು. ‘ಏನಾದರೂ ಪ್ರತಿಕ್ರಿಯೆ ಬಂತೇ?’
ವಾ-ಐನ್ ದೈನ್ಯದಿಂದ ಹೇಳಿದ… ‘ಇಲ್ಲ… ಅವರಾರೂ ನನ್ನ ಮಾತನ್ನು ಕೇಳಿಸಿಕೊಡಂತಿಲ್ಲ..’
ರಾ-ಉಮ್ ಹೇಳಿದಳು, ‘ಹಾಗಾದರೆ ನಾಳೆ ಹೋಗಿ ಅವರನ್ನು ಹೊಗಳು’
ಮರುದಿನ ಮುಂಜಾನೆಯಿಂದಲೇ ವಾ-ಐನ್ ಸತ್ತ ಪ್ರತಿಯೊಬ್ಬರನ್ನೂ ಹೊಗಳಿದ… ಹಾದಿ ಹೋಕರು ನಿಂತು ನೋಡುವಷ್ಟು ಉಚ್ಛಸ್ಥಾಯಿಯಲ್ಲಿ ಪರಾಕುಗಳನ್ನು ಹೇಳಿದ. ಸಂಜೆಯಾಯಿತು. ಸುಸ್ತಾಗಿ ಹಿಂದಿರುಗುವಾಗಲೇ ರಾ-ಉಮ್ ಮತ್ತೆ ಪ್ರಶ್ನಿಸಿದಳು ‘ಪ್ರತಿಕ್ರಿಯೆ ಹೇಗಿತ್ತು..?’
ವಾ-ಐನ್ ಹೇಳಿದ ‘ನಿನ್ನೆಯ ಹಾಗೆಯೇ…’
ರಾ-ಉಮ್ ಕೇಳಿದಳು ‘ಹಾಗಿದ್ದರೆ ಮುಂದೇನು…?’
ವಾ-ಐನ್ ಹೇಳಿದ ‘ನನ್ನ ದಾರಿ ಚರಿತ್ರೆಯಲ್ಲಿಲ್ಲ…. ಅದಿರುವುದು ವರ್ತಮಾನದಲ್ಲಿ… ಅದು ನನ್ನದು ಮಾತ್ರ’.
ರಾ-ಉಮ್ ತನ್ನ ಹೆಂಡದ ಬುರುಡೆಯನ್ನು ಎತ್ತಿ ಶಿಷ್ಯನ ಬಾಯಿಗೆ ಹೊಯ್ದಳು…!