ದಕ್ಷಿಣ ಜಪಾನಿನ ವಿದ್ಯಾರ್ಥಿಗೆ ಜ್ಞಾನೋದಯ ಮಾಡಿಸಿದ ಸುಯಿವೊ

aಸುಯಿವೊ ಒಬ್ಬ ಝೆನ್ ಬೋಧಕ. ಅವನೊಂದು ಗುರುಕುಲವನ್ನು ನಡೆಸುತ್ತಿದ್ದ. ಝೆನ್ ಕಲಿಯಲು ಅಲ್ಲಿಗೆ ದೂರದೂರದಿಂದ ವಿದ್ಯಾರ್ಥಿಗಳು ಬಂದರು.

ಹೀಗೊಂದು ಬೇಸಿಗೆ ದಿನದಂದು ದಕ್ಷಿಣ ಜಪಾನಿನಿಂದ ಒಬ್ಬ ವಿದ್ಯಾರ್ಥಿ ಬಂದ. ಸುಯಿವೊ ಎಲ್ಲರಿಗೂ ನೀಡುವಂತೆ ಅವನಿಗೂ ಒಂದು ಒಗಟು ನೀಡಿ ಬಿಡಿಸುವಂತೆ ಹೇಳಿದ.

“ಒಂದು ಕೈ ಚಪ್ಪಾಳೆ ಸದ್ದು ಹೇಗಿರುತ್ತೆ?” ಇದೇ ಆ ಒಗಟು.

ದಕ್ಷಿಣ ಜಪಾನಿನ ಆ ವಿದ್ಯಾರ್ಥಿಗೆ ಹರಸಾಹಸ ಪಟ್ಟರೂ ಆ ಒಗಟನ್ನು  ಅರ್ಥ ಮಾಡಿಕೊಳ್ಳಲೂ ಸಾಧ್ಯವಾಗಲಿಲ್ಲ. ಒಂದು ವರ್ಷ ಕಳೆಯಿತು. ಎರಡನೇ ವರ್ಷ ಉರುಳಿತು. ಮೂರನೇ ವರ್ಷವೂ ಮುಗಿಯುತ್ತ ಬಂತು.

ವಿದ್ಯಾರ್ಥಿಗೆ ಒಗಟು ಬಿಡಿಸಲಾಗಲಿಲ್ಲ.

ಗುರುಕುಲಕ್ಕೆ ಬಂದು ನಾಲ್ಕನೇ ಬೇಸಗೆ ಕಳೆಯುವ ಮೊದಲು ವಿದ್ಯಾರ್ಥಿ ಸುಯಿವೊ ಎದುರು ಹೋಗಿ ತಲೆ ತಗ್ಗಿಸಿ ನಿಂತ. ಕಣ್ಣುಗಳಲ್ಲಿ ನೀರು ತುಂಬಿಕೊಂಡು “ನಾನು ವಿಫಲನಾದೆ. ನನ್ನಿಂದ ಒಗಟು ಬಿಡಿಸಲಾಗಿಲ್ಲ. ಮರಳಿ ಊರಿಗೆ ಹೊರಡುತ್ತೇನೆ” ಅಂದ.

ಸುಯಿವೊ ಅವನನ್ನು ಸಮಾಧಾನಪಡಿಸಿ, “ಇನ್ನೂ ಒಂದು ವಾರ ಪ್ರಯತ್ನಿಸು. ತಪ್ಪದೆ ಧ್ಯಾನ ಮಾಡು” ಎಂದು ಹೇಳಿದ.

ವಿದ್ಯಾರ್ಥಿ ಬೋಧಕ ಹೇಳಿದಂತೆಯೇ ಮಾಡಿದ. ಚೂರೂ ಪ್ರಯೋಜನವಾಗಲಿಲ್ಲ.

ಸುಯಿವೊ ಅವನಿಗೆ ಮತ್ತೆ ಐದು ದಿನಗಳ ಕಾಲ ಪ್ರಯತ್ನಿಸುವಂತೆ ಹೇಳಿದ.

ವಿದ್ಯಾರ್ಥಿ ಐದು ದಿನಗಳ ಕಾಲ ಧ್ಯಾನವೊಂದನ್ನು ಬಿಟ್ಟರೆ ಮತ್ತೇನೂ ಮಾಡಲಿಲ್ಲ. ಆದರೂ ಒಗಟು ಬಗೆಹರಿಯಲಿಲ್ಲ.

ಇನ್ನು ತಾನು ಕಾಯಲಾರೆ, ತನ್ನಿಂದ ಸಾಧ್ಯವಿಲ್ಲ ಅನ್ನಿಸಿತು ವಿದ್ಯಾರ್ಥಿಗೆ. ಸುಯಿವೊ ಎದುರು ನಿಂತು “ನಾನು ಸಂಪೂರ್ಣ ಸೋತುಹೋದೆ, ನನಗೆ ಊರಿಗೆ ಮರಳಲು ಅನುಮತಿ ನೀಡಿ” ಎಂದು ಕೇಳಿಕೊಂಡ.

ಬೋಧಕ, “ಇನ್ನೂ ಮೂರು ದಿನ ಪ್ರಯತ್ನ ಮಾಡು” ಅಂದ

“ಆಗಲೂ ಸಾಧ್ಯವಾಗದೆಹೋದರೆ?” ವಿದ್ಯಾರ್ಥಿಯ ಅನುಮಾನ.

“ಆಗಲೂ ಸಾಧ್ಯವಾಗದೆಹೋದರೆ, ಮೂರನೇ ದಿನಾಂತದಲ್ಲಿ ನೇಣು ಹಾಕಿಕೊಂಡು ಸಾಯುವುದು ಒಳ್ಳೆಯದು” ಅಂದ ಸುಯಿವೊ.

ಎರಡನೇ ದಿನ ಕಳೆಯುವ ಮೊದಲೇ ವಿದ್ಯಾರ್ಥಿಗೆ ಜ್ಞಾನೋದಯವಾಯ್ತು!

4 Comments

  1. ಜನರಿಗೆ ಆಧ್ಯಾತ್ಮಿಕತೆಯ ಜೊತೆಗೆ ಜ್ಞಾನದ ಹಸಿವನ್ನು ಉಣಬಡಿಸುತ್ತಿರುವ ಅರಳಿ ಮರ ಪೇಜ್ ಗೆ ಧನ್ಯವಾದಗಳು.

Leave a Reply