ರಾ-ಉಮ್‌ಳ ಆಶ್ರಮದಲ್ಲಿ ದಿನದ ಎಲ್ಲಾ ಹೊತ್ತೂ ಕಲಿಕೆಯ ಕ್ಷಣಗಳೇ. ಆದರೆ ಶಿಷ್ಯರ ಮಟ್ಟಿಗೆ ಸಂಜೆಗಳು ಹೆಚ್ಚು ಮುಖ್ಯವಾಗಿದ್ದವು. ಈ ಸಂಜೆಗಳಲ್ಲಿ ರಾ-ಉಮ್ ತನ್ನ ಶಿಷ್ಯರನ್ನು ಪರೀಕ್ಷಿಸುತ್ತಿದ್ದಳು.
ಇಂಥದ್ದೊಂದು ಸಂಜೆಯಲ್ಲಿ ರಾ-ಉಮ್ ಶಿಷ್ಯರನ್ನುದ್ದೇಶಿಸಿ ಕೇಳಿದಳು ‘ನೀವು ಏನಾಗಬೇಕೆಂದು ಬಯಸುತ್ತೀರಿ?’
ಉತ್ತರಗಳ ಸುರಿಮಳೆ ಆರಂಭವಾಯಿತು.
ಒಬ್ಬ ಅಂದ “ನಾನು ಗುರುವಾಗುತ್ತೇನೆ’. ಮತ್ತೊಬ್ಬ ಹೇಳಿದ ‘ಸಂತನಾಗುತ್ತೇನೆ’. ಮತ್ತೊಬ್ಬ ಉಸುರಿದ ‘ಏನೂ ಆಗುವುದಿಲ್ಲ.’
ರಾ-ಉಮ್ ಪ್ರತಿಕ್ರಿಯಿಸಲಿಲ್ಲ. ಶಿಷ್ಯರು ಗೊಂದಲದಲ್ಲಿ ಬಿದ್ದರು.
ಆ ಹೊತ್ತಿಗೆ ಹೊರಗೆಲ್ಲೋ ಅಲೆಯುತ್ತಿದ್ದ ವಾ-ಐನ್ ಸಾಇಲ್ ಒಳಬಂದ. ಸೆಖೆಯಲ್ಲಿ ಸಂಪೂರ್ಣ ಬೆವೆತಿದ್ದ ಅವನು ಮೈಒರೆಸಿಕೊಳ್ಳುತ್ತಲೇ ಬಂದು ಗುರುವಿನೆದುರು ಕುಳಿತ.
ರಾ-ಉಮ್ ಬುರುಡೆಯಿಂದ ಒಂದು ಗುಟುಕನ್ನು ಗಂಟಲಿಗಿಳಿಸಿ ವಾ-ಐನ್‌ನನ್ನು ಕೇಳಿದಳು, ‘ನೀನೇನಾಗುವೆ?’
ಅವನು ಉತ್ತರಿಸಿದ ‘ನಾನು ಮಂಜುಗಡ್ಡೆಯಾಗುವೆ. ಕರಗುವಾಗ ನನ್ನಿಂದಲೇ ನನ್ನನ್ನು ತೊಳೆದುಕೊಳ್ಳಬಹುದು.’
ರಾ-ಉಮ್ ಅವನನ್ನು ಹತ್ತಿರ ಕರೆದು ‘ನಿನಗೆ ಬಾಯಾರಿಕೆಯಾಗಿದೆ. ಇದನ್ನು ಕುಡಿ’ ಎಂದು ತನ್ನ ಬುರುಡೆ ಕೊಟ್ಟು ವಿಶ್ರಾಂತಿಗೆ ಹೊರಟಳು.