ಸಮತೋಲನದಿಂದ ಶೂನ್ಯ ಸಾಧನೆಯಾಗುವುದು

ಬದುಕಿನಲ್ಲಿ ಎಲ್ಲ ವೈರುಧ್ಯಗಳನ್ನೂ ಒಟ್ಟಾಗಿ ಹೆಣೆಯಲಾಗಿದೆ. ಅವು ಒಟ್ಟಾಗಿ ಅಸ್ತಿತ್ವದಲ್ಲಿರುತ್ತವೆ. ಇದನ್ನು ನೆನಪಿಡಿ; ಸಮತೋಲನ ಸಾಧ್ಯವಾಗುತ್ತದೆ, ಆಗ ಧ್ಯಾನ ಸಂಭವಿಸುತ್ತದೆ ~ ಓಶೋ ರಜನೀಶ್

osho

ಮತೋಲನದಲ್ಲಿರುವುದು ಮನಸ್ಸಿಗೆ ಅಸಾಧ್ಯ ಅದು ಅತ್ಯಂತ ಕಷ್ಟವೆಂದೇ ತೋರುತ್ತದೆ. ಸಮತೋಲನದಲ್ಲಿರುವುದು ಎಂದರೆ ಶೂನ್ಯದಲ್ಲಿರುವುದು. ಒಂದು ವಿಚಾರದಿಂದ ಇನ್ನೊಂದು ವಿಚಾರಕ್ಕೆ ಸಾಗುವುದು ಅತ್ಯಂತ ಸುಲಭ. ಒಂದು ಧ್ರುವದಿಂದ ಇನ್ನೊಂದಕ್ಕೆ ಸಾಗುವುದು ಮನಸ್ಸಿನ ಲಕ್ಷಣ. ನೀವು ಸಮತೋಲನದಿಂದಿದ್ದರೆ, ಮನಸ್ಸು ಕಣ್ಮರೆಯಾಗುತ್ತದೆ. ನೀವು ಅಸಮತೋಲನಗೊಂಡಾಗ ಅದು ಅಲ್ಲಿರುತ್ತದೆ, ನೀವು ಸಮತೋಲನಗೊಂಡಾಗ ಅದು ಮರೆಯಾಗುತ್ತದೆ. ಆದ್ದರಿಂದಲೇ ಅತಿಯಾಗಿ ತಿನ್ನುವವರಿಗೆ ಉಪವಾಸ ಮಾಡುವುದು ಸುಲಭ.

ಈ ಮಾತು ಅತಾರ್ಕಿಕವೆಂದು ತೋರಬಹುದು. ಆಹಾರದ ಬಗ್ಗೆ ಕಡು ವ್ಯಾಮೋಹಿಯಾಗಿರುವವರು ಉಪವಾಸ ಮಾಡಲಾರರು ಎಂದುಕೊಳ್ಳುವಿರಿ. ಆದರೆ ತಪ್ಪು. ಆಹಾರದ ಬಗ್ಗೆ ಕಡು ವ್ಯಾಮೋಹಿಯಾದ ವ್ಯಕ್ತಿಯೇ ಉಪವಾಸ ಮಾಡಬಲ್ಲ. ಏಕೆಂದರೆ ಉಪವಾಸ ಎಂದರೆ ಅದೇ ಕಡು ವ್ಯಾಮೋಹ, ಆದರೆ ವಿರುದ್ಧ ದಿಕ್ಕಿನಲ್ಲಿ ಅಷ್ಟೆ. ನೀವು ನಿಮ್ಮನ್ನು ಬದಲಿಸಿಕೊಳ್ಳುತ್ತಿಲ್ಲ. ನೀವಿನ್ನೂ ಆಹಾರದ ಬಗ್ಗೆ ಕಡು ವ್ಯಾಮೋಹಿಯಾಗಿಯಿದ್ದೀರಿ. ಮೊದಲು ನೀವು ಅತಿಯಾಗಿ ತಿನ್ನುತ್ತಿದ್ದಿರಿ, ಈಗ ಹಸಿವೆಯಿಂದ ಇದ್ದೀರಿ. ಆದರೆ ಮನಸ್ಸು ಇನ್ನೂ ಆಹಾರದ ಕುರಿತೇ, ಆದರೆ ವಿರುದ್ಧ ದಿಕ್ಕಿನಲ್ಲಿ ಗಮನ ಕೇಂದ್ರೀಕರಿಸಿದೆ.

ದ್ವೇಷವೂ ಹಾಗೆಯೇ. ಒಂದು ವಿಷಯದ ಕುರಿತು ನಿಮಗೆ ಪ್ರೀತಿ ಇರದಿದ್ದರೆ, ಕಾಳಜಿ ಇರದಿದ್ದರೆ ಹೇಗೆ ತಾನೇ ದ್ವೇಷಿಸಬಲ್ಲಿರಿ? ಪ್ರೀತಿ ಎನ್ನುವುದು ಆತ್ಯಂತಿಕ ದ್ವೇಷದ ಸಂಬಂಧವೆಂದು ಆಧುನಿಕ ಸಂಶೋಧನೆ ಹೇಳುತ್ತದೆ. ನಮಗೆ ಇಷ್ಟು ಆಪ್ತರಾಗಿದ್ದವರು ಹೇಗೆ ಶತ್ರುಗಳಾಗಬಲ್ಲರು ಎಂದು ನಮಗೆ ಅಚ್ಚರಿಯಾಗುತ್ತದೆ; ಮೊದಲು ಗೆಳೆಯನಾಗಿದ್ದವರು ಈಗ ಹೇಗೆ ಶತ್ರುವಾಗಬಲ್ಲರು?

ತರ್ಕ ಮೇಲ್ಮಟ್ಟದಲ್ಲಿ ನಿಲ್ಲುತ್ತದೆ, ಆದರೆ ಬದುಕು ಆಳಕ್ಕೆ ಸಾಗುತ್ತದೆ. ಬದುಕಿನಲ್ಲಿ ಎಲ್ಲ ವೈರುಧ್ಯಗಳನ್ನೂ ಒಟ್ಟಾಗಿ ಹೆಣೆಯಲಾಗಿದೆ. ಅವು ಒಟ್ಟಾಗಿ ಅಸ್ತಿತ್ವದಲ್ಲಿರುತ್ತವೆ. ಇದನ್ನು ನೆನಪಿಡಿ; ಸಮತೋಲನ ಸಾಧ್ಯವಾಗುತ್ತದೆ, ಆಗ ಧ್ಯಾನ ಸಂಭವಿಸುತ್ತದೆ.

ಬದುಕಿನ ಸೌಂದರ್ಯವಿರುವುದೇ ಇಲ್ಲಿ. ಹೀಗೆ ಶೂನ್ಯದಲ್ಲಿ ಇರುವುದರಲ್ಲಿ…..

Leave a Reply