ಬಹುತೇಕರ ಪಾಲಿಗೆ ಈ ತಿಂಗಳುಗಳು ಮಹಾ ಅತೃಪ್ತಿಯ ಮಾಸಗಳು. ಈ ಅತೃಪ್ತಿಯಿಂದ ಹೊರಗೆ ಬರದೆ ಹೋದರೆ ಉದ್ಯೋಗ ಸ್ಥಳದಲ್ಲಿ ನಮ್ಮ ಕಾರ್ಯಕ್ಷಮತೆ ಕಡಿಮೆಯಾಗುವುದು ಮಾತ್ರವಲ್ಲ, ನಮ್ಮ ವ್ಯಕ್ತಿತ್ವವೂ ಕಹಿಯಾಗಿಬಿಡುವ ಸಾಧ್ಯತೆಯಿರುತ್ತದೆ.
ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ನೀವೆಷ್ಟು ರೇಟಿಂಗ್ ಕೊಟ್ಟುಕೊಳ್ಳುತ್ತೀರಿ? ಈ ಪ್ರಶ್ನೆ ಕೇಳಿದಾಗ ಬಹುತೇಕವಾಗಿ ಎಲ್ಲರೂ ಐದಕ್ಕೆ ಐದೂ ಸ್ಟಾರ್’ಗಳನ್ನು ಕೊಟ್ಟುಕೊಳ್ಳುವ ಉತ್ಸಾಹ ತೋರುತ್ತಾರೆ. ಆದರೆ ನಿಮ್ಮ ಕೆಲಸಕ್ಕೆ ಸಿಗುವ ಪ್ರತಿಫಲದ ಕುರಿತು ನೀವೆಷ್ಟು ಸಂತೃಪ್ತರಾಗಿದ್ದೀರಿ? ಎಂದು ಕೇಳಿದರೆ ಕಣ್ಣು ಮೇಲೆ ಮಾಡುವವರೇ ಬಹಳ.
ಕೆಲವರಿಗೆ ತಾವು ಮಾಡುತ್ತಿರುವ ಕೆಲಸದಲ್ಲಿ ತೃಪ್ತಿ ಇರುವುದಿಲ್ಲ. ಜೊತೆಗೆ ಎಷ್ಟು ಮಾಡಿದರೂ ‘ಪ್ರಗತಿ ಸಾಧಿಸಲು ಸಾಧ್ಯವಾಗ್ತಿಲ್ಲ’ ಅನ್ನುವ ಹತಾಶೆ. ಕೆಲವರಿಗೆ ತಾವು ‘ಇರಬೇಕಾಗಿದ್ದ ಜಾಗದಲ್ಲಿ ಇಲ್ಲ’ ಅನ್ನುವ ಅಸಮಾಧಾನ. ವಿಶೇಷವಾಗಿ ಸ್ಯಾಲರಿ ಮತ್ತು ಪ್ರಮೋಶನ್’ಗೆ ತಳಕು ಹಾಕಿಕೊಂಡ ಮಾರ್ಚ್ – ಏಪ್ರಿಲ್ ತಿಂಗಳುಗಳಲ್ಲಿ ಈ ಚರ್ಚೆಗೆ ಹೆಚ್ಚು ಮಹತ್ವ.
ಬಹುತೇಕರ ಪಾಲಿಗೆ ಈ ತಿಂಗಳುಗಳು ಮಹಾ ಅತೃಪ್ತಿಯ ಮಾಸಗಳು. ಈ ಅತೃಪ್ತಿಯಿಂದ ಹೊರಗೆ ಬರದೆ ಹೋದರೆ ಉದ್ಯೋಗ ಸ್ಥಳದಲ್ಲಿ ನಮ್ಮ ಕಾರ್ಯಕ್ಷಮತೆ ಕಡಿಮೆಯಾಗುವುದು ಮಾತ್ರವಲ್ಲ, ನಮ್ಮ ವ್ಯಕ್ತಿತ್ವವೂ ಕಹಿಯಾಗಿಬಿಡುವ ಸಾಧ್ಯತೆಯಿರುತ್ತದೆ.
ಮೊದಲನೆಯದಾಗಿ; ನಾವು ಮಾಡುತ್ತಿರುವ ಕೆಲಸದಲ್ಲಿ ನಮಗೆ ಯಾಕೆ ತೃಪ್ತಿ ಸಿಗುತ್ತಿಲ್ಲ? ಎಂದು ನೋಡೋಣ. ಬಹುಶಃ ನಮ್ಮ ಆಸಕ್ತಿಯ ಕ್ಷೇತ್ರ ಬೇರೆಯೇ ಇರಬಹುದು. ಅಥವಾ ನಾವು ಬಯಸುವಷ್ಟು ಸ್ವಾತಂತ್ರ್ಯದೊಂದಿಗೆ ಕೆಲಸ ಮಾಡುವ ಅವಕಾಶವಿಲ್ಲದೆ ಹಾಗನ್ನಿಸುತ್ತಿರಬಹುದು. ಈಗ ನೀವೊಂದು ಕೆಲಸ ಮಾಡಿ. ನಿಮಗೆ ತೃಪ್ತಿ ಬೇಕೆ ಅಥವಾ ದುಡಿಮೆಯೇ ಎಂದು ನಿಮ್ಮನ್ನು ಕೇಳಿಕೊಳ್ಳಿ. ಇದು ನಿಮ್ಮ ಆತ್ಮಸಾಕ್ಷಿಯೊಡನೆ ನಡೆಸುವ ಮಾತುಕಥೆಯಾದ್ದರಿಂದ ದಯವಿಟ್ಟು ಪ್ರಾಮಾಣಿಕವಾಗಿರಿ. ನಿಮ್ಮ ಆತ್ಮಸಾಕ್ಷಿಯು ದಿನನಿತ್ಯದ ಅನ್ನಾಹಾರ, ಸಂಸಾರ ಮೊದಲಾದ ಕಾರಣಗಳನ್ನಿಟ್ಟು “ದುಡಿಮೆಯೇ ಮುಖ್ಯ” ಎಂದು ಉತ್ತರಿಸಿದರೆ, ನೀವು ದುಡಿಮೆಗೆ ಕೃತಜ್ಞರಾಗಿರಬೇಕು. ಏಕೆಂದರೆ ಅದು ನಿಮಗೆ ಸ್ವಾಭಿಮಾನದ ಅನ್ನವನ್ನು ನೀಡುತ್ತಿದೆ. ಅಕಸ್ಮಾತ್ ಅದು ನಿಮಗೆ “ತೃಪ್ತಿಯೇ ಮುಖ್ಯ” ಎಂದು ಹೇಳಿದರೆ, ನೀವು ನಿಮ್ಮ ಕೆಲಸವನ್ನು ಬಿಟ್ಟು ಯಾವುದು ತೃಪ್ತಿ ಕೊಡುತ್ತದೆಯೋ ಅದನ್ನು ಅರಸಿ ಹೋಗಬೇಕಾಗುತ್ತದೆ, ಏಕೆಂದರೆ ತೃಪ್ತಿ ಸಿಗುವಂಥದ್ದಲ್ಲ, ನೀವು ಕಂಡುಕೊಳ್ಳಬೇಕಾದ್ದು. ಅದು ಹುಡುಕಿಕೊಳ್ಳಬೇಕಾದ್ದು.
ನೀವು ತೃಪ್ತರಾಗಿಲ್ಲ ಎಂದರೆ, ಅದಕ್ಕೆ ಕಾರಣ ನೀವೇ ಆಗಿದ್ದೀರಿ. ನೀವು ಕೆಲಸ ಮಾಡುತ್ತಿರುವ ಸಂಸ್ಥೆಗೆ ಅದರದ್ದೇ ಆದ್ಯತೆಗಳಿರುತ್ತವೆ, ನೀವು ಬಯಸುವ ಸ್ವಾತಂತ್ರ್ಯವನ್ನು ಕೊಡಲು ಅದಕ್ಕೆ ತನ್ನದೇ ಮಿತಿಗಳಿರಬಹುದು. ಆದ್ದರಿಂದ ನೀವು ನಿಮ್ಮ ಬದುಕನ್ನು ಸಮತೋಲನದಲ್ಲಿ ಇರಿಸುವ ದುಡಿಮೆ ಮುಖ್ಯ ಎಂದು ಭಾವಿಸಿದರೆ, ಅದನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ಹೊಂದಾಣಿಕೆ ಅನ್ನುವ ಪದ ಬೇಡ. ಹೊಂದಾಣಿಕೆಯಿಂದ ಪೂರ್ಣ ಪ್ರಮಾಣದ ಫಲ ದೊರೆಯುವುದಿಲ್ಲ. ಅಥವಾ ಕೆಲಸ ಬಿಟ್ಟು ತೃಪ್ತಿಯನ್ನು ಅರಸಿ ಹೊರಡಿ. ಗೊಣಗುತ್ತಾ ಕೂರುವುದರಿಂದ ನಿಮ್ಮ ಅತೃಪ್ತಿ ಬಗೆಹರಿಯುವುದಿಲ್ಲ, ಬೆಳವಣಿಗೆಯೂ ಸಾಧ್ಯವಾಗುವುದಿಲ್ಲ.
ಎರಡನೆಯದಾಗಿ; “ನಾನು ಇರಬೇಕಾದ ಜಾಗದಲ್ಲಿ ಇಲ್ಲ” ಅನ್ನುವ ಯೋಚನೆ. ನೀವು ಇರಬೇಕಾದಲ್ಲಿ ಇಲ್ಲ ಎಂದು ಯೋಚಿಸುತ್ತಿದ್ದೀರಿ. ಹಾಗಾದರೆ ನೀವು ಎಲ್ಲಿರಬೇಕಿತ್ತು ಎಂದು ನೀವು ಭಾವಿಸುತ್ತೀರಿ? ಆ ಸ್ಥಾನವನ್ನು ತಲುಪಲು ನೀವು ಸಂಪೂರ್ಣ ಸಾಮರ್ಥ್ಯವನ್ನು ತೊಡಗಿಸಿದ್ದಿರಾ? ನಿಮ್ಮ ದೃಷ್ಟಿಕೋನದಿಂದ ನೀವು ಮೌಲ್ಯಮಾಪನ ಮಾಡಿಕೊಂಡರೆ ಸಾಲದು. ನೀವು ಒಂದು ವ್ಯವಸ್ಥೆಯ ಭಾಗವಾಗಿ ಕೆಲಸ ಮಾಡುತ್ತ ಇರುತ್ತೀರಿ. ವ್ಯವಸ್ಥೆಗೆ ಕೆಲಸದಲ್ಲಿ ನಿಮ್ಮ ಔಟ್ ಪುಟ್ ಮಾತ್ರ ಮುಖ್ಯವಾಗಿರುವುದಿಲ್ಲ. ನಿಮ್ಮ ಇರುವಿಕೆ, ನಿಮ್ಮ ನಡವಳಿಕೆ, ಸ್ನೇಹಪರತೆ, ಸಂಸ್ಥೆಯ ಪ್ರತಿನಿಧಿಯಾಗಿ ನಿಮ್ಮ ಕೊಡುಗೆ ಇತ್ಯಾದಿಗಳೂ ಮುಖ್ಯವಾಗುತ್ತವೆ. ಈ ಕಾರಣದಿಂದ ನೀವು ಯಾವ ಜಾಗದಲ್ಲಿದ್ದೀರೋ ಆ ಜಾಗಕ್ಕೆ ಏರಿರುತ್ತೀರಿ ಇಲ್ಲವೇ ಹಾಗೆಯೇ ಇದ್ದಲ್ಲೇ ಇರುತ್ತೀರಿ.
ಅಕಸ್ಮಾತ್, ಹಾಗಿಲ್ಲದೆ ಇನ್ಯಾರದೋ ವಶೀಲಿ, ಪಕ್ಷಪಾತ ಅಥವಾ ಈ ದಿನಗಳ ಸಾಮಾನ್ಯ ಪದವಾದ ‘ಬಕೆಟ್’ ಹಿಡಿಯುವ ಕಾರಣದಿಂದ ಮತ್ತೊಬ್ಬರು ನಿಮಗಿಂತ ಮೇಲೆ ಹೋಗಿದ್ದಾರೆ ಎಂದಿಟ್ಟುಕೊಳ್ಳಿ. ಆಗಲೂ ನೀವು ಗೊಣಗಬೇಕಾದ್ದಿಲ್ಲ. ನೀವು ಪ್ರಾಮಾಣಿಕರಾಗಿದ್ದೀರಿ. ಮತ್ತೊಬ್ಬರು ಅಡ್ಡ ದಾರಿ ಬಳಸಿ ನಿಮಗಿಂತ ಮೇಲಿನ ಸ್ಥಾನಕ್ಕೆ ಹೋಗಿರಬಹುದು. ಆದರೆ ಇದರಿಂದ ನಿಮ್ಮ ಸ್ಥಾನಕ್ಕೇನೂ ಚ್ಯುತಿ ಬಂದಿಲ್ಲ. ನಿಮ್ಮ ಪ್ರಾಮಾಣಿಕತೆಯ ಫಲವಾಗಿ ನೀವು ಯಾವ ಜಾಗದಲ್ಲಿ ಇರಬೇಕೋ ಅಲ್ಲಿದ್ದೀರಿ. ಅಷ್ಟು ಸಾಕು! ಮತ್ತೊಬ್ಬರು ತಪ್ಪು ದಾರಿಯಿಂದ ಹೆಚ್ಚಿನ ಸ್ಥಾನ ಪಡೆದರೆಂದು ನೀವು ಬೇಸರಿಸಿಕೊಂಡರೆ, ನಿಮ್ಮ ಪ್ರಾಮಾಣಿಕತೆಯ ಬಗ್ಗೆಯೂ ನೀವು ಬೇಸರಪಟ್ಟಂತೆಯೇ. ನಿಮಗೆ ನಿಮ್ಮ ಆಯ್ಕೆಯ ಬಗ್ಗೆ ಸಮಾಧಾನ ಇರುವುದಾದರೆ, ಹೆಮ್ಮೆ ಇರುವುದಾದರೆ, ಮತ್ತೊಬ್ಬರ ಅಡ್ಡಕಸುಬಿನ ಬಗ್ಗೆ ಯೋಚಿಸುತ್ತಾ ಸಮಯವನ್ನೂ ನೆಮ್ಮದಿಯನ್ನೂ ಹಾಳು ಮಾಡಿಕೊಳ್ಳಬೇಡಿ. ನಿಮ್ಮ ಕೆಲಸ ನೀವು ಮಾಡುತ್ತಾ ಹೋಗಿ.
ನಮಗೆ ನಾವು ಬಯಸಿದ ಸ್ಥಾನ ಮಾನ ಸಿಗುತ್ತದೆಯೋ ಇಲ್ಲವೋ, ಪ್ರಮೋಶನ್ ಸಿಗುವುದೋ ಬಿಡುವುದೋ, ಸಂಬಳ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಾಗ್ತದೆಯೋ ಅಥವಾ ಹೆಚ್ಚು ಮಾಡುವುದೇ ಇಲ್ಲವೋ…. ಉದ್ಯೋಗ ನಮಗೆ ಎರಡು ಹೊತ್ತಿನ ಊಟ ಮತ್ತು ತಲೆಯ ಮೇಲೊಂದು ಸೂರನ್ನು ಒದಗಿಸಿರುತ್ತದೆ. ಅದಕ್ಕೆ ನಾವು ಕೃತಜ್ಞರಾಗಿರಬೇಕು. ನಮ್ಮ ಗೊಣಗಾಟ ನಾವು ಅದಕ್ಕೆ ಮಾಡುವ ಅವಮಾನ.
ಆದ್ದರಿಂದ, ಎಲ್ಲ ಮುನಿಸು, ಸೆಡವುಗಳನ್ನೂ ಬಿಟ್ಟು ಖುಷಿಯಾಗಿರಿ. ನಿಮ್ಮ ಖುಷಿಯ ಚಹರೆಯೂ ನಿಮ್ಮ ಏಳ್ಗೆಯಲ್ಲಿ ದೊಡ್ಡ ಪಾತ್ರ ವಹಿಸುತ್ತದೆ ಅನ್ನುವುದು ನೆನಪಿರಲಿ!