ರಾ-ಉಮ್‌ಳ ಆಶ್ರಮಕ್ಕೆ ಬರುತ್ತಿದ್ದವರು ಕೇವಲ ವಿದ್ಯಾರ್ಜನೆಯ ಉದ್ದೇಶವುಳ್ಳವರಷ್ಟೇ ಆಗಿರಲಿಲ್ಲ. ಭಿನ್ನ ಆಶ್ರಮಗಳ ಗುರುಗಳೂ ಬರುತ್ತಿದ್ದರು. ತಮ್ಮ ವಿಚಾರಗಳನ್ನು ರಾ-ಉಮ್ ಜೊತೆಗೆ ಚರ್ಚೆಯ ನಿಕಷಕ್ಕೆ ಒಡ್ಡುತ್ತಿದ್ದರು. ಇಂಥ ಚರ್ಚೆಗಳು ರಾ-ಉಮ್ ವಿದ್ಯಾರ್ಥಿಗಳ ಮಟ್ಟಿಗೆ ಬಹುದೊಡ್ಡ ಪಾಠಗಳಾಗಿರುತ್ತಿದ್ದವು.
ಇಂಥದ್ದೊಂದು ಚರ್ಚೆಗೆ ಪಶ್ಚಿಮದ ಗುರುಗಳೊಬ್ಬರು ಬಂದಿದ್ದರು. ಜ್ಞಾನದ ವೈಧಾನಿಕತೆಯ ಬಗ್ಗೆ ಆಳವಾದ ಅರಿವಿದ್ದ ಅವರು ಸಂಜೆಯ ಪಾನೀಯ ಸೇವನೆಯ ಹೊತ್ತಿನಲ್ಲಿ ರಾ-ಉಮ್ ಎದುರು ಒಂದು ಪ್ರಶ್ನೆಯನ್ನಿಟ್ಟರು.
‘ಬೋಧನೆ ಎಂದರೇನು?’
ರಾ-ಉಮ್ ಈ ಪ್ರಶ್ನೆಗೆ ಉತ್ತರಿಸಲೇ ಇಲ್ಲ.
ಆ ಪಶ್ಚಿಮದ ಗುರು ಹೇಳಿದರು ‘ಪೂರ್ವದ ಜ್ಞಾನಕ್ಕೆ ವೈಧಾನಿಕತೆಯ ಪರಂಪರೆಯೇ ಇಲ್ಲ. ಆದ್ದರಿಂದ ನಿಮ್ಮಲ್ಲಿ ಈ ಪ್ರಶ್ನೆ ಉತ್ತರ ದೊರೆಯಲಾರದು’ ಎಂದರು.
ರಾ-ಉಮ್ ತನ್ನ ಪಾನೀಯದ ಬುರುಡೆಯನ್ನೆತ್ತಿ ಅದರೊಳಗೆ ಇದ್ದುದನ್ನು ಒಂದೇ ಪೆಟ್ಟಿಗೆ ಮುಗಿಸಿ ಪಕ್ಕಕ್ಕೆ ಇಟ್ಟು ವಾ-ಐನ್-ಸಾಇಲ್‌ನನ್ನು ಕರೆದಳು; ‘ಗುರುಗಳ ಪ್ರಶ್ನೆಗೆ ನಿನ್ನಲ್ಲಿ ಉತ್ತರವಿದೆಯೇ?’ ಎಂದು ಕೇಳಿದಳು
ವಾ-ಐನ್ ಹತ್ತಿರ ಬಂದು ರಾ-ಉಮ್‌ಳ ಪಾನೀಯದ ಬುರುಡೆಯನ್ನು ತೆರೆದು ತೋರಿಸಿದ.
ಪಶ್ಚಿಮದ ಗುರುಗಳು ಸಿಟ್ಟಿನಿಂದ ಹೇಳಿದರು ‘ಅದೇ… ನಿಮ್ಮ ಬುರುಡೆ ಖಾಲಿ!’
‘ಬೋಧನೆ ಎಂದರೆ ಖಾಲಿಯಾಗಿರುವುದನ್ನು ತೆರೆಯುವುದು’ ಎಂದಳು ರಾ-ಉಮ್.
ಆ ಗುರು ಅಂದಿನಿಂದ ರಾ-ಉಮ್ ಆಶ್ರಮದ ವಿದ್ಯಾರ್ಥಿಯಾದರು!
~ ಯಾದಿರಾ