ಕಥಾ ಸರಿತ್ಸಾಗರ : ಶಿವನು ಸ್ಮಶಾನವಾಸಿಯಾಗಿದ್ದು ಯಾಕೆ? : ಕಾಣಭೂತಿ ಹೇಳಿದ ಕಥೆ

ವಿಂಧ್ಯಾಟವಿಯಲ್ಲಿ ಕಾಣಭೂತಿ ಮತ್ತು ವರರುಚಿಯ ಭೇಟಿಯಾಯಿತು. ವರರುಚಿಯು ಕಾಣಭೂತಿಯ ಬಗ್ಗೆ ವಿಚಾರಿಸಿದಾಗ, ಅವನು ಶಿವ ಪಾರ್ವತಿಯರಿಂದ ತನ್ನ ಬಗ್ಗೆ ತನಗೆ ತಿಳಿದುಬಂದ ವಿಷಯಗಳನ್ನು ಹೇಳತೊಡಗಿದನು. ಅದರ ಜೊತೆಗೆ ಶಿವಪಾರ್ವತಿಯರು ಸೃಷ್ಟಿಯ ಬಗ್ಗೆ ನಡೆಸಿದ ಸಂವಾದವನ್ನೂ ಅವನು ಯಥಾವತ್ತಾಗಿ ಹೇಳಿದನು.

katha

ಪ್ರಳಯ ಉಂಟಾಗಿ ಯುಗಾಂತಗೊಂಡಾಗ ಎಲ್ಲೆಲ್ಲೂ ನೀರೇ ತುಂಬಿಕೊಂಡಿತ್ತು. ಆಗ ಶಿವನು ತನ್ನ ತೊಡೆಯನ್ನು ಸೀಳಿ ರಕ್ತದ ಹನಿಯೊಂದನ್ನು ಅದರಲ್ಲಿ ಬೀಳಿಸಿದನು. ನೀರಲ್ಲಿ ಬಿದ್ದ ಆ ಹನಿಯು ಮೊಟ್ಟೆಯಾಯಿತು. ಅದನ್ನು ಎರಡು ಭಾಗಗಳಾಗಿ ಒಡೆದಾಗ ಒಂದು ಭಾಗದಿಂದ ಪುರುಷನೂ ಮತ್ತೊಂದರಿಂದ ಪ್ರಕೃತಿಯೂ ಹುಟ್ಟಿದರು. ಶಿವನು ಅವರನ್ನು ಕುರಿತು “ಸೃಷ್ಟಿಯು ನಡೆಯಲಿ” ಎಂದು ಆದೇಶಿಸಿದನು. ಆಗ ಪ್ರಕೃತಿ ಪುರುಷರು ಸೇರಿ ಪ್ರಜಾಪತಿಗಳನ್ನು ಸೃಷ್ಟಿಸಿದರು. ಆ ಪ್ರಜಾಪತಿಗಳು ಪ್ರಜೆಗಳನ್ನು ಸೃಷ್ಟಿಸಿದರು. ಆದ್ದರಿಂದ ಆ ಪುರುಷನು ‘ಪಿತಾಮಹ’ನೆಂದು ಪ್ರಖ್ಯಾತನಾದನು,

ತನ್ನ ಖ್ಯಾತಿಯ ಬಗ್ಗೆ ಪಿತಾಮಹನು ಗರ್ವ ಪಡತೊಡಗಿದನು. ಚರಾಚರ ವಿಶ್ವವನ್ನು ಸೃಷ್ಟಿಸಿದ ತಾನು ಏನು ಬೇಕಾದರೂ ಮಾಡಬಲ್ಲೆ ಎಂದು ಭಾವಿಸಿ ಅಹಂಕಾರಪಟ್ಟನು. ಆಗ ಶಿವನು ಗರ್ವ ತುಂಬಿದ ಅವನ ತಲೆಯನ್ನು ಕತ್ತರಿಸಿ ಹಾಕಿದನು. ನಂತರದಲ್ಲಿ ಆ ಬಗ್ಗೆ ಅನುತಾಪ ಉಂಟಾಗಿ ಭಿಕ್ಷೆ ಬೇಡಿ ತಿನ್ನುವ ಮಹಾವ್ರತವನ್ನು ಸ್ವೀಕರಿಸಿದನು. ಅದಕ್ಕಾಗಿ ಯಾವ ಪಿತಾಮಹನ ತಲೆಯನ್ನು ಕತ್ತರಿಸದ್ದನೋ ಅದರದ್ದೇ ಕಪಾಲವನ್ನು ಕೈಯಲ್ಲಿ ಹಿಡಿದನು. ಅಂದಿನಿಂದ ಅವನಿಗೆ ಸ್ಮಶಾನವಾಸವೂ ಪ್ರಿಯವಾಯಿತು.

ಶಿವನು ತನ್ನ ಈ ಕಥೆಯನ್ನು ಪಾರ್ವತಿಗೆ ಹೇಳಿ, “ದೇವೀ, ಈ ಕಪಾಲದ ರೂಪದಲ್ಲಿ ಇಡಿಯ ಜಗತ್ತೇ ನನ್ನ ಕೈಲಿದೆ. ಹಿಂದೆ ನಾನು ಹೇಳಿದ ಒಡೆದ ಮೊಟ್ಟೆಯ ಎರಡು ಚಿಪ್ಪುಗಳೇ ಭೂಮಿ – ಆಕಾಶಗಳು” ಎಂದನು.

ಶಿವನು ಹೇಳಿದ್ದನ್ನೆಲ್ಲ ಕೇಳಿದ ಮೇಲೆ ಪಾರ್ವತಿಯು ಪುಷ್ಪದಂತನಿಗೆ ಶಾಪ ವಿಮೋಚನೆ ಯಾವಾಗ ಆಗುವುದು ಎಂದು ಪ್ರಶ್ನಿಸಿದಳು. ಆಗ ಶಿವನು ಕಾಣಭೂತಿಯನ್ನು ತೋರಿಸುತ್ತಾ, “ಈ ಕಾಣಭೂತಿಯು ಕುಬೇರನ ಸೇವಕನಾಗಿದ್ದವನು. ಶಪಿತನಾಗಿ ಪಿಶಾಚವಾಗಿದ್ದಾನೆ. ವಿಂಧ್ಯಾಟವಿಯಲ್ಲಿ ಪುಷ್ಪದಂತನು ಈತನಿಗೆ ಬೃಹತ್ಕಥೆಯನ್ನು ಹೇಳಿದಾಗ ಪುಷ್ಪದಂತನಿಗೆ ಶಾಪವಿಮೋಚನೆಯಾಗುವದು; ಅದನ್ನು ಕೇಳಿಸಿಕೊಂಡು ಮಾಲ್ಯವಂತನಿಗೆ ಹೇಳಿದಾಗ ಕಾಣಭೂತಿಯ ಶಾಪವಿಮೋಚನೆಯಾಗುವುದು” ಎನ್ನುತ್ತಾನೆ.

ಹೀಗೆ ಶಿವನಿಂದ ತನ್ನ ಯಕ್ಷ ಜನ್ಮದ ಬಗ್ಗೆ, ಶಾಪವಿಮೋಚನೆಯ ಬಗ್ಗೆ ತಿಳಿದ ಕಾಣಭೂತಿಯು ವಿಂಧ್ಯಾಟವಿಗೆ ಬಂದು ನೆಲೆಸಿದ್ದನ್ನು ವರರುಚಿಗೆ ಹೇಳಿದನು. ಇದನ್ನು ಕೇಳುತ್ತಲೇ ವರರುಚಿಗೆ ತನ್ನ ಪೂರ್ವಜನ್ಮ ಸ್ಮರಣೆ ಉಂಟಾಯಿತು. ತಾನೇ ಆ ಪುಷ್ಪದಂತ ಎಂದು ಪರಿಚಯ ಮಾಡಿಕೊಂಡಾಗ ಕಾಣಭೂತಿಯು, “ವರರುಚಿಯಾಗಿ ಜನಿಸಿದ ನಿನ್ನ ವೃತ್ತಾಂತವನ್ನು ಹೇಳು” ಎಂದು ಕೇಳಿಕೊಂಡನು.

(ಮುಂದಿನ ಭಾಗ : ವರರುಚಿಯ ವೃತ್ತಾಂತ)

Leave a Reply