ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ತುದಿಗಾಲ ಮೇಲೆ ನಿಂತವ
ಉರುಳಿ ಬೀಳುವ ಸಾಧ್ಯತೆಗಳೇ ಹೆಚ್ಚು.
ಎಲ್ಲರಿಗಿಂತ ಮುಂದೆ ಓಡಿ ಹೋದವ
ಬಹಳ ದೂರ ಹೋಗಲಾರ.
ಮಿಂಚಲು ಪ್ರಯತ್ನಿಸುವವನ
ಬೆಳಕು, ಕಂದುತ್ತ ಹೋಗುವುದು.
ತನ್ನನ್ನು ತಾನು ಸಾರಿಕೊಳ್ಳುವವ
ತನಗೆ ತಾನೇ ಅಪರಿಚಿತ.
ಪರರ ಮೇಲೆ ಹತೋಟಿ ಸಾಧಿಸಬಲ್ಲವ
ತನ್ನ ಮೇಲೆ ಅಧಿಕಾರ ಹೊಂದಲು ಅಸಮರ್ಥ.
ಕೆಲಸಕ್ಕೆ ಜೋತು ಬೀಳುವವ
ಶಾಶ್ವತವಾದದ್ದನ್ನು ಸೃಷ್ಟಿಸಲಾರ.
ಮಾಡಬೇಕಾದ ಕೆಲಸ ಮಾಡಿ
ಮರೆತುಬಿಟ್ಟಾಗ ಮಾತ್ರ
‘ತಾವೋ’ ಜೊತೆಗೆ ಒಪ್ಪಂದ ಸಾಧ್ಯ.