ಸ್ಯೂಸ್ ದೇವನ ಕರುಣೆಯಿಂದ ತನಗೆ ಈ ಪದವಿ ಸಿಕ್ಕಿದೆ ಎಂದು ಕೃತಜ್ಞನಾಗಿದ್ದ ಗಾರ್ಡಿಯಸ್, ತನ್ನ ಗಾಡಿಯನ್ನು ಸ್ಯೂಸ್ ದೇವ ಮಂದಿರಕ್ಕೆ ಅರ್ಪಿಸಿದ. ಅದನ್ನು ಮಂದಿರದ ಕಂಬವೊಂದಕ್ಕೆ ಹಗ್ಗದಿಂದ ಕಟ್ಟಿ, ಗಂಟು ಹಾಕಿದ. ಅವನು ಅದೆಷ್ಟು ವಿಚಿತ್ರವಾಗಿ ಗಂಟು ಹಾಕಿದ್ದನೆಂದರೆ, ಅದನ್ನು ಬಿಚ್ಚಲು ಯಾರಿಗೂ ಸಾಧ್ಯವಾಗಲೇ ಇಲ್ಲ!
ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ
ಫ್ರಿಜಿಯ ಎಂಬುದೊಂದು ದೇಶ. ಅಲ್ಲೊಬ್ಬ ದೊರೆಯಿದ್ದ. ಅವನು ವಯಸ್ಸಾದ ಮೇಲೆ ಸತ್ತುಹೋದ. ಆ ದೊರೆಗೆ ಮಕ್ಕಳಿರಲಿಲ್ಲವಾಗಿ, ಮುಂದೆ ದೇಶವನ್ನು ಆಳುವವರು ಯಾರು ಅನ್ನುವ ಪ್ರಶ್ನೆ ಹುಟ್ಟಿಕೊಂಡಿತು. ಹತ್ತು ಸಮಸ್ತರು ಮಾತಾಡಿಕೊಂಡು ಸ್ಯೂಸ್ ದೇವನ ಮಂದಿರಕ್ಕೆ ಹೋಗಿ ಪ್ರಶ್ನೆ ಮುಂದಿಟ್ಟರು. ಸ್ಯೂಸ್ ದೇವವಾಣಿಯು ಅವರಿಗೆ, “ನೀವು ಮರಳಿ ಹೋಗುವಾಗ ನಿಮ್ಮ ದಾರಿಗೆದುರಾಗಿ ಮೊದಲು ಯಾರು ಸಿಗುತ್ತಾನೋ ಅವನನ್ನೇ ಫ್ರಿಜಿಯ ದೇಶದ ರಾಜನನ್ನಾಗಿ ಪಟ್ಟ ಕಟ್ಟಿ” ಎಂದು ಸೂಚಿಸಿತು.
ಹತ್ತು ಸಮಸ್ತರು ಮರಳಿ ಹೋಗುತ್ತಿರುವಾಗ ಚಕ್ಕಡಿ ಹೊಡೆದುಕೊಂಡು ಬರುತ್ತಿದ್ದ ಗಾರ್ಡಿಯಸ್ ಎಂಬ ರೈತ ಎದುರಾದ. ಅವನ ಚಕ್ಕಡಿಯ ಕಮಾನಿನ ಮೇಲೆ ಸ್ಯೂಸ್ ದೇವನ ವಾಹನ ಪಕ್ಷಿಯಾದ ಹದ್ದು ಕುಳಿತುಕೊಂಡಿತ್ತು. “ಇದಕ್ಕಿಂತ ಸೂಚನೆ ಬೇಕೆ?” ಎಂದು ಮಾತಾಡಿಕೊಂಡ ಅವರು, ಗಾರ್ಡಿಯಸ್’ನನ್ನು ಅಡ್ಡಗಟ್ಟಿ ವಿಷಯ ತಿಳಿಸಿದರು. ಕೇಂದ್ರಕ್ಕೆ ಮರಳಿ, ಪ್ರಜೆಗಳ ಎದುರು ಸ್ಯೂಸ್ ದೇವವಾಣಿಯನ್ನೂ ಗಾರ್ಡಿಯಸ್ ಸಿಕ್ಕ ಬಗೆಯನ್ನೂ ವಿವರಿಸಿ, “ಇನ್ನು ಮುಂದೆ ಗಾರ್ಡಿಯಸನೇ ನಮ್ಮ ರಾಜ” ಎಂದು ಘೋಷಿಸಿದರು.
ಹೀಗೆ ಗಾರ್ಡಿಯಸ್ ಫ್ರಿಜಿಯ ದೇಶದ ರಾಜನಾಗಿ ಆಳ್ವಿಕೆ ಮಾಡತೊಡಗಿದ. ಸ್ಯೂಸ್ ದೇವನ ಕರುಣೆಯಿಂದ ತನಗೆ ಈ ಪದವಿ ಸಿಕ್ಕಿದೆ ಎಂದು ಕೃತಜ್ಞನಾಗಿದ್ದ ಅವನು, ತನ್ನ ಗಾಡಿಯನ್ನು ಸ್ಯೂಸ್ ದೇವ ಮಂದಿರಕ್ಕೆ ಅರ್ಪಿಸಿದ. ಅದನ್ನು ಮಂದಿರದ ಕಂಬವೊಂದಕ್ಕೆ ಹಗ್ಗದಿಂದ ಕಟ್ಟಿ, ಗಂಟು ಹಾಕಿದ. ಗಾರ್ಡಿಯಸ್ ಅದೆಷ್ಟು ವಿಚಿತ್ರವಾಗಿ ಗಂಟು ಹಾಕಿದ್ದನೆಂದರೆ, ಅದನ್ನು ಬಿಚ್ಚಲು ಯಾರಿಗೂ ಸಾಧ್ಯವಾಗಲಿಲ್ಲ. ಅದರ ತುದಿ ಎಲ್ಲಿದೆ, ಬುಡ ಎಲ್ಲಿದೆ ಎಂದು ಹುಡುಕಿಯೇ ಜನ ಸುಸ್ತಾಗುತ್ತಿದ್ದರು. “ಗಾರ್ಡಿಯಸ್ ಹಾಕಿದ ಗಂಟನ್ನು ಯಾರು ಬಿಚ್ಚುತ್ತಾರೋ ಅವರು ಏಷ್ಯಾ ಖಂಡಕ್ಕೆ ಚಕ್ರವರ್ತಿಯಾಗುತ್ತಾರೆ” ಎಂದು ದೇವವಾಣಿಯೂ ಘೋಷಿಸಿತು. ಎಲ್ಲೆಲ್ಲಿಂದ ಜನ ಬಂದು ಪ್ರಯತ್ನಿಸಿದರು. ಸೋತು ವಾಪಸಾದರು.
ಹೀಗೇ ವರ್ಷಗಳು ಕಳೆದು ಗಾರ್ಡಿಯಸ್ ಸತ್ತುಹೋದ. ಅವನು ಹಾಕಿದ ಗಂಟು ಮಾತ್ರ ಬಿಡಿಸಲಾಗದೆ ಹಾಗೇ ಉಳಿದಿತ್ತು. ಮತ್ತು ಅದರ ವಿಲಕ್ಷಣತೆ ಎಷ್ಟು ಪ್ರಸಿದ್ಧಿ ಪಡೆಯಿತು ಅಂದರೆ, ಬಿಡಿಸಲಾಗದ ಕಗ್ಗಂಟಿಗೆ ( ಬಿಡಿಸಲಾಗದ ಪ್ರಶ್ನೆ, ಸಮಸ್ಯೆ ಇತ್ಯಾದಿ) ‘ಗಾರ್ಡಿಯನ್ ಗಂಟು’ (ಗಾರ್ಡಿಯನ್ ನಾಟ್) ಎಂಬ ನುಡಿಗಟ್ಟಿನ ಬಳಕೆ ಚಾಲ್ತಿಗೆ ಬಂತು.
ಏಸಷ್ಯಾದ ಮೇಲೆ ದಂಡೆತ್ತಿ ಹೊರಟಿದ್ದ ಅಲೆಂಗ್ಸಾಡರ್, ಅದಕ್ಕೆ ಮುಂಚೆ ತನ್ನ ಅದೃಷ್ಟ ಪರೀಕ್ಷೆ ಮಾಡಿಬಿಡೋಣವೆಂದು ಫ್ರಿಜಿಯಾಕ್ಕೆ ತೆರಳಿ, ಸ್ಯೂಸ್ ದೇವನ ಮಂದಿರಕ್ಕೆ ಭೇಟಿ ನೀಡಿದ್ದನೆಂದೂ, ಅಲ್ಲಿ ಗಾರ್ಸಿಯನ್ ಗಂಟನ್ನು ಬಿಚ್ಚಲು ಪ್ರಯತ್ನಿಸಿ ಸೋತನೆಂದೂ ಹೇಳಲಾಗುತ್ತದೆ. ಕೊನೆಗೆ ಕೋಪಗೊಂಡ ಅಲೆಗ್ಸಾಂಡರ್ ತನ್ನ ಕತ್ತಿಯಿಂದ ಗಾರ್ಡಿಯಸ್ ಕಟ್ಟಿದ್ದ ಹಗ್ಗವನ್ನೇ ತುಂಡರಿಸಿಬಿಟ್ಟನಂತೆ. ಹೀಗೆ ಗಾರ್ಡಿಯನ್ ಗಂಟು ಕೊನೆಯಾದರೂ ನುಡಿಗಟ್ಟಾಗಿ ಜನಮನದಲ್ಲಿ ಹಸಿರಾಗಿದೆ.