ಕಾಲವೆಂಬ ಸತ್ಯ ಮತ್ತು ಭ್ರಮೆ

ಕಾಲವು ಅಸ್ತಿತ್ವ ಪಡೆಯುವುದೇ ಮತ್ತೊಂದು ವಸ್ತುವಿನ ಅವಲಂಬನೆಯ ಮೇಲೆ. ಇನ್ನೂ ಹೇಳಬೇಕೆಂದರೆ, ಕಾಲವೊಂದು ಭ್ರಮೆ. ನಾವು ಲೆಕ್ಕ ಹಾಕಿದರಷ್ಟೆ ಅದು ಉದ್ಭವವಾಗುವುದು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಉಳಿದರೆ ಕಾಲವೊಂದು ನಗಣ್ಯ ಸಂಗತಿಯಾಗಿಬಿಡುತ್ತದೆ.

ಸೃಷ್ಟಿಯಲ್ಲಿ ಅತ್ಯಂತ ನಿಗೂಢವೂ ವಿವರಣೆಗೆ ನಿಲುಕದ್ದೂ ಆದ ಸಂಗತಿಯೆಂದರೆ, ಅದು `ಕಾಲ’.  ಎಷ್ಟು ಸತ್ಯವೋ ಅಷ್ಟೇ ಭ್ರಮಾತ್ಮಕವೂ ಆಗಿರುವ ಸಂಗತಿ ಇದು. ಭಗವಂತನಂತೆಯೇ ಕಾಲವೂ. ಅಥವಾ ಭಗವಂತನೇ ಕಾಲ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು `ಕಾಲೋsಸ್ಮಿ ಲೋಕ ಕ್ಷಯ ಕಾರಕಃ’ ಅಂದಿದ್ದಾನೆ. ಲೋಕವನ್ನು ನಿರಂತರ ನಾಶದ ಅಂಚಿಗೆ ದೂಡುವ ಕಾಲ ನಾನೇ ಆಗಿದ್ದೇನೆ ಎಂಬುದು ಇದರರ್ಥ.

ಕಾಲನ ಅಸ್ತಿತ್ವವೆಂಬುದು ಸಾಪೇಕ್ಷ
ಕಾಲವೊಂದು ನಿಗೂಢ ಹಾಗೂ ವಿವರಣೆಗೆ ನಿಲುಕದ ಸಂಗತಿ. ಕಾಲದ ಚಲನೆಯ ಗತಿಯನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ವಿಶ್ವದ ನಿಯಮಗಳೆಲ್ಲವೂ ಸೇರಿ ಕಾಲವನ್ನು ರೂಪಿಸುತ್ತವೆ. ಗುರುತ್ವಾಕರ್ಷಣೆ, ವೇಗಗಳಂತಹ ಭೌತಿಕ ಸಂಗತಿಗಳೂ; ಸ್ಪಂದನೆ, ನಿರೀಕ್ಷೆಗಳಂತಹ ಭಾವುಕ ಸಂಗತಿಗಳೂ ಕಾಲದ ಅಸ್ತಿತ್ವ ಹಾಗೂ ಚಲನೆಯನ್ನು ನಿರ್ಧರಿಸುತ್ತವೆ. ಭೌತಿಕವಾಗಿ ನಿರ್ಧಾರಗೊಳ್ಳುವ ಕಾಲದ ಚಲನೆಯು ಆ ನಿರ್ದಿಷ್ಟ ಭೌತ ವಸ್ತುವು ಯಾರೆಲ್ಲರನ್ನು ತನ್ನ ಒಡಲಲ್ಲಿ ಹೊತ್ತುಕೊಂಡಿರುತ್ತದೆಯೋ ಆ ಎಲ್ಲರ ಪಾಲಿಗೆ ಸಮಾನವಾಗಿರುತ್ತದೆ. ಹಾಗೆಯೇ ಭಾವುಕವಾಗಿ ನಿರ್ಧಾರಗೊಳ್ಳುವ ಕಾಲದ ಚಲನೆಯು ಆ ನಿರ್ದಿಷ್ಟ ವ್ಯಕ್ತಿಯ ಅನುಭವಕ್ಕೆ ಮಾತ್ರ ನಿಲುಕುವಂಥದಾಗಿರುತ್ತದೆ.

ಉದಾಹರಣೆಗೆ, ಸೌರಮಂಡಲದ ಬೇರೆ ಬೇರೆ ಗ್ರಹಗಳಲ್ಲಿ ಕಾಲದ ಚಲನೆ ಬೇರೆಬೇರೆಯಾಗಿರುತ್ತದೆ. ಆದರೆ ಅಲ್ಲೆಲ್ಲೂ ಕಾಲದ ವೇಗದಲ್ಲಿ ಹೆಚ್ಚು ಕಡಿಮೆಯಾಗದೆ, ಆಯಾ ಗ್ರಹಗಳ ಚಲನೆಗೆ ತಕ್ಕಂತೆ ಕಾಲವನ್ನು ಅಳೆಯಲಾಗುತ್ತದೆ. ಆದ್ದರಿಂದ ಕಾಲವು ಅಸ್ತಿತ್ವ ಪಡೆಯುವುದೇ ಮತ್ತೊಂದು ವಸ್ತುವಿನ ಅವಲಂಬನೆಯ ಮೇಲೆ ಎಂದು ಹೇಳಬಹುದು. ಇನ್ನೂ ಹೇಳಬೇಕೆಂದರೆ, ಕಾಲವೊಂದು ಭ್ರಮೆ. ನಾವು ಲೆಕ್ಕ ಹಾಕಿದರಷ್ಟೆ ಅದು ಉದ್ಭವವಾಗುವುದು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಉಳಿದರೆ ಕಾಲವೊಂದು ನಗಣ್ಯ ಸಂಗತಿಯಾಗಿಬಿಡುತ್ತದೆ.
ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನನ ಒಂದು ಪ್ರಸಿದ್ಧ ಹೇಳಿಕೆಯೊಂದಿಗೆ ಇದನ್ನು ವಿವರಿಸಬಹುದು. `ನೀವು ಸುಂದರವಾದ ಹುಡುಗಿಯ ಜೊತೆಯಿರುವಾಗ ಯುಗವೊಂದು ಕ್ಷಣವಾಗಿ ಭಾಸವಾಗುವುದು. ಅದೇ ನೀವು ಬಿಸಿಲಿನಲ್ಲಿ ರೈಲಿಗೆ ಕಾಯುತ್ತ ಕುಳಿತಾಗ ಕ್ಷಣ ಕ್ಷಣವೂ ಯುಗವಾಗಿ ತೋರುವುದು’. ಐನ್‍ಸ್ಟೀನನ ಈ ಹೇಳಿಕೆಯು ಕಾಲದ ಸಾಪೇಕ್ಷ ಚಲನೆಯನ್ನು ಬಹಳ ಸರಳವಾಗಿ ನಿರೂಪಿಸುತ್ತದೆ. ಒಂದು ಆಯಾಮದಿಂದ ನೋಡಿದಾಗ ಕಾಲದ ಅಸ್ತಿತ್ವ ನಮ್ಮ ಸ್ಪಂದನೆಯ ಮೇಲೆ ಅವಲಂಬಿತವಾಗಿದೆ ಎಂದು ತಿಳಿಯಬಹುದು.

ಪರಿಣಾಮ ರೂಪಿ
ಕಾಲವು ವಿಶ್ವದ ಪ್ರತಿಸ್ಪಂದನೆಯನ್ನು ಅವಲಂಬಿಸಿರುವ ಹಾಗೆಯೇ ಅದರ ಮೇಲಾಗುವ ಪರಿಣಾಮವನ್ನೂ ಅವಲಂಬಿಸಿರುತ್ತದೆ. ಕಾಲದ ಬಗ್ಗೆ ಚಿಂತಿಸಲಿ, ಬಿಡಲಿ… ಅದರ ಅಸ್ತಿತ್ವವನ್ನು ಒಪ್ಪಿಕೊಳ್ಳಲಿಪಿಲ್ಲದಿರಲಿ…. ಪರಿಣಾಮವಂತೂ ಶತಃಸಿದ್ಧ. ಕಾಲದ ಕಣ್ಣಿಗೆ ಮಣ್ಣೆರಚಿ ಪರಿಣಾಮದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಕೇವಲ ಜೀವಿಗಳಷ್ಟೇ ಅಲ್ಲ, ಜಡ ವಸ್ತುಗಳೂ ಕಾಲದ ಪ್ರಭಾವಕ್ಕೆ ಒಳಗಾಗುತ್ತವೆ. ಹೆಬ್ಬಂಡೆಯೊಂದು ಸಾವಿರಾರು ವರ್ಷಗಳ ಕಾಲ ಮಾರ್ಪಾಡುಗೊಳ್ಳುತ್ತ ಮರಳಿನ ರೂಪ ತಾಳುವುದೂ ಉಷ್ಣತೆ ಹಾಗೂ ಒತ್ತಡದಲ್ಲಿ ರೂಪುಗೊಂಡ ಕಲ್ಲಿದ್ದಲು ವಜ್ರವಾಗಿ ಮಾರ್ಪಟುಗೊಳ್ಳಲು ಸಹಸ್ರಮಾನಗಟ್ಟಲೆ ಅವಧಿ ತಗಲುವುದು. ಹಣ್ಣೊಂದು ಕೊಳೆಯುವುದೂ ಕಾಲದ ಮಹಿಮೆಯಿಂದಲೇ. ಮಗುವೊಂದು ಬೆಳೆದು ಮುಪ್ಪಾಗುವುದೂ ಕಾಲದ ಕರಾಮತ್ತೇ ಆಗಿದೆ.
ಮಗು ಮುಪ್ಪಾಗಲು ತಾನು ಯಾವ ಶ್ರಮವನ್ನೂ ಹಾಕುವುದಿಲ್ಲ. ಆದರೂ ಅದರಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಕಾಲದ ಚಲನೆಯೊಂದಿಗೆ ಮಗುವಿನ ಬೆಳವಣಿಗೆಯಾಗುತ್ತದೆ. ಕಾಲದ ಚಲನೆಯ ಪರಿಣಾಮ ಮಗುವಿನ ಮೇಲಾಗುತ್ತದೆ. ಆದರೆ, ಈ ಬದಲಾವಣೆಗೆ ಭೌತಿಕ, ರಾಸಾಯನಿಕ ಕ್ರಿಯೆಗಳು ಕಾರಣ ಅಲ್ಲವೆ ಎಂದು ಕೇಳಬಹುದು. ಈ ರಾಸಾಯನಿಕ ಕ್ರಿಯೆಗಳು, ಭೌತಿಕ ಪ್ರಕ್ರಿಯೆಗಳು ಕೂಡ ಕಾಲದ ಅಧೀನವಾಗಿಯೇ ನಡೆಯುತ್ತವೆ ಎಂಬುದನ್ನು ಗಮನಿಸಬೇಕು.

 

ಕಾಲನ ನಿಷೇಧಿತ ಪ್ರದೇಶಗಳು
ಸರ್ವಾಂತರ್ಯಾಮಿಯಾದ, ಸರ್ವವ್ಯಾಪಿಯಾದ ಕಾಲನಿಗೂ ಪ್ರವೇಶ ನಿರ್ಬಂಧಗೊಳಿಸುವ ಜಾಗಗಳಿವೆಯೇ? ಖಂಡಿತಾ ಇವೆ. ಇಲ್ಲಿ ಕಾಲನ ನಿರ್ಬಂಧ ಎಂದರೆ, ಕಾಲ ಪರಿಣಾಮದ ನಿರ್ಬಂಧ. ಅತಿ ಶೀತ ಹಾಗೂ ಕತ್ತಲಿನ ಪ್ರದೇಶಗಳಲ್ಲಿ ಕಾಲನ ಆಟ ತುಸು ಕ್ಷೀಣ. ಹಾಗೆಯೇ ತಾಪಸಿಗಳೆದುರೂ ಕಾಲ ಕುಂಠಿತ. ಯೋಗಾಚಾರ್ಯರುಗಳು ಹೇಳುವಂತೆ, ನಾವು ಉಸಿರಾಡುವಾಗ ಕಾಲವನ್ನೆ ಉಸಿರಾಡುತ್ತೇವೆ. ನಾವು ಎಷ್ಟು ವೇಗವಾಗಿ ಉಸಿರೆಳೆದು ಬಿಡುತ್ತೇವೆಯೋ ಅಷ್ಟು ಬೇಗ `ನಮ್ಮ ಪಾಲಿನ ಕಾಲದ ಕ್ಷಣಗಳು’ ಸಂದುಹೋಗುತ್ತವೆ. ಮಂದಗತಿಯ ಉಸಿರಾಟ ನಮ್ಮ ಕಾಲವನ್ನು ದೀರ್ಘಾಯುವನ್ನಾಗಿ ಮಾಡುತ್ತದೆ.
ಹಾಗೆಯೇ ಕತ್ತಲು ಕೂಡ ಕಾಲಪರಿಣಾಮವನ್ನು ವಂಚಿಸುತ್ತದೆ. ಕತ್ತಲಲ್ಲಿ ನೆಟ್ಟ ಗಿಡ ಬೇಗ ಬೆಳೆಯುವುದಿಲ್ಲ. ಹಾಗೇ ಕತ್ತಲ ಗುಹೆಗಳಲ್ಲೋ ಭೂಮಿ ಕೊರೆದ ಸುರಂಗದಲ್ಲೋ ವಾಸಿಸುವ ಪ್ರಾಣಿಗಳು ಕೂಡ. ಆಮೆಗಳು ತಮ್ಮ ನಿಧಾನಗತಿಯಿಂದ, ಮಂದ ಉಸಿರಾಟದಿಂದಲೇ ಸಾವಿರ ವರ್ಷಗಟ್ಟಲೆ ಬದುಕುವುದು. ನಾವು ಕಿತ್ತದೆ, ಕಡಿಯದೆ, ಮರ ಗಿಡಗಳು ತಾವಾಗಿಯೇ ಅಲ್ಪಾವಧಿಗೆ ಸಾಯುವುದನ್ನು ಎಂದಾದರೂ ನೋಡಿದ್ದೀರೇನು? ಅವುಗಳ ಉಸಿರಾಟ ಅಷ್ಟು ಶಿಸ್ತುಬದ್ಧ ಹಾಗೂ ಸುಂದರ.
ಕೆಲವು ಪ್ರಾಣಿಗಳು ಚಳಿಗಾಲದಲ್ಲಿ, ಭೂಮಿಯಲ್ಲಿ ಬಿಲತೋಡಿ ತಿಂಗಳುಗಟ್ಟಲೆ ಆಹಾರವಿಲ್ಲದೆ, ಯಾವ ಚಟುವಟಿಕೆಗಳೂ ಇಲ್ಲದೆ ನಿದ್ರಿಸಿಬಿಡುತ್ತವೆ. ಋತುಮಾನ ಕಳೆದ ನಂತರ ಮತ್ತೆ ಹೊಸ ಚೈತನ್ಯದೊಂದಿಗೆ ಬದುಕು ಪ್ರಾರಂಭಿಸುತ್ತವೆ. ನಿದ್ರಾವಧಿಯಲ್ಲಿ ಜೀವಿಗಳ ಉಸಿರಾಟ ಕ್ರಮಬದ್ಧವಾಗಿಯೂ ನಿಧಾನವಾಗಿಯೂ ಇರುತ್ತದೆ.
ಇನ್ನು, ಬರ್ಫದ ಗಡ್ಡೆಗಳಲ್ಲಿ ಇಟ್ಟ ಕಳೇವರಗಳು, ಪಳೆಯುಳಿಕೆಗಳು ಸಾವಿರ ಸಾವಿರ ವರ್ಷಗಳಾದರೂ ಉಳಿಯುವುದನ್ನು ನಾವು ನೋಡಿಯೂ ಕೇಳಿಯೂ ಇದ್ದೇವೆ ಅಲ್ಲವೆ?

– ಈ ಎಲ್ಲ ಉದಾಹರಣೆಗಳು ಕಾಲನ ಪರಿಣಾಮದಿಂದ ಸಂಪೂರ್ಣ ತಪ್ಪಿಸಿಕೊಳ್ಳಲಾಗದೆ ಹೋದರೂ ಕೊಂಚ ವಿನಾಯಿತಿ ಪಡೆಯುವುದಂತೂ ಸಾಧ್ಯ ಎಂಬುದನ್ನು ಸಾಬೀತುಪಡಿಸುತ್ತವೆ. ನಮ್ಮ ಪೂರ್ವಜರು ದೀರ್ಘಾಯುಷ್ಯದ ಗುಟ್ಟು ಕಂಡುಕೊಂಡಿದ್ದು ಕಾಲನನ್ನು ಮಣಿಸುವ ಈ ಸೂತ್ರದ ಮುಖಾಂತರವೇ! ಆಧ್ಯಾತ್ಮಿಕ ಪ್ರಕ್ರಿಯೆಯಾದ, ಮಂದ ಹಾಗೂ ಶಿಸ್ತುಬದ್ಧ ಉಸಿರಾಟವನ್ನೊಳಗೊಂಡ `ಧ್ಯಾನ’, ದೀರ್ಘಾಯುಷ್ಯದ ಗುಟ್ಟೂ ಆಗಿದೆ ಎಂದು ಹೇಳಲಾಗುತ್ತದೆ. 

 

 

Leave a Reply