ತಂದೆಯನ್ನೇ ಮೋಹಿಸಿದ ಮಿರ್ರಾ ಮಿರ್ ಮರವಾದಳು : ಗ್ರೀಕ್ ಪುರಾಣ ಕಥೆಗಳು ~ 14

ಮಿರ್ರಾ ವೆಸ್ಟರ್ನ್ ಕ್ಲಾಸಿಕ್’ಗಳಲ್ಲಿ ಹಲವು ಬಗೆಯಲ್ಲಿ ಕಥೆಯಾಗಿ ಹೆಣೆಯಲ್ಪಟ್ಟವಳು. ಸೈಪ್ರಸ್ ದ್ವೀಪದ ಈ ರಾಜಕುಮಾರಿ ಸುಗಂಧ ಸೂಸುವ ಮಿರ್ರ್ ಮರವಾಗಿದ್ದು ಹೇಗೆ ಗೊತ್ತೇ? 

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

myrrah

ಸಿನಿರಸ್ ದೊರೆ ಸೈಪ್ರಸ್ ದ್ವೀಪವನ್ನು ಆಳುತ್ತಿದ್ದ. ಅವನಿಗೆ ಮಿರ್ರಾ ಎಂಬ ಚೆಂದದ ಮಗಳಿದ್ದಳು. (ಪಾಠಾಂತರಗಳಲ್ಲಿ ಅವಳಿಗೆ ಸ್ಮಿರ್ನಾ ಎಂಬ ಹೆಸರೂ ಇದೆ). ಅವಳು ಅದೆಷ್ಟು ಚೆಂದವೆಂದರೆ, ಮಿರ್ರಾಳ ತಾಯಿ “ನನ್ನ ಮಗಳು ಅಫ್ರೋದಿತೆಗಿಂತಲೂ ಸುಂದರಿ” ಎಂದು ಬೀಗುತ್ತಿದ್ದಳು. ಇದು ಶೃಂಗಾರ – ಸೌಂದರ್ಯಗಳ ಅಧಿದೇವತೆ ಅಫ್ರೋದಿತೆಗೆ ಸಿಟ್ಟು ತರಿಸಿತ್ತು. ಅದಕ್ಕೆ ಸರಿಯಾಗಿ ಮಿರ್ರಾ ತನ್ನನ್ನು ಮದುವೆಯಾಗಲು ಬರುವ ರಾಜಕುಮಾರರನ್ನೆಲ್ಲ ತಿರಸ್ಕರಿಸುತ್ತಿದ್ದಳು. ಜೋಡಿ ಬಯಸದ ಮನುಷ್ಯರನ್ನು ಶಪಿಸಲು ಅಫ್ರೋದಿತೆ ಸದಾ ತುದಿಗಾಲಲ್ಲಿ ನಿಂತಿರುತ್ತಿದ್ದಳು.

ಮಿರ್ರಾ ತನಗೆ ಬಂದ 18ನೇ ಮದುವೆಯ ಪ್ರಸ್ತಾಪವನ್ನೂ ತಿರಸ್ಕರಿಸಿದಾಗ ಅಫ್ರೋದಿತೆ ಅವಳಿಗೆ ತನ್ನ ತಂದೆಯ ಮೇಲೆಯೇ ಮೋಹ ಉಂಟಾಗಲೆಂದು ಶಾಪ ಕೊಟ್ಟಳು.

ಶಾಪದ ಪರಿಣಾಮ ಮಿರ್ರಾಳ ಮೇಲೆ ಆಗಿಯೇ ಆಯಿತು. ಆಕೆ ತನ್ನ ತಂದೆಯ ಮೇಲೆ ತೀವ್ರವಾಗಿ ಮೋಹಗೊಂಡಳು. ಅರಮನೆಯ ದಾಸಿಯ ಸಹಾಯದಿಂದ ತಂದೆಗೆ ಅರಿವಾಗದಂತೆ ಆತನಿಗೆ ಅಮಲೇರುವಂತೆ ಮಾಡಿ ತನ್ನ ಮೋಹದ ಶಮನವನ್ನೂ ಮಾಡಿಕೊಂಡಳು. ಪರಿಣಾಮವಾಗಿ ಮಿರ್ರಾ ಗರ್ಭಿಣಿಯೂ ಆದಳು.

ಈ ವಿಷಯ ಸಿನಿರಸನಿಗೆ ತಿಳಿದಾಗ ಅತೀವ ಸಂಕಟಕ್ಕೆ ಗುರಿಯಾದನು. ತನಗೆ ಅರಿವಿಲ್ಲದಂತೆ ಇದು ಘಟಿಸಿದ್ದರೂ ಮಗಳು ತನ್ನ ಸಂಪೂರ್ಣ ಅರಿವಿನಲ್ಲಿ ಹೀಗೆ ಮಾಡಿದಳೆಂಬ ಕೋಪ ಅವನನ್ನು ಉದ್ವಿಗ್ನಗೊಳಿಸಿತು. ಅವನು ಆ ಕ್ಷಣವೇ ಮಗಳನ್ನು ರಾಜ್ಯದಿಂದ ಗಡೀಪಾರು ಮಾಡಿದನು.

ಮಿರ್ರಾ ಅಲೆದಲೆದು ದಣಿದಳು. ಪಾಪಿಷ್ಠಯಾದ ತನಗೆ ಈ ಮನುಷ್ಯ ಜನ್ಮವೇ ಬೇಡವೆಂದು ದೇವತೆಗಳಲ್ಲಿ ಮೊರೆಯಿಟ್ಟಳು. ಅಫ್ರೋದಿತೆಯ ಶಾಪದಿಂದ ಮಿರ್ರಾ ಈ ಸಂಕಟಕ್ಕೆ ಗುರಿಯಾಗಿದ್ದಾಳೆ ಅನ್ನುವುದು ದೇವತೆಗಳಿಗೆ ತಿಳಿಯದ ವಿಷಯವೇನಲ್ಲ. ಹಾಗೆಂದೇ ಅವರು ಮಿರ್ರಾಳ ಮೇಲೆ ಅನುಕಂಪ ತೋರಿದರು. ಅವಳನ್ನೊಂದು ಸುಗಂಧ ಸೂಸುವ ಮರವನ್ನಾಗಿಸಿದರು. ಆ ಮರವೇ ‘ಮಿರ್’ (myrrh) ಮರ.

ಮುಂದೆ ಆ ಗರ್ಭಿಣಿ ಮರವು ತಿಂಗಳು ತುಂಬಿ ಹೆರಿಗೆ ನೋವು ಅನುಭವಿಸತೊಡಗಿತು. ಆಗ ಸೂಲಗಿತ್ತಿ ದೇವತೆ ಇಲೀತಿಯಾ ಬಂದು ಮಿರ್ ಮರದ ರೂಪದಲ್ಲಿದ್ದ ಮಿರ್ರಾಳಿಗೆ ಹೆರಿಗೆ ಮಾಡಿಸಿದಳು. ಹೀಗೆ ಹುಟ್ಟಿದ ಮಗುವಿನ ಹೆಸರು ಅಡೊನಿಸ್.

Leave a Reply