ನಿಮ್ಮ ನಿಜವಾದ ಪರಿಚಯವೇನು ತಿಳಿದಿದೆಯೇ?

photoಜೀವನ ಪರ್ಯಂತ ನಿಮ್ಮ ಪರಿಚಯ ಬದಲಾಗುತ್ತಲೇ ಇರುತ್ತದೆ. ಅಷ್ಟೇ ಅಲ್ಲ, ದಿನವೊಂದರಲ್ಲೆ ಹಲವು ಬಾರಿ ನಿಮ್ಮ ಪರಿಚಯ ಬದಲಾಗುತ್ತದೆ. ನಿಮ್ಮ ಕೆಲಸ, ಹುದ್ದೆ, ಸಂಬಂಧಗಳಿಗೆ ತಕ್ಕಂತೆ ನಿಮ್ಮ ಪಾತ್ರಗಳು ಬದಲಾಗುತ್ತ ಇರುತ್ತವೆ, ಪರಿಚಯಗಳೂ. ಈ ಬದಲಾಗುತ್ತಿರುವ ಪರಿಚಯಗಳ ಕಂತೆಯೇ ನೀವಾಗಿದ್ದೀರೇನು? ವಾಸ್ತವದಲ್ಲಿ ನಿಮ್ಮ ಪರಿಚಯವೇನು ? ಈ ಎಲ್ಲ ಪರಿಚಯಗಳಿಂದ ಹೊರತಾಗಿ ನೀವೇನಾಗಿದ್ದೀರಿ? ಇವೆಲ್ಲ ಸನ್ನಿವೇಶಗಳಿಗೆ ತಕ್ಕಂತೆ ಬದಲಾಗುವಂಥವು. ಆದರೆ ಮೂಲದಲ್ಲಿ ನೀವು ಯಾರಾಗಿದ್ದೀರಿ? ಏನಾಗಿದ್ದೀರಿ? ~ Whosoever Ji

ಸುಷುಪ್ತಿಯಲ್ಲಿರಲು ಯಾರೂ ಭಯಪಡುವುದಿಲ್ಲ. ಪ್ರತಿಯೊಬ್ಬರೂ ಗಾಢ ನಿದ್ದೆಯನ್ನು ಬಯಸುವವರೇ ಆಗಿದ್ದಾರೆ. ನಿದ್ದೆಯು ಅತ್ಯವಶ್ಯಕ ಸಂಗತಿಯಾಗಿದೆ. ನಿದ್ದೆ ಮಾಡಲು ಯಾರಿಗೂ ಭಯವಾಗೋದಿಲ್ಲ. ಅದು ಎಲ್ಲರಿಗೂ ಇಷ್ಟವೇ. ಗಾಢ ನಿದ್ದೆಯಲ್ಲಿರುವಾಗ ನಿಮಗೆ ಎಂದಾದರೂ ನಿಮ್ಮ ಇರುವಿನ ಅರಿವು ಉಂಟಾಗಿದೆಯೆ?

ಇಲ್ಲ. ಈ ಅರಿವು, ಈ ಅನುಭವ ಆಗ ಇರುವುದಿಲ್ಲ. ಎಚ್ಚರಗೊಂಡಾಗಲಷ್ಟೆ ಈ ಅನುಭವ ನಮಗಾಗುವುದು. ಎಚ್ಚರದಲ್ಲಿದ್ದಷ್ಟೂ ಹೊತ್ತು ನಿಮಗೆ ನಾನು ಇದ್ದೇನೆ ಅನ್ನುವುದನ್ನು ಮರೆಯಲಾಗುವುದೇ ಇಲ್ಲ. ಮರೆಯಲಾಗ್ತದೇನು ಹೇಳಿ? ನಾನು ಇದ್ದೀನಿ – ಇಷ್ಟಂತೂ ಪಕ್ಕಾ. ಆದರೆ ಯಾರಾಗಿದ್ದೀನಿ, ಏನಾಗಿದ್ದೀನಿ ಅನ್ನೋದು ತಿಳಿದಿಲ್ಲ. ಯಾರಿಗೆ ಗೊತ್ತು? ಯಾರಿಗಾದರೂ ಅದು ತಿಳಿದಿದೆಯೇನು? ನೀನು ಯಾರೆಂದು ನಾನು ಕೇಳಿದರೆ ಏನೆಂದು ಉತ್ತರ ಕೊಡ್ತೀರಿ?

ಸರಿ, ನಾನು ಪ್ರತಾಪ್ ಸೇನರನ್ನು ಕುರಿತು ನೀವು ಯಾರೆಂದು ಕೇಳಿದರೆ ಅವರು ತಾವೊಬ್ಬ ಇನ್‍ಕಮ್‍ಟ್ಯಾಕ್ಸ್ ಆಫಿಸರ್ ಎಂದು ಹೇಳುವರು. ಅವರು ಹತ್ತು ವರ್ಷಗಳ ಹಿಂದೆ ಏನಾಗಿದ್ದರು? ಆಗಲೂ ಅವರು ಇನ್‍ಕಮ್‍ಟ್ಯಾಕ್ಸ್ ಆಫಿಸರ್ ಆಗಿದ್ದರೇನು? ಆಗ ಅವರು ಬೇರೇನೋ ಆಗಿದ್ದರು. ಅದಕ್ಕೂ ಮೊದಲು ಮತ್ತೇನೋ ಆಗಿದ್ದರು. ಅದಕ್ಕೂ ಬಹಳ ಹಿಂದೆ ಇನ್ನೂ ಏನೋ ಆಗಿದ್ದರು.

ಜೀವನ ಪರ್ಯಂತ ನಿಮ್ಮ ಪರಿಚಯ ಬದಲಾಗುತ್ತಲೇ ಇರುತ್ತದೆ. ಅಷ್ಟೇ ಅಲ್ಲ, ದಿನವೊಂದರಲ್ಲೆ ಹಲವು ಬಾರಿ ನಿಮ್ಮ ಪರಿಚಯ ಬದಲಾಗುತ್ತದೆ. ಈಗ ನೀವಿಲ್ಲಿ ಸಾಧಕನ ಭಾವದಲ್ಲಿ – ಶಿಷ್ಯ ಭಾವದಲ್ಲಿ ಕುಳಿತಿದ್ದೀರಿ. ಮನೆಗೆ ಹೋಗುತ್ತಿದ್ದಂತೆಯೇ ಹೆಂಡತಿ ಎದುರಾದಾಗ ನೀವು ಗಂಡನಾಗುತ್ತೀರಿ, ನಿಮ್ಮ ಪರಿಚಯ ಬದಲಾಗುತ್ತದೆ. ಸ್ವಲ್ಪ ಹೊತ್ತಿಗೆ ಮಗ ಶಾಲೆಯಿಂದ ಮರಳುತ್ತಾನ್ತ, ಆಗ ಮತ್ತೆ ನಿಮ್ಮ ಪರಿಚಯ ಬದಲಾಗುತ್ತದೆ, ನೀವು ಅಪ್ಪನಾಗುತ್ತೀರಿ. ಆಫೀಸಿಗೆ ಹೋದಾಗ ನೀವು ಈ ಎಲ್ಲ ಪರಿಚಯಗಳಿಂದ ಕಳಚಿಕೊಂಡು ಮತ್ತೇನೋ ಆಗುತ್ತೀರಿ. ಅಲ್ಲಿಯೂ ನಿಮ್ಮ ಹುದ್ದೆ, ಅಧಿಕಾರಗಳಿಗೆ ತಕ್ಕಂತೆ ನಿಮ್ಮ ಪಾತ್ರಗಳು ಬದಲಾಗುತ್ತ ಇರುತ್ತವೆ, ಪರಿಚಯಗಳೂ. ಈ ಬದಲಾಗುತ್ತಿರುವ ಪರಿಚಯಗಳ ಕಂತೆಯೇ ನೀವಾಗಿದ್ದೀರೇನು? ವಾಸ್ತವದಲ್ಲಿ ನಿಮ್ಮ ಪರಿಚಯವೇನು ಹಾಗಾದರೆ? ಈ ಎಲ್ಲ ಪರಿಚಯಗಳಿಂದ ಹೊರತಾಗಿ ನೀವೇನಾಗಿದ್ದೀರಿ? ಇವೆಲ್ಲ ಸನ್ನಿವೇಶಗಳಿಗೆ ತಕ್ಕಂತೆ ಬದಲಾಗುವಂಥವು. ಆದರೆ ಮೂಲದಲ್ಲಿ ನೀವು ಯಾರಾಗಿದ್ದೀರಿ? ಏನಾಗಿದ್ದೀರಿ?

ನೆನ್ನೆ ನಾನು ಹೇಳಿದೆ, ಮೈಸೂರು ಎನ್ನುವ ಯಾವುದೇ ಅಸ್ತಿತ್ವವಿಲ್ಲ ಎಂದು. ಮೈಸೂರು ಅನ್ನೋದು ಯಾವಾಗ ಬೇಕಿದ್ದರೂ ಬದಲಿಸಬಹುದಾದ, ನಗರದ ಒಂದು ಹೆಸರಷ್ಟೆ. ಎಲ್ಲ ನಗರಗಳಲ್ಲೂ ಕೆಲವು ರಸ್ತೆಗಳಿರುತ್ತವೆ, ಮನೆಗಳಿರುತ್ತವೆ, ಅಂಗಡಿಗಳಿರುತ್ತವೆ, ಕೆಲವು ಕಚೇರಿಗಳಿರುತ್ತವೆ, ಒಂದಷ್ಟು ಜನರಿರುತ್ತಾರೆ, ಮರಗಿಡಗಳಿರುತ್ತವೆ… ಮೈಸೂರು ಅನ್ನೋದು ವ್ಯವಹಾರಕ್ಕಾಗಿ ಇರಿಸಿಕೊಂಡ ಒಂದು ಹೆಸರಷ್ಟೆ. ಆದರೆ ವಾಸ್ತವದಲ್ಲಿ ಮೈಸೂರು ಅನ್ನುವಂಥ ಯಾವುದೇ ಅಸ್ತಿತ್ವವಿಲ್ಲ. ಹಾಗೆಯೇ ವ್ಯಕ್ತಿಯ ಹೆಸರು ಕೂಡಾ. ನಾವು ಯಾವುದನ್ನು ಶರೀರವೆಂದು ಕರೆಯುತ್ತೀವೋ ಅದರಲ್ಲಿ ಕಣ್ಣು, ಕಿವಿ, ಮೂಗು, ಬಾಯಿಗಳಿವೆ; ಕೈಕಾಲು, ಹೊಟ್ಟೆ ಮೊದಲಾದ ಅಂಗಾಂಗಗಳಿವೆ. ಜೊತೆಗೆ ಈ ಶರೀರಕ್ಕೊಂದು ಹೆಸರೂ ಇದೆ. ಊರಿಗೊಂದು ಹೆಸರು ಇರುವಂತೆಯೇ ಶರೀರಕ್ಕೂ ಒಂದು ಹೆಸರಿರುತ್ತದೆ – ಪ್ರತಾಪ ಸೇನ ಅಂತಲೋ ವಿಜಯ್ ಭೋಲಾ ಅಂತಲೋ ಅಥವಾ ಮನಮೋಹನ, ಭಕ್ತಿಭಾವ, ಬಾಬೂ ಭಾಯಿ – ಹೀಗೆ ಏನೋ ಒಂದು…

ಆದರೆ ಈ ಬಾಬೂ ಭಾಯಿ ಯಾರು? ಏನು? ಅವರು ಕಣ್ಣು ಮೂಗೇ? ಕಣ್ಣುಗಳೇ? ಕಿವಿಗಳೇ? ಅವರ ಕಿವಿ ಹಿಡಿದು ಇದು ಬಾಬೂ ಭಾಯಿಯೇ ಅಂತ ಕೇಳಿದರೆ ಏನು ಹೇಳ್ತೀರಿ? ಅದನ್ನ ಕಿವಿ ಅನ್ತೀರಿ… ಅವರ ಕೈ ಹಿಡಿದು ಕೇಳಿದಾಗಲೂ ಅದು ಬಾಬೂ ಭಾಯಿ ಅಲ್ಲ ಅಂತಲೇ ಹೇಳ್ತೀರಿ.

ಹಾಗಾದರೆ ಬಾಬೂ ಭಾಯಿ ಯಾರು? ಬಾಬೂ ಭಾಯಿಯೂ ಮೈಸೂರಿನ ಹಾಗೇನೇ. ಈ ಹೆಸರೆಲ್ಲ ಕೆಲಸಕ್ಕಾಗಿ, ವ್ಯವಹಾರಕ್ಕಾಗಿ ಮಾಡಿಕೊಂಡ ಅನುಕೂಲವಷ್ಟೆ.

ಆದರೆ ನಾವು ಈ ವ್ಯಾವಹಾರಿಕ ಅನುಕೂಲವನ್ನೆ ಗಟ್ಟಿಯಾಗಿ ಅಪ್ಪಿಕೊಂಡುಬಿಡ್ತೀವಿ. ಅದೇ ನಿಜವೆಂದು ನಂಬಿಕೊಳ್ತೀವಿ. ನಾವು ನಿಜವಾದ ಬಾಬೂ ಭಾಯಿ ಯಾರೆಂದು ತಿಳಿಯಬೇಕು. ಅವರನ್ನು ಹುಡುಕಬೇಕು. ವಾಸ್ತವದಲ್ಲಿ ಬಾಬೂ ಭಾಯಿ ಯಾರು? ಏನು ಅನ್ನೋದನ್ನ ಅರಿತುಕೊಳ್ಳಬೇಕು.

ನಾನು ಯಾರಾಗಿದ್ದೇನೆ ಅನ್ನೋದನ್ನ ಅರಿತುಕೊಳ್ಳೋಕೆ ಧ್ಯಾನವು ಸಹಕರಿಸುತ್ತದೆ. ಅದು ನಮ್ಮನ್ನು ಅಂತರಂಗಕ್ಕಿಳಿಸಿ ಹುಡುಕಾಟಕ್ಕೆ ಪ್ರೇರೇಪಿಸುತ್ತದೆ. ಬೆಳಗ್ಗೆ ಎದ್ದ ಕೂಡಲೆ ನಮಗೆ ನಮ್ಮ ಇರುವಿನ ಅನುಭವ ಉಂಟಾಗುತ್ತದೆ. ಅದರ ಜೊತೆ ಹಗುರವಾಗಿ ಕೆಲಸಗಳೂ ಆರಂಭಗೊಳ್ಳುತ್ತವೆ. ಆಗ ಹೆಚ್ಚೇನಲ್ಲದಿದ್ದರೂ ಸ್ವಲ್ಪ ಹೊತ್ತು ಧ್ಯಾನಕ್ಕೆ ತೊಡಗಿಕೊಳ್ಳಿ. ಇದರಿಂದ ದಿನದ ಜೊತೆಗೇ ನಿಮ್ಮ ಆಂತರ್ಯದಲ್ಲಿ ಹುಡುಕಾಟವೂ ಆರಂಭಗೊಳ್ಳಲಿ.

ಅಚ್ಚರಿಯ ವಿಷಯವೆಂದರೆ, ಇಲ್ಲಿ ಹುಡುಕುವಾತ ತನ್ನನ್ನೇ ಹುಡುಕಿಕೊಳ್ತಿದ್ದಾನೆ. ಇಲ್ಲಿನ ಹುಡುಕಾಟ ಸ್ವಯಂನ ಹುಡುಕಾಟ. ನೀನು ಯಾರನ್ನು ಹುಡುಕುತ್ತಿದ್ದೀಯೋ ಅದು ನೀನೇ ಆಗಿರುವೆ. ನೀನು ನಿನ್ನನ್ನೆ ಹುಡುಕಿಕೊಳ್ತಿರುವೆ.

ತನ್ನನ್ನು ಹುಡುಕಿಕೊಳ್ಳುವುದೇ ಧ್ಯಾನ ಮಾಡುವುದರ ಮೂಲ ಉದ್ದೇಶ. ನೀವು ನಿಮ್ಮನ್ನು ಹುಡುಕಿಕೊಳ್ಳಲಾಗುವುದಿಲ್ಲ ಅನ್ನುವುದು ಬೇರೆ ಮಾತು. ಯಾಕೆಂದರೆ ನಿಮ್ಮನ್ನು ನೀವು ಕಳೆದುಕೊಂಡೇ ಇರುವುದಿಲ್ಲವಲ್ಲ!

ನಮ್ಮನ್ನು ನಾವು ಕಳೆದುಕೊಳ್ಳೋದು ಸಾಧ್ಯವಿಲ್ಲ. ಹಾ! ಸ್ವಯಂವಿಸ್ಮೃತಿ ಖಂಡಿತ ಉಂಟಾಗುತ್ತದೆ. ಆದರೆ ಪುನಃ ಸ್ಮೃತಿಯನ್ನು ಗಳಿಸಿಕೊಳ್ಳುವ ಅವಕಾಶಗಳೂ ಇದ್ದೇ ಇರುತ್ತವೆ. ಆದ್ದರಿಂದ ಅಂತರಂಗದ ಶೋಧವು ಅಂತಿಮವಾಗಿ ಸ್ವಸ್ಮರಣೆಗೆ ಬಂದು ಮುಟ್ಟುತ್ತದೆ.

Leave a Reply