ನಿಮಿಷದಲ್ಲಿ ಕರಗುವ ಮಂಜುಗಡ್ಡೆಯೂ ಕೀಟಕ್ಕೆ ಶಾಶ್ವತವೇ!

ಮನುಷ್ಯನ ಶಾಶ್ವತದ ಪರಿಕಲ್ಪನೆ ಎಂಬುದು ಸಾಪೇಕ್ಷವಾದುದು. ಈ ಸಾಪೇಕ್ಷವಾದ ಶಾಶ್ವತದ ಪರಿಕಲ್ಪನೆಯಿಂದ ಬಿಡುಗಡೆ ಪಡೆದು ನಿರಪೇಕ್ಷವಾದ ಶಾಶ್ವತ ಯಾವುದು ಎಂಬುದನ್ನು ಕಂಡುಕೊಳ್ಳುವುದಕ್ಕೆ ಎಲ್ಲಾ ಆಚಾರ್ಯರು ಪ್ರಯತ್ನಿಸಿದರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ~ ಅಚಿಂತ್ಯ ಚೈತನ್ಯ

ಗತ್ತು ಸತ್ಯವೇ ಅಥವಾ ಮಿಥ್ಯೆಯೇ?

ಭಾರತೀಯ ತತ್ವಪರಂಪರೆಯನ್ನು ಬೆಳೆಸಿದ ಹಲವು ಆಚಾರ್ಯರು ಈ ಪ್ರಶ್ನೆಗೆ ಬಹಳ ಸುದೀರ್ಘವಾದ ಉತ್ತರಗಳನ್ನೇ ನೀಡಿದ್ದಾರೆ. ಅವುಗಳದ್ದೊಂದು ಸಮೀಕ್ಷೆಯನ್ನು ನಡೆಸುವುದಕ್ಕೇ ವರ್ಷಗಳ ಅಧ್ಯಯನ ಅಗತ್ಯವಿದೆ. ಆ ಸಂಕೀರ್ಣ ಚರ್ಚೆಗೆ ಹೋಗದೆ ಸರಳವಾಗಿ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.

ಯಾವುದನ್ನಾದರೂ ಸತ್ಯ ಎಂದು ಕರೆಯುವುದಕ್ಕೆ ನಾವು ಬಳಸುವ ಪ್ರಮಾಣ ಯಾವುದು? ಕೇವಲ ಲೌಕಿಕರಾಗಿ ಆಲೋಚಿಸಿದರೆ ನಾವು ಬಳಸುವ ಪ್ರಮಾಣ ಕಾರ್ಯ ಮತ್ತು ಕಾರಣ ಸಂಬಧದ್ದು. ಇದು ನನ್ನ ಕಣ್ಣಿಗೆ ಕಾಣಿಸುತ್ತಿದೆ. ನನ್ನ ಅನುಭವಕ್ಕೆ ಬರುತ್ತಿದೆ. ಹಾಗಾಗಿ ಇದು ಸತ್ಯ ಎಂದು ನಾವಂದುಕೊಳ್ಳುತ್ತೇವೆ. ಅಂದರೆ ನಾವು ಅನುಭವಿಸುವಂಥದ್ದು, ನಾವು ಕಾಣುವಂಥದ್ದು, ನಮಗೆ ಮುಟ್ಟಲು ಸಾಧ್ಯವಿರುವಂಥದ್ದೆಲ್ಲವೂ ಸತ್ಯ ಎಂದುಕೊಳ್ಳುತ್ತೇವೆ. ಇದರಾಚೆಗಿನದ್ದೆಲ್ಲವೂ ನಮ್ಮ ಮಟ್ಟಿಗೆ ಮಿಥ್ಯೆ. ಇದನ್ನು ಇನ್ನು ಸ್ವಲ್ಪ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.

ಪರಮಾಣುವಿನೊಳಗೆ ಉಪಕಣಗಳಿರುತ್ತವೆ ಎಂಬುದನ್ನು ನಾವು ಕಣ್ಣಿಂದ ನೋಡಿಯೋ ಮುಟ್ಟಿಯೋ ಖಾತರಿ ಪಡಿಸಿಕೊಂಡಿರುವುದಿಲ್ಲ. ಆದರೆ ಅದನ್ನು ನಾವು ಇಲ್ಲ ಎಂದು ನಿರಾಕರಿಸುವುದಿಲ್ಲ. ಅದನ್ನು ಗಣಿತ ಸೂತ್ರಗಳಲ್ಲೋ ಅಥವಾ ಮತ್ಯಾವುದೋ ಮಾದರಿಯಲ್ಲೋ ಮಂಡಿಸಿ ಇದೆಯೆಂದು ಭಾವಿಸುತ್ತೇವೆ. ಇನ್ನೂ ಸ್ವಲ್ಪ ಮುಂದಕ್ಕೆ ಹೋದರೆ ಪರಮಾಣುವಿನ ಉಪಕಣಗಳ ಮಟ್ಟದಲ್ಲಿ ನಮ್ಮ ಚಲನೆಗೆ ಸಂಬಂಧಿಸಿದ ನ್ಯೂಟನ್‌ನ ತತ್ವಗಳೂ ಅಪ್ರಸ್ತುತ ಎಂಬುದನ್ನೂ ಒಪ್ಪಿಕೊಳ್ಳುತ್ತೇವೆ. ಅಂದರೆ ನಮಗೆ ಗ್ರಹಿಸಲಾಗುವಂತೆ ವಿವರಿಸಲು ಸಾಧ್ಯವಿರುವ ಎಲ್ಲವೂ ನಮಗೆ ಸತ್ಯ. ಉಳಿದದ್ದು ಮಿಥ್ಯೆ ಎಂಬಲ್ಲಿಗೆ ಬಂದೆವು.

ಈಗ ನಾವು ಇವೇ ಪರಿಕಲ್ಪನೆಗಳನ್ನು ಅಧ್ಯಾತ್ಮದ ಪರಿಭಾಷೆಯಲ್ಲಿ ನೋಡೋಣ. ಶಂಕರಾಚಾರ್ಯರಿಂದ ಆರಂಭಿಸಿ ಅನೇಕಾನೇಕ ಸಂತರು ಮತ್ತು ತತ್ವಜ್ಞಾನಿಗಳು ಜಗತ್ತನ್ನು ಮಿಥ್ಯೆ ಎಂದಿದ್ದಾರೆ. ಇಲ್ಲಿ ಮಿಥ್ಯೆಯ ಅರ್ಥ ಸತ್ಯಕ್ಕೆ ವಿರುದ್ಧವಾದುದಲ್ಲ. ಇವರೆಲ್ಲರೂ ವಿವರಿಸಲು ಪ್ರಯತ್ನಿಸುತ್ತಾ ಇದ್ದದ್ದು ಜಗತ್ತಿನ ಚಲನಶೀಲತೆಯನ್ನು. ಇಲ್ಲಿ ಶಾಶ್ವತವಾಗಿರುವುದು ಬದಲಾವಣೆ ಮಾತ್ರ ಎಂಬುದನ್ನು. ಇದನ್ನು ಸರಳ ಉದಾಹರಣೆಯೊಂದರ ಮೂಲಕ ಅರಿಯಲು ಪ್ರಯತ್ನಿಸೋಣ.

ಕೆಲವೇ ಕ್ಷಣಗಳ ಕಾಲ ಬದುಕುವ ಬ್ಯಾಕ್ಟಿರಿಯಾಗಳಿರುವುದು ನಮಗೆ ಗೊತ್ತು. ಕೆಲವೇ ಗಂಟೆಗಳು ಅಥವಾ ದಿನಗಳ ಕಾಲ ಬದುಕು ಕೀಟಗಳಿವೆ ಎಂಬುದೂ ನಮಗೆ ಗೊತ್ತು. ಒಂದೆರಡು ಗಂಟೆಗಳಷ್ಟೇ ಆಯಸ್ಸಿರುವ ಇಂಥದ್ದೊಂದು ಜೀವಿಯ ದೃಷ್ಟಿಯಿಂದ ಜಗತ್ತನ್ನು ನೋಡಲು ಪ್ರಯತ್ನಿಸಿದರೆ ಈ ‘ಮಿಥ್ಯೆ’ ಎಂಬ ಪರಿಕಲ್ಪನೆ ಸರಿಯಾಗಿ ಅರ್ಥವಾಗುತ್ತದೆ. ಎರಡು ನಿಮಿಷದ ಆಯಸ್ಸಿರುವ ಕೀಟವೊಂದು ಮೇಜಿನ ಮೇಲಿರುವ ಮಂಜುಗಡ್ಡೆಯನ್ನು ನೋಡಿದರೆ ಅದು ಏನೆಂದುಕೊಳ್ಳಬಹುದು. ಅದರ ಮಟ್ಟಿಗೆ ಆ ಮಂಜುಗಡ್ಡೆ ಶಾಶ್ವತ. ಏಕೆಂದರೆ ಅದು ಬದುಕಿರುವ ಕಾಲಕ್ಕಿಂತ ಹೆಚ್ಚು ಕಾಲ ಮಂಜುಗಡ್ಡೆ ಅಸ್ತಿತ್ವದಲ್ಲಿರುತ್ತದೆ. ಅದರ ಕಾಲದ ಲೆಕ್ಕಾಚಾರದಲ್ಲಿ ಅದು ಹುಟ್ಟುವುದಕ್ಕೂ ಮೊದಲಿರುವ ಅದರ ಮುಂದಿನ ತಲೆಮಾರುಗಳೂ ಕಾಣಬಹುದಾದ ಒಂದು ತಂಪಾದ ಕಲ್ಲು ಈ ಮಂಜುಗಡ್ಡೆ. ಆದರೆ ಆ ಮಂಜುಗಡ್ಡೆಯನ್ನು ಮೇಜಿನ ಮೇಲೆ ಇಟ್ಟಿರುವ ಮನುಷ್ಯನ ಮಟ್ಟಿಗೆ ಅದು ಸ್ವಲ್ಪವೇ ಹೊತ್ತಿನಲ್ಲಿ ಕರಗಿ ಹೋಗುವ ಮಂಜುಗಡ್ಡೆ ಮಾತ್ರ. ಮನುಷ್ಯ ತನ್ನ ಕಾಲದ ಪರಿಮಿತಿಯೊಳಗೆ ತನ್ನ ಸುತ್ತಲಿನ ಪರಿಸರವನ್ನು ಗ್ರಹಿಸಿದಾಗ ಅದು ಶಾಶ್ವತವೆಂಬಂತೆ ಕಾಣಿಸುತ್ತದೆ. ಆದರೆ ಬ್ರಹ್ಮಾಂಡದ ಕಾಲಮಾನದ ಅಗಾಧತೆಯೊಳಗೆ ಅವೆಲ್ಲವೂ ನಶ್ವರ.

ಅಂದರೆ ಮನುಷ್ಯನ ಶಾಶ್ವತದ ಪರಿಕಲ್ಪನೆ ಎಂಬುದು ಸಾಪೇಕ್ಷವಾದುದು. ಈ ಸಾಪೇಕ್ಷವಾದ ಶಾಶ್ವತದ ಪರಿಕಲ್ಪನೆಯಿಂದ ಬಿಡುಗಡೆ ಪಡೆದು ನಿರಪೇಕ್ಷವಾದ ಶಾಶ್ವತ ಯಾವುದು ಎಂಬುದನ್ನು ಕಂಡುಕೊಳ್ಳುವುದಕ್ಕೆ ಎಲ್ಲಾ ಆಚಾರ್ಯರು ಪ್ರಯತ್ನಿಸಿದರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಈ ನಿರಪೇಕ್ಷವಾದ ಶಾಶ್ವತ ಯಾವುದು? ಈ ಪ್ರಶ್ನೆಗೆ ಉತ್ತರ ನೀಡುವುದಕ್ಕೆ ಸಾಹಿತ್ಯದ ದೊಡ್ಡ ಭಂಡಾರವೇ ಇದೆ. ಇದನ್ನು ಜ್ಞಾನ ಎಂದು ಕರೆಯಬಹುದು. ಆತ್ಮ ಎಂದು ಕರೆಯಬಹುದು. ಪರಮಾತ್ಮ ಎಂದು ಕರೆಯಬಹುದು. ಸ್ವರ್ಗವೆಂದೋ ಮೋಕ್ಷವೆಂದೋ ಇದನ್ನು ಕರೆದುಕೊಳ್ಳಬಹುದು. ಇವೆಲ್ಲವೂ ಕೇವಲ ನಮ್ಮ ಅನುಕೂಲಕ್ಕೆ ಮಾಡಿಕೊಂಡ ಹೆಸರುಗಳಷ್ಟೇ. ಆ ಯಾವುದರತ್ತ ನಾವು ತುಡಿದರೂ ಜಗತ್ತಿನ ನಶ್ವರತೆಯನ್ನು ನಾವು ಅರಿತಿರುತ್ತೇವೆ. ಅದರ ಮೂಲಕ ನಾವು ನಮ್ಮ ಅಹಂಕಾರವನ್ನೂ ಲೋಭವನ್ನೂ ದುರಾಸೆಗಳನ್ನೂ ಕಳೆದುಕೊಂಡು ಹೆಚ್ಚು ಒಳ್ಳೆಯ ಮನುಷ್ಯರಾಗುತ್ತೇವೆ.

Leave a Reply