ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ನಿನ್ನ ದುಃಖಕ್ಕೆ
ಪರಿಹಾರವೇ ಇಲ್ಲ ಎನ್ನುವುದನ್ನ ಕಂಡುಕೊಂಡಾಗಲೇ
ನೀನು ಪರಮ ಸುಖಿ.
ತಲೆಬಾಗಿ ಹೂಂ ಗುಡುವುದಕ್ಕೂ ,
ತಲೆಯೆತ್ತಿ ಹೂಂ ಗುಡುವುದಕ್ಕೂ ಏನು ವ್ಯತ್ಯಾಸ?
ಗೆಲುವು, ಸೋಲುಗಳ ನಡುವೆ?
ಅವರ ಹೂಂ, ನಿನ್ನ ಹೂಂ ಆಗಲೇಬೇಕೆ?
ಅವರು ಉಹೂಂ ಎಂದರೆ, ನೀನೂ ?
ಎಂಥ ನಗೆಪಾಟಲಿನ ಸಂಗತಿ.
ಅವರು ಯುದ್ಧಕ್ಕೆ ಹೊರಟವರಂತೆ ಉತ್ತೇಜಿತರು
ನನಗೆ ಆ ಸಂಭ್ರಮವಿಲ್ಲ
ನಿರ್ಲಿಪ್ತ ನಾನು
ಇನ್ನೂ ನಗು ಕಲಿಯದ ಹಸುಗೂಸು.
ಬೇಕಾದದ್ದು ಇದ್ದೇ ಇದೆ ಎಲ್ಲರ ಬಳಿ
ನಾನೊಬ್ಬನೇ ಬರಿಗೈ ದೊರೆ
ನೂಕಿದಂತೆ ನೂಕಿಸಿಕೊಳ್ಳುವವನು
ಅಪ್ಪಟ ದಡ್ಡ, ಪೂರ್ತಿ ಖಾಲಿ ಮನುಷ್ಯ.
ಅವರು ಖಚಿತಮತಿಗಳು, ನಾನು ಮಹಾ ಗೊಂದಲದ ಮನುಷ್ಯ
ಅವರು ಚುರುಕು, ನಾನು ಮಬ್ಬು
ಅವರಿಗೋ ಒಂದು ಉದ್ದೇಶ
ನಾನು ಕಣ್ಣಿಗೆ ಪಟ್ಟಿ ಕಟ್ಟಿಕೊಂಡವನು
ಅಲೆ ಕರೆದುಕೊಂಡು ಹೋದಲ್ಲಿ, ಗಾಳಿ ಬೀಸಿದ ದಿಕ್ಕಿನಲ್ಲಿ
ಹರಿದು ಹೋಗುವವನು
ಎಲ್ಲರಂಥವನಲ್ಲ ನಾನು
ಸೀದಾ ಮಹಾ ಮಾಯಿಯ ಮೊಲೆಗೆ ಬಾಯಿಟ್ಟವನು.