‘ಖಾಲಿ ಹಾಳೆ’ಯನ್ನು ಓದುವುದು…

ಪ್ರತಿಯೊಬ್ಬ ಓದುಗರೂ ಯಾವುದೇ ಬರಹವನ್ನು ತಮ್ಮ ಸಾಮರ್ಥ್ಯ – ಮಿತಿಗಳ ಅನುಸಾರವಾಗಿಯೇ ಓದುತ್ತಾರೆ. ಆದ್ದರಿಂದ ಖಾಲಿ ಹಾಳೆಯನ್ನು ಕೊಟ್ಟು, ಅದನ್ನು ಓದಲು ಹೇಳುವ ಮೂಲಕ, ಆಯಾ ವ್ಯಕ್ತಿಯು ಏನನ್ನು ಓದಲು, ಏನನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ ಎಂದು ಕಂಡುಕೊಳ್ಳಬಹುದು ~ ಆನಂದಪೂರ್ಣ

ಖಾಲಿತನಕ್ಕೆ ಮತ್ತು ಸುಮ್ಮನಿರುವಿಕೆಗೆ ಸಂತ ಪರಂಪರೆ ಕೊಟ್ಟ ಪ್ರಾಮುಖ್ಯತೆ ಬಹಳ ಆಸಕ್ತಿಕರ. ಖಾಲಿ ಅಥವಾ ಶೂನ್ಯವು ಪೂರ್ಣ ಮತ್ತು ಅವಕಾಶವನ್ನೂ ಸುಮ್ಮನಿರುವಿಕೆ ಅಥವಾ ಮೌನವು ದರ್ಶನವನ್ನೂ ಒದಗಿಸಿಕೊಡುವಂಥವು ಎಂದು ಅದು ವಿಶ್ಲೇಷಿಸುತ್ತದೆ.

ಸತ್ಸಂಗಗಳಲ್ಲಿ, ಸಂತರ ಗೋಷ್ಠಿಗಳಲ್ಲಿ, ಸಭೆಗಳಲ್ಲಿ ಖಾಲಿಯ ಚರ್ಚೆ ನಡೆಯುತ್ತಿದ್ದವೆಂದು ಜನಪದ ಇತಿಹಾಸ ಹೇಳುತ್ತದೆ. ಅಂಥದೊಂದು ಚರ್ಚೆ ಹೀಗಿದೆ:

ಮಹಾರಾಷ್ಟ್ರದಲ್ಲಿ ಏಕನಾಥರೆಂಬ ಸುಪ್ರಸಿದ್ಧ ಸಂತರಿದ್ದರು. ಅವರು ಒಮ್ಮೆ ಮತ್ತೊಬ್ಬ ಶ್ರೇಷ್ಠ ಸಂತರಾದ ನಿವೃತ್ತಿನಾಥರಿಗೆ ಒಂದು ಪತ್ರ ಕಳುಹಿಸಿದರು.

ದೂತನಿಂದ ಏಕನಾಥರ ಪತ್ರ ಪಡೆದ ನಿವೃತ್ತಿನಾಥರು ಅದನ್ನು ಬಹಳ ಶ್ರದ್ಧೆಯಿಂದ ಓದಿದರು. ಮತ್ತೆ ಮತ್ತೆ ಮೇಲಿಂದ ಕೆಳಗೆ ಓದುತ್ತಾ ಪ್ರಸನ್ನರಾದರು. ಈ ಸಮಯದಲ್ಲಿ ಶ್ರೇಷ್ಠ ಮಹಿಳಾ ಸಂತರಾದ ಮುಕ್ತಾಬಾಯಿಯೂ ಅಲ್ಲಿದ್ದರು. ನಿವೃತ್ತಿನಾಥರು ಆ ಪತ್ರವನ್ನು ಮುಕ್ತಾಬಾಯಿಗೆ ಕೊಟ್ಟು “ನೀವೂ ಇದನ್ನು ಓದಿ” ಅಂದರು. ಮುಕ್ತಾಬಾಯಿ ಅದನ್ನು ಪಡೆದು ಓದತೊಡಗಿದರು. ಓದುತ್ತಾ ಓದುತ್ತಾ ಭಾವಾವಿಷ್ಟರಾದರು.

ಅನಂತರ ಇಬ್ಬರೂ ಪರಸ್ಪರ ಮುಖ ನೋಡಿಕೊಂಡು, ಆ ಪತ್ರವನ್ನು ಹಿಂದಿರುಗಿಸಿ, “ಇದು ನಮ್ಮ ಉತ್ತರವೂ ಆಗಿದೆ. ಈ ಪತ್ರವನ್ನು ಏಕನಾಥರಿಗೆ ತಲುಪಿಸು” ಅಂದರು.

ಆ ದೂತ ಗಾಬರಿ ಬಿದ್ದ. ಏಕೆಂದರೆ ಏಕನಾಥರು ಅವನ ಮೂಲಕ ಕಳುಹಿಸಿದ, ಇಲ್ಲಿ ಇವರಿಬ್ಬರು ಓದಿದ ಪತ್ರ ಕೇಲವ ಖಾಲಿ ಹಾಳೆಯಲ್ಲದೆ ಮತ್ತೇನೂ ಆಗಿರಲಿಲ್ಲ! ಈ ಇಬ್ಬರು ಆ ಖಾಲಿ ಹಾಳೆಯಲ್ಲಿ ಏನನ್ನು ಓದು ಭಾವುಕರಾದರು? ಅದನ್ನೇ ಪ್ರತ್ಯುತ್ತರವೆಂದು ಕಳುಹಿಸುತ್ತಿದ್ದಾರೆ. ಹಾಗಾದರೆ ಅದರಲ್ಲಿ ಇರುವುದಾದರೂ ಏನು!?

ತನ್ನ ಪ್ರಶ್ನೆಗಳನ್ನು ಹತ್ತಿಕ್ಕಲಾಗದೆ ನಿವೃತ್ತಿನಾಥರಲ್ಲಿ ಆ ಪತ್ರದ ರಹಸ್ಯವನ್ನು ತಿಳಿಸುವಂತೆ ಕೇಳಿಕೊಂಡ.

ನಿವೃತ್ತಿನಾಥರು “ಆತನನ್ನು ಓದಬೇಕಾದರೆ ಖಾಲಿ ಹಾಳೆಯ ಮೇಲೆ ಓದಬೇಕಾಗುತ್ತದೆ. ತುಂಬಿದ ಕಾಗದದಲ್ಲಿ ನೀವು ಏನನ್ನು ಓದುವಿರೋ ಅದು ಆತನಲ್ಲ. ಎಂಬುದನ್ನು ಏಕನಾಥರು ಈ ಪತ್ರಮುಖೇನ ಕಳುಹಿಸಿದ್ದರು. ಅವರ ಸಂದೇಶವನ್ನು ಅರ್ಥ ಮಾಡಿಕೊಂಡ ನಮಗೂ ಅದರೊಂದಿಗೆ ಸಹಮತವಿದೆ. ಆದ್ದರಿಂದ ಅವರ ಮಾತುಗಳೇ ನಮ್ಮವೂ ಆಗಿವೆ ಎಂದು ಸೂಚಿಸಲು ಈ ಖಾಲೆ ಹಾಳೆಯ ಪತ್ರವನ್ನು ಮರಳಿ ಕಳುಹಿಸುತ್ತಿದ್ದೇವೆ” ಎಂದು ವಿವರಿಸಿದರು.

ಹೀಗೆ ಖಾಲಿ ಪುಸ್ತಕ, ಖಾಲಿ ಹಾಳೆಯ ಸಂಕೇತಗಳು ಭಾರತದ ಸಂತರಲ್ಲಿ ಮಾತ್ರವಲ್ಲ, ಸೂಫೀ, ಝೆನ್ ಪರಂಪರೆಗಳಲ್ಲೂ ನೋಡಬಹುದು. ಸೂಫಿಗಳಲ್ಲಿ ಒಂದು ಪುಸ್ತಕವಿದ್ದು, ಒಬ್ಬ ಗುರುವಿನಿಂದ ಇನ್ನೊಬ್ಬ ಗುರುವಿಗೆ ಅದು ಕೊಡಲ್ಪಡುತ್ತದೆ. ಅತ್ಯಮೂಲ್ಯವೆಂದು ಪರಿಗಣಿಸಲಾಗುವ ಆ ಪುಸ್ತಕದಲ್ಲಿ ಇರುವುದೆಲ್ಲವೂ ಖಾಲಿ ಹಾಳೆಗಳೇ!  

ಖಾಲಿ ಹಾಳೆಗಳನ್ನು ಓದಲು ನೀಡುವುದರ ಹಿಂದೆ ಉನ್ನತ ಅಧ್ಯಾತ್ಮ ಮಾತ್ರವಲ್ಲ, ಸರಳ ಮಾನಸಿಕತೆಯೂ ಇದೆ. ಯಾರು ಏನನ್ನೇ ಬರೆದಿದ್ದರೂ ಅದರ ಅರ್ಥ ಹೊಮ್ಮುವುದು ಓದುವವರ ಒಳಗೆ. ಪ್ರತಿಯೊಬ್ಬ ಓದುಗರೂ ಯಾವುದೇ ಬರಹವನ್ನು ತಮ್ಮ ಸಾಮರ್ಥ್ಯ – ಮಿತಿಗಳ ಅನುಸಾರವಾಗಿಯೇ ಓದುತ್ತಾರೆ. ಆದ್ದರಿಂದ ಖಾಲಿ ಹಾಳೆಯನ್ನು ಕೊಟ್ಟು, ಅದನ್ನು ಓದಲು ಹೇಳುವ ಮೂಲಕ, ಆಯಾ ವ್ಯಕ್ತಿಯು ಏನನ್ನು ಓದಲು, ಏನನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ ಎಂದು ಕಂಡುಕೊಳ್ಳಬಹುದು. ಹಾಗೂ ಅದರ ಆಧಾರದ ಮೇಲೆ ಆಯಾ ವ್ಯಕ್ತಿಯ ಅಗತ್ಯಗಳನ್ನು, ನಡವಳಿಕೆಯನ್ನು, ಪ್ರಗತಿಯನ್ನು ನಿರ್ಧರಿಸಬಹುದು.

Advertisements

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.