ಕ್ರೂರ ಕಣ್ಣುಗಳೆಡೆಗಿನ ತಣ್ಣನೆಯ ನೋಟ!

ಇಂಥಾ ರಾಜಮನೆತನದಲ್ಲಿ ಹುಟ್ಟಿದ ಗುಯಿಗೆ ಹಾಡುವುದೆಂದರೆ, ಕುಣಿಯುವುದೆಂದರೆ ಜೀವೋನ್ಮತ್ತವಾಗುವಷ್ಟು ಪ್ರೇಮ. ಅವಳು ಮುಳ್ಳುಬೇಲಿಗಳ ನಡುವೆಯೂ ಕನಸುಗಳನ್ನ ಅರಳಿಸಿಕೊಂಡು ಬೆಳೆದ ಹುಡುಗಿ. ಅವುಗಳನ್ನೆಲ್ಲ ಹಿಚುಕಿ ಕೆಳ ದರ್ಜೆಯ ಅಧಿಕಾರಿಯೊಬ್ಬನ ಜತೆ ಅವಳ ಮದುವೆ ಮಾಡುತ್ತಾರೆ. ಅದಕ್ಕೆ ಕಾರಣ, ಆಡಳಿತದ ರಾಜಕಾರಣ! ಕನ್ಯೆಯಾಗಿದ್ದಷ್ಟು ದಿನ ಗೋಡೆಗಳ ನಡುವೆ ಹಾಡಿಕೊಂಡಿದ್ದ ಗುಯಿ ಈಗ ಸಂಪೂರ್ಣ ಮೂಕಳಾಗುತ್ತಾಳೆ. ಅವಳಲ್ಲಿ ಒಂದೂ ಹಾಡು ಹುಟ್ಟುವುದಿಲ್ಲ, ಮಗು ಕೂಡಾ. .. । ಚೇತನಾ ತೀರ್ಥಹಳ್ಳಿ

ಪುಟ್ಟ ‘ಗುಯಿ’ಗೆ ಹಾಡುವುದು ಅಂದರೆ ಇಷ್ಟ. ನರ್ತಿಸೋದು ಕೂಡಾ. ಬರಿ ಹಸ್ತಗಳನ್ನೆ ಬಳಕಿಸುತ್ತ ಚೂರು ಚೂರೆ ಸೊಂಟ ತಿರುಗಿಸುತ್ತ ಕೊರಿಯಾದ ಹಳೆ ಹಾಡುಗಳಿಗೆ ಹೆಜ್ಜೆ ಹಾಕುತ್ತ ಅಂತಃಪುರದ ಉದ್ದಗಲ ಬಣ್ಣ ತುಂಬುತ್ತಿದ್ದಳು. ಅವಳು ರಾಜ ಕುಮಾರಿ. ಹಾಗಂತ ಅವಳಮ್ಮ ರಾಣಿಯೇನಲ್ಲ. ಜೊಸೆಯಾನ್ ವಂಶದ ರಾಜ ಯಂಗ್‌ಯುಂಗ್‌ನ ಹಾದರಕ್ಕೆ ಹುಟ್ಟಿದವಳು. ಜನ್ಮ ಕೊಡುತ್ತಲೇ ಅಮ್ಮ ತೀರಿಕೊಂಡಿದ್ದರಿಂದ ಅಂತಃಪುರದ ಹಿರಿಯ ಹೆಂಗಸರು ಮಗುವನ್ನ ತಂದು ಜೋಪಾನ ಮಾಡಿದ್ದರು, ಮುದ್ದಿನಿಂದ ‘ಗುಯಿ’ ಎಂದು ಕರೆದರು. ಅವಳ ಪೂರ್ತಿ ಹೆಸರು ಹ್ಯುನ್‌ಯು ಗುಯಿ.

~

ಗುಯಿ ಹುಟ್ಟಿಕೊಂಡ ಕಾಲ ಹದಿನೈದನೆ ಶತಮಾನ. ಕಾಲಗಟ್ಟಲೆಯಿಂದ ಸಮಾಜ ಮನ್ನಣೆ ಪಡೆದಿದ್ದ ಗೀಸಾನ್ ಪದ್ಧತಿಯ ಮೇಲೆ ಜೊಸೆಯಾನ್ ರಾಜಮನೆತನ ಅಸಹನೆಯನ್ನು ಹೊಂದಿತ್ತು. ಕೊರಿಯಾದಲ್ಲಿ ಚಾಲ್ತಿಗೆ ತರಲಾಗಿದ್ದ ಹೊಸವ್ಯಾಖ್ಯೆಯ ಕನ್ಪ್ಯೂಶಿಯನ್ ಮತದಲ್ಲಿ ಹೆಂಗಸರಿಗೆ ಅತಿ ಕೀಳಾದ ಸ್ಥಾನ ಕೊಡಲಾಗಿತ್ತು. ಅವರು ಯಾವ ಕೆಲಸಕ್ಕೂ ಬರದ ಜೀವಿಗಳು, ಕೇವಲ ಮನೆವಾಳ್ತೆಗೆ ಲಾಯಕ್ಕಾದವರು ಎನ್ನುವ ಭಾವ ಜೊಸೆಯಾನ್‌ ದೊರೆಗಳಿಗಿತ್ತು. ಅದು ಹೆಣ್ಣು ಮಕ್ಕಳು ಹಾಡುವುದು, ನರ್ತಿಸುವುದು, ಅಲಂಕರಿಸಿಕೊಳ್ಳುವುದೆಲ್ಲ ಅನೈತಿಕವೆಂಬಂತೆ ಬಿಂಬಿತವಾಗತೊಡಗಿದ ಕಾಲ. ಹೀಗಿರುವಾಗ ವೇಶ್ಯಾವಾಟಿಕೆಯ ಗೀಸಾನ್‌ಗಳನ್ನು ಅವರು ಹೇಗೆ ನಡೆಸಿಕೊಂಡಿದ್ದಿರಬಹುದು ಊಹಿಸಿ!

ಗೀಸಾನ್‌ಗಳನ್ನು ತೀರಾ ಕ್ರಿಮಿಗಳಂತೆ ತಾತ್ಸಾರದಿಂದ ನೋಡುತ್ತಿತ್ತು ರಾಜಾಡಳಿತ. ದೊರೆ ಸೋಯನ್ ಅಂತೂ ಅವರ ಮೇಲೆ ಸಂಪೂರ್ಣ ನಿಷೇಧ ಹೇರಿಬಿಡುವ ಯೋಜನೆ ಹಾಕಿಕೊಂಡಿದ್ದ. ಆದರೆ ಆಸ್ಥಾನದ ಕೆಲವು ಬುದ್ಧಿವಂತರು ಅದರ ದುಷ್ಪರಿಣಾಮಗಳನ್ನು ಮನದಟ್ಟು ಮಾಡಿ ಗೀಸಾನ್‌ಗಳನ್ನು ಉಳಿಸಿಕೊಂಡರಂತೆ. ವೇಶ್ಯಾವಾಟಿಕೆಯಿಂದ ಈಚೆ ತಂದ ಹೆಣ್ಣುಮಕ್ಕಳಿಗೆ ಉತ್ತಮ ಬದುಕು ಸಿಗುವಂತಾಗಿದ್ದರೆ ಧಾರಾಳ ನಿಷೇಧ ಹೇರಬಹುದಿತ್ತು. ಅವರನ್ನು ಬೆಂಕಿಯಿಂದ ಬಾಣಲೆಗೆ ದೂಡುವುದು ಬೇಡವೆಂಬುದು ಆಸ್ಥಾನಿಕರ ಕಳಕಳಿಯಾಗಿತ್ತೇನೋ. ಸಾಲದ್ದಕ್ಕೆ ಈ ಪ್ರಸ್ತಾಪಕ್ಕೆ ಊರ ಹೆಂಗಸರೂ ವಿರೋಧ ತೋರಿದ್ದರು. ತಮ್ಮ ಗಂಡಂದಿರು ಈಗ ಎಲ್ಲಾದರೂ ’ಒಂದೆಡೆ’ ಮೆದ್ದು ಬರುತ್ತಾರೆ. ಇನ್ನು ಎಲ್ಲೆಂದರಲ್ಲಿ, ಯಾರಂದರವರ ಬೇಲಿ ಹಾರುವಂತಾದರೆ!?

ಇಂಥಾ ರಾಜಮನೆತನದಲ್ಲಿ ಹುಟ್ಟಿದ ಗುಯಿಗೆ ಹಾಡುವುದೆಂದರೆ, ಕುಣಿಯುವುದೆಂದರೆ ಜೀವೋನ್ಮತ್ತವಾಗುವಷ್ಟು ಪ್ರೇಮ. ಅವಳು ಮುಳ್ಳುಬೇಲಿಗಳ ನಡುವೆಯೂ ಕನಸುಗಳನ್ನ ಅರಳಿಸಿಕೊಂಡು ಬೆಳೆದ ಹುಡುಗಿ. ಅವುಗಳನ್ನೆಲ್ಲ ಹಿಚುಕಿ ಕೆಳ ದರ್ಜೆಯ ಅಧಿಕಾರಿಯೊಬ್ಬನ ಜತೆ ಅವಳ ಮದುವೆ ಮಾಡುತ್ತಾರೆ. ಅದಕ್ಕೆ ಕಾರಣ, ಆಡಳಿತದ ರಾಜಕಾರಣ! ಕನ್ಯೆಯಾಗಿದ್ದಷ್ಟು ದಿನ ಗೋಡೆಗಳ ನಡುವೆ ಹಾಡಿಕೊಂಡಿದ್ದ ಗುಯಿ ಈಗ ಸಂಪೂರ್ಣ ಮೂಕಳಾಗುತ್ತಾಳೆ. ಅವಳಲ್ಲಿ ಒಂದೂ ಹಾಡು ಹುಟ್ಟುವುದಿಲ್ಲ, ಮಗು ಕೂಡಾ.

ಮದುವೆಯಾದ ಕೆಲವೇ ವರ್ಷಗಳಲ್ಲಿ ಗಂಡ ಸತ್ತು ಹೋಗುತ್ತಾನೆ. ಗುಯಿ ಕಾಮನೆಗಳ ಪುಟ್ಟ ಹೆಂಗಸು. ಅದಂತೂ ಮರುಮದುವೆಯ ಮಾತಿರಲಿ, ಯೋಚನೆಗೂ ಅಡ್ಡಿ ಇದ್ದ ಕಾಲ. ಒಂಟಿತನದ ವಿಷಾದದಲ್ಲಿ, ಮನಸ್ಸಿನ, ದೇಹದ ಹಸಿವಿನಲ್ಲಿ ಕಂಗಾಲಾಗುವ ಹೆಣ್ಣು ಚುನ್‌ರೆ ಎಂಬ ಗುಲಾಮನ ವಶವಾಗುತ್ತಾಳೆ. ಅವನನ್ನು ಪ್ರೇಮಿಸತೊಡಗುತ್ತಾಳೆ. ಅವನಿಂದ ಯುನ್‌ಬಿ ಎಂಬ ಒಂದು ಹೆಣ್ಣು ಮಗುವನ್ನೂ ಪಡೆಯುತ್ತಾಳೆ.

ಸಮಾಜಕ್ಕೆ ಅಚ್ಚರಿಯ ಆಘಾತ. ಜೊಸೆಯಾನ್‌ ವಂಶದ ಹೆಣ್ಣು, ಕಟ್ಟುನಿಟ್ಟಿನ ಅರಸ ಟೀ ಯಾಂಗನ ಮೊಮ್ಮಗಳು ಇಂಥಾ ಕೆಲಸ ಮಾಡುವುದೆ? ಗುಯಿ ಗಣ್ಯ ಸಮಾಜದಿಂದ ಬಹಿಷ್ಕೃತಳಾಗುತ್ತಾಳೆ. ಭಾವನೆಗಳ, ಕಾಮನೆಗಳ ಭೋರ್ಗರೆತಕ್ಕೆಸಿಲುಕಿದ್ದ ಅವಳೀಗ ತನ್ನನ್ನು ಅದರ ಧಾರೆಗೆ ಒಡ್ಡಿಕೊಳ್ಳುತ್ತಾಳೆ. ತನ್ನನ್ನು ತಾನು ಗೀಸಾನ್ ಎಂದು ಘೋಷಿಸಿಕೊಳ್ಳುತ್ತಾಳೆ.

ಯಾರ ಎಗ್ಗಿಲ್ಲದೆ ನರ್ತಿಸುತ್ತಾಳೆ ಗುಯಿ. ಮನದೆಲ್ಲ ಸುಖ ದುಃಖಗಳನ್ನು ಹಾಳೆಗಿಳಿಸಿ ಹಾಡಾಗುತ್ತಾಳೆ.

***
ಚರಿತ್ರೆಯ ವ್ಯಂಗ್ಯ ಇರುವುದು ಇಲ್ಲಿಯೇ. ಯಾವ ಅರಸು ಮನೆತನ ಗೀಸಾನ್‌ ಪದ್ಧತಿಯನ್ನೆ ನಿರ್ನಾಮ ಮಾಡಲು ಹೊರಟಿತ್ತೋ ಅದೇ ಮನೆತನದ ಹೆಣ್ಣೊಬ್ಬಳು ಸ್ವತಃ ಗೀಸಾನ್‌ ಆಗುತ್ತಾಳೆ. ಯಾವ ಜನರು ಹೆಣ್ಣಿಗೆ ಹಾಡುವ, ಬರೆಯುವ, ಕುಣಿಯುವ ಹಕ್ಕಿಲ್ಲ ಎಂದರೋ ಅದೇ ಜನರ ನಡುವಿಂದ ಒಬ್ಬ ಕವಿ ಹುಟ್ಟಿಕೊಳ್ಳುತ್ತಾಳೆ.

ಗುಯಿ, ಕ್ರೂರ ಕಣ್ಣುಗಳೆಡೆಗಿನ ಒಂದು ತಣ್ಣನೆಯ ನೋಟದಂತೆ ಭಾಸವಾಗುತ್ತಾಳೆ.
ಗುಯಿ, ಅಟ್ಟಹಾಸಕ್ಕೆ ಪ್ರತಿಯಾಗಿ ಉಡಾಫೆಯ ಚಿಕ್ಕ ನಗುವಿನಂತೆ ಅನ್ನಿಸುತ್ತಾಳೆ.

Leave a Reply