ಅಧ್ಯಾತ್ಮ ಡೈರಿ : ನಮ್ಮೊಳಗಿನ ಅಮೃತಮತಿಯರೂ… ಅಷ್ಟಾವಕ್ರ ಪ್ರೇಮವೂ…

ಮನಸ್ಸು ಮೃತವಾಗಿರಬೇಕು. ಆದರೆ ನಾವು ಸದಾ ಮನಸ್ಸಿಗೆ ಮೇವುಣಿಸುತ್ತಾ ಅದರ ಹಿಡಿತದಲ್ಲಿ ನಮ್ಮನ್ನು ಸಿಲುಕಿಸಿಕೊಳ್ಳುತ್ತಲೇ ಸಾಗುತ್ತೇವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಾವಿಲ್ಲದ ಮನಸ್ಸಿನವರೇ. ಅಂದರೆ ನಾವೆಲ್ಲರೂ `ಅಮೃತ – ಮತಿ’ಗಳೇ! ~ ಅಲಾವಿಕಾ

ಷ್ಟಾವಕ್ರ ಮತ್ತು ಅಮೃತಮತಿಯರ ಪ್ರಣಯ ಪ್ರಸಂಗ ಕನ್ನಡದ ಮಹಾಕವಿ ಜನ್ನನ `ಯಶೋಧರ ಚರಿತ’ ಮಹಾಕಾವ್ಯದಲ್ಲಿ ಬರುತ್ತದೆ. ಮೂಲದಲ್ಲಿ ಈ ಕಥನದ ಉದ್ದೇಶ ಹಿಂಸೆಯ ಸಂಕಲ್ಪವೇ ಮಹಾಪಾಪ ಎನ್ನುವುದನ್ನು ಸಾರುವುದಾಗಿದೆ.

ಯಶೋಧರ ಒಬ್ಬ ಸದ್ಗುಣಿ ರಾಜ. ಅಮೃತಮತಿ ಅವನ ಸ್ಫುರದ್ರೂಪಿ ಹೆಂಡತಿ. ಸಾತ್ತ್ವಿಕ ಗುಣದ ರಾಜನಲ್ಲಿ ರುಚಿ ಕಾಣದ ಅಮೃತಮತಿ, ಇರುಳಲ್ಲಿ ಪಾನಮತ್ತನಾಗಿ ಹಾಡುವ ಮಾವುತನ ಮೋಹಕ್ಕೆ ಬೀಳುತ್ತಾಳೆ. ಅವನೋ ಎಂಟು ಕಡೆ ಗೂನುಳ್ಳ ಕುರೂಪಿ ಅಷ್ಟಾವಕ್ರ. ಕ್ರೂರಿ, ಶುದ್ಧ ಒರಟ. ಅವನೊಡನೆ ಪ್ರಣಯ ಸಲ್ಲಾಪದ ಬಯಕೆಯಿಂದ ರಾಣಿ ರಾಜನನ್ನು ವಂಚಿಸಿ ಅವನ ಗುಡಿಸಲಿಗೆ ಹೋಗುವ ಪರಿಪಾಠ ಶುರುವಿಡುತ್ತಾಳೆ. ಒಮ್ಮೆ ರಾಜನಿಗೆ ಇದು ತಿಳಿಯುತ್ತದೆ. ಅವಳನ್ನು ಹಿಂಬಾಲಿಸಿ ಹೋಗುತ್ತಾನೆ. ಅಲ್ಲಿ ಮಾವುತ ತಡವಾಗಿ ಬಂದಳೆಂದು ಅಮೃತಮತಿಯನ್ನು ಕಾಲಿನಿಂದ ಒದ್ದು ಹಿಂಸಿಸುತ್ತಾನೆ. ಕೀಳು ಮಾತುಗಳಿಂದ ನಿಂದಿಸುತ್ತಾನೆ. ಅಷ್ಟೆಲ್ಲ ಆದರೂ ಅಮೃತಮತಿ ಅವನ ಮನವೊಲಿಸುತ್ತಾ ಪರಿಪರಿಯಾಗಿ ಅನುನಯಿಸುತ್ತಾ ಅವನನ್ನು ಸಮಾಧಾನ ಮಾಡುತ್ತಾಳೆ. ಇದನ್ನು ಕಂಡ ರಾಜನಿಗೆ ದುಃಖಾವೇಗಗಳು ಉಂಟಾಗಿ ಅವರಿಬ್ಬರನ್ನೂ ಕೊಂದುಬಿಡಬೇಕೆಂದು ಒರೆಯಿಂದ ಖಡ್ಗ ತೆಗೆಯುತ್ತಾನೆ. ಆದರೆ ಮನಸ್ಸು ಬದಲಾಯಿಸಿ ಮನೆಗೆ ಮರಳುತ್ತಾನೆ. 

– ಇದು ಯಶೋಧರ ಚರಿತದ ಕಥೆಯ ಮೊದಲರ್ಧ ಭಾಗ. ನಾವಿಲ್ಲಿ ಯಶೋಧರನ ಗುಣಾವಗುಣಗಳ ಬಗ್ಗೆ ಚರ್ಚಿಸದೆ, ಅಮೃತಮತಿಯ ಆಯ್ಕೆ ಮತ್ತು ನಡವಳಿಕೆಯನ್ನು ನೋಡೋಣ. ಸಾಮಾನ್ಯ ಜನಜೀವನದ ದೃಷ್ಟಿಕೋನದಿಂದ ಈ ಕಥನವನ್ನು ಓದಿಕೊಂಡರೆ ಅಮೃತಮತಿಯ ನಡವಳಿಕೆ ಹಾಗೂ ಯಶೋಧರನ ಪ್ರತಿಕ್ರಿಯೆಗಳಿಗೆ ಬೇರೆಯೇ ಆಯಾಮಗಳು ದಕ್ಕುತ್ತ ಹೋಗುತ್ತವೆ.

ಅಮೃತಮತಿ ಸುಂದರ ಹೆಣ್ಣು. ರಾಜಭೋಗಗಳಲ್ಲೆ ಬೆಳೆದು ಬಾಳಿದವಳು. ಯಶೋಧರ ರಾಜ ಸದ್ಗುಣ ಸಂಪನ್ನ. ಧರ್ಮಭೀರು. ಹಾಗಿದ್ದೂ ಆಕೆ ಕುರೂಪ ದೇಹದ, ಕ್ರೂರ ಬುದ್ಧಿಯ ಅಷ್ಟಾವಕ್ರನ ಹಿಂದೆ ಬೀಳುವುದೇಕೆ? ಆತ ಒದ್ದರೂ ಬಡಿದರೂ ಅವಮಾನಿಸಿ ಹಿಂಸೆ ಮಾಡಿದರೂ ಅದರಲ್ಲೆ ಸುಖವನ್ನು ಕಾಣುವ ಆಕೆಯ ಮನಸ್ಥಿತಿ ಎಂಥದ್ದು?
ಅಮೃತಮತಿ ಒಂದು ನಿಟ್ಟಿನಿಂದ ಮನುಷ್ಯರ ಮನಸ್ಸಿಗೆ ಹಿಡಿದ ಕನ್ನಡಿಯಾಗಿದ್ದಾಳೆ. ಮನುಷ್ಯ ತನ್ನ ಜನ್ಮೋದ್ದೇಶವಾದ ಮುಕ್ತಿಯನ್ನು ಸಾಧಿಸಬೇಕೆಂದರೆ ಆತ ಮನಸ್ಸಿನ ಜೊತೆ ತನ್ನನ್ನು ಗುರುತಿಸಿಕೊಳ್ಳಬಾರದು. ಒಂದರ್ಥದಲ್ಲಿ ಮನಸ್ಸನ್ನು ಇಲ್ಲವಾಗಿಸಿಕೊಳ್ಳಬೇಕು. ಮನಸ್ಸು ಮೃತವಾಗಿರಬೇಕು. ಆದರೆ ನಾವು ಸದಾ ಮನಸ್ಸಿಗೆ ಮೇವುಣಿಸುತ್ತಾ ಅದರ ಹಿಡಿತದಲ್ಲಿ ನಮ್ಮನ್ನು ಸಿಲುಕಿಸಿಕೊಳ್ಳುತ್ತಲೇ ಸಾಗುತ್ತೇವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಾವಿಲ್ಲದ ಮನಸ್ಸಿನವರೇ. ಅಂದರೆ ನಾವೆಲ್ಲರೂ `ಅಮೃತ – ಮತಿ’ಗಳೇ!

ಮನಸ್ಸಿಗೆ ಪುಷ್ಟಿ ದೊರಕುವುದು ಅರಿಷಡ್ವರ್ಗಗಳಿಂದ. ಅಹಂಕಾರವನ್ನು ಪೋಷಿಸಿದಷ್ಟೂ ಅದರ ಜೀವಿತಾವಧಿ ಹೆಚ್ಚುತ್ತ ಹೋಗುತ್ತದೆ. ಆನಂದವಾಗಿರುವುದು ಆತ್ಮದ ಸಹಜ ಗುಣ. ಆತ್ಮ ತನ್ನ ನಿತ್ಯಾವಸ್ಥೆಯನ್ನು ಗುರುತಿಸಿಕೊಂಡು ಅದನ್ನೇ ಪ್ರಕಟಿಸತೊಡಗಿದರೆ ಮನಸ್ಸು ಸಾಯುತ್ತದೆ. ಆ ಕಾರಣದಿಂದಲೇ ಆತ್ಮದ ಅರಿವನ್ನು ಮುಚ್ಚಿ ಹಾಕುವಂತೆ ಅದು ಕೋಪ, ಕಾಮ, ಮತ್ಸರ, ವಿದ್ರೋಹವೇ ಮೊದಲಾದ ಪದರಗಳನ್ನು ಬೆಳೆಸಿಕೊಳ್ಳುತ್ತ ಹೋಗುತ್ತದೆ. ದುಃಖಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುವ ಮೂಲಕ ತನ್ನ ಇರುವಿಕೆಯನ್ನು ಅನುಭವಿಸುತ್ತದೆ ಮತ್ತು ಸುಖಿಸುತ್ತದೆ. ದುಃಖ ಮನಸ್ಸಿನ ವಿಕೃತಿ. ಅದು ಸಹಜಾನಂದವನ್ನು ಹೊಸಕಿ ತನ್ನನ್ನು ತಾನು ವಿಜೃಂಭಿಸಿಕೊಳ್ಳಲು ಹೂಡುವ ಆಟವಷ್ಟೆ.

ಅಮೃತಮತಿ ಸಕಲ ಸುಖವನ್ನೂ ಕಡೆಗಣಿಸಿ ಅಷ್ಟಾವಕ್ರನ ಬಳಿಗೆ ಹೋಗುವ ಬಗೆಯನ್ನೇ ಗಮನಿಸಿ. ನಮ್ಮಲ್ಲಿ ಆನಂದ ಭಂಡಾರವೇ ಇದೆ. ನಮ್ಮೊಳಗಿನಲ್ಲಿ ಸಕಲ ಸದ್ಗುಣಗಳೂ ಇವೆ. ಸುಳ್ಳಾಡದಿರುವುದು, ವಂಚನೆ ಎಸಗದೆ ಇರುವುದು, ಸಹಾಯ ಮಾಡುವುದು, ಪ್ರೇಮಿಸಿಸುವುದು, ದಯೆ – ದಾನಗಳು ಇವೆಲ್ಲವೂ ನಮ್ಮೊಳಗಿನ ಗುಣಗಳು. ಇವು ಮಾನವ ಸಹಜವಾದ ಗುಣಗಳು. ಆದರೆ ಇದರಲ್ಲಿ ಸ್ವಾರಸ್ಯ ಕಾಣದವರು ತಮ್ಮ ಮನಸ್ಸನ್ನೂ ದೇಹವನ್ನೂ ಹಿಂಸಿಸುವ ಮಾರ್ಗಗಳ ಮೊರೆ ಹೋಗುತ್ತಾರೆ. ಕುಡಿತ, ಧೂಮ ಪಾನ, ಅನೈತಿಕ ಅಂಗಸಂಗಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆಂದು ಗೊತ್ತಿದ್ದೂ ಆ ಹಾಳಾಗುವಿಕೆಯಿಂದಲೆ ಸುಖ ಎಂದುಕೊಳ್ಳುತ್ತ ಅದರ ವ್ಯಸನಕ್ಕೆ ಬೀಳುತ್ತಾರೆ.

ಇಲ್ಲಿ ಅಷ್ಟಾವಕ್ರ ಅಂದರೆ ಎಂಟು ಕಡೆ ಗೂನುಳ್ಳವನು. ಮನೋವ್ಯಾಪಾರದಲ್ಲಿ ಅಷ್ಟಾವಕ್ರ ಎಂದರೆ ಎಂಟು ಬಗೆಯ ವಕ್ರತೆ ಉಳ್ಳವನು. ಕಾಮ ಕ್ರೋಧಾದಿ ಬಗೆಯ ಎಲ್ಲ ದುರ್ಗುಣಗಳು ನಮ್ಮ ಮನಸ್ಸಿಗೆ ಪ್ರಿಯವಾಗುತ್ತದೆ. ಮನಸ್ಸೆಂಬ ಅಮೃತಮತಿ ಈ ಕಾಮಾದಿಗಳೆಂಬ ಅಷ್ಟಾವಕ್ರರ ಸಂಸರ್ಗಕ್ಕೆ ಬೀಳುತ್ತಾಳೆ. ಅವುಗಳ ಸಹವಾಸದಿಂದ ಬರೀ ದುಃಖವೆ ದೊರೆಯುತ್ತಿದ್ದರೂ ಅವನ್ನು ಬಿಡುವ ಮನಸ್ಸು ಮಾಡುವುದಿಲ್ಲ. ಯಾಕೆ ಹೀಗಾಗುತ್ತದೆ?

ಉತ್ತಮ ಸಂಗತಿಗಳು ಮನಸ್ಸನ್ನು ಕೊಲ್ಲುತ್ತವೆ. ಗಮನಿಸಿ ನೋಡಿ; ಭಜನೆ, ಸತ್ಸಂಗ, ಸಂಗೀತ, ಪ್ರವಚನ, ನೃತ್ಯ ಇತ್ಯಾದಿಗಳಲ್ಲಿ ತೊಡಗಿರುವಾಗ ಮನಸ್ಸು ಅಸ್ತಿತ್ವದಲ್ಲೇ ಇರುವುದಿಲ್ಲ. ಎಲ್ಲಿ ಚಿಂತೆ ಅಥವಾ ಆಲೋಚನೆಗಳು ಇರುವುದಿಲ್ಲವೋ ಅಲ್ಲಿ ಮನಸ್ಸು ಇರುವುದಿಲ್ಲ. ಮನಸ್ಸು ಇಲ್ಲವಾಗುವ ಪ್ರಕ್ರಿಯೆಯು ಅಹಮಿಕೆಯನ್ನು ಇಲ್ಲವಾಗಿಸುವ ಪ್ರಕ್ರಿಯೆಯೇ ಆಗಿದೆ. ಮಿಥ್ಯಾಹಂಕಾರಕ್ಕೆ ಅಂಟಿಕೊಂಡಿರುವ ನಾವು ಅದರ ಅಸ್ತಿತ್ವ ಇದ್ದರಷ್ಟೇ ನಮ್ಮ ಅಸ್ತಿತ್ವ ಎಂದು ಬಗೆಯುತ್ತೇವೆ ಮತ್ತು ಅದನ್ನು ಉಳಿಸಿಕೊಳ್ಳುವ ಸಲುವಾಗಿ ಮನಸ್ಸನ್ನು ಸದಾ ಜಾಗೃತವಾಗಿಡುವ ಸಂಗತಿಗಳನ್ನು ಅರಸಿ ಹೊರಡುತ್ತೇವೆ.
ಯಾವಾಗ ಮನಸ್ಸು ನಿಜವಾದ ಸುಖಭೋಗಗಳನ್ನು ಮರೆಮಾಚಿ ಮಿಥ್ಯೆಯನ್ನೆ ಸುಖವೆಂದು ತೋರುತ್ತಿದೆ, ಅಂತಹ ಭ್ರಮೆಗೆ ನೂಕುತ್ತಿದೆ ಎನ್ನುವುದು ಅರಿವಾಗುತ್ತದೆಯೋ ಆಗ ಅಮೃತಮತಿ ಹೆಜ್ಜೆ ಹಿಂದಿರುಗಿಸುತ್ತಾಳೆ, ಅವಳ ಮೇಲೆ ದಬ್ಬಾಳಿಕೆ ನಡೆಸುವ ಅಷ್ಟಾವಕ್ರರೂ ಕಾಣೆಯಾಗುತ್ತಾರೆ.

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.