ಒಮ್ಮೆ ಬ್ರಹ್ಮ ದೇವನಿಗೆ ಅನೇಕಾನೇಕ ರಾಕ್ಷಸರನ್ನು ಕೊಂದ ಕೃಷ್ಣ ಎಂದು ಕರೆಯಲ್ಪಡುವ ಪುಟ್ಟ ಬಾಲಕ ಯಾರೆಂದು ತಿಳಿಯುವ ಕುತೂಹಲ ಉಂಟಾಗುತ್ತದೆ. ಒಂದು ದಿನ ಅವನು ತನ್ನ ಲೋಕದಿಂದ ಹೊರಟು ಭೂಮಿಗೆ ಬರುತ್ತಾನೆ. ಕೃಷ್ಣ ಮತ್ತಿತರ ಗೋಪಬಾಲರು ದನ ಮೇಯಿಸುತ್ತಿದ್ದ ಕಾಡಿನಲ್ಲಿ ಅಡ್ಡಾಡುತ್ತಾನೆ. ಅದು ಮಧ್ಯಾಹ್ನದ ಸಮಯ. ಗೋಪ ಬಾಲರು ತಾವು ತಂದ ಬುತ್ತಿಯನ್ನು ಬಿಚ್ಚಿ ತಿನ್ನುತ್ತ ಇರುತ್ತಾರೆ. ಬಳಿಯಲ್ಲೆ ತಂಪಾದ ಝರಿ ಹರಿಯುತ್ತಿರುತ್ತದೆ. ಹಸು ಕರುಗಳು ದಟ್ಟವಾಗಿ ಬೆಳೆದಿದ್ದ ಹಸಿರು ಹುಲ್ಲನ್ನು ಮೇಯುತ್ತ ಮೇಯುತ್ತ ಕಾಡಿನ ಗರ್ಭದೊಳಕ್ಕೆ ಹೊಕ್ಕುಬಿಡುತ್ತವೆ. ಗೋಪಬಾಲರ ದೃಷ್ಟಿಯಿಂದ ದೂರವಾಗುತ್ತವೆ.
ಆತಂಕಗೊಂಡ ಗೆಳೆಯರನ್ನು ಸಮಾಧಾನ ಪಡಿಸಿದ ಕೃಷ್ಣನು “ಹೆದರಬೇಡಿ! ನೀವು ಊಟ ಮುಗಿಸುವ ವೇಳೆಗೆ ನಾನು ಕರುಗಳನ್ನು ಹುಡುಕಿ ತರುತ್ತೇನೆ” ಎನ್ನುತ್ತಾನೆ. ಅವನ ಗೆಳೆಯರು ನಿರಾತಂಕವಾಗಿ ತಮ್ಮ ಮೋಜಿನಲ್ಲಿ ತೊಡಗಿದಾಗ ಕೃಷ್ಣನು ಅವನ್ನು ಹುಡುಕಿ ಹೊರಡುತ್ತಾನೆ.
ಆದರೆ ಕೃಷ್ಣನಿಗೆ ಕರುಗಳು ಕಾಣೆಯಾಗಿದ್ದರ ಹಿಂದೆ ಬ್ರಹ್ಮನ ಕೈವಾಡ ಇದೆಯೆಂದು ಚೆನ್ನಾಗಿ ತಿಳಿದಿರುತ್ತದೆ. ಬ್ರಹ್ಮನು ವೃಂದಾವನದ ಚಿಕ್ಕ ಬಾಲಕ ಕೃಷ್ಣನ್ನು ಪರೀಕ್ಷಿಸುವುದಕ್ಕಾಗೆ ಹಾಗೆ ಮಾಡಿರುತ್ತಾನೆ. ಈ ಸಂದರ್ಭದಲ್ಲಿ ಬ್ರಹ್ಮನು ಕೃಷ್ಣನೇ ಮಹಾವಿಷ್ಣು ಎಂಬುದನ್ನೂ ಆತನು ದುಷ್ಟ ಶಿಕ್ಷಣ – ಶಿಷ್ಟ ರಕ್ಷಣೆಗಾಗಿ ಭೂಮಿಯಲ್ಲಿ ಅವತರಿಸಿರುವನೆಂಬುದನ್ನೂ ಮರೆತುಬಿಟ್ಟಿರುತ್ತಾನೆ.
ಕರುಗಳನ್ನು ಅಡಗಿಸಿಟ್ಟ ಬ್ರಹ್ಮನು, ಕೃಷ್ಣ ಇತ್ತ ಬರುತ್ತಲೇ ಗೋಪಬಾಲರಿದ್ದ ಕಡೆಗೆ ತೆರಳಿ ಅವರನ್ನೂ ಕದಿಯುತ್ತಾನೆ! ಆಮೇಲೆ ಕರುಗಳನ್ನೂ ಬಾಲಕರನ್ನೂ ಒಂದೆಡೆ ಅಡಗಿಸಿಟ್ಟು, ತಾನು ಬಯಸುವಷ್ಟು ದೀರ್ಘಕಾಲದವರೆಗೆ ಅವರು ನಿದ್ರಿಸುವಂತೆ ಮಾಡುತ್ತಾನೆ. ಅನಂತರ ಕೃಷ್ಣ ಈಗೇನು ಮಾಡಬಹುದು ಎನ್ನುವ ಕುತೂಹಲದಿಂದ ಅವನಿದ್ದಲ್ಲಿಗೆ ಬರುತ್ತಾನೆ. ತನ್ನ ಗೆಳೆಯರು ಕಾಣೆಯಾಗಿರುವುದನ್ನು ಕಂಡು ಗಾಬರಿಯಾಗಬಹುದೆಂದು ಅವನ ಊಹೆ. ಆದರೆ ಅದಕ್ಕೆ ವಿರುದ್ಧವಾದ ಸನ್ನಿವೇಶ ಕಾಣುತ್ತದೆ. ಅವನ ಎಲ್ಲ ಗೆಳಯರೂ ಮೊದಲಿನಂತೆಯೇ ಅಲ್ಲಿ ಆಟವಾಡುತ್ತ ಇರುತ್ತಾರೆ. ಅವರ ಸಂಗಡ ತಾನು ಕದ್ದ ಕರುಗಳೂ ಇರುತ್ತವೆ! ಈಗ ಗಾಬರಿಯಾಗುವ ಸರದಿ ಬ್ರಹ್ಮನದ್ದು!!
ಇದೇನಾಯ್ತು! ಬ್ರಹ್ಮನು ಕದ್ದ ಹುಡುಗರು ಹಾಗೂ ಕರುಗಳು ಇಲ್ಲಿಗೆ ಮರಳಿದ್ದು ಹೇಗೆ? ಇದು ಕೃಷ್ಣನದ್ದೇ ಕೆಲಸ. ಬ್ರಹ್ಮನ ಕೆಲಸವನ್ನರಿತ ಕೃಷ್ಣನು ಗೋಪಬಾಲರು ಸಮಯಕ್ಕೆ ಸರಿಯಾಗಿ ಮನೆಗೆ ಮರಳದಿದ್ದರೆ ಅವರ ತಾಯ್ತಂದೆಯರು ಆತಂಕ ಪಡುವರೆಂದು ಅವನ ಕಾಳಜಿ. ಕರುಗಳ ವಿಷಯದಲ್ಲಿಯೂ ಹಾಗೇ ಆಗುತ್ತದೆ ಎಂದವನು ಬಲ್ಲ. ತಮ್ಮ ಕರುಗಳಿಲ್ಲದೆ ಹಸುಗಳು ದುಃಖಿಸುತ್ತವೆ. ಆದ್ದರಿಂದ ಸ್ವತಃ ಮಹಾವಿಷ್ಣುವೇ ಆದ ಕೃಷ್ಣನು ತನ್ನನ್ನು ವಿಸ್ತರಿಸಿಕೊಂಡು ಆ ಎಲ್ಲ ಮಕ್ಕಳು ಹಾಗೂ ಕರುಗಳ ಯಥಾವತ್ ಸೃಷ್ಟಿ ಮಾಡಿ ಅಲ್ಲಿರಿಸುತ್ತಾನೆ.
ಕೃಷ್ಣ ವರ್ಷ ಪೂರ್ತಿ ಇದನ್ನು ನಿಭಾಯಿಸುತ್ತಾನೆ. ಬ್ರಹ್ಮನ ಒಂದು ಕ್ಷಣ ಭೂಲೋಕದ ಪಾಲಿಗೆ ಒಂದು ವರ್ಷ. ಬ್ರಹ್ಮನು ಒಂದು ಕ್ಷಣ ಕಾಲ ಅವರನ್ನೆಲ್ಲ ಅಡಗಿಸಿಟ್ಟರೂ ಅದು ಒಂದು ವರ್ಷಕಾಲದ ಅವಧಿಯಾಗಿ ಪರಿಣಮಿಸಿತ್ತು. ಈ ಅವಧಿಯಲ್ಲಿ ವೃಂದಾವನದ ಜನರು ತಮ್ಮ ತಮ್ಮ ಮಕ್ಕಳ ರೂಪದಲ್ಲಿದ್ದ ಕೃಷ್ಣನಿಗೆ ಮತ್ತಷ್ಟು ಸೇವೆ ಸಲ್ಲಿಸುವ ಭಾಗ್ಯ ಪಡೆದಿದ್ದರು. ಅವರಿಗೆ ಈ ಯಾವ ಸಂಗತಿಯೂ ಅರಿವಿರಲಿಲ್ಲ.
ಒಂದು ವರ್ಷದ ಅನಂತರ ಬ್ರಹ್ಮನು ಮರಳಿ ಬಂದಾಗ ತಾನು ಅಡಗಿಸಿಟ್ಟ ಮಕ್ಕಳು ಹಾಗೂ ಕರುಗಳ ಪ್ರತಿಜೀವಗಳನ್ನು ಕಂಡು ಚಕಿತನಾದ. “ಇದು ಹೇಗೆ ಸಾಧ್ಯವಾಯ್ತು! ನಾನು ಅಡಗಿಸಿಟ್ಟ ಹುಡುಗರು, ಕರುಗಳೆಲ್ಲ ಇಲ್ಲಿ ಬಂದಿದ್ದು ಹೇಗೆ!?” ಕೃಷ್ಣನಿಗೆ ಬ್ರಹ್ಮನ ಗೊಂದಲ ಅರ್ಥವಾಗುತ್ತದೆ. ಅವನು ಆ ಎಲ್ಲ ಮಕ್ಕಳ ರೂಪಾಂತರಗೊಳಿಸಿ, ಪ್ರತಿಯೊಬ್ಬರೂ ಚತುರ್ಭುಜ ನಾರಾಯಣನ ರೂಪದಲ್ಲಿ ತೋರುವಂತೆ ಮಾಡುತ್ತಾನೆ. ಈಗ ಬ್ರಹ್ಮನಿಗೆ ಆ ಎಲ್ಲ ಮಕ್ಕಳು ಭಗವಂತನದ್ದೇ ವಿಸ್ತರಣೆಗಳೆಂದು ಅರ್ಥವಾಗುತ್ತದೆ. ಕೃಷ್ಣ ಪುನಃ ಆ ಎಲ್ಲರನ್ನು ಮೊದಲಿನ ರೂಪಕ್ಕೆ ತರುತ್ತಾನೆ.
ಈಗ ಬ್ರಹ್ಮನಿಗೆ ಕೃಷ್ಣನೇ ಮಹಾವಿಷ್ಣು ಎನ್ನುವ ಸ್ಮರಣೆ ಉಂಟಾಗುತ್ತದೆ. ಅವನು ಕೃಷ್ಣನಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿ ತನ್ನನ್ನು ಕ್ಷಮಿಸುವಂತೆ ಬೇಡಿಕೊಳ್ಳುತ್ತಾನೆ. ತಾನು ಕದ್ದು ಮುಚ್ಚಿಟ್ಟ ಮಕ್ಕಳನ್ನೂ ಕರುಗಳನ್ನೂ ಮರಳಿಸುತ್ತಾರೆ. ಗೋಪಬಾಲರು ಈ ಯಾವ ಅರಿವೂ ಇಲ್ಲದೆ ನಿದ್ದೆಯಿಂದ ಎದ್ದವರಂತೆ ಮೈಮುರಿದು ಕರುಗಳನ್ನು ಮೇಯಿಸಿಕೊಂಡು ತಮ್ಮ ಆಟಪಾಠಗಳಲ್ಲಿ ಮುಳುಗಿಹೋಗುತ್ತಾರೆ.