ದೀರ್ಘಕಾಲದವರೆಗೆ ರಮಣ ಮಹರ್ಷಿಗಳ ಜೊತೆ ಇದ್ದು ಅಧ್ಯಾತ್ಮ ಸಾಧನೆ ಮಾಡಿದ ಮೇಜರ್ ಅಲನ್ ಡಬ್ಲ್ಯೂ. ಚಾಡ್ವಿಕ್ ಮತ್ತು ಭಗವಾನ್ ರಮಣ ಮಹರ್ಷಿಗಳ ನಡುವೆ ನಡೆದ ಸಂಭಾಷಣೆಯೊಂದರ ಭಾಗ ಇಲ್ಲಿದೆ. ನನಗೆ ಶಿಷ್ಯರಿಲ್ಲ ಎಂದು ರಮಣರು ಹೇಳುತ್ತಾರೆ. ಆಗ ಚಾಡ್ವಿಕ್’ರಿಗೆ ತಮ್ಮ ಗುರು ಯಾರು ಎಂಬ ಗೊಂದಲ ಉಂಟಾಗುತ್ತದೆ. ಅವರ ಗೊಂದಲವನ್ನು ರಮಣರ ಉತ್ತರ ಪರಿಹರಿಸುತ್ತದೆ.

ಚಾಡ್ವಿಕ್ : ತಮಗೆ ಯಾವ ಶಿಷ್ಯಂದಿರೂ ಇಲ್ಲ ಎಂದು ಭಗವಾನರು ಹೇಳುತ್ತಾರಲ್ಲವೆ?
ಭಗವಾನ್ : ಹೌದು.
ಚಾಡ್ವಿಕ್ : ಆದರೆ ಯಾವುದೇ ವ್ಯಕ್ತಿಯು ಮುಕ್ತಿಪಥದಲ್ಲಿ ಸಾಗಲು ಗುರುವಿನ ಮಾರ್ಗದರ್ಶನದ ಅಗತ್ಯವಿದೆ ಎಂದೂ ಭಗವಾನರು ಹೇಳುತ್ತಾರಲ್ಲವೆ?
ಭಗವಾನ್ : ಹೌದು.
ಚಾಡ್ವಿಕ್ : ಹಾಗಾದರೆ ನಾನೀಗ ಏನು ಮಾಡಬೇಕು? ನಾನು ಇಷ್ಟು ವರ್ಷದಿಂದ ಇಲ್ಲಿದ್ದುದು ವೃಥಾ ಕಾಲಹರಣವಾಯಿತೇನು? ಭಗವಾನರು ತಮ್ಮನ್ನು ಗುರುವಲ್ಲ ಎಂದು ಘೋಷಿಸಿದ ಮೇಲೆ ನಾನು ಉಪದೇಶ ಪಡೆಯಲು ಬೇರೆ ಯಾರನ್ನಾದರೂ ಹುಡುಕಿಕೊಂಡು ಹೋಗಬೇಕೇನು?
ಭಗವಾನ್ : ನಿನ್ನನ್ನು ಇಷ್ಟು ದೂರದ ವರೆಗೆ ಕರೆದು ತಂದಿದ್ದು ಮತ್ತು ಇಷ್ಟು ದೀರ್ಘ ಕಾಲ ಇಲ್ಲಿಯೇ ಉಳಿಯುವಂತೆ ಮಾಡಿದ್ದು ಯಾವುದು ಎಂದು ನೀನು ತಿಳಿದಿರುವೆ? ನಿನಗೆ ಸಂಶಯವೇಕೆ? ಬೇರೆಲ್ಲಾದರೂ ಗುರುವನ್ನು ಹುಡುಕಬೇಕು ಎಂದಿದ್ದರೆ ನೀನು ಯಾವತ್ತೋ ಇಲ್ಲಿಂದ ಹೊರಟುಹೋಗಿರುತ್ತಿದ್ದೆ.
ಚಾಡ್ವಿಕ್ : ಹಾಗಾದರೆ ಭಗವಾನರಿಗೆ ಶಿಷ್ಯರಿದ್ದಾರೆ ಎಂದಾಯಿತು!
ಭಗವಾನ್ : ನಾನು ಈಗಾಗಲೇ ಹೇಳಿದಂತೆ, ಭಗವಾನರ ದೃಷ್ಟಿಕೋನದಿಂದ ಶಿಷ್ಯರಿಲ್ಲ; ಆದರೆ ಶಿಷ್ಯನ ದೃಷ್ಟಿಕೋನದಿಂದ ಗುರುವಿನ ಕರುಣೆಯು ಇದ್ದೇ ಇರುತ್ತದೆ ಮತ್ತು ಅದು ಸಾಗರದಂತೆ ಅಗಾಧವಾಗಿರುತ್ತದೆ. ಶಿಷ್ಯನು ಚಿಕ್ಕ ಲೋಟ ಹಿಡಿದು ಬಂದರೆ ಅದರ ತುಂಬ ಅದನ್ನು ತುಂಬಿಕೊಳ್ಳುತ್ತಾನೆ. ಗುರುವನ್ನು ಕೃಪಣನೆಂದು ದೂರಬೇಕಿಲ್ಲ. ಶಿಷ್ಯನು ದೊಡ್ಡ ಬಿಂದಿಗೆಯನ್ನೇ ತಂದರೆ ಅದರ ತುಂಬ ಜ್ಞಾನವನ್ನು ತುಂಬಿಕೊಳ್ಳಬಹುದು. ಪಡೆಯುವುದು ಸಂಪೂರ್ಣವಾಗಿ ಶಿಷ್ಯನನ್ನು ಅವಲಂಬಿಸಿರುತ್ತದೆ.
ಚಾಡ್ವಿಕ್ : ಹಾಗಾದರೆ ಭಗವಾನರು ನ್ನ ಗುರುಗಳಾಗಿದ್ದಾರೆಯೇ ಇಲ್ಲವೇ ಎನ್ನುವುದು ಕೇವಲ ಶ್ರದ್ಧೆಯ ಸಂಗತಿಯಷ್ಟೆ! ಭಗವಾನರು ಅದನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎನ್ನುವುದು ಇಲ್ಲಿ ವಿಷಯವೇ ಅಲ್ಲ!!