ಲೌಕಿಕ ಜಗತ್ತಿನಲ್ಲಿ ಹಣ ಗಳಿಕೆಯನ್ನೇ ಸಾಧನೆ ಎಂದು ಪರಿಗಣಿಸಲಾಗುತ್ತದೆ. ಅಥವಾ ಗೆಲುವುಗಳನ್ನು. ಯಾವುದೇ ಕ್ಷೇತ್ರದಲ್ಲಿ ಪಡೆಯುವ ಪದಕಗಳೇ ಸಾಧನೆಗಳಾಗುತ್ತವೆ. ಬಹಳ ಬಾರಿ ಇಂಥಾ ಸಾಧಕರು ನೋಡಲಿಕ್ಕಷ್ಟೇ ದೊಡ್ಡ ಮನುಷ್ಯರು. ಇವರಿಂದ ಸಮಾಜಕ್ಕಾಗಲೀ ತಮ್ಮ ಸುತ್ತಲಿನ ಜನಕ್ಕಾಗಲೀ ಏನೂ ಪ್ರಯೋಜನವಿಲ್ಲ. ಪರರ ಕಷ್ಟಕ್ಕೆ ಇವರು ಮಿಡಿಯುವುದಿಲ್ಲ. ಸಂತೈಸುವುದಿಲ್ಲ. ಹಣದ ಮಾತಿರಲಿ, ಕನಿಷ್ಠ ಕಾಳಜಿಯನ್ನೂ ತೋರುವುದಿಲ್ಲ. ಇಂಥ ‘ಸಾಧಕ’ರಿಂದ ಏನು ತಾನೆ ಪ್ರಯೋಜನ? – ಇದು ಸಂತ ಕಬೀರರು ಕೇಳುವ ಪ್ರಶ್ನೆ.
ಖರ್ಜೂರದ ಮರದ ಉದಾಹರಣೆ ಕೊಟ್ಟು ತಮ್ಮ ದೋಹೆಯಲ್ಲಿ ಕಬೀರರು ಈ ಪ್ರಶ್ನೆಯನ್ನು ಎತ್ತುತ್ತಾರೆ. ಖರ್ಜೂರ ಮರ ನೋಡಲಿಕ್ಕೇನೋ ಎತ್ತರಕ್ಕೆ ಬೆಳೆದಿರುತ್ತದೆ. ಆದರೆ ಬಹುತೇಕ ಮರುಭೂಮಿಯಲ್ಲಿ ಬೆಳೆಯುವ ಈ ಮರದ ಎಲೆಗಳು ನೆರಳು ಕೊಡುವಂತೆ ಇರುವುದಿಲ್ಲ. ದಾರಿಹೋಕರು ಇದರ ಕೆಳಗೆ ಕುಳಿತು ದಣಿವಾರಿಸಿಕೊಳ್ಳೋಣ ಎಂದರೆ ಇದು ನೆರಳೇ ಕೊಡುವುದಿಲ್ಲ! ಹಸಿದಿದೆ, ಬಾಯಾರಿದೆ, ಹಣ್ಣು ತಿನ್ನೋಣವೆಂದರೆ, ಕೈಗೆಟುಕುವುದು ಬಿಡಿ; ಕಲ್ಲು ತೂರಿದರೂ ತಾಕದಷ್ಟು ದೂರ!!
ಬಹುತೇಕ ಲೌಕಿಕದಲ್ಲಿ ಸಾಧಕರು ಎನ್ನಿಸಿಕೊಂಡವರು ಹೀಗೆಯೇ ಇರುತ್ತಾರೆ. ಅವರ ಸಂಪತ್ತು, ಕೀರ್ತಿ ಎಲ್ಲವೂ ಅವರ ಸ್ವಾರ್ಥಕ್ಕೆ ಮೀಸಲಾಗಿಬಿಟ್ಟಿರುತ್ತದೆ ಹೊರತು ಸಮಾಜಕ್ಕೆ ಸಲ್ಲುವುದಿಲ್ಲ.
ನಮ್ಮ ಲೌಕಿಕ ಸಾಧನೆ ಗೌಣವೇನಲ್ಲ. ಆದರೆ ಅದು ಪರೋಪಕಾರಿಯಾಗಿರಬೇಕು. ನಮ್ಮ ಸಾಧನೆಯು ಸಮಾಜಕ್ಕೂ ಉಪಯೋಗವಾಗುವಂತಿರಬೇಕು. ನಮ್ಮ ದುಡಿಮೆಯ ಒಂದು ಪಾಲನ್ನಾದರೂ ಸಮಾಜದೊಂದಿಗೆ ಹಂಚಿಕೊಳ್ಳಬೇಕು. ನಮ್ಮ ಜ್ಞಾನದ ಒಂದಂಶವನ್ನಾದರೂ ಸಮಾಜದ ಒಳಿತಿಗೆ ಮೀಸಲಿಡಬೇಕು. ಆಗ ಮಾತ್ರ ನಮಗೆ ಸಮಗ್ರ ಶ್ರೇಯಸ್ಸು ಉಂಟಾಗುವುದು. ನಾವು ಹಣ, ಸಂಪತ್ತುಗಳನ್ನು; ಕೀರ್ತಿ, ಜನಪ್ರಿಯತೆಗಳನ್ನು ಗಳಿಸಿಯೂ ನೆಮ್ಮದಿಯಿಂದ ಇರಲು ಸಾಧ್ಯವಾಗುವುದಿಲ್ಲ.