ಕೃಷ್ಣ ಮತ್ತವನ ಸ್ನೇಹಿತರು ಎಂದಿನಂತೆ ಹುಲ್ಲುಗಾವಲಿನಲ್ಲಿ ಹಸು ಕರುಗಳನ್ನು ಮೇಯಿಸುತ್ತ ಕುಳಿತಿದ್ದರು. ಇದ್ದಕ್ಕಿದ್ದ ಹಾಗೆ ಸಮೀಪದ ಹಳ್ಳಿಯಿಂದ ಜನರ ಕೂಗಾಟ ಕೇಳಿಬರಲಾರಂಭಿಸಿತು. ಅವರೆಲ್ಲರೂ ಹಳ್ಳಿಯ ಹೆಬ್ಬಾಗಿಲಿನ ಕಡೆ ಓಡಿದರು. ಅಲ್ಲೇನು ನೋಡೋದು!? ಪೂರಾ ಧೂಳು ಮುಸುಕಿಕೊಂಡಿದೆ! ಎರಡು ಸೇನೆಗಳು ವೃಂದಾವನದ ನಡು ಬೀದಿಯಲ್ಲಿ ನಿಂತು ಯುದ್ಧ ಮಾಡುತ್ತಿದ್ದಾರೋ ಅನ್ನುವಂತೆ ಕವಿದುಕೊಂಡಿದೆ…
ಅವರೆಲ್ಲ ಅಚ್ಚರಿ – ಗಾಬರಿಗಳಿಂದ ನೋಡುತ್ತ ನಿಂತಿರುವಾಗಲೇ ದೊಡ್ಡದಾದ ಹೇಷಾವರ ಮೊಳಗಿತು. ಅದರ ಜೊತೆಗೇ ದೈತ್ಯಾಕಾರದ ಕುದುರೆಯೊಂದು ಕಾಣಿಸಿಕೊಂಡಿತು. ಅದರ ಹೆಸರು ಕೇಶಿ ಎಂದು. ಆ ದೈತ್ಯ ಕುದುರೆ ಅದೆಷ್ಟು ದೊಡ್ಡದಾಗಿತ್ತೆಂದರೆ, ಅಕ್ಕಪಕ್ಕದ ಮರಗಳೆಲ್ಲ ಕುಳ್ಳಕುಳ್ಳಗೆ ಕಾಣುತ್ತಿದ್ದವು. ಕೃಷ್ಣನನ್ನು ಹುಡುಕಿ ಕೊಲ್ಲಲೆಂದೇ ದುಷ್ಟ ಕಂಸ ಆ ಕುದುರೆಯನ್ನ ಕಳಿಸಿದ್ದ. ಆದರೆ ಇದು ವ್ರಜವಾಸಿಗಳಿಗೆ ಗೊತ್ತಿರಲಿಲ್ಲ. ಕುದುರೆಯನ್ನು ನೋಡುತ್ತಿದ್ದಂತೆಯೇ ಅಂಜಿ ಚಲ್ಲಾಪಿಲ್ಲಿಯಾಗಿ ಓಡುತ್ತ ತಮ್ಮತಮ್ಮ ಮನೆಗಳನ್ನು ಸೇರಿಕೋಂಡು ಕದ ಮುಚ್ಚಿಕೊಂಡಿದ್ದರು. ಕೇಶಿಯ ಕಣ್ಣುಗಳು ಕೆಂಪಗೆ ಕೆಂಡದಂತೆ ಉರಿಯುತ್ತಿದ್ದವು. ಕಂಸನ ಆದೇಶ ಸಿಕ್ಕ ಕೂಡಲೇ ಮಥುರೆಯಿಂದ ದೌಡಾಯಿಸಿಕೊಂಡು ಬಂದಿದ್ದರಿಂದ ಅದು ಏದುಸಿರು ಬಿಡುತ್ತಿತ್ತು, ಬಾಯಿಂದ ನೊರೆ ಉಕ್ಕಿಸುತ್ತಿತ್ತು. ಅದರ ದಟ್ಟ ಕೂದಲಗಳಿದ್ದ ಬಾಲವು ಜೋರಾಗಿ ತೊನೆದಾಡುತ್ತ ಬಿರುಗಾಳಿಯನ್ನೆ ಎಬ್ಬಿಸುತ್ತಿತ್ತು. ದಾರಿಗಡ್ಡವಾಗಿ ಬಂದ ಮನೆ, ಮರ, ಗುಡ್ಡ ದಿಣ್ಣೆಗಳೆಲ್ಲವೂ ಅದರ ಉದ್ದನೆಯ ಕಾಲುಗಳ ಭಾರೀ ಗಾತ್ರದ ಗೊರಸುಗಳ ಅಡಿಯಲ್ಲಿ ಸಿಕ್ಕು ನುಜ್ಜುಗುಜ್ಜಾಗಿಹೋಗಿದ್ದವು.
ಕೇಶಿಯನ್ನು ನೋಡುತ್ತಿದ್ದಂತೆಯೇ ಕೃಷ್ಣನಿಗೆ ಇದು ತನ್ನ ಮಾವ ದುಷ್ಟ ಕಂಸನೇ ತನ್ನನ್ನು ಕೊಲ್ಲಲು ಕಳಿಸಿರುವ ಅಸುರ ಎಂದು ಗೊತ್ತಾಗಿಹೋಯ್ತು. ತನ್ನ ಪ್ರೀತಿಯ ಗೆಳೆಯರು ಹಾಗೂ ವ್ರಜವಾಸಿಗಳಿಗೆ ಏನಾದರೂ ತೊಂದರೆ ಉಂಟಾಗುವ ಮೊದಲೇ ಸಾಧ್ಯವಾದಷ್ಟು ಶೀಘ್ರವಾಗಿ ಕ್ರಮಕೈಗೊಳ್ಳಬೇಕೆಂದು ಕೃಷ್ಣ ಯೋಚಿಸಿದ. ಮಿಂಚಿನ ವೇಗದಲ್ಲಿ ಜಿಗಿದು ಕೇಶಿಯ ಬೆನ್ನೇರಿದ ಕೃಷ್ಣ, ತನ್ನ ಪುಟ್ಟ ಕೈಗಳಿಂದ ಅದರ ತಲೆಯನ್ನು ಬಲವಾಗಿ ಗುದ್ದುತ್ತಾ ಹಳ್ಳಿಯಿಂದ ಸ್ವಲ್ಪ ದೂರದವರೆಗೆ ಕರೆದೊಯ್ದ. ಕೃಷ್ಣ ಚಿಕ್ಕ ಹುಡುಗನಾಗಿದ್ದರೂ ಅವನು ನೀಡಿದ ಹೊಡೆತದಿಂದ ಕೇಶಿ ಕುದುರೆಯು ನೋವು ತಡೆಯಲಾರದೆ ಘೀಳಿಡತೊಡಗಿತು. ಕೊನೆಗೆ ತನ್ನ ಮೈಯನ್ನು ಜೋರಾಗಿ ಕೊಡವಿ ಕೃಷ್ಣನನ್ನು ಕೆಳಹಾಕಿತು. ಅವನು ಸಾವರಿಸಿಕೊಂಡು ಏಳುವ ಮೊದಲೇ ಕೃಷ್ಣನ ಮೇಲೆ ಕಾಲಿಟ್ಟು ತನ್ನ ಗೊರಸುಗಳ ಅಡಿಯಲ್ಲಿ ಹೊಸಕಿ ಹಾಕಲು ಹವಣಿಸಿತು. ನುಸುಳಿಕೊಂಡ ಕೃಷ್ಣ, ಕೇಶಿಯ ಹಿಂದಿನ ಎರಡು ಕಾಲುಗಳನ್ನು ಜೋಡಿಸಿ ಒಂದು ಕೈಯಲ್ಲಿ ಹಿಡಿದುಕೊಂಡು ತಲೆ ಕೆಳಗಾಗಿ ಎತ್ತಿದ. ಮತ್ತೊಂದು ಕೈಯಿಂದ ಅದರ ಮೂತಿಗೆ ಜೋರಾಗಿ ಗುದ್ದಿ, ಕೇಶಿಯನ್ನು ನೆಲಕ್ಕೆ ಅಪ್ಪಳಿಸಿ ಬೀಸಿದ. ಈ ಹೊಡೆತಗಳನ್ನು ತಡೆಯಲಾಗದೆ ಅಸುರ ಕೇಶಿಯ ಪ್ರಾಣ ಪಕ್ಷಿ ಹಾರಿಹೋಯ್ತು. ಜೀವವಿಲ್ಲದ ಅದರ ದೆಹ ಧೊಪ್ಪನೆ ಕೆಳಗೆ ಬಿತ್ತು.
“ಕೃಷ್ಣನಿಗೆ ಜಯವಾಗಲಿ! ವೃಂದಾವನ ಚಂದ್ರ ಕೃಷ್ಣನಿಗೆ ಜಯವಾಗಲಿ!!” ಎಂದು ಕೂಗುತ್ತಾ ವ್ರಜವಾಸಿಗಳು ಹಾರೈಸಿದರು. ಈ ಎಲ್ಲವನ್ನೂ ನಂದ ಮಹಾರಾಜನ ಹಿಂದೆ ನಿಂತು ಆತಂಕದಿಂದ ನೋಡುತ್ತಿದ್ದ ಯಶೋದಾ ಮಾತೆಯು ಜನರ ನಡುವಿಂದ ತೂರಿಬಂದಳು. ಮಗನನ್ನು ಗಟ್ಟಿಯಾಗಿ ಅಪ್ಪಿಕೊಂಡು, “ಹೇ ಭಗವಂತ! ನನ್ನ ಮಗ ಸುರಕ್ಷಿತವಾಗಿದ್ದಾನೆ. ನಿನಗೆ ಧನ್ಯವಾದ!!” ಎಂದು ಉದ್ಗರಿಸಿದಳು. ಮಗನ ತಲೆ ನೇವರಿಸುತ್ತ ನಂದ ಮಹಾರಾಜ, “ನಿನ್ನನ್ನು ಮಗನಾಗಿ ಹೊಂದಿರುವುದು ನಮ್ಮ ಪರಮ ಭಾಗ್ಯ” ಎಂದು ಸಂತೋಷಿಸಿದನು. ಅವರ ಈ ಖುಷಿಯಲ್ಲಿ ಇಡಿಯ ವೃಂದಾವನವೇ ಭಾಗಿಯಾಯಿತು, ಕೃಷ್ಣನನ್ನು ಕೊಂಡಾಡಿತು.