ನಸ್ರುದ್ದೀನನ ಕತ್ತೆಯ ಬಂಧುಗಳು

Mullaಮ್ಮೆ ಮುಲ್ಲಾ ನಸ್ರುದ್ದೀನ್ ತನ್ನ ಕತ್ತೆಯ ಮೇಲೆ ಬುಟ್ಟಿ ತುಂಬ ತರಕಾರಿ ಹೇರಿಕೊಂಡು ಸಂತೆಗೆ ಹೋಗುತ್ತಿದ್ದ. ನಡು ದಾರಿಯಲ್ಲಿ ಕತ್ತೆ ಹೆಜ್ಜೆ ಮುಂದಿಡದೆ ನಿಂತುಬಿಟ್ಟಿತು.
ನಸ್ರುದ್ದೀನ್ ಅದರ ಕೊರಳು ಸವರಿ ಮುನ್ನಡೆಯುವಂತೆ ಓಲೈಸಿದ. ಆದರೆ ಕತ್ತೆ ಜಪ್ಪಯ್ಯ ಅನ್ನಲಿಲ್ಲ. ನಸ್ರುದ್ದೀನ್ ಗೆ ಸಿಟ್ಟೇ ಬಂದಿತು. ಕೋಲು ತೆಗೆದುಕೊಂಡು ಅದಕ್ಕೆ ಹೊಡೆದ. ಆದರೂ ಕತ್ತೆ ಅಲುಗಾಡಲಿಲ್ಲ. ಕೊನೆಗೆ ಸಿಟ್ಟು ನೆತ್ತಿಗೇರಿ ಜೋರಾಗಿ ಬಾರಿಸತೊಡಗಿದ.

ನಸ್ರುದ್ದೀನ್ ತನ್ನ ಪ್ರೀತಿಯ ಕತ್ತೆಗೆ ಯಾಕೆ ಹೊಡೆಯುತ್ತಿದ್ದಾನೆ ಎಂದು ನೋಡಲು ಅಲ್ಲಿ ಜನರ ನೆರೆಯೇ ಸೇರಿತು.
ಅವರಲ್ಲಿ ಒಬ್ಬ ಕೇಳಿದ, “ಪಾಪ! ಆ ಬಡಪಾಯಿಗೇಕೆ ಹೊಡೆಯುತ್ತಿರುವೆ?”
“ಅದಕ್ಕೆ ಹೊಡೆಯುವುದನ್ನು ನಿಲ್ಲಿಸು ನಸ್ರುದ್ದೀನ್!” ಇನ್ನೊಬ್ಬ ಜೋರು ಮಾಡಿದ.
“ನೀನೆಷ್ಟು ಕ್ರೂರಿ,” ಅಂತ ಲೊಚಗುಟ್ಟಿದ ಮಗದೊಬ್ಬ.

ನಸ್ರುದ್ದೀನ್ ಹೊಡೆಯುವುದನ್ನು ನಿಲ್ಲಿಸಿ ಮೆಚ್ಚುಗೆಯ ದೃಷ್ಟಿಯಿಂದ ಕತ್ತೆಯನ್ನು ನೋಡುತ್ತ ಹೇಳಿದ, “ನಿನ್ನ ರಕ್ಷಣಗೆ ಧಾವಿಸಿ ಬರಲು ಇಷ್ಟೊಂದು ಬಂಧುಗಳು ನಿನಗಿದ್ದಾರೆ ಎಂಬುದು ಮೊದಲೇ ತಿಳಿದಿದ್ದಿದ್ದರೆ ನಾನು ನಿನಗೆ ಹೊಡೆಯುತ್ತಲೇ ಇರಲಿಲ್ಲ. ದೊಡ್ಡಬಾಯಿಯ ಇಷ್ಟು ದೊಡ್ಡ ಕುಟುಂಬದಿಂದ ನೀನು ಬಂದಿರುವೆ ಎಂದು ನನಗೆ ಈಗ ತಾನೇ ತಿಳಿಯಿತು”

ನಸ್ರುದ್ದೀನನ ವ್ಯಂಗ್ಯ ಸುತ್ತ ನೆರೆದವರನ್ನು ದಾಟಿತು. ಒಬ್ಬೊಬ್ಬರೇ ಮುಖ ಮುಚ್ಚಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದರು.

Leave a Reply