ತಾವೋ ತಿಳಿವು #43 ~ ಬೆಳಕನ್ನು ಧರಿಸುವುದೆಂದರೆ ಹೀಗೆ…

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

tao

ನುರಿತ ಪ್ರಯಾಣಿಕನಿಗೆ
ಪೂರ್ವ ಸಿದ್ಧತೆಗಳಲ್ಲಿ ನಂಬಿಕೆಯಿಲ್ಲ.
ಒಳ್ಳೆಯ ಕಲಾವಿದನೂ ಹಾಗೆಯೇ
ಒಳಗಣ್ಣಿಗೆ ಮಾತ್ರ ತಲೆ ಬಾಗುತ್ತಾನೆ.
ಪ್ರಖರ ವಿಜ್ಞಾನಿಗೆ, ಸಿದ್ಧಾಂತಗಳ ಹಂಗಿಲ್ಲ
ಮಾತು ಬಲ್ಲವ, ತಡವರಿಸುವುದಿಲ್ಲ
ಬೆರಳು ಬಳಸದೇ ಎಣಿಸುವವನೇ
ಚತುರ ವ್ಯಾಪಾರಿ.

ಅಂತೆಯೇ ಸಂತ,
ಎಲ್ಲರ ಕೈಗೂ ಸಿಗುತ್ತಾನೆ
ಯಾರನ್ನೂ ತಿರಸ್ಕರಿಸುವುದಿಲ್ಲ
ಯಾವ ಸಂದರ್ಭವನ್ನೂ ದೂರುವುದಿಲ್ಲ
ಎಲ್ಲವನ್ನೂ ಬಳಸಿಕೊಳ್ಳುತ್ತಾನೆ.
ಬೆಳಕನ್ನು ಧರಿಸುವುದೆಂದರೆ, ಹೀಗೆ.

ಒಳ್ಳೆ ಮನುಷ್ಯ ಯಾರು? ಕೆಟ್ಟ ಮನುಷ್ಯನ ಶಿಕ್ಷಕ.
ಕೆಟ್ಟ ಮನುಷ್ಯ ಯಾರು ? ಒಳ್ಳೆ ಮನುಷ್ಯನ ಜವಾಬ್ದಾರಿ.
ನೀವು ಎಂಥ ಜಾಣರಾದರೂ ಸರಿ
ಈ ಸೂಕ್ಷ್ಮ ಗೊತ್ತಿರದೇ ಹೋದರೆ
ಕಳೆದು ಹೋಗಿ ಬಿಡುತ್ತೀರಿ.

ಇದು ಪರಮ ರಹಸ್ಯ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply