ಪ್ರತಿಯೊಂದು ಜೀವಿಯಲ್ಲೂ ‘ನಾರಾಯಣ’ ಇರುವನು!

ಒಮ್ಮೆ ಒಬ್ಬ ಗುರು ತನ್ನ ಶಿಷ್ಯನಿಗೆ ಬೋಧನೆ ಮಾಡುತ್ತಾ, “ಪತ್ರಿಯೊಂದು ಜೀವಿಯಲ್ಲೂ ನಾರಾಯಣ ನೆಲೆಸಿದ್ದಾನೆ” ಎಂದು ಹೇಳಿದರು.  ಗುರುವಿನ ಈ ಮಾತು ಶಿಷ್ಯನ ತಲೆಯಲ್ಲಿ ಅಚ್ಚೊತ್ತಿ ನಿಂತಿತು.

ಮರುದಿನ ಆ ಶಿಷ್ಯ ಚಿಕ್ಕದೊಂದು ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಒಂದು ಆನೆ ಬರುತ್ತಿರುವುದು ಕಾಣಿಸಿತು. ಆನೆಯ ಮೇಲಿದ್ದ ಮಾವುತನು ದಾರಿಹೋಕರಿಗೆ  “ಆನೆಗೆ ಮದವೇರಿದೆ, ನನ್ನ ಅಂಕುಶಕ್ಕೂ ಮಣಿಯುತ್ತಿಲ್ಲ, ರಸ್ತೆಯಿಂದ ದೂರ ಸರಿಯಿರಿ” ಎಂದು ಕೂಗಿ ಹೇಳುತ್ತಿದ್ದ.

ಶಿಷ್ಯನಿಗೂ ಈ ಕೂಗು ಕೇಳಿಸಿತು. ಆದರೆ ಸಕಲ ಪ್ರಾಣಿಗಳಲ್ಲೂ ನಾರಾಯಣ ನೆಲೆಸಿರುತ್ತಾನೆ, ಎಂದು ಗುರುಗಳು ನೆನ್ನೆ ತಾನೆ ಹೇಳಿದ್ದರಲ್ಲ? ಹಾಗಾದರೆ ‘ಆನೆ’ಯಲ್ಲೂ ‘ನಾರಾಯಣ’ ನೆಲೆಸಿದ್ದಾನೆ ಎಂದು ಆತ ಭಾವಿಸಿದ. ಮಾವುತ ಕೂಗಿ ಎಚ್ಚರಿಸುತ್ತಿದ್ದರೂ ಕಡೆಗಣಿಸಿ ಆನೆಯೆದುರು ಸಾಷ್ಟಾಂಗ ನಮಸ್ಕಾರ ಹಾಕತೊಡಗಿದ. ಮೊದಲೇ ಆನೆಗೆ ಮದವೇರಿತ್ತು. ತನ್ನೆದುರು ಮಂಡಿಯೂರುತ್ತಿದ್ದ ಆ ಶಿಷ್ಯನನ್ನು ಅದು ಸೊಂಡಿಲಿನಿಂದ ಅವನನ್ನು ಎತ್ತಿ ಬಿಸಾಡಿತು.

ಪೂರ್ವಪುಣ್ಯದಿಂದ ಶಿಷ್ಯ ಸಮೀಪದ ಕೊಳದಲ್ಲಿ ಬಿದ್ದು ಪೆಟ್ಟುಗಳಿಂದ ಬಚಾವಾದ. ಏದುಸಿರು ಬಿಡುತ್ತಾ ಗುರುವಿನ ಎದುರು ನಿಂತು, “ನೀವು ಹೇಳಿದ್ದು ಸುಳ್ಳಾಯಿತು. ಎಲ್ಲ ಜೀವಿಗಳಲ್ಲೂ ನಾರಾಯಣ ನೆಲೆಸಿದ್ದು ನಿಜವೇ ಆಗಿದ್ದರೆ ಆ ಆನೆ ನನ್ನನ್ನೇಕೆ ಎಸೆಯಿತು? ಅದರಲ್ಲಿ ನಾರಾಯಣನಿರಲಿಲ್ಲ” ಎಂದು ದೂರಿದ.

ಶಾಂತವಾಗಿ ನಗುತ್ತಾ ಗುರುಗಳು “ಆನೆಯ ಮೇಲಿದ್ದ ಮಾವುತ ನಿನಗೇನೂ ಹೇಳಲಿಲ್ಲವೆ?” ಎಂದು ಕೇಳಿದರು.

ಗೊಂದಲಗೊಂಡ ಶಿಷ್ಯ, “ಆನೆಗೆ ಮದವೇರಿದೆ, ನನ್ನ ಹಿಡಿತಕ್ಕೆ ಬಗ್ಗುತ್ತಿಲ್ಲ,ಪಕ್ಕಕ್ಕೆ ಸರಿಯಿರಿ ಎಂದು ಆತ ಕೂಗಿ ಹೆಳುತ್ತಿದ್ದ” ಎಂದ.  

“ಆನೆಯ ಮೇಲೆ ಕುಳಿತಿದ್ದ ಮಾವುತನಲ್ಲೂ ನಾರಾಯಣನಿದ್ದ ಮತ್ತು ಆತ ನಿನಗೆ ಮುನ್ನೆಚ್ಚರಿಕೆ ನೀಡುತ್ತಿದ್ದ. ನೀನು ಆನೆಯಲ್ಲಿ ನಾರಾಯಣನನ್ನು ಕಂಡು ನಮಸ್ಕರಿಸಲು ಹೋದೆ. ಆದರೆ ಮಾವುತನಲ್ಲಿ ನಾರಾಯಣನನ್ನು ಕಂಡು ಆತನ ಮಾತಿಗೆ ಮನ್ನಣೆ ನೀಡಲಿಲ್ಲವೇಕೆ?” ಎಂದು ಕೇಳಿದರು.

ಶಿಷ್ಯನಿಗೆ ತನ್ನ ತಪ್ಪಿನ ಅರಿವಾಯಿತು. ಗುರುವಿನಲ್ಲಿ ಕ್ಷಮೆ ಬೇಡಿ ಅವರ ಮಾತನ್ನೇ ಧೇನಿಸುತ್ತಾ ಕುಳಿತ.

~

(ರಾಮಕೃಷ್ಣ ಪರಮಹಂಸರು ಹೇಳಿದ ದೃಷ್ಟಾಂತ ಕಥೆ)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.