ಬಾವುಲ್ : ಭಕ್ತಿಯಲಿ ಉನ್ಮತ್ತ ಪರಂಪರೆ

ಬಾವುಲ್ ಪಂಗಡ ಅತ್ಯಂತ ಸಂಕೀರ್ಣವಾದುದು. ಇಲ್ಲಿ ಹಲವು ಮೂಲಗಳಿಂದ ಬಂದು ಸೇರಿದ ಜನರಿದ್ದಾರೆ. ತಲೆಮಾರುಗಳ ಹಿಂದೆ ಬಾವುಲ್‍ಪಂಥದತ್ತ ಆಕರ್ಷಿತರಾಗಿ ಬಂದ ಬೇರೆ ಬೇರೆ ಜಾತಿ ಮತಗಳವರು ಸೇರಿ ಈ ವಿಶಿಷ್ಟವಾದ ಪಂಗಡ ಬೆಳೆದುಕೊಂಡಿದೆ. ಇವರ ಸಂಖ್ಯೆ ಬಹಳ ಕಡಿಮೆ ಇರುವುದಾದರೂ ಬಂಗಾಳ ಪ್ರಾಂತ್ಯದಲ್ಲಿ ಬಾವುಲ್‍ಗಳು ಬೀರಿರುವ ಪರಿಣಾಮ ಗಣನೀಯವಾದುದು ~ ಚೇತನಾ ತೀರ್ಥಹಳ್ಳಿ

 

maa

ಬಾವುಲ್‍ಗಳು ಅಪ್ಪಟ ಮಣ್ಣಿನ ಮಕ್ಕಳು. ದೇಸೀತನ ಇವರಲ್ಲಿ ನೂರಕ್ಕೆ ನೂರು ಮೇಳೈಸಿರುತ್ತದೆ. ಅವರ ನಡೆ ನುಡಿಗಳೆಲ್ಲವೂ ಅತ್ಯಂತ ಪ್ರಾಮಾಣಿಕ, ನೇರ ಮತ್ತು ಅಷ್ಟೇ ನಿಷ್ಠುರ. ಭಾರತದ ಪೂರ್ವ ಭಾಗದ ರಾಜ್ಯಗಳಲ್ಲಿ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಇವರು ಹೆಚ್ಚಾಗಿ ಕಂಡುಬರುತ್ತಾರೆ. ಹಿಂದೂಸ್ಥಾನಿ ಭಾಷೆಯಲ್ಲಿ `ಬಾವುಲ್’ ಅಂದರೆ `ಉನ್ಮತ್ತ` ಅಥವಾ `ಹುಚ್ಚು’ ಎಂದರ್ಥ. ಸದಾ ಕಾಲವೂ ಭಕ್ತಿ ಸಂಗೀತದ ಪರಾಕಾಷ್ಠೆಯಲ್ಲಿ ಉನ್ಮತ್ತರಾಗಿರುವ ಈ ಪಂಗಡಕ್ಕೆ `ಬಾವುಲ್’ ಎಂಬ ಹೆಸರು ಬಂದಿರುವುದೂ ಈ ಕಾರಣದಿಂದಲೇ.

ಬಾವುಲ್ ಪಂಗಡ ಅತ್ಯಂತ ಸಂಕೀರ್ಣವಾದುದು. ಇಲ್ಲಿ ಹಲವು ಮೂಲಗಳಿಂದ ಬಂದು ಸೇರಿದ ಜನರಿದ್ದಾರೆ. ತಲೆಮಾರುಗಳ ಹಿಂದೆ ಬಾವುಲ್‍ಪಂಥದತ್ತ ಆಕರ್ಷಿತರಾಗಿ ಬಂದ ಬೇರೆ ಬೇರೆ ಜಾತಿ ಮತಗಳವರು ಸೇರಿ ಈ ವಿಶಿಷ್ಟವಾದ ಪಂಗಡ ಬೆಳೆದುಕೊಂಡಿದೆ. ಇವರ ಸಂಖ್ಯೆ ಬಹಳ ಕಡಿಮೆ ಇರುವುದಾದರೂ ಬಂಗಾಳ ಪ್ರಾಂತ್ಯದಲ್ಲಿ ಬಾವುಲ್‍ಗಳು ಬೀರಿರುವ ಪರಿಣಾಮ ಗಣನೀಯವಾದುದು. ಇವರಲ್ಲಿ ಭಕ್ತ ವೈಷ್ಣವ ಹಾಗೂ ಸೂಫಿಗಳೆಂಬ ಎರಡು ಒಳಪಂಗಡಗಳಿದ್ದು, ಉಡುಗೆ ತೊಡುಗೆಗಳಷ್ಟೆ ಇವರ ನಡುವಿನ ಭೇದ. ಉಳಿದಂತೆ ಈ ಮಂದಿ ಎಲ್ಲ ಬಗೆಯಿಂದಲೂ ಒಂದೇ ಬಗೆಯ `ಹುಚ್ಚ’ರೇ!

ಬಾವುಲ್‍ಗಳಿಗೆ ಗೊತ್ತಿರುವುದು ಪ್ರೇಮವಷ್ಟೆ. ಇವರ ಉಪಾಸನೆಯ ಮಾರ್ಗವೂ ಪ್ರೇಮವೇ. ಇವರ ಬೋಧನೆ, ಕಲಿಕೆ ಎಲ್ಲವೂ ಪ್ರೇಮದ ಸುತ್ತಮುತ್ತಲೇ ಇರುತ್ತವೆ. ಭಗವತ್ಪ್ರೇಮ, ಮನುಷ್ಯರ ನಡುವಿನ ಪ್ರೇಮಗಳಿಂದ ಮಾತ್ರ ಮುಕ್ತಿ ಸಾಧ್ಯ ಎನ್ನುವುದು ಇವರ ಮೂಲ ಮಂತ್ರ. ‘ಪ್ರೇಮದ ಗಂಧವನ್ನು ಅನುಭವಿಸಬೇಕೆಂದರೆ ಅದರಲ್ಲಿ ಸಂಪೂರ್ಣ ಮುಳುಗಬೇಕು. ಪ್ರೇಮಕ್ಕೆ ಅದರದ್ದೇ ಆದ ಬಣ್ಣಗಳಿವೆ. ಪ್ರೇಮದಲ್ಲಿ ಇರುವುದು ಒಂದು ವಿಷಯ ಮಾತ್ರವಲ್ಲ, ಅದು ಬಲು ಸಮೃದ್ಧ. ಬಲು ಫಲವತ್ತಾದ ಸಂಗತಿಯದು. ಅದಕ್ಕೆ ಬಹಳಷ್ಟು ಸ್ವರೂಪಗಳಿವೆ. ಪ್ರೇಮವೊಂದು ವಜ್ರದಂತೆ. ಬಹಳಷ್ಟು ಮುಖಗಳನ್ನು ಅದು ಹೊಂದಿದೆ. ಅದರ ಪ್ರತಿಯೊಂದು ಮುಖದ ಹೊಳಪೂ ಅದರ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ’ ಎಂದು ಬಾವುಲ್‍ಗಳು ಹೇಳುತ್ತಾರೆ. ಹದಿನಾಲ್ಕನೇ ಶತಮಾನದಿಂದೀಚೆಗೆ ದೊಡ್ಡ ಸಂಖ್ಯೆಯಲ್ಲಿ ಬೆಳೆದುಕೊಂಡ ಈ ಪಂಗಡ, ಆ ಕಾಲಘಟ್ಟದಲ್ಲಿ ವಿಷಮ ಪರಿಸ್ಥಿತಿ ತಲುಪಿದ್ದ ಜಾತೀಯ ತಾರತಮ್ಯಕ್ಕೆ ಮದ್ದಾಗಿ ಪರಿಣಮಿಸಿತು. ಭಕ್ತಿಪ್ರೇಮದ ಹೆಸರಲ್ಲಿ ಜನರನ್ನು ವರ್ಣಭೇದದ ಮಡಿವಂತಿಕೆಯಿಂದ ಹೊರಗೆಳೆಯಿತು. ಗೊಡ್ಡು ಆಚಾರಗಳನ್ನು ಹಾಡಿನಲ್ಲೇ ಹೀಗಳೆಯುತ್ತ ದೊಡ್ಡ ಕ್ರಾಂತಿಯನ್ನೆ ಉಂಟುಮಾಡಿತು. 

ಬಾವುಲ್‍ಗಳು ‘ದೇಹ ತತ್ತ’ ಎಂಬ ತತ್ತ್ವಕ್ಕೆ ಮನ್ನಣೆ ಕೊಟ್ಟಿದ್ದಾರೆ. ಇದು ಮನೋಬುದ್ಧಿಗಳಿಗಿಂತ ದೇಹಕ್ಕೆ ಪ್ರಾಧಾನ್ಯ ನೀಡುತ್ತದೆ. ‘ದೇಹದಿಂದ ಗ್ರಹಿಸಬೇಕಾದ್ದನ್ನು ದೇಹದಿಂದಲೇ ಅನುಭವಿಸಿ ತಿಳಿಯಬೇಕು. ಪ್ರೇಮವನ್ನು ಪ್ರೇಮಿಸಿಯೇ ಪಡೆಯಬೇಕು’ ಎನ್ನುವುದು ಇವರ ನಂಬಿಕೆ. ಈ ಪಂಥಕ್ಕೆ ಪ್ರತ್ಯೇಕ ದೇವರಲ್ಲ. ಮನುಷ್ಯರೇ ಇವರ ಪಾಲಿಗೆ ದೇವರು, ಪ್ರೇಮವೇ ಇವರು ಸಲ್ಲಿಸುವ ಪೂಜೆ.
ರಾಮಕೃಷ್ಣ ಪರಮಹಂಸರು ತಮ್ಮ ಮುಂದಿನ ಜನ್ಮದಲ್ಲಿ ಬಾವುಲ್ ಆಗಿ ಜನಿಸುವೆನೆಂದು ಮುನ್ನುಡಿದಿದ್ದರು. ಜನರ ನಡುವೆಯೇ ಇದ್ದು ಜನರನ್ನು ತಲುಪುವ ಮಾರ್ಗ ಮಿಕ್ಕೆಲ್ಲ ಜ್ಞಾನವನ್ನೂ ಮೀರಿದ ಪ್ರೇಮವೊಂದೇ ಎನ್ನುವುದು ಪರಮಹಂಸರ ಹೇಳಿಕೆಯಾಗಿತ್ತು. ಅದಕ್ಕಾಗಿಯೇ ಅವರು ಬಾವುಲ್ ಆಗಿ ಜನಿಸುವ ಇಂಗಿತ ವ್ಯಕ್ತಪಡಿಸಿದ್ದುದು.

ಬಾವುಲ್ ಸಂಗೀತ
ಬಾವುಲ್‍ಗಳ ಸಂಗೀತಕ್ಕೆ ತನ್ನದೇ ಆದ ವಿಶಿಷ್ಟ ರಾಗ ಇದೆ. ಕೇಳಿದೊಡನೆ ಗುರುತಿಸಬಹುದಾದ ಸ್ವಂತಿಕೆ ಇದೆ. ಜಾನಪದೀಯ ಸೊಗಡಿನಿಂದ ಮೆಲ್ಲಮೆಲ್ಲನೆ ಕೇಳುಗರನ್ನು ಒಳಗೊಳ್ಳುತ್ತಾ ಮತ್ತು ಹಿಡಿಸುವ ವಿಭಿನ್ನ ಸ್ವಾದ ಇವರ ಸಂಗೀತಕ್ಕೆ ಇರುತ್ತದೆ. ಅವರು ಹೆಣೆಯುವ ಸಾಹಿತ್ಯದ ಒರಟುತನವೇ ಅದರ ತಾಜಾತನವೂ ಆಗಿರುತ್ತದೆ. ಪ್ರೇಮವೇ ಈ ಎಲ್ಲ ಗೀತೆಗಳ ಪ್ರಧಾನ ರಸ. ಬಾವುಲ್‍ಗಳು ಹಾಡನ್ನು ಬರೆದಿಟ್ಟ ಉದಾಹರಣೆಗಳಿಲ್ಲ. ಇವು ಹಲವು ಶತಮಾನಗಳಿಂದ ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿಯೇ ಹರಿದು ಬಂದಿರುವಂಥದ್ದು. ಇಂದು ಬಾವುಲ್ ಪಂಗಡದ ಕೆಲವು ಗಾಯಕರು ವಿಶ್ವಪ್ರಸಿದ್ಧಿಯನ್ನು ಪಡೆದಿದ್ದಾರೆ. ಏಕತಾರಿಯನ್ನೋ ಕರತಾಳವನ್ನೋ ಹಿಡಿದು ಕಾಲಿಗೆ ಗುಂಘುರೂ ಕಟ್ಟಿಕೊಂಡು ಹೆಜ್ಜೆ ಹಾಕುತ್ತ ಹಾಡುವ ಇವರ ಪರಿಯೇ ಅನನ್ಯ.
ರವೀಂದ್ರನಾಥ ಠಾಕೂರರು `ರವೀಂದ್ರ ಸಂಗೀತ’ವೆಂದು ಖ್ಯಾತವಾಗಿರುವ ತಮ್ಮ ಕೃತಿಗಳಿಗೆ ಬಾವುಲ್‍ಗಳ ಸಂಗೀತ ಮತ್ತು ಸಾಹಿತ್ಯಗಳೇ ಪ್ರೇರಣೆ ಎಂದು ಹೇಳಿಕೊಂಡಿದ್ದಾರೆ. ರವೀಂದ್ರರು ಮಾತ್ರವಲ್ಲ, ಒಟ್ಟಾರೆ ಬಂಗಾಳದ ಸಾಹಿತ್ಯ ಪರಂಪರೆಯ ಮೇಲೆಯೇ ಇವರ ಸಂಗೀತದ ಪ್ರಭಾವವಿದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

ಇಂದಿನ ಬಾವುಲರು
ಬಾವುಲ್ ಪಂಗಡ ಇಂದು ತನ್ನ ವಿಶಿಷ್ಟ ಗಾಯನ ಪ್ರತಿಭೆಗಳಿಂದಾಗಿ ವಿಶ್ವದ ಗಮನ ಸೆಳೆಯುತ್ತಿದೆ. ಪಾರ್ವತಿ ಬಾವುಲ್, ಪಬನ್ ದಾಸ್ ಬಾವುಲ್ ಮೊದಲಾದವರು ಇಂದು ತಮ್ಮ ಸಂಗೀತವನ್ನು ಉಣಬಡಿಸುವುದಕ್ಕಾಗಿಯೇ ದೇಶ ವಿದೇಶಗಳ ಪರ್ಯಟನೆ ಕೈಗೊಳ್ಳುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪುಷ್ಯ ಹಾಗೂ ಫಾಲ್ಗುಣ ಮಾಸಗಳಲ್ಲಿ ಬಾವುಲ್ ಜಾತ್ರೆಗಳು ನಡೆಯುತ್ತವೆ. ಇವಿಷ್ಟೇ ಅಲ್ಲದೆ ಅಲ್ಲಿನ ಸರ್ಕಾರ ಕೂಡ `ಬಾವುಲ್ ಫಕೀರ್’ ಹೆಸರಿನ ಮೇಳವನ್ನು ಕಳೆದ ಐದು ವರ್ಷಗಳಿಂದ ನಡೆಸುತ್ತ ಬಂದಿದ್ದು, ತನ್ನ ಪ್ರಾಂತ್ಯದ ಈ ಅಮೂಲ್ಯ ಸಂಪ್ರದಾಯವನ್ನು ಉಳಿಸಿಕೊಳ್ಳುವ ಯತ್ನ ನಡೆಸುತ್ತಿದೆ.

ಎರಡು ತುಣುಕುಗಳು

ಬಾವುಲ್ ಸಾಹಿತ್ಯದ ಪರಿಚಯ ಮಾಡಿಸುವ ಎರಡು ರಚನೆಗಳ ಅನುವಾದ ಇಲ್ಲಿವೆ: 

~ 1 ~
ಪ್ರೇಮದ ಸ್ವಾದ ಹಾಗೂ ಅದರ ಗಂಧವನ್ನು ,
ಪ್ರೇಮಿಯ ಹೃದಯದ ಭಾಷೆಯನ್ನು
ರಸಜ್ಞ ತಾನೆ ಶೋಸಿ ತಿಳಿಯಬಲ್ಲ?
ಹೂವಿನೊಳಗೆ ಜೇನಿದೆ. ಅದು ದುಂಬಿಗಷ್ಟೆ ಗೊತ್ತು.
ಸೆಗಣಿ ಹುಳುವಿಗೇನು ಗೊತ್ತು ಅದರ ಇರುವು?
ಅರಿವಿನ ಗುಟ್ಟು ಇಷ್ಟೇ…
ಹುಡುಕಾಟಕ್ಕೆ ನಮ್ಮನ್ನೆ ನಾವು ಕೊಟ್ಟುಕೊಳ್ಳೋದು.

~ 2 ~
ಮಂದಿರದಲ್ಲಿ ಕುಳಿತ ನಿಮ್ಮ ದೇವರು
ಹೃದಯವನ್ನ ಬತ್ತಿಸಿಬಿಟ್ಟಿರುವನು
ಶಂಖ ಊದಿ, ಜಾಗಟೆ ಬಾರಿಸಿ…
ನಿಮಗೆ ಸಿಗುವುದು ಶಬ್ದದ ಖುಷಿಯಷ್ಟೆ.
ಅವನ ಮನೆ ತಲುಪುವ ನಿಜ ಹಾದಿಗೆ
ಮಂದಿರ ಮಸೀದಿಗಳೇ ಅಡ್ಡಿ.
ಹೇ ಪ್ರಭೂ,
ನಿನ್ನ ಕರೆ ಕೇಳಿಸುತ್ತಿದೆ, ಬರಲಾಗುತ್ತಿಲ್ಲ ನಿನ್ನ ಬಳಿಗೆ.
ಇಗೋ,
ಈ ಪೂಜಾರಿ, ಪುರೋಹಿತರೆಲ್ಲ ತಡೆದು ನಿಂತಿದ್ದಾರೆ!

 

Leave a Reply