ನಿಷ್ಠೆಗೆ ರೂಪಕವಾದ ಒಡಿಸಿಯಸ್ಸನ ನಾಯಿ ಆರ್ಗೋಸ್  :  ಗ್ರೀಕ್ ಪುರಾಣ ಕಥೆಗಳು  ~ 20

ಒಡೆಯನಿಗಾಗಿ ಇಪ್ಪತ್ತು ವರ್ಷಗಳ ಕಾಲ ಕಾದಿದ್ದ ಆರ್ಗೋಸ್, ಅವನನ್ನು ನೋಡಿ, ಬಾಲವಾಡಿಸಿ ಕೊನೆಯುಸಿರೆಳೆಯಿತು. “ನಿಷ್ಠೆಯೆಂದರೆ ನಾಯಿಯದು” ಎಂದು ಉದ್ಗರಿಸಿದ ಒಡಿಸ್ಸಿಯಸ್ ಹೆಜ್ಜೆ ಮುಂದಿಟ್ಟ. ಅವನ ಕಣ್ಣಾಲಿಗಳು ದುಃಖದಿಂದ ತುಂಬಿಹೋಗಿದ್ದವು.  

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

argos n odysseus

ಥಾಕಾದ ದೊರೆ ಒಡಿಸ್ಸಿಯಸ್ ಟ್ರಾಯ್ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ್ದ. ಹತ್ತು ವರ್ಷಗಳಷ್ಟು ದೀರ್ಘ ಕಾಲ ನಡೆದ ಯುದ್ಧ ಮುಗಿಸಿ ಮರಳುವಾಗ ಅನೇಕ ಅಡ್ಡಿ ಆತಂಕಗಳನ್ನು ಅವನು ಎದುರಿಸಬೇಕಾಯ್ತು. ಸಿಸಿಲಿ ಸಮುದ್ರವನ್ನು ಹಾದು ಬರುವಾಗ ಭಯಾನಕ ಜಲಪಿಶಾಚಿಯಾಗಿ ಮಾರ್ಪಾಟಾಗಿದ್ದ ಸಿಲಾ ಅವನ ಹಡಗನ್ನು ಅಡ್ಡಗಟ್ಟಿದ್ದಳು. ತನ್ನ ಆರೂ ಮೂತಿಗಳನ್ನು ಚಾಚಿ ಒಡಿಸಿಯಸ್ಸನ ಆರು ನಾವಿಕರನ್ನು ಹಿಡಿದು ನುಂಗಿಬಿಟ್ಟಿದ್ದಳು. ಇದರಿಂದ ಒಡಿಸಿಯಸ್ಸನ ಪ್ರಯಾಣ ಭಾರೀ ತೊಂದರೆಗೆ ಸಿಲುಕಿತು. ಮತ್ತೆ ಹತ್ತು ವರ್ಷಗಳ ಕಾಲ ಅವನು ಸಮುದ್ರದಲ್ಲೇ ದಿಕ್ಕೆಟ್ಟು ಅಲೆಯುತ್ತಾ ಕೊನೆಗೂ ಇಥಾಕಾ ತಲುಪಲು ಯಶಸ್ವಿಯಾದ.

ಇತ್ತ ಇಥಾಕಾದಲ್ಲಿ ಒಡಿಸ್ಸಿಯಸ್ ಇಲ್ಲದ ಲಾಭವನ್ನು ಪಡೆಯಲು ಅನೇಕರ ಹೊಂಚು ಹಾಕುತ್ತಿದ್ದರು. ಅವನ ಅಧಿಕಾರ ಮತ್ತು ಸಂಪತ್ತನ್ನು ಕಬಳಿಸಿ, ರಾಣಿ ಪೆನಲೋಪಳನ್ನು ಮದುವೆಯಾಗಲು ಸಂಚು ಹೂಡಿದ್ದರು. ಈ ಕುರಿತಾಗಿ ತಮ್ಮಲ್ಲೇ ಹೊಡೆದಾಡುತ್ತಿದ್ದರಿಂದ ಇನ್ನೂ ಅವರ ದುರಾಸೆ ನೆರವೇರಿರಲಿಲ್ಲ.

ಹೀಗೆ ಒಟ್ಟು ಇಪ್ಪತ್ತು ವರ್ಷಗಳು ಕಳೆದು ಒಡಿಸ್ಸಿಯಸ್ ತನ್ನ ಮನೆಗೆ ಮರಳಿದ. ಆದರೆ ಅಲ್ಲಿನ ಪರಿಸ್ಥಿತಿಯಲ್ಲಿ ತನ್ನ ನಿಜರೂಪದಲ್ಲಿ ಅವನು ಒಳಗೆ ಪ್ರವೇಶಿಸುವಂತಿರಲಿಲ್ಲ. ಅವನನ್ನು ನೋಡಿದ ಕೂಡಲೇ ಸಂಚುಗಾರರು ಅವನ ಮೇಲೆರಗಿ ಕೊಂದುಹಾಕುವ ಸಾಧ್ಯತೆ ಇತ್ತು. ಅಥವಾ ತನ್ನ ಹೆಂಡತಿ, ಮಕ್ಕಳು ತನ್ನನ್ನು ಗುರುತಿಸುವರೋ ಇಲ್ಲವೋ, ಸ್ವಾಗತಿಸುವರೋ ಇಲ್ಲವೋ ಎಂಬ ಯೋಚನೆಯೂ ಅವನಿಗಿತ್ತು.

ಒಡಿಸ್ಸಿಯಸ್ ಒಬ್ಬ ಭಿಕ್ಷುಕನಂತೆ ವೇಷ ಮರೆಸಿಕೊಂಡು ತನ್ನ ಮನೆಯನ್ನು ಹೊಕ್ಕ. ಕಾವಲುಗಾರನಿಂದ ಹಿಡಿದು ಯಾರಿಗೂ ಅದು ಒಡಿಸಿಯಸ್ಸನೇ ಎಂದು ಗುರುತಾಗಲಿಲ್ಲ. ಮಗ ಟೆಲೆಮಕೋಸನಿಗೆ ಅನುಮಾನ ಬಂದರೂ ಅದು ಖಾತ್ರಿ ಇರಲಿಲ್ಲ. ತನ್ನ ಮನೆಯ ಚೌಕಿಯನ್ನು ಹಾದು ಹಿಂಬದಿಗೆ ಹೋಗುವಾಗ ಬದಿಯಲ್ಲಿ ಒಂದು ಕೊಟ್ಟಿಗೆಯಿತ್ತು. ಅಲ್ಲಿ ಒಡಿಸಿಯಸ್ಸನ ಪ್ರೀತಿಯ, ನಿಷ್ಠಾವಂತ ನಾಯಿ ಆರ್ಗೋಸ್ ಮಲಗಿತ್ತು. ಒಡಿಸ್ಸಿಯಸ್ ಯಾರಿಗೂ ತನ್ನ ಗುರುತಾಗಬಾರದು ಎಂದು ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತ ಕೊಟ್ಟಿಗೆಯನ್ನು ಸಮೀಪಿಸಿದ.

ಆರ್ಗೋಸ್ ಮಿಸುಕಾಡಿತು. ತನ್ನ ಒಡೆಯನ ನಿರೀಕ್ಷೆಯಲ್ಲಿ ವರ್ಷಗಟ್ಟಲೆಯಿಂದ ಜೀವ ಹಿಡಿದುಕೊಂಡು ಅದು ಕಾಯುತ್ತಿತ್ತು. ಐದಾರು ವರ್ಷಗಳಿಂದ ಆಹಾರ ಸೇವನೆಯನ್ನೂ ಅದು ನಿಲ್ಲಿಸಿಬಿಟ್ಟಿತ್ತು. ಒಂದು ಕಾಲದಲ್ಲಿ ಇಥಾಕಾದಲ್ಲಿಯೇ ಅತ್ಯಂತ ಚುರುಕಿನ, ವೇಗದ, ಸೂಕ್ಷ್ಮ ನಾಯಿ ಎಂದು ಹೆಸರಾಗಿದ್ದ ಆರ್ಗೋಸ್, ಒಡಿಸಿಯಸ್ಸನ ಗೈರಿನಲ್ಲಿ ಕೃಶವಾಗಿ ಹೋಗಿತ್ತು. ಮನೆಯ ಬಾಗಿಲಿನಲ್ಲೇ ಕುಳಿತು ದಾರಿಯೆಡೆ ಮುಖ ಮಾಡಿ ಕುಳಿತಿರುತ್ತಿದ್ದ ಆರ್ಗೋಸ್, ಕುಳಿತುಕೊಳ್ಳುವ ಬಲವೂ ಉಡುಗಿಹೋದ ದಿನದಿಂದ ಕೊಟ್ಟಿಗೆಯಲ್ಲಿ ಮಲಗಿ ಕಾಯುವಿಕೆ ಮುಂದುವರೆಸಿತ್ತು.

ಒಡಿಸ್ಸಿಯಸ್ ನೋಡಿದ. ಆರ್ಗೋಸ್ ಮೈಮೇಲೆ ನೊಣಗಳು ಮುತ್ತುತ್ತಿದ್ದವು. ಅದು ಮಲಗಿದ್ದ ಜಾಗ ಕೊಳಕಾಗಿಹೋಗಿತ್ತು. ಒಡಿಸಿಯಸ್ಸನ ಹೆಜ್ಜೆಯ ಸದ್ದಿಗೆ ಆರ್ಗೋಸ್ ಮಿಸುಕಾಡಿತು. ಕಣ್ತೆರೆಯಿತು. ಮಲಗಿದ್ದಲ್ಲೇ ಮುಖವನ್ನು ಸ್ವಲಪ್ ಮೇಲಕ್ಕೆತ್ತಲು ಅದಕ್ಕೆ ಸಾಧ್ಯವಾಯಿತು. ಕಣ್ಣು ಹೊರಳಿಸಿ ತನ್ನ ಒಡೆಯನತ್ತ ನೋಡಿತು. ಅದರ ಕಿವಿಗಳು ನಿಗುರಿದವು. ಹೊಳ್ಳೆಯನ್ನು ಅಗಲಗೊಳಿಸಿ ತನ್ನ ಒಡೆಯನ ವಾಸನೆಯನ್ನು ಮೂಸಿತು ಆರ್ಗೋಸ್. ತನ್ನ ಖುಷಿಯನ್ನು ತೋರಿಕೊಳ್ಳಲು ಬಾಲವಾಡಿಸುವ ಪ್ರಯತ್ನ ಮಾಡಿತು. ಒಡಿಸ್ಸಿಯಸ್ ತನ್ನ ಪ್ರೀತಿಯ ಆರ್ಗೋಸ್ ಬಾಲ ಬಡಿದಿದ್ದನ್ನು ಗಮನಿಸಿದ. ಅದಕ್ಕೆ ತನ್ನ ಗುರುತಾಯಿತೆಂದು ಅವನಿಗೆ ತಿಳಿಯಿತು. ಆದರೆ ತಾನು ಅದರ ಬಳಿ ಹೋಗಲಾರ. ಸುತ್ತಲಿನವರಿಗೆ ಅನುಮಾನ ಬಂದುಬಿಡುತ್ತದೆ ಎಂದು ಅಲ್ಲೇ ನಿಂತ. ಆರ್ಗೋಸ್ ಬಾಲ ಅಲ್ಲಾಡುವುದು ನಿಂತಿತು, ಉಸಿರು ಕೂಡಾ.

“ನಿಷ್ಠೆಯೆಂದರೆ ನಾಯಿಯದು” ಎಂದು ಎದೆತುಂಬಿ ನುಡಿದ  ಒಡಿಸ್ಸಿಯಸ್ ಹೆಜ್ಜೆ ಮುಂದಿಟ್ಟ. ಅವನ ಕಣ್ಣಾಲಿಗಳು ದುಃಖದಿಂದ ತುಂಬಿಹೋಗಿದ್ದವು.

ಯಾರಿಂದಲೂ ಗುರುತಿಸಲಾಗದ ಒಡಿಸಿಯಸ್ಸನನ್ನು ಆರ್ಗೋಸ್ ಗುರುತಿಸಿತ್ತು. ಇಪ್ಪತ್ತು ವರ್ಷಗಳ ಕಾಲ ಎಲ್ಲರೂ ತಮ್ಮತಮ್ಮ ಜೀವನ ನಡೆಸುತ್ತಿದ್ದರೆ, ಆರ್ಗೋಸ್ ತನ್ನ ಒಡೆಯನಿಗಾಗಿ ಕಾದಿತ್ತು. ಹಾಗೆಂದೇ ಒಡಿಸ್ಸಿಯಸ್, “ನಿಷ್ಠೆಯೆಂದರೆ ನಾಯಿಯದು” ಎಂದು ಉದ್ಗರಿಸಿದ್ದ.

ಆ ಉದ್ಗಾರ ಮುಂದೆ ಜನಮಾನಸದಲ್ಲಿ ಸ್ಥಾಪಿತವಾಯಿತು. ಇಂದಿಗೂ ನಮ್ಮ ನಡುವೆ ನಾಯಿ ಮತ್ತು ನಿಷ್ಠೆ ಒಂದಕ್ಕೊಂದು ಜೊತೆಯಾಗಿ ಚಾಲ್ತಿಯಲ್ಲಿದೆ.

 

Leave a Reply