ಸತ್ಯದ ದೇಹಕ್ಕೆ ಸುಳ್ಳಿನ ತಲೆ! : ಆಫ್ರಿಕನ್ನರ ಸೃಷ್ಟಿ ಕಥನಗಳು #2

ಒಲೋಫಿ ಸತ್ಯ ಮತ್ತು ಸುಳ್ಳುಗಳನ್ನು ಸೃಷ್ಟಿಸಿದ. ಅವೆರಡೂ ಕಾದಾಡಿಕೊಂಡವು. ಕೊನೆಗೆ ಸತ್ಯದ ದೇಹಕ್ಕೆ ಸುಳ್ಳಿನ ತಲೆ ಬಂದಿತು. ಅದು ಹೇಗೆ? ಇಲ್ಲಿದೆ ಸ್ವಾರಸ್ಯಕರ ಕಥನ…. 

africa

ಲೋಫಿ ಭೂಮಿಯನ್ನು ಅಲ್ಲಿ ಚರಾಚರ ವಸ್ತುಗಳನ್ನೂ ಸೃಷ್ಟಿಸಿದ.
ಸುಂದರ-ಕುರೂಪಿ ವಸ್ತುಗಳನ್ನೂ ಸೃಷ್ಟಿಸಿದ.
ಅವನು ಸತ್ಯವನ್ನೂ, ಸುಳ್ಳನ್ನೂ ಸೃಷ್ಟಿಸಿದ.
ಅವನು ಸತ್ಯವನ್ನು ಪರಮ ಶಕ್ತಿಶಾಲಿಯಾಗಿ
ದೈತ್ಯಾಕಾರವಾಗಿ ಮಾಡಿದ.
ಸುಳ್ಳನ್ನು ಪೀಚಲಾಗಿ, ಅಶಕ್ತವಾಗಿ ಮಾಡಿದ.
ಆದರೆ ಆತ ಸುಳ್ಳಿಗೆ ಒಂದು ಹರಿತ ಬಾಕುವನ್ನು ನೀಡಿದ

ಒಂದು ದಿನ ಸತ್ಯ ಮತ್ತು ಸುಳ್ಳು ಕಾದಾಟಕ್ಕಿಳಿದರು.
ದೈತ್ಯ ದೇಹವೂ ಅಗಾಧ ಶಕ್ತಿಯೂ ಹೊಂದಿದ್ದ ಸತ್ಯ
ಪರಮ ವಿಶ್ವಾಸದಲ್ಲಿತ್ತು.
ಒಂದಷ್ಟು ಏನು ಮಹಾ ಎಂಬ ಸಂತೃಪ್ತಿಯೂ ಇತ್ತು.
ಸುಳ್ಳಿನ ಬಗಲಲ್ಲಿ ಬಾಕು ಇರುವುದು ಸತ್ಯಕ್ಕೆ ಗೊತ್ತಿರಲಿಲ್ಲ.
ಸುಳ್ಳು ಕಾದಾಟದಲ್ಲಿ ಚಾಣಾಕ್ಷವಾಗಿ ಬಾಕು ಬಳಸಿ ಸತ್ಯದ ತಲೆ ಕತ್ತರಿಸಿತು.

ದಿಕ್ಕೆಟ್ಟು ರೋಷಾವಿಷ್ಟವಾದ ಸತ್ಯ ತತ್ತರಿಸಿ ಹೆಜ್ಜೆ ಇಡುತ್ತಾ
ನೆಲದಲ್ಲಿ ತನ್ನ ತಲೆ ಹುಡುಕಲು ಶುರು ಮಾಡಿತು.
ಹುಡುಕುತ್ತಿರುವಾಗಲೇ ಸುಳ್ಳು ಕೈಗೆ ಸಿಕ್ಕಿತು.
ಗಬಕ್ಕನೆ ಅದನ್ನು ಹಿಡಿದು ಅದನ್ನು ತಡವುತ್ತಾ ಅದರ ತಲೆಯನ್ನು ಹುಡುಕಿತು.
ಅದು ತನ್ನ ತಲೆಯೆಂದೇ ಭಾವಿಸಿತು.

ಭಯಂಕರ ಶಕ್ತಿ ಇತ್ತಲ್ಲವೇ ಸತ್ಯಕ್ಕೆ,
ಸರಕ್ಕನೆ ಎಳೆದಿದ್ದೇ ಸುಳ್ಳಿನ ತಲೆ ಕಿತ್ತು ಬಂತು.
ಆ ತಲೆಯನ್ನು ಸತ್ಯ ತನ್ನ ಕತ್ತಿಗೆ ಜೋಡಿಸಿಕೊಂಡಿತು.

ಆ ದಿನದಿಂದ ನಾವು ಈ ಘೋರ ತಪ್ಪಿಗೆ ಸಾಕ್ಷಿಯಾಗಿದ್ದೇವೆ.
ಸತ್ಯದ ದೇಹ, ಸುಳ್ಳಿನ ತಲೆ!

(ಸಂಗ್ರಹ ಮತ್ತು ಅನುವಾದ : ಕೆ.ಎಸ್.ಇಂದ್ರಾಣಿ)

Leave a Reply