ವಾರಾಂತ್ಯದ ಓದು: ಗಿಬ್ರಾನ್ ಕಾವ್ಯ ಗೊಂಚಲು

kgಅನುಭಾವ  ಸ್ಫುರಿಸುವ ಸೃಜನಶೀಲ ಸಾಹಿತ್ಯದಲ್ಲಿ ಖಲೀಲ್ ಗಿಬ್ರಾನ್ ಕಾವ್ಯಕ್ಕೆ ತನ್ನದೇ ಆದ ಸ್ಥಾನವಿದೆ. ಎಲ್ಲಿಯೂ ಹೇರಿಕೆಯಾಗದಂತೆ ಗಹನ ಚಿಂತನೆಗಳನ್ನು ಸರಳೂ ಸುಂದರವೂ ಆಗಿ ತನ್ನ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿದ್ದಾನೆ ಗಿಬ್ರಾನ್. ಚಿದಂಬರ ನರೇಂದ್ರ ಅನುವಾದಿಸಿದ  ಖಲೀಲ್ ಗಿಬ್ರಾನರ ಐದು ಕಥನ ಕಾವ್ಯಗಳನ್ನು ವಾರಾಂತ್ಯದ ಓದಿಗೆ ನೀಡುತ್ತಿದ್ದೇವೆ….

ಯುದ್ಧ ಮತ್ತು ಸಣ್ಣ ದೇಶಗಳು

ಬೆಟ್ಟದ ತಪ್ಪಲಲ್ಲಿ ಒಂದು ಕುರಿ ತನ್ನ ಮರಿಯೊಂದಿಗೆ ಆನಂದದಿಂದ ಹುಲ್ಲು ಮೇಯುತ್ತ ಹಾಯಾಗಿ ಓಡಾಡುತ್ತಿದ್ದರೆ, ಮೇಲೆ ಆಕಾಶದಲ್ಲಿ ಒಂದು ಹಸಿದ ರಣಹದ್ದು ಕುರಿಮರಿಯ ಮೇಲೆ ಹೊಂಚು ಹಾಕಿ ಅವಕಾಶಕ್ಕಾಗಿ ಕ್ಷಣಗಣನೆ ಮಾಡುತ್ತಿತ್ತು.
ಇನ್ನೇನು ಹದ್ದು ವೇಗದಿಂದ ಹಾರುತ್ತ ಕುರಿಮರಿಯ ಹತ್ತಿರ ಬರುತ್ತಿದ್ದಂತೆಯೇ, ಇನ್ನೊಂದು ರಣಹದ್ದು ಅಷ್ಟೇ ರಭಸದಿಂದ ಕುರಿಮರಿಯ ಮೇಲೆ ಆಕ್ರಮಣ ಮಾಡಿತು.

ಎರಡೂ ಹದ್ದುಗಳು ಭೀಕರವಾಗಿ ಒಂದನ್ನೊಂದು ಚುಚ್ಚುತ್ತ, ಜೋರಾಗಿ ಆಕ್ರಂದನ ಮಾಡುತ್ತ ಆಕಾಶದ ತುಂಬ ಗದ್ದಲ ಹಾಕತೊಡಗಿದವು.

ಈ ಗದ್ದಲದಿಂದ ಬೆಚ್ಚಿದ ಕುರಿ, ಬೆರಗಿನಿಂದ ಈ ಯುದ್ಧವನ್ನು ನೋಡುತ್ತ ತನ್ನ ಮರಿಗೆ ಹೇಳಿತು.
“ಎಂಥ ಆಶ್ಚರ್ಯ ನೋಡು ಕಂದ, ಆಕಾಶ ಇಷ್ಟು ಅಪಾರವಾಗಿದ್ದರೂ ಯಾಕೆ ಈ ಸಭ್ಯ ಹಕ್ಕಿಗಳು ಇಷ್ಟೊಂದು ಕಚ್ಚಾಡುತ್ತಿವೆ? ನಿನ್ನ ಮನಸ್ಸಿನಲ್ಲಿ ಪ್ರಾರ್ಥನೆ ಮಾಡು ಕಂದ, ಭಗವಂತ ನಮ್ಮ ಈ ರೆಕ್ಕೆಯ ಗೆಳೆಯರನ್ನು ಒಂದಾಗಿಸಲಿ, ಇವರಿಬ್ಬರ ನಡುವೆ ಶಾಂತಿ ನೆಲೆಸಲಿ”

ಕುರಿಮರಿ ಕಣ್ಣುಮುಚ್ಚಿ ಧ್ಯಾನ ಮಾಡುತ್ತ ಹದ್ದುಗಳಿಗಾಗಿ ಭಗವಂತನಲ್ಲಿ ಪ್ರಾರ್ಥನೆ ಮಾಡತೊಡಗಿತು.

*

ಬೆದರುಬೊಂಬೆ

ಮ್ಮೆ ಒಂದು ಹೊಲದೊಳಗಿಂದ ಹಾಯ್ದು ಹೋಗುವಾಗ ಒಂಟಿಯಾಗಿ ನಿಂತಿದ್ದ ಬೆದರುಬೊಂಬೆಯನ್ನು ಮಾತಾಡಿಸಿದೆ.

“ಒಬ್ಬನೇ ಹೊಲದೊಳಗೆ ನಿಂತು ನಿಂತು, ನಿನಗೆ ಆಯಾಸ ಆಗಿರಬಹುದಲ್ಲವೆ?“
“ಇನ್ನೊಬ್ಬರನ್ನು ಹೆದರಿಸುವ ಆನಂದ, ಬಹಳ ಆಳ, ಬಹು ಅನನ್ಯ, ಈ ಸಂತೋಷದಿಂದ ಯಾರಿಗೆ ತಾನೆ ಆಯಾಸ ಆಗಬಲ್ಲದು? “ ಬೆದರುಬೊಂಬೆ ಉತ್ತರಿಸಿತು.
ಒಂದು ಘಳಿಗೆ ಯೋಚಿಸಿ, ಉತ್ತರಿಸಿದೆ
“ ನಿಜ, ಈ ಆನಂದದ ಸುಖವನ್ನು ನಾನೂ ಬಲ್ಲೆ “
“ ಮೈಯೆಲ್ಲ ಹುಲ್ಲು ತುಂಬಿಕೊಂಡವರು ಮಾತ್ರ ಈ ಅದ್ಭುತವನ್ನು ಅರಿಯಬಲ್ಲರು “
ಬೆದರುಬೊಂಬೆ ಸಮಜಾಯಿಷಿ ಕೊಟ್ಟಿತು.

ಬೊಂಬೆ ನನ್ನ ಹೊಗಳುತ್ತಿದೆಯೋ, ಅಪಮಾನ ಮಾಡುತ್ತಿದೆಯೋ ಗೊತ್ತಾಗಲಿಲ್ಲ. ಅಲ್ಲಿಂದ ಹೊರಟು ಬಿಟ್ಟೆ.
ಹೀಗೇ ಒಂದು ವರ್ಷ ಕಳೆದುಹೋಯಿತು. ಈ ನಡುವೆ ಬೆದರುಬೊಂಬೆ ತತ್ವಜ್ಞಾನಿಯಾಗಿತ್ತು. ಮುಂದೊಮ್ಮೆ ಆ ಹೊಲದೊಳಗಿಂದ ಹಾಯ್ದು ಹೋಗುವಾಗ, ಆ ಬೆದರುಬೊಂಬೆಯ ಎದೆಯೊಳಗೆ ಎರಡು ಹಕ್ಕಿಗಳು ಗೂಡು ಕಟ್ಟಿಕೊಳ್ಳುತ್ತಿರುವುದನ್ನು ಕಂಡೆ.

*
ದೇವಸ್ಥಾನದ ನೆರಳಲ್ಲಿ

ಬ್ಬಂಟಿಯಾಗಿ ಕುಳಿತಿದ್ದ ಕುರುಡನೊಬ್ಬ
ನಮ್ಮ ಕಣ್ಣಿಗೆ ಬಿದ್ದ.
‘ಅಗೋ ಅಲ್ಲಿ ನೋಡು
ಈ ನೆಲದ ಅತ್ಯಂತ ದೊಡ್ಡ ಜ್ಞಾನಿಯನ್ನು’
ಗೆಳೆಯ ಉತ್ಸಾಹದಿಂದ ಕೂಗಿಕೊಂಡ.

ಗೆಳೆಯನನ್ನು ಹಿಂದೆ ಬಿಟ್ಟು
ನಾನು ಕುರುಡನ ಹತ್ತಿರ ಹೋದೆ,
ಬಹಳ ಹೊತ್ತು ನಾವು ಅದು, ಇದು ಮಾತನಾಡಿದೆವು.

‘ಯಾವತ್ತಿನಿಂದ ನಿನಗೆ ಈ ಕುರುಡು? ‘ ನನ್ನ ಪ್ರಶ್ನೆ.
‘ನಾನು ಹುಟ್ಟು ಕುರುಡ ಸ್ವಾಮಿ’ ಅವನು ಉತ್ತರಿಸಿದ.

‘ಎಷ್ಟು ಮೋಹಕವಾಗಿದೆ ನಿನ್ನ ಮಾತು
ಯಾವ ಜ್ಞಾನದ ಮಾರ್ಗ ನಿನ್ನದು?’ ಮತ್ತೆ ಕೇಳಿದೆ.
‘ ನಾನೊಬ್ಬ ಖಗೋಳ ಯಾತ್ರಿ’
ಆತ, ತನ್ನ ಕೈ ಎದೆ ಮೇಲೆ ಇಟ್ಟುಕೊಂಡು ಹೇಳಿದ,
‘ಹೀಗೆ ನಾನು ಹಲವಾರು ಸೂರ್ಯ, ಚಂದ್ರ, ನಕ್ಷತ್ರಗಳ
ಜೊತೆ ಹೆಜ್ಜೆ ಹಾಕುತ್ತೇನೆ’

*

ಆಕೆಯ ಹೆಸರು : ‘ಬದುಕು’

ಗೆಳೆಯನಿಗೆ ಹೇಳಿದೆ
‘ನೋಡು ಆಕೆ ಹೇಗೆ ಅವನ ತೋಳ ಮೇಲೆ ಒರಗಿಕೊಂಡಿದ್ದಾಳೆ?
ನಿನ್ನೆ ಆಕೆ ನನ್ನ ತೋಳಿನಲ್ಲಿದ್ದಳು’
ಅವನಂದ, ‘ನಾಳೆ ಆಕೆ ನನ್ನ ತೋಳಿನಲ್ಲಿರುತ್ತಾಳೆ’

ಗೆಳೆಯನಿಗೆ ಹೇಳಿದೆ
‘ನೋಡು ಆಕೆ ಹೇಗೆ ಅವನ ಪಕ್ಕ ಕೂತುಕೊಂಡಿದ್ದಾಳೆ?
ನಿನ್ನೆ ಆಕೆ ನನ್ನ ಬಳಿ ಕೂತಿದ್ದಳು
ಅವನಂದ, ‘ನಾಳೆ ಆಕೆ ನನ್ನ ಪಕ್ಕ ಕೂಡುತ್ತಾಳೆ’

ಗೆಳೆಯನಿಗೆ ಹೇಳಿದೆ
‘ನೋಡು ಆಕೆ ಹೇಗೆ ಅವನ ಕಪ್ ನಲ್ಲಿ ಕುಡಿಯುತ್ತಿದ್ದಾಳೆ?
ನಿನ್ನೆ ಆಕೆ ನನ್ನ ಕಪ್ ಎಂಜಲು ಮಾಡಿದ್ದಳು’
ಅವನಂದ, ‘ನಾಳೆ ಆಕೆ ನನ್ನ ಕಪ್ ಗೆ ತುಟಿ ಒಡ್ಡುತ್ತಾಳೆ’

ಗೆಳೆಯನಿಗೆ ಹೇಳಿದೆ
‘ನೋಡು ಆಕೆ ಹೇಗೆ ಅವನ ಉನ್ಮತ್ತಳಾಗಿ ನೋಡುತ್ತಿದ್ದಾಳೆ?
ನಿನ್ನೆ ಆಕೆ ನನ್ನ ಕಣ್ಣಲ್ಲಿ ಕಣ್ಣಿಟ್ಟಿದ್ದಳು’
ಅವನಂದ, ‘ನಾಳೆ ಆಕೆ ನನ್ನ ಕಣ್ಣ ಕದಿಯುತ್ತಾಳೆ’

ಗೆಳೆಯನಿಗೆ ಹೇಳಿದೆ
‘ನೋಡು ಆಕೆ ಹೇಗೆ ಅವನ ಕಿವಿಯಲ್ಲಿ ಪ್ರೇಮಗೀತೆ ಹಾಡುತ್ತಿದ್ದಾಳೆ?
ನಿನ್ನೆ ಆಕೆ ಅದೇ ಹಾಡನ್ನ ನನ್ನ ಕಿವಿಯಲ್ಲಿ ಹಾಡಿದ್ದಳು’
ಅವನಂದ, ‘ನಾಳೆ ಆಕೆ ನನ್ನ ಕಿವಿಯಲ್ಲಿ ಅದೇ ಹಾಡ ಗುಣುಗುಣಿಸುತ್ತಾಳೆ’

ಗೆಳೆಯನಿಗೆ ಹೇಳಿದೆ
‘ನೋಡು ಆಕೆ ಹೇಗೆ ಅವನ ಅಪ್ಪಿಕೊಂಡಿದ್ದಾಳೆ?
ನಿನ್ನೆ ಆಕೆ ನನ್ನ ತಬ್ಬಿಕೊಂಡಿದ್ದಳು’
ಅವನಂದ, ‘ನಾಳೆ ಆಕೆ ನನ್ನ ತೋಳ ಬಳಸುತ್ತಾಳೆ’

ಗೆಳೆಯನಿಗೆ ಹೇಳಿದೆ
ಎಂಥ ವಿಚಿತ್ರ ಹೆಣ್ಣು ಆಕೆ?
ಅವನಂದ, ‘ಆಕೆಯ ಹೆಸರು ಬದುಕು’
*

ಮೌನದ ಮಹತ್ವ ಬೊಗಳಿದ ನಾಯಿ

ಒಂದು ಹುಣ್ಣಿಮೆ ರಾತ್ರಿ,
ಚಂದ್ರ
ತನ್ನ ಪೂರ್ಣ ಧಿಮಾಕಿನೊಡನೆ
ಆಕಾಶದಲ್ಲಿ ಪ್ರತ್ಯಕ್ಷನಾದ.

ಆ ಊರಿನ ನಾಯಿಗಳೆಲ್ಲ
ಚಂದ್ರನನ್ನು ಕಂಡು ಬೊಗಳತೊಡಗಿದವು,
ಒಂದು ನಾಯಿಯನ್ನು ಮಾತ್ರ ಬಿಟ್ಟು.

ಆವರೆಗೆ ಸುಮ್ಮನಿದ್ದ ನಾಯಿ
ತನ್ನ ಗೆಳೆಯರಿಗೆ ಹೇಳತೊಡಗಿತು,
“ಗೆಳೆಯರೇ,
ನಿಮ್ಮ ಬೊಗಳುವಿಕೆಯಿಂದ
ಈ ಪ್ರಶಾಂತತೆಯನ್ನು ಹಾಳುಮಾಡಬೇಡಿ,
ನೀವು ಬೊಗಳಿದ ಮಾತ್ರಕ್ಕೆ
ಚಂದ್ರನೇನು ಭೂಮಿಗಿಳಿದು ಬರುವದಿಲ್ಲ”.

ಆಮೇಲೆ
ಎಲ್ಲ ನಾಯಿಗಳು
ಬೊಗಳುವುದನ್ನ ನಿಲ್ಲಿಸಿದವು.

ಆದರೆ
ಮೊದಲು ಸುಮ್ಮನಿದ್ದ ನಾಯಿ ಮಾತ್ರ
ಬೊಗಳುತ್ತಲೇ ಹೋಯಿತು; 
ಮೌನದ ಮಹತ್ವದ ಬಗ್ಗೆ
ಇಡೀ ರಾತ್ರಿ.

Leave a Reply