ವೇದ ಎಂದರೇನು? ವೇದಗಳು ಎಷ್ಟಿವೆ?: ಸನಾತನ ಸಾಹಿತ್ಯ ~ ಮೂಲಪಾಠಗಳು #2

ಯಾವುದೇ ಧರ್ಮದ ಕುರಿತು ಪ್ರಾಥಮಿಕ ಮಾಹಿತಿ ಹೊಂದಲು ನಾವು ಧಾರ್ಮಿಕ ಮನಸ್ಥಿತಿಯನ್ನು ಹೊಂದಿರಲೇಬೇಕೆಂದಿಲ್ಲ. ಆಯಾ ಧರ್ಮದ ಕುರಿತು ಗೌರವ, ಸೌಹಾರ್ದ ಮತ್ತು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಲು ಈ ತಿಳಿವಳಿಕೆ ಅಗತ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಹಿಂದೂ ಧರ್ಮದ ಕುರಿತು ಕೆಲವು ಪ್ರಾಥಮಿಕ ಸಂಗತಿಗಳ ಮಾಹಿತಿ ಸರಣಿಯನ್ನು ಪ್ರಕಟಿಸುತ್ತಿದ್ದೇವೆ. ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/06/14/hindu1/

veda3

ವಿದ್ ಎಂಬ ಧಾತುವಿನಿಂದ ವೇದ ಎಂಬ ಪದ ಬಂದಿದೆ – ‘ವಿದ್’ ಎಂದರೆ ಜ್ಞಾನ ,ತಿಳುವಳಿಕೆ ಎಂದರ್ಥ. ಯಾವ ತಿಳಿವಳಿಕೆಯು ನಮ್ಮ ಜೀವನವನ್ನು ಲೌಕಿಕದಲ್ಲಿ ಸಂಪನ್ನವಾಗಿರಿಸಿ, ಆಧ್ಯಾತ್ಮಿಕ ಪಥದಲ್ಲಿ ಕೈಹಿಡಿದು ನಡೆಸುತ್ತದೆಯೋ ಅದು ವೇದ. ವೇದವು ಮೂಲತಃ ಅಲೌಕಿಕ ಜ್ಞಾನವನ್ನು ನೀಡುವ ಜ್ಞಾನಪರಂಪರೆಯಾಗಿದ್ದರೂ ಅದರಲ್ಲಿ ಹೇಳಲಾಗಿರುವ ಬಹಳಷ್ಟು ಸಂಗತಿಗಳು ನಮ್ಮ ದೈನಂದಿನ ಬದುಕಿಗೂ ಅನ್ವಯವಾಗುವಂತೆ ಇವೆ. ಆದ್ದರಿಂದ ವೇದಗಳ ಉದಾತ್ತ ಬೋಧನೆಯನ್ನು ಯತಾರ್ಥವಾಗಿ ಅರಿತು ಅನುಷ್ಠಾನ ಮಾಡಿದರೆ ಜೀವನ ಸುಂದರವಾಗುವುದರಲ್ಲಿ ಸಂದೇಹವಿಲ್ಲ.

ವೇದಗಳಲ್ಲಿ 4 ವಿಭಾಗಗಳಿವೆ. ಬಾದರಾಯಣ ವ್ಯಾಸರು ವೇದಗಳನ್ನು ವಿಭಜಿಸಿ ಋಗ್, ಯಜುರ್, ಸಾಮ ಮತ್ತು ಅಥರ್ವ ವೇದಗಳೆಂದು ವಿಂಗಡಿಸಿದರು.

ಋಗ್ವೇದ : ಛಂದೋಬದ್ಧವಾದ ಋಚೆಗಳು ಮತ್ತು ಶ್ಲೋಕಗಳನ್ನುಳ್ಳ ವೇದವು “ಋಗ್ವೇದ” ಎಂದು ಕರೆಯಲ್ಪಡುತ್ತದೆ. ಇದು ವೇದಗಳಲ್ಲೇ ಅತ್ಯಂತ ಪ್ರಾಚೀನವಾದುದು. ಋಗ್ವೇದವು 1,028 ಶ್ಲೋಕಗಳನ್ನು ಹೊಂದಿದ್ದು, 10 ಮಂಡಲಗಳಲ್ಲಿ ನಿರೂಪಿತವಾಗಿವೆ. ಆಯುರ್ವೇದ ಇದರ ಉಪವೇದ.

ಯಜುರ್ವೇದ : ಇದು ಗದ್ಯರೂಪದಲ್ಲಿದ್ದು, 40 ಅಧ್ಯಾಯಗಳನ್ನು ಹೊಂದಿದೆ. ಯಜುರ್ವೇದದಲ್ಲಿ – ಕೃಷ್ಣ ಯಜುರ್ವೇದ ಹಾಗೂ ಶುಕ್ಲ ಯಜುರ್ವೇದಗಳೆಂಬ ಎರಡು ವಿಧಗಳಿವೆ. ಕೃಷ್ಣಯಜುರ್ವೇದಕ್ಕೆ ತೈತ್ತೀರಿಯ ಸಂಹಿತೆ ಎಂದೂ ಶುಕ್ಲಯಜುರ್ವೇದಕ್ಕೆ ವಾಜಸನೇಯ ಸಂಹಿತೆ ಎಂದೂ ಹೆಸರಿದೆ. ಧನುರ್ವೇದ ಇದರ ಉಪವೇದ.

ಸಾಮವೇದ : ಋಗ್ – ಯಜುರ್ ವೇದಗಳ ಲಯಬದ್ಧ ಸಂಗೀತ ರೂಪವೇ ಸಾಮವೇದ. ಸಾಮವೇದದಲ್ಲಿ ಯಜುರ್ವೇದ ಮಂತ್ರಗಳು ಅತ್ಯಂತ ಕಡಿಮೆ ಇದ್ದು ಋಗ್ವೇದ ಮಂತ್ರಗಳೇ ಹೆಚ್ಚಾಗಿವೆ. ಆದ್ದರಿಂದ ಇದನ್ನು” ಋಗ್ವೇದದ ಮತ್ತೊಂದು ಮುಖ” ಎಂದೂ ಹೇಳಲಾಗುತ್ತದೆ. ಇದರಲ್ಲಿ 15 ಭಾಗಗಳಿದ್ದು 39 ಅಧ್ಯಾಯಗಳಿವೆ. ಗಾಂಧರ್ವವೇದ ಇದರ ಉಪವೇದ.

ಅಥರ್ವ (ಅಥರ್ವಣ) ವೇದ : ಆಧ್ಯಾತ್ಮಿಕ ಜೀವನದ ಜೊತೆಗೆ ಐಹಿಕವಾದ ಜೀವನವನ್ನೂ ಸುಖಮಯವಾಗಿಸುವ ನಿರ್ದೇಶನಗಳುಳ್ಳ ವೇದವೇ ಅಥರ್ವ ವೇದ. ಇದರಲ್ಲಿ 20 ಕಾಂಡಗಳು, 760ಸೂಕ್ತಗಳು ಹಾಗೂ 6000 ಮಂತ್ರಗಳಿದ್ದು, ಗದ್ಯ ಹಾಗೂ ಪದ್ಯ ಎರಡೂ ಶೈಲಿಯಲ್ಲಿ ರಚಿಸಲ್ಪಟ್ಟಿವೆ. ಅಥರ್ವ ವೇದದಲ್ಲಿ ವಿವಾಹ ಪದ್ಧತಿ, ಶವಸಂಸ್ಕಾರ, ಗೃಹನಿರ್ಮಾಣ ಮುಂತಾದ ಜನರ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ವಿಚಾರಗಳನ್ನು ಕೂಡಾ ಹೇಳಲಾಗಿದೆ. ಧನುರ್ವಿದ್ಯೆ, ರೋಗನಿವಾರಣೋಪಾಯ, ಔಷಧಿಗಳ ವಿವರ ಕೂಡಾ ಇದರಲ್ಲಿದೆ. ಯಜ್ಞಯಾಗಾದಿಗಳನ್ನು ನಿರ್ವಹಿಸುವ ಕ್ರಮದ ವಿವರಗಳೂ ಸೇರಿದೆ.

ಯುಗಗಳಲ್ಲಿ ಮೊದಲನೆಯದಾದ ಕೃತಯುಗದಲ್ಲಿ ವೇದವಾಙ್ಮಯವು ವಿಂಗಡನೆಗೊಂಡಿರಲಿಲ್ಲ. ವೇದಗಳ ಈ ಅವಿಭಜಿತ ರೂಪವನ್ನು “ಮೂಲವೇದ” ಎಂದು ಕರೆಯಲಾಗುತ್ತದೆ.

4 Comments

Leave a Reply