18,000 ವರ್ಷಗಳ ಕಾಲ ಭೂಮ್ಯಾಕಾಶಗಳ ನಡುವೆ ನಿಂತ ಪಾನ್ ಗು : ಸೃಷ್ಟಿಕಥನಗಳು #5

ಚೀನೀ ಜನಪದ – ಪುರಾಣಗಳ ನಂಬಿಕೆಯಂತೆ ಸಕಲ ಸೃಷ್ಟಿಗೆ ಕಾರಣನಾದವನು ಪಾನ್ ಗು ಎಂಬ ದೈತ್ಯ ದೇವತೆ. ಸೃಷ್ಟಿ ಕಾರ್ಯಕ್ಕೆ ಬದ್ಧನಾದ ಈತನ ತ್ಯಾಗಕ್ಕೆ ಸಮನಿಲ್ಲ. ಪಾನ್ ಗು ಸತ್ತುಹೋದರೂ ಸೃಷ್ಟಿಯ ಹಲವು ರೂಪಗಳಲ್ಲಿ ಈಗಲೂ ಬದುಕಿದ್ದಾನೆ… 

ಸಂಗ್ರಹ ಮತ್ತು ನಿರೂಪಣೆ : ಚೇತನಾ ತೀರ್ಥಹಳ್ಳಿ

yinyang

ಹಳ ಹಿಂದೆ, ಸೃಷ್ಟಿಯಲ್ಲಿ ನೆಲ ಕಾಣಿಸಿಕೊಳ್ಳುವುದಕ್ಕೂ ಬಹಳ ಬಹಳ ಹಿಂದೆ ಖಾಲಿ ಆಕಾಶದಲ್ಲಿ ಒಂದೇ ಒಂದು ಬೃಹದಾಕಾರದ ಮೊಟ್ಟೆ ಇತ್ತು. ಈ ಮೊಟ್ಟೆಯ ಒಳಗೆ ‘ಯಿನ್’ ಮತ್ತು ‘ಯಾಂಗ್’ ಎಂಬ ಪರಸ್ಪರ ವಿರುದ್ಧ ಶಕ್ತಿಗಳಿದ್ದವು. ಕಾಲಕ್ರಮದಲ್ಲಿ ಈ ಶಕ್ತಿಗಳ ನಡುವೆ ಹಲವು ಬಗೆಯ ಕೊಡು ಕೊಳ್ಳುವಿಕೆಗಳು ನಡೆದು, ಪರಿಣಾಮವಾಗಿ ಭ್ರೂಣವೊಂದು ಜನ್ಮ ತಳೆಯಿತು. ಒಂದು ಕೊಂಬನ್ನೂ ವಿಚಿತ್ರ ದೇಹವನ್ನೂ ಹೊಂದಿದ್ದ ಈ ದೈತ್ಯ ಭ್ರೂಣಕ್ಕೆ ಪಾನ್ ಗು ಎಂಬ ಹೆಸರಿತ್ತು. ಪಾನ್ ಗು ಮೊಟ್ಟೆಯೊಳಗೆ 18,000 ವರ್ಷ ಕಾಲ ನಿದ್ದೆಯಲ್ಲಿ ಬೆಳೆದ. ಕೊನೆಗೊಂದು ದಿನ ಆತನಿಗೆ ಸಂಪೂರ್ಣ ಎಚ್ಚರವಾಯ್ತು. ಕಣ್ಬಿಟ್ಟು ನೋಡಿದರೆ, ಸುತ್ತ ಬರೀ ಕತ್ತಲು! ಕಿವಿಯನ್ನು ಎಷ್ಟು ಉಜ್ಜಿ ಆಲಿಸಿದರೂ ಮಹಾಮೌನದ ವಿನಾ ಬೇರೇನೂ ಇಲ್ಲ!

ಈ ಕತ್ತಲು ಮತ್ತು ನಿಶ್ಶಬ್ದದಿಂದ ಪಾನ್ ಗು ಕಿರಿಕಿರಿಗೊಂಡ. ಹೆಚ್ಚೇನೂ ಯೋಚಿಸದೆ ತನ್ನ ಮಾಯಾ ಕೊಡಲಿಯಿಂದ ಮೊಟ್ಟೆಯ ಮೇಲ್ಭಾಗವನ್ನು ಗುದ್ದಿದ. ಪರಿಣಾಮವಾಗಿ ಮೊಟ್ಟೆ ಎರಡು ಭಾಗವಾಗಿ ಬಿರಿಯಿತು. ಭಯಾನಕ ಗುಡುಗಿನ ಸದ್ದು ಮೊಳಗಲು ಶುರುವಿಟ್ಟಿತು. ಯಿನ್ ಮತ್ತು ಯಾಂಗ್ ನಿಧಾನವಾಗಿ ಬೇರ್ಪಡಲು ಆರಂಭಿಸಿದವು. ಮೊಟ್ಟೆಯೊಳಗಿದ್ದ ಕತ್ತಲು ಮತ್ತು ಭಾರದ ವಸ್ತುಗಳೆಲ್ಲವೂ ಕೆಳಭಾಗಕ್ಕೆ ಸರಿಯುತ್ತಾ ಭೂಮಿಯಾದವು. ಹಗುರವಾದ, ಸ್ವಚ್ಛ ಮತ್ತು ಬೆಳಕಿನಿಂದ ಕೂಡಿದ ಭಾಗವು ಮೇಲಕ್ಕೇರಿ ಸ್ವರ್ಗವಾಯಿತು.

ಆದರೆ ಪಾನ್ ಗುವಿಗೆ ಈ ಸ್ವರ್ಗ ಮತ್ತು ಭೂಮಿ ಎಲ್ಲಾದರೂ ಸರಿಯುತ್ತ ಸರಿಯುತ್ತ ಮತ್ತೆ ಒಗ್ಗೂಡಿಬಿಟ್ಟರೆ ಅನ್ನುವ ಅನುಮಾನ. ಆದ್ದರಿಂದ ಅವನು ಭೂಮ್ಯಾಕಾಶಗಳ ನಡುವೆ ನಿಂತು, ಆಕಾಶವನ್ನು ಮೇಲಕ್ಕೂ ಭೂಮಿಯನ್ನು ಕೆಳಕ್ಕೂ ಒತ್ತತೊಡಗಿದ. ಪ್ರತಿ ದಿನ ಭೂಮಿ ಅವನಿಗಿಂತ 10 ಅಡಿ ಮೇಲಕ್ಕೂ ಅವನ ಪಾದದಡಿಯ ಭೂಮಿ 10 ಅಡಿಯಷ್ಟು ದಪ್ಪವಾಗಿಯೂ ವಿಸ್ತರಿಸತೊಗಿದವು. ಅದಕ್ಕೆ ಸರಿಯಾಗಿ ಪಾನ್ ಗು ಕೂಡಾ ಪ್ರತಿ ದಿನ 10 ಅಡಿಯಷ್ಟು ಬೆಳೆಯುತ್ತಾ ಹೋದ.

ಹೀಗೆ ಮತ್ತೆ 18,000 ವರ್ಷಗಳು ಕಳೆದವು. ಭೂಮ್ಯಾಕಾಶಗಳು ಪರಸ್ಪರ ಸಾಕಷ್ಟು ದೂರ ಸರಿದಿದ್ದು, ಇನ್ನು ಚಿಂತೆಯಿಲ್ಲ ಎಂದು ಪಾನ್ ಗುವಿಗೆ ಸಮಾಧಾನವಾಯಿತು. ಆದರೆ, ಅಷ್ಟು ವರ್ಷಗಳ ಕಾಲ ನಿಂತೂನಿಂತೂ ದಣಿದಿದ್ದ ಅವನು ನಿಂತಲ್ಲೇ ಕುಸಿದು ಸತ್ತುಬಿದ್ದ.

 

ಪಾನ್ ಗು ಸ್ವರ್ಗ ಮತ್ತು ಭೂಮಿಗಳನ್ನು ಸೃಷ್ಟಿಸಿ ನೆಲೆಗೊಳಿಸಲು ಪಾನ್ ಗು ದೊಡ್ಡ ತ್ಯಾಗವನ್ನೇ ಮಾಡಿದ್ದ. ಅದಕ್ಕೆ ಸರಿಯಾದ ಪ್ರತಿಫಲವೂ ದೊರೆಯಿತು. ಪಾನ್ ಗುವಿನ ಕೊನೆಯ ಉಸಿರು ಗಾಳಿ ಮತ್ತು ಮೋಡಗಳಾಗಿ ಪರಿವರ್ತನೆಯಾದವು. ಅವನು ಕುಸಿದು ಬೀಳುವಾಗ ಹೊರಡಿಸಿದ ಉದ್ಗಾರವು ಗುಡುಗು – ಸಿಡಿಲಿನ ಧ್ವನಿಯಾದವು. ಅವನ ಬಲಗಣ್ಣು ಚಂದಿರನೂ ಎಡಗಣ್ಣು ಸೂರ್ಯನೂ ಆದವು. ಅವನ ತಲೆಗೂದಲು ಮತ್ತು ಗಡ್ಡಗಳು ಆಕಾಶಗಂಗೆಯ ನಕ್ಷತ್ರಗಳಾದವು. ಅವನ ಕೈ- ಕಾಲು – ಬರಳುಗಳು ಬೆಟ್ಟಗುಡ್ಡಗಳಾದವು. ಅವನ ರಕ್ತವು ನದಿಗಳಾಗಿ ಕವಲೊಡೆದು ಹರಿಯಿತು. ಅವನ ಮಾಂಸ ಫಲವತ್ತಾದ ಕೃಷಿಭೂಮಿಯಾದರೆ, ಮೂಳೆಗಳು ಅಮೂಲ್ಯ ಮುತ್ತು ರತ್ನಗಳಾದವು. ಅವನ ಹಲ್ಲುಗಳು ಮತ್ತು ಉಗುರುಗಳು ಗಟ್ಟಿಮುಟ್ಟಾದ ಲೋಹಗಳಾದವು. ರೋಮಗಳು ಗಿಡಮೂಲಿಕೆ – ತರಕಾರಿಗಳಾದವು. ಅವನ ಮೈಬೆವರಿನ ಹನಿಗಳು ಮರ್ತ್ಯಲೋಕಕ್ಕೆ ಸುರಿಯುವ ಮಳೆಯಾಯಿತು.
ಪಾನ್ ಗುವಿನ ಆತ್ಮವು ಮನುಷ್ಯರ ರೂಪದಲ್ಲಿ, ಪ್ರತಿಯೊಬ್ಬರಲ್ಲೂ ನೆಲೆಸಿತು.

ಹೀಗೆ ದೈತ್ಯ ದೇವತೆ ಪಾನ್ ಗು ಇಲ್ಲವಾದರೂ ಎಲ್ಲೆಡೆ ಇರುವಂತಾದ. ಸತ್ತುಹೋದರೂ ಸೃಷ್ಟಿಯಲ್ಲಿ ನಿರಂತರವಾಗಿ ಉಳಿದುಹೋದ. ಅವನಿಂದ ಸೃಷ್ಟಿಗೊಂಡ ಜಗತ್ತಿನಲ್ಲಿ ಮುಂದೆ ಜೀವಿಗಳು ಸಂತಾನ ಬೆಳೆಸುತ್ತಾ ಭೂಮಿಯನ್ನು ತುಂಬಿದವು.
~
ಹೆಚ್ಚಿನ ಮಾಹಿತಿ: ಚೀನೀ ಜನಪದ – ಪುರಾಣಗಳು ಮನುಷ್ಯನ ಆತ್ಮವೇ ಎಲ್ಲ ಪ್ರಾಣಿಗಳಲ್ಲೂ ನೆಲೆಸಿವೆ ಎಂದು ನಂಬುತ್ತವೆ. ಪಾನ್ ಗು ಚೀನೀಯರ ಪಾಲಿನ ಸೃಷ್ಟಿಕರ್ತ. ಈತ ಸೃಷ್ಟಿಯ ಪ್ರತಿಯೊಂದು ವಸ್ತುವಿನಲ್ಲೂ ಒಂದಲ್ಲ ಒಂದು ರೀತಿಯಲ್ಲಿ ನೆಲೆಸಿದ್ದಾನೆ ಎಂದು ಚೀನೀಯರು ನಂಬುತ್ತಾರೆ.
~
ಅಭ್ಯಾಸ : ಸೃಷ್ಟಿಯಾಚೆಗೂ ಹತ್ತು ಅಡಿ ಬೆಳೆಯುತ್ತಲೇ ಹೋಗುವ ಪಾನ್ ಗು ಭಾರತೀಯ ವೇದ ವಾಙ್ಮಯದ ಯಾವ ಹೇಳಿಕೆಯನ್ನು ಹೋಲುತ್ತದೆ? ಒಟ್ಟಾರೆಯಾಗಿ ಪಾನ್ ಗುವಿನ ಅಂತ್ಯ ಮತ್ತು ಎಲ್ಲದರಲ್ಲೂ ನೆಲೆಸುವಿಕೆಯನ್ನು ಭಾರತದ ಯಾವ ತಿಳುವಳಿಕೆಯೊಂದಿಗೆ ಸಮೀಕರಿಸಬಹುದು? – ಯೋಚಿಸಿ, ಪ್ರತಿಕ್ರಿಯಿಸಿ.  

(ಇಂಗ್ಲಿಶ್ ಭಾಷೆಯ ವಿವಿಧ ಆಕರಗಳಿಂದ ಸಂಗ್ರಹಿಸಿ ಕಥನವನ್ನು ಸಿದ್ಧಪಡಿಸಲಾಗಿದೆ | ಚಿತ್ರ ಕೃಪೆ : ಇಂಟರ್ನೆಟ್)

1 Comment

  1. ಒಂದು ಮಾಂಸದ ಮುದ್ದೆಯು ಹತ್ತು ತಿಂಗಳ ಕಾಲ ಬೃಹದಾಕಾರವಾಗಿ ಬೆಳೆದು, ನೂರೊಂದು ಭಾಗಗಳಾಗಿ ಮುಂದೆ ಕೌರವರಾದರು. ಬಹುಶಃ ಈ ನಿದರ್ಶನಕ್ಕೆ ಸಾಮ್ಯತೆಯಿದೆ ಎನಿಸುತ್ತದೆ.

Leave a Reply