ಸಂಬಂಧಗಳು ಬೆಸೆದುಕೊಳ್ಳೋಕೆ ಹೆಸರೇನೂ ಮುಖ್ಯವಲ್ಲ ಅನ್ನುವ ಪಾಸಿಟಿವ್ ಚಿಂತನೆಯನ್ನಿದು ಕಟ್ಟಿಕೊಡುತ್ತೆ. ನಾವೂ ಹೀಗೆ ‘ಹೆಸರು ಏನಿದ್ದರೇನು? ಒಳಗಿನ ಮನುಷ್ಯತ್ವ ಮುಖ್ಯ’ ಎಂದು ಬಗೆದು ಬಾಳಿದರೆಷ್ಟು ಚೆಂದ ಅಲ್ಲವೆ? ~ ಅಲಾವಿಕಾ
ಒಬ್ಬ ಝೆನ್ ಗುರು ಮತ್ತು ಶಿಷ್ಯ ಹೋಗ್ತಾ ಇರುತ್ತಾರೆ. ದಾರಿಯಲ್ಲಿ ಮತ್ತೊಬ್ಬ ಎದುರಾಗ್ತಾನೆ.
“ನಮಸ್ಕಾರ ಇಕೊಯಿ” ಎದುರಾದವನು ಹೇಳ್ತಾನೆ.
“ನಮಸ್ಕಾರ ಟೊಬೊಕು” ಝೆನ್ ಗುರು ಸ್ಪಂದಿಸ್ತಾನೆ.
ಅವನು ಆಚೆಗೆ ಇವನು ಈಚೆಗೆ ಹೊರಡ್ತಾರೆ. ಒಂದು ಕ್ಷಣ ಸುಮ್ಮನಿದ್ದ ಶಿಷ್ಯ ಕೇಳ್ತಾನೆ, “ಗುರುವೇ, ನಿನ್ನ ಹೆಸರು ಇಕೊಯಿ ಅಲ್ಲವಲ್ಲ!” ಗುರು ನಗುತ್ತಾ ಉತ್ತರಿಸ್ತಾನೆ, “ಬಹುಶಃ ಅವನ ಹೆಸರೂ ಟೊಬೊಕು ಇರಲಿಕ್ಕಿಲ್ಲ!!”
~
ಗಣಿತದ ಲೆಕ್ಕಪಾಠಗಳು ನೆನಪಾಗ್ತವೆ. ಬಹುತೇಕ ಅಲ್ಲಿ ‘ಎಕ್ಸ್’ನ ಬಳಿ ನಾಲ್ಕು ಗೋಲಿ, ‘ವೈ’ಳ ಬಳಿ ಐದು ಗೋಲಿ ಹೀಗೆ ಇರುತ್ತಿದ್ದವು. ಆ ಎಕ್ಸ್ ಮತ್ತು ವೈ ಯಾರು ಬೇಕಾದರೂ ಆಗಿರಬಹುದಿತ್ತು. ಜೀವನಕ್ಕೆ ಹಲವು ಹಂತಗಳಲ್ಲಿ ಹಲವು ಬಗೆಯ ಲೆಕ್ಕಾಚಾರಗಳು ಮುಖ್ಯವಾಗ್ತವೆ. ಈ ಲೆಕ್ಕಾಚಾರಗಳ ಮುಂದೆ ಯಾವ ಇತರ ಮಾಪಕಗಳೂ ಗೌಣ. ಹೆಸರು, ದೇಶ, ಭಾಷೆ, ಜಾತಿಗೀತಿಗಳೆಲ್ಲವೂ ಕೂಡ.
ಆದರೂ ದೈನಂದಿನ ವ್ಯವಹಾರಕ್ಕೆ ಹೆಸರು ಬೇಕಾಗ್ತದೆ. ಗುರುತು ಹಿಡಿಯಲಿಕ್ಕೆ, ವ್ಯವಹಾರ ಸುಲಭವಾಗಲಿಕ್ಕೆ ಹೆಸರಿನ ಅಗತ್ಯ ಕಂಡುಕೊಂಡ ಮಾನವಜೀವಿ ಅದೆಷ್ಟೋ ಸಾವಿರ ವರ್ಷಗಳ ಹಿಂದೆ ಈ ಪರಿಪಾಠ ರೂಢಿಸಿಕೊಂಡ. ಈ ರೂಢಿಯ ಜೊತೆಗೇ ಹಾಗೆ ಇಟ್ಟ – ಇಟ್ಟುಕೊಂಡ ಹೆಸರು ಹರಡುವ, ಉಳಿಸಿ ಬೆಳೆಸಿಕೊಳ್ಳುವ ಹಂಬಲವೂ ಹುಟ್ಟಿಕೊಂಡಿತ್ತೇನೋ. ತಾನಿರುವ ನೆಲೆಗೂ ಒಂದು ಹೆಸರು ಹಚ್ಚಿ ಅದರ ‘ರಕ್ಷಣೆ’ಯ ಠೇಕೇದಾರಿಕೆ ತನಗೆ ತಾನೆ ವಹಿಸಿಕೊಂಡ ಮನುಕುಲ, ಸೃಷ್ಟಿಯನ್ನು ಒಡೆಯುತ್ತ ಹೋಯ್ತು. ಇವತ್ತು ನಾವು ಮನುಷ್ಯ ಜೀವಿಗಳು ಉಳಿದೆಲ್ಲ ಜೀವ ಸಂಕುಲದಿಂದ ಬೇರಾಗಿ, ಚೂರುಚೂರಾಗಿ ಹೋಗ್ತಿರುವುದು ಈ ಹೆಸರುಳಿಕೆಯ ದರ್ದುಗಳಿಂದಲೇ. ದೇಶದ ಹೆಸರು, ಮನೆತನದ ಹೆಸರು, ಸಂಸ್ಥೆಯ ಹೆಸರು, ಸ್ವಂತದ ಹೆಸರು…!
ಭೂಮಿ ಅರೆಕ್ಷಣ ಆಯತಪ್ಪಿದರೂ ನಿರ್ನಾಮವಾಗಿ ಹೋಗುವ ನಮಗೆ ಎಷ್ಟೆಲ್ಲ ಬಗೆಯಲ್ಲಿ ಹೆಸರುಗಳ ಹಳಹಳಿಕೆ ನೋಡಿ!! ಗುರುತಿಗೆಂದು ಹೆಸರಿಟ್ಟುಕೊಂಡರೆ, ಹೆಸರೇ ನಮ್ಮ ಗುರುತಾಗಿಬಿಡುವ ಅವಸ್ಥೆ ನಮಗೆ ನಾವೆ ತಂದುಕೊಂಡಿದ್ದೇವೆ.
ಇದನ್ನು ಕಂಡೇ ಪುರಂದರ ದಾಸರು “ಮುನ್ನ ಶತಕೋಟಿ ರಾಯರುಗಳಾಳಿದ ನೆಲವ ತನ್ನದೆಂದೆನುತ ಶಾಸನವ ಬರೆಸಿ”ದ ಚೆನ್ನಿಗನು ಸತ್ತುಹೋದ ಕೂಡಲೇ ಎಲ್ಲವೂ ಮುಗಿದುಹೋಗುವುದು ಎಂದು ವ್ಯಂಗ್ಯವಾಡಿರುವುದು.
~
ಹೆಸರು ಮತ್ತು ಮನುಷ್ಯ ಸಂಬಂಧಗಳ ಕುರಿತು ಯೋಚಿಸುವ ಈ ಹೊತ್ತು ಒಂದೆರಡು ಸಿನೆಮಾಗಳು ನೆನಪಾಗ್ತಿವೆ. ‘ಮುರಾರಿ ಲಾಲ್ – ಜಯಚಂದ್’ ಸೀನ್ ‘ಆನಂದ್’ ಸಿನೆಮಾ ನೋಡಿದ ಯಾರೂ ಮರೆತಿರಲಾರರು. ಕ್ಯಾನ್ಸರ್ ಪೀಡಿತ ಆನಂದ್’ಗೆ ಕಂಡವರನ್ನೆಲ್ಲ “ಮುರಾರಿ ಲಾಲ್!” ಎಂದು ಕರೆದು ಮಾತಾಡಿಸೋದೊಂದು ಹುಕಿ. ಆದರೆ ಯಾವಾಗಲೂ ಅವನಿಗೆ ನಕಾರಾತ್ಮಕ ಪ್ರತಿಕ್ರಿಯೆಯೇ ಸಿಗುತ್ತದೆ. ಯಾರೂ ಅವನಿಗೆ ಸ್ಪಂದಿಸೋದಿಲ್ಲ. ಆದರೆ ಒಂದು ದಿನ ನಾಟಕಕಾರನೊಬ್ಬ ಆತನಿಗೆ ಸ್ಪಂದಿಸುತ್ತಾನೆ. ಅವನು ಮುರಾರಿ ಲಾಲ್ ಎಂದು ಕರೆದರೆ, ಇವನು “ಅರೆ ಜಯ್ ಚಂದ್!” ಎಂದು ಪ್ರತಿಕ್ರಿಯಿಸುತ್ತಾನೆ! ಅಸಲಿಗೆ ಆತ ಮುರಾರಿ ಲಾಲನೂ ಅಲ್ಲ, ಈತ ಜಯ್ ಚಂದನೂ ಅಲ್ಲ!!
ಈ ಸನ್ನಿವೇಶ ಶುರುವಲ್ಲಿ ಹೇಳಿದ ಝೆನ್ ಕತೆಯಂತೆಯೇ ಇದೆ. ಸಂಬಂಧಗಳು ಬೆಸೆದುಕೊಳ್ಳೋಕೆ ಹೆಸರೇನೂ ಮುಖ್ಯವಲ್ಲ ಅನ್ನುವ ಪಾಸಿಟಿವ್ ಚಿಂತನೆಯನ್ನಿದು ಕಟ್ಟಿಕೊಡುತ್ತೆ. ನಾವೂ ಹೀಗೆ ‘ಹೆಸರು ಏನಿದ್ದರೇನು? ಒಳಗಿನ ಮನುಷ್ಯತ್ವ ಮುಖ್ಯ’ ಎಂದು ಬಗೆದು ಬಾಳಿದರೆಷ್ಟು ಚೆಂದ ಅಲ್ಲವೆ?
~
“ವಾಟ್ ಇಸ್ ಇನ್ ಎ ನೇಮ್?” ಕೇಳ್ತಾನೆ ಷೇಕ್ಸ್ ಪಿಯರ್. ಹೇಳಬೇಕು ಅವನಿಗೆ, “ಇನ್ಸಾನ್ ನಾಮ್ ಮೆ ಮಜ್ಹಬ್ ಡೂಂಡ್ ಲೇತಾ ಹೈ” ಅಂತ. (ಈ ಡಯಲಾಗ್ ಎ ವೆಡ್ನೆಸ್ ಡೇ ಮೂವಿಯಲ್ಲಿ ನಾಸಿರುದ್ದಿನ್ ಷಾ ಹೇಳೋದು. ಸಂಭಾಷಣೆಕಾರ: ನೀರಜ್ ಪಾಂಡೆ)
ಹುಹ್! ಹೆಸರಲ್ಲೇ ಗೋಡೆಗಳನ್ನ ಕಟ್ಟಿಕೊಳ್ತಾನೆ ಮನುಷ್ಯ. ಇವತ್ತಿಗೆ, ಇದಕ್ಕಿಂತ ಹೆಚ್ಚಿನ ದುರಂತ ಮತ್ತೇನು ಬೇಕಿದೆ? ಈ ದುರಂತದಿಂದ ಪಾರುಗಾಣಲಿಕ್ಕಾಗಿಯೇ ರಸಋಷಿ ಕುವೆಂಪು “ಚೇತನವು ರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿ ಅನಂವಾಗಿರಲಿ” ಎಂದು ಹಾರೈಸಿರುವುದು. ಹಾಗೆ ದಾಟುವುದು, ಮೀಟುವುದು ನಮ್ಮಿಂದ ಸಾಧ್ಯವೇ?
ಹೌದು ದಾದಾ ಹೆಸರಲ್ಲೇನಿದೆ ಮಣ್ಣು..ಚಂದದ ಲೇಖನ ಲಾ ಸೀರಿಸ್ ಚಂದ ಉಂಟು
ಧನ್ಯವಾದ