ಯಾವುದೇ ಧರ್ಮದ ಕುರಿತು ಪ್ರಾಥಮಿಕ ಮಾಹಿತಿ ಹೊಂದಲು ನಾವು ಧಾರ್ಮಿಕ ಮನಸ್ಥಿತಿಯನ್ನು ಹೊಂದಿರಲೇಬೇಕೆಂದಿಲ್ಲ. ಆಯಾ ಧರ್ಮದ ಕುರಿತು ಗೌರವ, ಸೌಹಾರ್ದ ಮತ್ತು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಲು ಈ ತಿಳಿವಳಿಕೆ ಅಗತ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಹಿಂದೂ ಧರ್ಮದ ಕುರಿತು ಕೆಲವು ಪ್ರಾಥಮಿಕ ಸಂಗತಿಗಳ ಮಾಹಿತಿ ಸರಣಿಯನ್ನು ಪ್ರಕಟಿಸುತ್ತಿದ್ದೇವೆ. ಹಿಂದಿನ ಭಾಗವನ್ನು ಇಲ್ಲಿ ಓದಿ:
ಉಪನಿಷತ್ತುಗಳಲ್ಲಿ 13 ಉಪನಿಷತ್ತುಗಳು ಪ್ರಧಾನ ಉಪನಿಷತ್ತುಗಳೆಂದು ಮನ್ನಣೆ ಪಡೆದಿವೆ. ಅವುಗಳಲ್ಲಿ ಈಶ, ಕೇನ, ಪ್ರಶ್ನ, ಕಠ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ, ಬೃಹದಾರಣ್ಯಕ ಉಪನಿಷತ್ತುಗಳು ‘ದಶೋಪನಿಷತ್ತು’ಗಳೆಂದು ಹೆಸರಾಗಿವೆ. ಉಳಿದವು ಕೌಷೀತಕಿ, ಶ್ವೇತಾಶ್ವತರ ಮತ್ತು ಮೈತ್ರಾಯಣೀಯ ಉಪನಿಷತ್ತುಗಳು. ಈ ೧೩ ಉಪನಿಷತ್ತುಗಳಿಂದ ಭಾಷ್ಯಕಾರರು ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ ಮತ್ತು ಇವುಗಳ ಮೇಲೆ ಭಾಷ್ಯ ಬರೆದಿದ್ದಾರೆ.
ಈಶಾವಾಸ್ಯೋಪನಿಷತ್
ದಶೋಪನಿಷತ್ತುಗಳಲ್ಲಿ ಮೊದಲನೆಯದು ಈಶಾವಾಸ್ಯೋಪನಿಷತ್ತು. ಇದರ ಪ್ರಥಮ ಶಬ್ದ ಈಶಾವಾಸ್ಯಮ್ಎಂಬುದನ್ನು ಅನುಸರಿಸಿ ಇದಕ್ಕೆ ಈ ಹೆಸರು ಬಂದಿದೆ. ಇದರಲ್ಲಿರುವುದು ಕೇವಲ ಹದಿನೆಂಟು ಶ್ಲೋಕಗಳು ಮಾತ್ರ. ಇದು ಶುಕ್ಲ ಯಜುರ್ವೇದದ ವಾಜಸನೇಯ ಸಂಹಿತೆಗೆ ಸೇರಿದುದರಿಂದ ಇದಕ್ಕೆ ‘ವಾಜಸನೇಯ ಸಂಹಿತೋಪನಿಷತ್’ಎಂಬ ಹೆಸರೂ ಇದೆ. ಭಗವದ್ಗೀತೆಯು ಈ ಉಪನಿಷತ್ತಿನ ವಿಸ್ತರಣೆ ಎಂಬ ಅಭಿಪ್ರಾಯವಿದೆ.
ಭಗವಂತನನ್ನು ಈಶ ಎಂದು ಕರೆದಿರುವ ಈ ಉಪನಿಷತ್ತು, ಜಗತ್ತೆಲ್ಲಾ ಈಶನಿಂದ ಆವೃತವಾಗಿದೆ ಎಂದು ಪ್ರತಿಪಾದಿಸುತ್ತದೆ. ಪರದ್ರವ್ಯವನ್ನು ಆಶ್ರಯಿಸದೆ, ಪರದ್ರವ್ಯಕ್ಕಾಗಿ ಆಶಿಸದೆ, ನಮ್ಮ ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂಬುದು ಈಶಾವಾಸ್ಯದ ಪ್ರಮುಖ ಬೋಧನೆ.
ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ ||
~ “ಈ ಜಗತ್ತಿನಲ್ಲಿ ಚಲನಾತ್ಮಕವಾದದ್ದು ಏನೇನಿದೆಯೋ ಇದೆಲ್ಲವೂ ಈಶನಿಂದ ವ್ಯಾಪಿತವಾಗಿರುವುದು. ಅದರ ತ್ಯಾಗದಿಂದ (ಅದರ ಮೇಲೆ ಒಡೆತನ ಸಾಧಿಸದೆ) ನಿನ್ನನ್ನು ಕಾಪಾಡಿಕೊ. ಯಾರ ಧನವನ್ನೂ ಬಯಸಬೇಡ” – ಇದು ಈಶಾವಾಸ್ಯ ಉಪನಿಷತ್ತಿನ ಮೊದಲ ಶ್ಲೋಕ. “ಸೃಷ್ಟಿಯಲ್ಲಿ ಎಲ್ಲವೂ ಭಗವಂತನದ್ದೇ. ಆದ್ದರಿಂದ ಯಾವುದನ್ನೂ ನಿನ್ನದೆಂದು ಭಾವಿಸಿದೆ. ತ್ಯಾಗಭಾವನೆಯಿಂದ (ಇತರರೊಡನೆ ಹಂಚಿಕೊಳ್ಳುವ ಮೂಲಕ) ಸುಖವನ್ನು ಅನುಭವಿಸು” – ಎಂಬುದು ಈ ಶ್ಲೋಕದ ಸರಳಾರ್ಥ.
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ||
ಓಂ ಶಾಂತಿಃ ಶಾಂತಿಃ ಶಾಂತಿಃ ||
ಇದು ಈಶಾವಾಸ್ಯದ ಸುಪ್ರಸಿದ್ಧ ಶಾಂತಿಮಂತ್ರ. “ಅದು ಪೂರ್ಣ, ಇದು ಪೂರ್ಣ, ಪೂರ್ಣದಿಂದ ಪೂರ್ಣ ಹುಟ್ಟಿರುವುದು; ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುವುದು” – ಇದು ಶ್ಲೋಕದ ನೇರ ಅರ್ಥ. “ಪರಮಾತ್ಮ ತತ್ವವು ಪರಿಪೂರ್ಣ. ಅದರಿಂದ ಹುಟ್ಟಿದ ಈ ಜಗತ್ತೂ ಪರಿಪೂರ್ಣ. ಆದರೆ ಅದು ಹುಟ್ಟಿದ್ದರಿಂದ ಅಧಿಕವಾಗಿಲ್ಲ. ಈ ಜಗತ್ತು ಲಯವಾದರೂ ಒಟ್ಟು ಆ ಪರಮಾತ್ಮ ತತ್ವದಲ್ಲಿ ಕಡಿಮೆಯಾಗದು” ಇದು ಶ್ಲೋಕದ ತತ್ವ ಸಾರ.