ಇರುವಂತೆ ಪ್ರತಿಬಿಂಬಿಸುವವರೇ ನಿಜವಾದ ಪ್ರೇಮಿಗಳು : ಸೂಫಿ ಸಂದೇಶ

ಪ್ರೇಮವು ಸಂಗಾತಿಯ ಮೇಲೆ ತನ್ನ ಅಭಿಪ್ರಾಯವನ್ನು ಹೇರುವುದಿಲ್ಲ. ನಿರೀಕ್ಷಿಸುವುದಿಲ್ಲ. ದಬ್ಬಾಳಿಕೆ ನಡೆಸುವುದಿಲ್ಲ. ಸಂಗಾತಿಯನ್ನು ತಾನು ತಾನೇ ಆಗಿ ಇರಗೊಡುವ ಸ್ವಾತಂತ್ರ್ಯವೇ ನಿಜವಾದ ಪ್ರೇಮ.

sufi2
ಸಂಗಾತದಲ್ಲಿ ನಾವು ಮಾಡುವ ಬಹಳ ದೊಡ್ಡ ತಪ್ಪೆಂದರೆ ನಿರೀಕ್ಷಿಸುವುದು. ಶುರುವಲ್ಲಿ ಸಂಗಾತಿಯನ್ನು ಒಲಿಸಿಕೊಳ್ಳುವಾಗ “ನೀನು ಹೇಗಿದ್ದರೂ ನನಗಿಷ್ಟ” ಎಂದು ದುಂಬಾಲು ಬೀಳುತ್ತೇವೆ. ನಂತರದಲ್ಲಿ “ನೀನು ಹೀಗಿರಬೇಡ, ಹಾಗಿದ್ದರೆ ಚೆಂದ…” ಎಂದೆಲ್ಲ ತಾಕೀತು ಮಾಡಲು ತೊಡಗುತ್ತೇವೆ.
ನಮ್ಮ ನಿರೀಕ್ಷೆಯಂತೆ ಸಂಗಾತಿ ಇರಬೇಕೆಂದು ಬಯಸೋದು ಪ್ರೇಮವಲ್ಲ. ನಿರೀಕ್ಷೆ ಯಾವತ್ತೂ ಪ್ರೇಮವಾಗಲಾರದು. ಸಾಂಗತ್ಯಕ್ಕಾಗಿ ನಮಗೆ ಬೇಕಿರುವುದು ಸಹಾಯಕರಲ್ಲ. ಹಿಂಬಾಲಕರಲ್ಲ. ಅಥವಾ ಗುಲಾಮರಲ್ಲ. ಸಂಗಾತಿಯ ಸ್ವಾತಂತ್ರ್ಯವನ್ನೂ ಸಂಪೂರ್ಣವಾಗಿ ಇರಗೊಡುವುದೇ ಪ್ರೇಮ. ಪ್ರೇಮವಿದ್ದರೆ ಮಾತ್ರ ಸಾಂಗತ್ಯ.
ಪ್ರೇಮಿ ಅಥವಾ ಸಂಗಾತಿ ಕನ್ನಡಿಯಂತಿರಬೇಕು. ತನ್ನ ಪ್ರಿಯತಮರನ್ನು ಅದು ಅವರು ಇರುವಂತೆಯೇ ಪ್ರತಿಬಿಂಬಿಸಬೇಕು. ನಮಗಿಷ್ಟ ಬಂದಂತೆ ಕಾಣಿಸಲು ಅವರೇನೂ ಚಿತ್ರಗಳಲ್ಲ, ವ್ಯಕ್ತಿಗಳು. ಮುಖ್ಯವಾಗಿ ಇದನ್ನು ನೆನಪಿನಲ್ಲಿಡಬೇಕು.
“ಯಾರು ನಿಮ್ಮನ್ನು ನೀವೇ ಆಗಿರುವಂತೆ ಪ್ರತಿಬಿಂಬಿಸುವರೋ ಅವರೇ ನಿಜವಾದ ಪ್ರೇಮಿಗಳು” ಇದು ಸೂಫೀ ನಂಬಿಕೆ. ತಮಗೆ ಬೇಕಿರುವಂತೆ ನಮ್ಮನ್ನು ತಿದ್ದಲು ಹೊರಡುವವರು ಪ್ರೇಮಿಗಳಾಗಿರಲು ಸಾಧ್ಯವಿಲ್ಲ. ನೀವು ಅಂಥಾ ನಿರೀಕ್ಷೆ ಅಥವಾ ಹೇರಿಕೆಗಳಲ್ಲಿ ತೊಡಗಿದ್ದೀರೆಂದರೆ, ನೀವು ಕೂಡಾ ನಿಜಪ್ರೇಮಿಯಲ್ಲ!

Leave a Reply