ರಮಣ ಮಹರ್ಷಿಗಳ ಪ್ರಶ್ನೋತ್ತರ ಮಾಲೆ ~ ಭಾಗ 1

RAMANAಸಂದರ್ಶಕರು ಹಾಗೂ ಶಿಷ್ಯರು ಕೇಳಿದ ಪ್ರಶ್ನೆಗಳಿಗೆ ರಮಣ ಮಹರ್ಷಿಗಳು ನೀಡಿದ ಉತ್ತರಗಳನ್ನು ‘ಶ್ರೀ ರಮಣ ಮಹರ್ಷಿಗಳೊಡನೆ ಮಾತುಕತೆ’ ಕೃತಿಯಲ್ಲಿ ಸಂಕಲಿಸಲಾಗಿದೆ. ಈ ಕೃತಿಯಿಂದ ಪ್ರಶ್ನೋತ್ತರಗಳನ್ನು ಆಯ್ದ, ಸರಳೀಕರಿಸಿ ಇಲ್ಲಿ ನೀಡಲಾಗಿದೆ…

ಪರಿವ್ರಾಜಕ: ಇಡಿಯ ವಿಶ್ವವೇ ಭಗವಂತನೆಂದು ಅರಿಯುವುದು ಹೇಗೆ?
ರಮಣ ಮಹರ್ಷಿ : ನಿನ್ನಲ್ಲಿ ವಿವೇಕದ ದೃಷ್ಟಿಯನ್ನು ಬೆಳೆಸಿಕೊಂಡರೆ ಸಮಸ್ತೆ ವಿಶ್ವವೇ ಭಗವಂತನೆಂದು ತಿಳಿಯುವೆ. ಬ್ರಹ್ಮವನ್ನು ತಿಳಿಯದೆ ಅವನ ಸರ್ವವ್ಯಾಪಕ ತತ್ತ್ವವನ್ನು ಹೇಗೆ ತಿಳಿಯುವೆ?

ಸಂದರ್ಶಕ: ಇದು ಹೇಗೆ ಅನುಭವಕ್ಕೆ ಬರುತ್ತದೆ?
ರಮಣ ಮಹರ್ಷಿ : ಯಾರು ಯಾವ ನೆಲೆಯಲ್ಲಿ ನಿಂತಿದ್ದಾರೋ ಅನುಭವವೂ ಅದೇ ನೆಲೆಯಲ್ಲಿಯೇ ಇರುತ್ತದೆ. ಜಾಗೃತ್ ಸ್ಥಿತಿಯಲ್ಲಿ ಸ್ಥೂಲ ಶರೀರವು ನಾಮರೂಪಗಳನ್ನು ಧರಿಸಿರುತ್ತದೆ. ಸ್ವಪ್ನ ಸ್ಥಿತಿಯಲ್ಲಿ ಮನೋದೇಹವು ವೈವಿಧ್ಯಪೂರ್ಣವಾದ ಮನಸ್ಸಿನ ಸೃಷ್ಟಿಯೇ ಆದ ನಾಮರೂಪಗಳನ್ನು ಅನುಭವಿಸುತ್ತದೆ; ಸುಷುಪ್ತಿಯಲ್ಲಿ ಸ್ಥೂಲ ದೇಹದೊಡನೆ ಸಂಬಂಧವು ಕಳಚಿ ಹೋಗಿರುವುದರಿಂದ ಇಂಥ ಅರಿವು ಇರುವುದಿಲ್ಲ. ಹಾಗೆಯೇ ಸಮಾಧಿಸ್ಥಿತಿಯಲ್ಲಿ ಬ್ರಹ್ಮ ವಸ್ತುವಿನೊಡನೆ ತಾದಾತ್ಮ್ಯ ಉಂಟಾಗಿ, ಸರ್ವ ವಸ್ತುವಿನಲ್ಲೂ ಸಮಭಾವವು ಸಿದ್ಧಿಸುತ್ತದೆ. ತನ್ನ ಆತ್ಮವಸ್ತುವಲ್ಲದೆ ಬೇರೆ ಏನೂ ಇಲ್ಲ ಎಂಬ ಅನುಭವ ಮೂಡುತ್ತದೆ.

ಸಂದರ್ಶಕ: ಸುಖದ ಸ್ವರೂಪವೇನು?
ರಮಣ ಮಹರ್ಷಿ : ಸುಖವು ಬಾಹ್ಯ ಕಾರಣ ಹಾಗೂ ವಸ್ತುಗಳಲ್ಲಿ ಇದೆ ಎಂದು ಯಾರಾದರೂ ಭಾವಿಸಿದರೆ, ಅಂತ ವಸ್ತುಗಳ ಸಂಗ್ರಹ ಹೆಚ್ಚಾದಾಗ ಸುಖವೂ ಅಧಿಕವಾಗಿ, ಈ ಸಂಗ್ರಹ ಕ್ಷೀಣಿಸಿದಾಗ ಸುಖವೂ ಕಡಿಮೆಯಾಗುತ್ತದೆ ಎಂದು ಭಾವಿಸಬೇಕಾಗುತ್ತದೆ. ಅಂದರೆ, ಯಾವ ಬಾಹ್ಯ ಸುಖವೂ ಇಲ್ಲದಿದ್ದರೆ ಅವರ ಸುಖ ಶೂನ್ಯವೇ ಎಂದು ತಿಳಿಯಬೇಕಾಗುತ್ತದೆ! ಆದರೆ ಮನುಷ್ಯರ ನಿಜವಾದ ಅನುಭವ ಏನು? ಈ ವಾದವನ್ನು ಅನುಭವವು ಪುಷ್ಟೀಕರಿಸುತ್ತದೆಯೇ?

ಸುಷುಪ್ತಿಯಲ್ಲಿ ಮನುಷ್ಯರಿಗೆ ಯಾವ ವಸ್ತು ಸಂಗ್ರಹವೂ ಇರುವುದಿಲ್ಲ. ತನ್ನ ಸ್ವಂತ ದೇಹವೇ ಅಲ್ಲಿ ಇಲ್ಲ. ಆದರೆ ದುಃಖದ ಅನುಭವಕ್ಕೆ ಬದಲಾಗಿ ಅವರು ಸುಖವನ್ನೇ ಅನುಭವಿಸುತ್ತಾರೆ ಅಲ್ಲವೆ? ಸುಖವು ಮನುಷಯರಲ್ಲಿ ಅಂತರ್ಗತವಾಗಿದೆ ಅನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಅದು ಬಾಹ್ಯ ಕಾರಣಗಳನ್ನು ಅವಲಂಬಿಸಿರುವುದಿಲ್ಲ. ಅಖಂಡವೂ ಪರಿಶುದ್ಧವೂ ಆದ ಈ ಸುಖದ ಗಣಿಯ ಬಾಗಿಲು ತೆರೆಯಬೇಕೆಂದರೆ ಆತ್ಮಜ್ಞಾನವನ್ನು ಪಡೆದುಕೊಳ್ಳಬೇಕು.

(ಆಕರ ಕೃಪೆ: ಶ್ರೀ ರಮಣ ಮಹರ್ಷಿಗಳೊಡನೆ ಮಾತುಕತೆ | ಆಂಗ್ಲಮೂಲ: ಮುನಗಾಲ ವೆಂಕಟರಾಮಯ್ಯ)

3 Comments

Leave a Reply