“ದೇಹವನ್ನು ನೀರು, ಸ್ವಯವನ್ನು ಕಂಬನಿ, ಬುದ್ಧಿಯನ್ನು ತಿಳಿವು ಮತ್ತು ಆತ್ಮವನ್ನು ಪ್ರೇಮ ಶುದ್ಧಗೊಳಿಸ್ತವೆ…” ಅನ್ನುತ್ತಾನೆ ಸೂಫಿ ಕವಿ ಇಮಾಮ್ ಅಲಿ.
ಹೇಗೆ ದೇಹವನ್ನು ನೀರು ಶುದ್ಧಗೊಳಿಸುತ್ತದೆಯೋ ಹಾಗೆಯೇ ಕಂಬನಿಯು ಮನಸ್ಸನ್ನು ಶುದ್ಧಗೊಳಿಸುತ್ತದೆ. ದಯೆ, ಸಹಾನುಭೂತಿ, ಪಶ್ಚಾತ್ತಾಪ, ಕರುಣೆಗಳು ಮನಸ್ಸನ್ನು ಶುದ್ಧಗೊಳಿಸುತ್ತವೆ. ಮನಸ್ಸಿನ ಕಶ್ಮಲವನ್ನು ಅವು ತೊಡೆದುಹಾಕುತ್ತವೆ. ಹಾಗೆಯೇ ಬುದ್ಧಿಯು ಮನಸ್ಸಿನೊಳಗಿನ ಮೌಢ್ಯವನ್ನೂ ಅಹಂಕಾರವನ್ನೂ, ಅಂಧಕಾರವನ್ನೂ ತೊಲಗಿಸಿ ಅದನ್ನು ಶುಚಿಗೊಳಿಸುತ್ತದೆ. ಮತ್ತು ಈ ಎಲ್ಲದರಂತೆ ಪ್ರೇಮವು ಆತ್ಮವನ್ನು ಶುದ್ಧಗೊಳಿಸುತ್ತದೆ. ಪ್ರೇಮದಿಂದಲ್ಲದೆ ಆತ್ಮದ ಶುದ್ಧಿ ಯಾವುದರಿಂದಲೂ ಸಾಧ್ಯವಿಲ್ಲ. ಏಕೆಂದರೆ ಪ್ರೇಮವು ದ್ವೇಷಕ್ಕೆ ಆಸ್ಪದ ಕೊಡುವುದಿಲ್ಲ. ಪ್ರೇಮ ಇರುವಲ್ಲಿ ವೈರತ್ವ ಇರುವುದಿಲ್ಲ. ಪ್ರೇಮ ಇರುವಲ್ಲಿ ಸ್ವಾರ್ಥವಾಗಲೀ ಮತ್ಸರವಾಗಲೀ ಇರುವುದಿಲ್ಲ. ಲೋಭಮೋಹಗಳಿರುವುದಿಲ್ಲ. ಈ ಎಲ್ಲವುಗಳಿಂದ ಮುಕ್ತವಾದ ಆತ್ಮವು ಸಹಜವಾಗಿಯೇ ಪರಿಶುದ್ಧವಾಗುತ್ತದೆ.