ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.
ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/07/02/sanatana13/
ಈ ಅಧ್ಯಾಯದಲ್ಲಿ ಧೃತರಾಷ್ಟ್ರನಿಗೆ ಸಂಜಯನು ಕುರುಕ್ಷೇತ್ರದ ಸನ್ನಿವೇಶವನ್ನು ವಿವರಿಸುತ್ತಾನೆ. ಅನಂತರದಲ್ಲಿ ಅರ್ಜುನನು ಕೃಷ್ಣನಲ್ಲಿ ತನ್ನ ಅಳಲನ್ನು ತೋಡಿಕೊಳ್ಳುವ ವಿವರಣೆ ಇದೆ.
ಧೃತರಾಷ್ಟ್ರನು ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ನನ್ನವರು ಮತ್ತು ಪಾಂಡವರು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸುವ ಮೂಲಕ ಗೀತೆ ಆರಂಭವಾಗುತ್ತದೆ. ನಮ್ಮ ಹೃದಯವೇ ಧರ್ಮಕ್ಷೇತ್ರ. ಯಾವುದು ಧರ್ಮ, ಯಾವುದು ಅಧರ್ಮ ಎಂದು ತೀರ್ಮಾನ ಮಾಡುವ ಮನಸ್ಸು ಕುರುಕ್ಷೇತ್ರ. ಮನಸ್ಸಿನ ಸಂಘರ್ಷಣೆಯೇ ಭಾರತ ಯುದ್ಧ. ಆದ್ದರಿಂದ ಈ ಪ್ರಶ್ನೆ ನಮ್ಮೆಲ್ಲರ ಜೀವನದ ಪ್ರಶ್ನೆಯೂ ಹೌದು.
ಈ ಅಧ್ಯಾಯದ ನಡುವಲ್ಲಿ ಅರ್ಜುನನ ವಿಷಾದ ಪ್ರಲಾಪ ಆರಂಭವಾಗುತ್ತದೆ. ರಣಾಂಗಣಕ್ಕೆ ಕಾಲಿಡುವಾಗ ಅರ್ಜುನ ಅತೀವ ವಿಶ್ವಾಸದಲ್ಲಿರುತ್ತಾನೆ. ಸಾರಥ್ಯ ವಹಿಸಿದ್ದ ಕೃಷ್ಣನನ್ನು ಕೇವಲ ಸಾರಥಿಯಂತೆಯೇ ನಡೆಸಿಕೊಳ್ಳುತ್ತ, “ಎರಡು ಸೇನೆಗಳ ನಡುವೆ ನನ್ನ ರಥವನ್ನು ನಿಲ್ಲಿಸು” ಎಂದು ಆದೇಶಿಸುತ್ತಾನೆ. ಇಲ್ಲಿ ಆತನ ಅಹಂಕಾರವು ಸ್ಪಷ್ಟವಾಗಿ ತೋರುತ್ತದೆ. ಮುಂದೆ ಶತ್ರು ಪಾಳಯದಲ್ಲಿ ತನ್ನ ಪ್ರೀತಿಪಾತ್ರರನ್ನು ಕಂಡು ಇವರೊಂದಿಗೆ ಕಾದಾಡಬೇಕಲ್ಲ ಎಂದು ನೊಂದುಕೊಳ್ಳುವಾಗಲೂ ಆತನಲ್ಲಿ ಇರುವುದು ಅಹಂಕಾರವೇ. ಮೊದಲು ನಾನು ಅನ್ನುವ ಅಹಂಕಾರ, ಅನಂತರ ನನ್ನದು ಅನ್ನುವ ಅಹಂಕಾರ. ಹೀಗೆ ನೊಂದುಕೊಳ್ಳುತ್ತ ನಾನು ಯುದ್ಧ ಮಾಡುವುದಿಲ್ಲ ಎಂದು ಕೃಷ್ಣನೆದುರು ಘೋಷಿಸಿ ಕೈಚೆಲ್ಲಿ ಕುಳಿತುಕೊಳ್ಳುತ್ತಾನೆ ಅರ್ಜುನ.
ತನ್ನ ಈ ನಿರ್ಧಾರ ಪ್ರಕಟಿಸುವ ವೇಳೆಗೆ ಅರ್ಜುನ ವಿನೀತನಾಗಿ, ಕೃಷ್ಣನಲ್ಲಿ ಶರಣಾಗತನಾಗಿರುತ್ತಾನೆ.
ಅಲ್ಪ ಕಾಲಾವಧಿಯಲ್ಲಿ ವ್ಯಕ್ತಿಯೊಬ್ಬನ ಭಾವ ಪಲ್ಲಟಗಳನ್ನು ಈ ಅಧ್ಯಾಯದಲ್ಲಿ ನಾವು ಕಾಣಬಹುದು. ಅತಿಯಾದ ಆತ್ಮವಿಶ್ವಾಸ. ಚಾಂಚಲ್ಯ, ಧೃಢ ನಿರ್ಧಾರದ ಕೊರತೆ, ಮಮಕಾರ ಮತ್ತು ದೌರ್ಬಲ್ಯಗಳು ಈ ಅಧ್ಯಾಯದಲ್ಲಿ ಚಿತ್ರಿತವಾಗಿವೆ.