ಪ್ರೇಮವು ಎಲ್ಲ ದಾರಿಗಳನ್ನೂ ಮುಕ್ತಗೊಳಿಸಿತು! ~ ಮಾಹ್ ಸತಿ

“ಪ್ರೇಮವೆಂದರೆ ಅದು ಹಾಗೇ. ಎಲ್ಲ ಅಡೆತಡೆಗಳನ್ನು ನಿವಾರಿಸುವ ಮಾಂತ್ರಿಕತೆ ಪ್ರೇಮಕ್ಕಿದೆ” ಅನ್ನುತ್ತಾಳೆ ಸೂಫಿ ಕವಿ ಮಾಹ್’ಸತಿ ಗಂಜವಿ  ~ ಚೇತನಾ

mah

ನನ್ನ ಹೃದಯ ಸಾಮ್ರಾಜ್ಯವನ್ನು ಪ್ರೇಮವೇ ಆಳತೊಡಗಿದಾಗ
ಅದು ನಂಬಿಕೆ, ಅಪನಂಬಿಕೆ ಎರಡರಿಂದಲೂ ಮುಕ್ತಗೊಂಡಿತು.
ನನ್ನ ಪ್ರಯಾಣಕ್ಕೆ ನಾನೇ ಅಡ್ಡಿಯಾಗಿದ್ದೆ,
ನನ್ನ ಇರುವನ್ನೇ ತೆರವುಗೊಳಿಸಿದ ಪ್ರೇಮ
ಎಲ್ಲ ದಾರಿಗಳನ್ನೂ ಮುಕ್ತಗೊಳಿಸಿತು 
~ ಅನ್ನುತ್ತಾಳೆ ಮಾಹ್’ಸತಿ. 

ಪದ್ಯ ಎಷ್ಟು ಸುಂದರವಾಗಿದೆ ನೋಡಿ! ನಮ್ಮ ನಮ್ಮ ಪ್ರಯಾಣಕ್ಕೆ ನಾವೇ ಅಡ್ಡಿಯಾಗಿರುತ್ತೇವೆ. ಅದನ್ನು ಅರ್ಥ ಮಾಡಿಕೊಳ್ಳದೆ ಯಾರುಯಾರನ್ನೋ ಬೆಟ್ಟು ಮಾಡಿ ತೋರಿಸುತ್ತಾ ಪಯಣಿಸುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತ ಇರುತ್ತೇವೆ, ಆದ್ದರಿಂದಲೇ ನಾವು ನಿಂತಲ್ಲೇ ನಿಂತು ಕೆಸರಾಗುವುದು. ಹರಿಯುವ ನದಿಯಾಗಬೇಕು ಎಂದಾದರೆ, ಹೆಬ್ಬಂಡೆಯೇ ಅಡ್ಡವಿದ್ದರೂ ಅದನ್ನು ಕೊರೆದೂ ಕೊರೆದೂ ಚಿಕ್ಕ ಕಿಂಡಿಯನ್ನಾದರೂ ಸೃಷ್ಟಿಸಿಕೊಂಡು ಮುನ್ನುಗ್ಗಬೇಕು. ಹಾಗೆ ಮಾಡದೆ ಹೋಗಿದ್ದರೆ ಇಂದು ಭೂಮಿಯಲ್ಲಿ ನೂರು ಸಾವಿರ ನದಿಗಳಿರಲು ಸಾಧ್ಯವಿತ್ತೆ? 

ನದಿಯು ಸಮುದ್ರವನ್ನು ಸೇರಲೆಂದೇ ಹರಿಯುತ್ತದೆ. ಮಿಲನದ ಉತ್ಕಟತೆಯಲ್ಲಿರುವ ನದಿಗೆ ಯಾವ ಅಡ್ಡಿಯೂ ಲೆಕ್ಕಕ್ಕಿಲ್ಲ. ಸಾಗರದ ತೆರೆದ ಬಾಹುಗಳ ಆಲಿಂಗನ, ಸಾಗರದ ಧ್ಯಾನ, ಅದರ ಪ್ರೇಮವೊಂದೇ ಅದರ ಚಲನೆಯ ಕಾಲು. 

ಹಾಗೇ ನಾವೂ. ನಮ್ಮಲ್ಲಿ ಪ್ರೇಮವೊಂದಿದ್ದರೆ ಅದಕ್ಕೆ ಯಾವ ಅಪನಂಬಿಕೆಯಾಗಲೀ ಅಂಜಿಕೆಯಾಗಲೀ ಇರುವುದಿಲ್ಲ. ಮುಂದುವರಿದರೆ ಹೇಗೋ ಏನೋ ಅನ್ನುವ ಅನುಮಾನಗಳೂ ಇರುವುದಿಲ್ಲ. ಹೀಗೆ ನಮ್ಮ ಎಲ್ಲ ನೆವಗಳನ್ನೂ ನಿವಾರಿಸುವ ಮೂಲಕ, ನಮ್ಮ ಅಡ್ಡಿಗಳನ್ನು ಬದಿಗೊತ್ತಿ ಪ್ರೇಮವು ನಮ್ಮ ಪ್ರಯಾಣದ ಹಾದಿಯನ್ನು ಮುಕ್ತಗೊಳಿಸುತ್ತದೆ ಅನ್ನೋದು ಮಾಹ್’ಸತಿಯ ಪದ್ಯದ ವಿಸ್ತೃತ ಅರ್ಥ. 

ಮಾಹ್’ಸತಿಯ ಕುರಿತು
ಮಾಹ್’ಸತಿ, 12ನೇ ಶತಮಾನದಲ್ಲಿ ಪರ್ಷಿಯಾದ ‘ಗಂಜಾ’ ಎಂಬಲ್ಲಿ ಜೀವಿಸಿದ್ದ ಸೂಫಿ ಕವಿ. ಪ್ರೇಮವೇ ಬದುಕಾಗಿದ್ದ ಮಾಹ್’ಸತಿ ಭಗವಂತನ ಅಲೌಕಿಕ ಪ್ರೇಮದಲ್ಲಿ ಮತ್ತಳಾಗಿದ್ದವಳು. ಇವಳ ಬದುಕು ಕೂಡಾ ಅಷ್ಟೇ ಪ್ರೇಮೋತ್ಕಟತೆಯಿಂದ ಕೂಡಿತ್ತು. ಪ್ರಸಿದ್ಧ ಸೂಫಿ ಕವಿಗಳಾದ ಸ್’ಆದಿ, ನಿಜಾಮಿ, ಅತ್ತಾರ್, ರೂಮಿ ಮೊದಲಾದವರ ರಚನೆಗಳಲ್ಲಿ ಮಾಹ್’ಸತಿಯ ಉಲ್ಲೇಖವನ್ನು ನೋಡಬಹುದು. ಸುಲ್ತಾನ್ ಸಂಜಾರನ ಆಸ್ಥಾನದಲ್ಲಿ ವಿಶೇಷ ಸ್ಥಾನಮಾನಗಳನ್ನು ಹೊಂದಿದ್ದ ಮಾಹ್’ಸತಿಗೆ ಸೂಫಿ ಸಾಹಿತ್ಯದಲ್ಲಿ ವಿಶೇಷ ಮನ್ನಣೆ ಇದೆ. 

 

 

 

Leave a Reply